ADVERTISEMENT

ಯಾದಗಿರಿ | ಬನ್ನಿ ವಿನಿಮಯ: ಶರನ್ನವರಾತ್ರಿ ಸಂಪನ್ನ

ನವರಾತ್ರಿಯ ಸಂಭ್ರಮಕ್ಕೆ ತೆರೆ: ಅಂಬಾ ಭವಾನಿ ಮೂರ್ತಿಯ ಅದ್ದೂರಿ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 7:05 IST
Last Updated 3 ಅಕ್ಟೋಬರ್ 2025, 7:05 IST
ಯಾದಗಿರಿ ನಗರದಲ್ಲಿ ಗುರುವಾರ ವಿಜಯದಶಮಿ ಅಂಗವಾಗಿ ದೇವಿಯ ಮೂರ್ತಿಯ ಅದ್ದೂರಿ ಮೆರವಣಿಗೆ ಜರುಗಿತು
ಯಾದಗಿರಿ ನಗರದಲ್ಲಿ ಗುರುವಾರ ವಿಜಯದಶಮಿ ಅಂಗವಾಗಿ ದೇವಿಯ ಮೂರ್ತಿಯ ಅದ್ದೂರಿ ಮೆರವಣಿಗೆ ಜರುಗಿತು   

ಯಾದಗಿರಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಬುಧವಾರ ಆಯುಧಪೂಜೆ ಮತ್ತು ಗುರುವಾರ ವಿಜಯದಶಮಿಯಂದು ಬನ್ನಿ ಮುಡಿಯುವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಸ್ನೇಹಿತರು, ಬಂಧುಗಳು, ಪರಿಚಯದವರು, ಸಹೋದ್ಯೋಗಿಗಳು ಪರಸ್ಪರ ಬನ್ನಿ ಮರದ ಎಲೆಗಳನ್ನು ನೀಡಿ ‘ಬನ್ನಿ ಬಂಗಾರವಾಗಲಿ ಬಾಳು ಸಿಹಿಯಾಗಲಿ’ ಶುಭ ಹಾರೈಸಿದರು. ಈ ಮೂಲಕ ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿದ್ದ ನವರಾತ್ರಿ ಕಾರ್ಯಕ್ರಮಗಳಿಗೆ ತೆರೆ ಬಿತ್ತು. 

ಆಯುಧ ಪೂಜೆಯ ದಿನವಾದ ಬುಧವಾರ ಸಂಪ್ರದಾಯಸ್ಥರು ಕೆಲಸದ ಸಾಮಗ್ರಿಗಳು, ವಾಹನಗಳು, ಕೈಗಾರಿಕ ಘಟಕಗಳ ಯಂತ್ರಗಳು, ಕೃಷಿಕರು ರೆಂಟೆ, ಕೂರಿಗೆ, ಕುಂಟೆ, ಬಂಡಿ, ಕುಡುಗೋಲು, ಕೊಡಲಿ ಸೇರಿದಂತೆ ಇತರೆ ಕೃಷಿ ಉಪಕರಣಗಳನ್ನು ತೊಳೆದು ಸಿಂಗರಿಸಿ ಪೂಜೆ ಸಲ್ಲಿಸಿದರು.‌

ADVERTISEMENT

ಅಂಗಡಿ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಚೇರಿ, ಸಂಸ್ಥೆಗಳು, ಸಣ್ಣ ಕಾರ್ಖಾನೆಗಳಲ್ಲಿ ಸಿಬ್ಬಂದಿ ಮತ್ತು ಮಾಲೀಕರು ತಮ್ಮ ವಾಹನ ಮತ್ತು ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಸ್ವಚ್ಛಗೊಳಿಸಿ ಕಬ್ಬು, ಬಾಳೆದಿಂಡು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಯಿತು.

ಲಾರಿ, ಪ್ರಯಾಣಿಕ ವಾಹನ, ಕಾರು, ಟ್ರ್ಯಾಕ್ಟರ್‌ಳ ಮಾಲೀಕರು ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಿ, ಹೂಗಳಿಂದ ಅಲಂಕರಿಸಿ ಆರತಿ ಬೆಳಗಿ ಪೂಜೆ ಮಾಡಿದರು. ಕೆಲವರು ಕುರಿ, ಕೋಳಿಗಳನ್ನು ಬಲಿಕೊಟ್ಟರು.

ನಗರದ ಸ್ಟೇಷನ್ ಏರಿಯಾದ ಶಿವಾಜಿ ನಗರ, ಶಹಾಪುರಪೇಟ, ಬೋವಿವಾಡ ನಗರ, ಡಾ.ಬಾಬು ಜಗಜೀವನರಾಂ ನಗರ, ಆತ್ಮಲಿಂಗ ದೇವಸ್ಥಾನದ ಮಲ್ಲಿನಾಥ ಆಶ್ರಮ, ಶರಣ ನಗರ, ಬೋವಿವಾಡದ ದುರ್ಗಾ ದೇವಿ ದೇವಸ್ಥಾನ, ಕೋಟೆ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪನೆ ಮಾಡಲಾದ ದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು.

ದೇವಿಯ ಮೂರ್ತಿಗಳ ಪ್ರತಿಷ್ಠಾಪನೆಯ ಸ್ಥಳದಲ್ಲಿ ಒಂಬತ್ತು ದಿನಗಳು ದಾಂಡಿಯಾ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು ನಡೆದು ನೋಡುಗರ ಗಮನಸೆಳೆದವು.

ಅದ್ದೂರಿ ಶೋಭಾಯಾತ್ರೆ: ಸ್ಟೇಷನ್ ಏರಿಯಾದ ಅಂಬಾ ಭವಾನಿ ದೇವಸ್ಥಾನಲ್ಲಿ ಪ್ರತಿಷ್ಠಾಪನೆ ಮಾಡಲಾದ ಅಂಬಾ ಭವಾನಿ ಮೂರ್ತಿಯ ದರ್ಶನವನ್ನು ಪಡೆದ ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಶರಣಗೌಡ ಕಂದಕೂರ ಅವರು, ಬಳಿಕ ಪೂಜೆ ಸಲ್ಲಿಸಿ ಮೂರ್ತಿಯ ಶೋಭಾ ಯಾತ್ರೆಗೆ ಚಾಲನೆ ನೀಡಿದರು. 

ಪೂಜೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿ, ಅಲಂಕೃತವಾದ ತೆರೆದ ವಾಹನದಲ್ಲಿ ದೇವಿಯ ಮೂರ್ತಿಯನ್ನು ಇರಿಸಲಾಯಿತು. ಭಕ್ತರ ಜೈಘೋಷಗಳೊಂದಿಗೆ ಶಾಸ್ತ್ರಿ ಚೌಕ್ ಮೂಲಕ ಮೇಥೋಡಿಸ್ಟ್ ಚರ್ಚ ಸಮೀಪದ ಬನ್ನಿ ಮರದವರೆಗೂ ಶೋಭಾಯಾತ್ರೆ ಜರುಗಿತು.

ಈ ವೇಳೆ ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ, ಮೂರ್ತಿ ಪ್ರತಿಷ್ಠಾಪನೆ ಸಮಿತಿಯ ಪದಾಧಿಕಾರಿಗಳು ಸೇರಿ ಹಲವರು ಉಪಸ್ಥಿತರಿದ್ದರು.

ಯಾದಗಿರಿ ನಗರದ ಅಂಬಾ ಭವಾನಿ ದೇವಸ್ಥಾನಲ್ಲಿ ಪ್ರತಿಷ್ಠಾಪಿಸಲಾದ ದೇವಿಯ ದರ್ಶನವನ್ನು ಗುರುವಾರ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಶರಣಗೌಡ ಕಂದಕೂರ ಪಡೆದರು 
ಶಹಾಪುರ ತಾಲ್ಲೂಕಿನ ಹುರಸಗುಂಡಗಿಯಲ್ಲಿ ಗುರುವಾರ ಮಹಾದೇವಸ್ವಾಮಿಯ ಪಲ್ಲಕ್ಕಿ ಉತ್ಸವ ಜರುಗಿತು
ಯಾದಗಿರಿ ತಾಲ್ಲೂಕಿನ ಮೈಲಾಪುರದ ಬನ್ನಿ ಮಹಾಂಕಾಳಿ ದೇವಿಗೆ ಖಂಡೆಯ (ಕತ್ತಿ) ಪೂಜೆ ನೆರವೇರಿಸಲಾಯಿತು
ಮೈಲಾಪುರದ ಮೈಲಾರಲಿಂಗೇಶ್ವರನ ಅಲಂಕೃತ ಮೂರ್ತಿ

ಖಂಡೆಯ ಪೂಜೆ ಸಲ್ಲಿಸಿ ಬನ್ನಿ ಮುಡಿದ ಭಕ್ತರು

ಮೈಲಾಪುರದ ಮೈಲಾರಲಿಂಗೇಶ್ವರನ ತಾಯಿ ಬನ್ನಿ ಮಹಾಂಕಾಳಿ ದೇವಿಗೆ ಮಂಗಳವಾರ ಮಧ್ಯರಾತ್ರಿ ಖಂಡೆಯ (ಕತ್ತಿ) ಪೂಜೆಯನ್ನು ಭಕ್ತರು ನೆರವೇರಿಸಿ ಬನ್ನಿ ಮುಡಿದರು. ‘ಮೈಲಾಪುರದಲ್ಲಿ ನವರಾತ್ರಿ ಅಂಗವಾಗಿ ಮೈಲಾರಲಿಂಗೇಶ್ವರ ಧರ್ಮಪತ್ನಿ ಗಂಗಿಮಾಳಮ್ಮ ತಾಯಿಗೆ 9 ದಿನ ವಿಶೇಷ ಪೂಜೆ ಸಲ್ಲಿಸಲಾಯಿತು. ಕೊನೆಯ ದಿನದಂದು ಮಲ್ಲಯ್ಯನನ್ನು ಬೆಟ್ಟದ ಕೆಳಗಿನ ಹಾಲದ ಗಿಡಕ್ಕೆ ಕರೆತಂದು ವಿಶೇಷ ಪೂಜೆ ಮಾಡಲಾಯಿತು. ಗಂಗಿಮಾಳಮ್ಮ ತಾಯಿ ಹೆಗ್ಗಣ ಪ್ರಧಾನಿಯನ್ನು ಭೇಟಿಯಾದ ಮಲ್ಲಯ್ಯನನ್ನು ಮೂಲಸ್ಥಾನದಲ್ಲಿ ಇರಿಸಲಾಯಿತು’ ಎಂದು ದೇವಸ್ಥಾನದ ಪೂಜಾರಿ ‍ಪರಮೇಶ್ವರ ತಿಳಿಸಿದರು. ‘ಆ ಬಳಿಕ  ಮಹಿಳೆಯರು ಮಲ್ಲಯ್ಯನಿಗೆ ಕಳಸ ಬೆಳಗಿ ಮಹಾಮಂಗಳಾರತಿ ಮಾಡಿದರು. ಗಂಗಿಮಾಳಮ್ಮ ತಾಯಿಗೂ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಪೂಜಾರಿಗಳು ಒಂಬತ್ತು ಮಂದಿ ಮಹಿಳೆಯರ ಮನೆಗೆ ತೆರಳಿ ಹುಗೆ (ಪೂಜೆ) ಸಲ್ಲಿಸಿದರು’ ಎಂದು ಹೇಳಿದರು. ‘ಮಧ್ಯರಾತ್ರಿ ಪೂಜಾರಿಗಳು ಅರ್ಚಕರು ದೇವಸ್ಥಾನದ ಪೀಠಾಧಿಪತಿಗಳ ಸಮ್ಮುಖದಲ್ಲಿ ಖಂಡೆಯ ತೆಗೆದುಕೊಂಡು ಬನ್ನಿ ಮಹಾಂಕಾಳಿ ದೇವಿ ಬಳಿಗೆ ತೆರಳಿದರು. ಬನ್ನಿ ಮಹಾಂಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ತಾಯಿಗೆ ಬನ್ನಿ ಮುಡಿದು ಆ ಬಳಿಕ ಪರಸ್ಪರ ಬನ್ನಿಯನ್ನು ವಿನಿಮಯ ಮಾಡಿಕೊಳ್ಳಲಾಯಿತು’ ಎಂದರು.

ನೆರೆ ಪೀಡಿತ ಹುರಸಗುಂಡಗಿಯಲ್ಲಿ ಪಲ್ಲಕ್ಕಿ ಉತ್ಸವ

ಶಹಾಪುರ ತಾಲ್ಲೂಕಿನಲ್ಲಿ ಭೀಮಾ ನದಿ ಪ್ರವಾಹಕ್ಕೆ ತುತ್ತಾಗಿದ್ದ ಹುರಸಗುಂಡಗಿಯಲ್ಲಿ ಮಹಾದೇವಸ್ವಾಮಿಯ ಪಲ್ಲಕ್ಕಿ ಉತ್ಸವ ಗುರುವಾರ ಸಂಭ್ರಮದಿಂದ ಜರುಗಿತು. ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದವರು ಗ್ರಾಮಕ್ಕೆ ಬಂದು ಸಂಕಷ್ಟದ ನಡುವೆಯೂ ವಿಜಯದಶಮಿ ಆಚರಿಸಿದರು. ಉರಿಲಿಂಗ ಪೆದ್ದಿಮಠದ ಶಾಖಾ ಮಠವಾದ ಮಹಾದೇವಸ್ವಾಮಿ ಮಠದಿಂದ ಹೊರಟ ಪಲ್ಲಕ್ಕಿ ಭೀಮಾ ನದಿಗೆ ತೆರಳಿತ್ತು. ನದಿಯಲ್ಲಿ ಶಿವಯೋಗಿ ಸ್ವಾಮೀಜಿ ಪೂಜೆ ನೆರವೆರಿಸಿದರು. ಬಳಿಕ ಗ್ರಾಮದ ‍ಪ್ರಮುಖ ಬೀದಿಯಲ್ಲಿ ಪಲ್ಲಕ್ಕಿ ಮೆರವಣಿಗೆ ಸಾಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.