ADVERTISEMENT

ಯಾದಗಿರಿ: ‘ಸಾಲದ ಸುಳಿ’ಯಲ್ಲಿ ಸಾರಿಗೆ ನೌಕರರು

ಮನೆ ಬಾಡಿಗೆ ಕಟ್ಟಲಾಗದೇ ಬಸ್‌ನಲ್ಲೇ ರಾತ್ರಿ ಕಳೆಯುವ ಸಿಬ್ಬಂದಿ

ಬಿ.ಜಿ.ಪ್ರವೀಣಕುಮಾರ
Published 3 ಡಿಸೆಂಬರ್ 2021, 4:48 IST
Last Updated 3 ಡಿಸೆಂಬರ್ 2021, 4:48 IST
ಆರ್.‌ ದೇವಧಾನ್
ಆರ್.‌ ದೇವಧಾನ್   

ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಸಿಬ್ಬಂದಿ ಮೂರು ತಿಂಗಳಿಂದ ಸರಿಯಾದ ವೇತನವಿಲ್ಲದೇ ಸಾಲ ಮಾಡಿ ದಿನಗಳನ್ನು ದೂಡುತ್ತ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.

ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿ ಶೇ 50ರಷ್ಟು ಮಾತ್ರ ವೇತನ ಪಾವತಿಯಾಗಿದ್ದು, ನವೆಂಬರ್ ತಿಂಗಳಿನದ್ದು ಇನ್ನೂ ಬಿಡುಗಡೆಯಾಗಿಲ್ಲ.

ಯಾದಗಿರಿ ವಿಭಾಗದಲ್ಲಿ ನಾಲ್ಕು ವಿಭಾಗಗಳಿವೆ. ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್‌ ಸೇರಿ 1,500 ಸಿಬ್ಬಂದಿ ಇದ್ದಾರೆ. ಇವರೆಲ್ಲರಿಗೂ ಅರ್ಧ ವೇತನವೇ ಬಿಡುಗಡೆಯಾಗಿದೆ.

ADVERTISEMENT

ಮನೆ ಬಾಡಿಗೆ ಕಟ್ಟಲು ಸಾಲ: ’ಜಿಲ್ಲೆಯಲ್ಲಿ ವಿಜಯಪುರ, ಬಾಗಲ ಕೋಟೆ, ಕಲಬುರಗಿ, ಬೀದರ್‌, ರಾಯ ಚೂರು ಜಿಲ್ಲೆಯ ಸಿಬ್ಬಂದಿ ಇದ್ದಾರೆ. ಅವರು ಬಾಡಿಗೆ ಮನೆಯಲ್ಲಿ ವಾಸಿಸುವುದು ಅನಿವಾರ್ಯ. ಆದರೆ, ಸಂಸ್ಥೆ ವತಿಯಿಂದ ಅರ್ಧ ವೇತನ ನೀಡುತ್ತಿರುವುದರಿಂದ ಪತ್ನಿ, ಮಕ್ಕಳನ್ನು ಸ್ವಂತ ಊರಿಗೆ ಕಳುಹಿಸಿ ಬಸ್‌, ಸ್ನೇಹಿತರ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ‘ ಎಂದು ಕರ್ನಾಟಕ ರಸ್ತೆ ಮಜ್ದೂರ್‌ ಸಂಘ ಒಕ್ಕೂಟದ ಪದಾಧಿಕಾರಿಗಳು ತಿಳಿಸುತ್ತಾರೆ.

‘ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿ ಅರ್ಧ ವೇತನವಾಗಿದೆ. ನವೆಂಬರ್‌ ವೇತನ ಇನ್ನೂ ಬಂದಿಲ್ಲ. ಇದರಿಂದ ಹಲವಾರು ಸಿಬ್ಬಂದಿ ಡಿಪೋದಲ್ಲಿನ ಬಸ್‌ಗಳಲ್ಲಿಯೇ ರಾತ್ರಿ ಕಳೆಯುತ್ತಿದ್ದಾರೆ. ಹಲವರು ತಮ್ಮ ಕುಟುಂಬವನ್ನು ಸ್ವಂತ ಊರಿಗೆ ಕಳುಹಿಸಿ ಇಲ್ಲಿ ಕರ್ತವ್ಯ ಮಾಡುತ್ತಿದ್ದಾರೆ. ಸಿಬ್ಬಂದಿ ಪಾಡು ಯಾರಿಗೂ ಬೇಡವಾಗಿದೆ. ಆರ್ಥಿಕ ಹೊರೆಯಿಂದ ಕೆಲವರು ವೃತ್ತಿ ಬಿಟ್ಟಿದ್ದಾರೆ’ ಎನ್ನುತ್ತಾರೆ ಕರ್ನಾಟಕ ರಸ್ತೆ ಮಜ್ದೂರ್‌ ಸಂಘ ಒಕ್ಕೂಟದ ಯಾದಗಿರಿ ವಿಭಾಗದ ಅಧ್ಯಕ್ಷ ಆರ್.‌ ದೇವಧಾನ್‌.

ಸಾಲದ ಸುಳಿ: ಯಾದಗಿರಿ ಡೀಪೊದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಶಿನಾಥ ರಾಥೋಡ್‌ ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ನೌಕರರ ಪರಿಸ್ಥಿತಿ ತಿಳಿಸುತ್ತದೆ.

‘ಕಾಶಿನಾಥ ಅವರು ಈ ಮೊದಲು ಗುರುಮಠಕಲ್‌ ಡೀಪೊದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾರಿಗೆ ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ಯಾದಗಿರಿ ಡೀಪೋಗೆ ವರ್ಗಾವಣೆ ಮಾಡಲಾಗಿತ್ತು.

ಇದರ ಜೊತೆಗೆ ಸರಿಯಾಗಿ ಬಸ್‌ ಮಾರ್ಗವನ್ನು ತೋರಿಸದ ಕಾರಣ ಕರ್ತವ್ಯ ಮಾಡಲಾಗಿಲ್ಲ. ಹೀಗಾಗಿ ಆರ್ಥಿಕ ಸಮಸ್ಯೆ ಹೆಚ್ಚಾಗಿ ಖಾಸಗಿ ಫೈನಾನ್ಸ್‌ನಲ್ಲಿ ಚಿನ್ನ ಗಿರಿವಿ ಇಟ್ಟು, ಮನೆ ಬಾಡಿಗೆ ತೀರಿಸಿದ್ದಾರೆ’ ಎಂದು ಕಾಶಿನಾಥ ಅವರ ಪತ್ನಿ ಜಯಶ್ರೀ ರಾಥೋಡ ಆರೋಪಿಸಿದ್ದರು.

ಅವರಂತೆ ಜಿಲ್ಲೆಯ ಬಹುತೇ ಸಿಬ್ಬಂದಿಗೆ ಆರ್ಥಿಕ ಸಮಸ್ಯೆ ಇದ್ದು, ಹಲವರು ಸಾಲ ಮಾಡಿದ್ದಾರೆ. ವೇತನ ಬರುವ ಬ್ಯಾಂಕಿನಲ್ಲಿ ಮೂರು–ನಾಲ್ಕು ತಿಂಗಳಿಂದ ಇಎಂಐ ಪಾವತಿಸದೇ ಇರುವುದರಿಂದ ನೋಟಿಸ್‌ ಜಾರಿಯಾಗಿದೆ. ಬ್ಯಾಂಕ್‌ ಸೇರಿದಂತೆ ಎಲ್ಲಿಯೂ ಸಾಲ ಸಿಗುತ್ತಿಲ್ಲ ಎಂದು ಸಾರಿಗೆ ಸಂಸ್ಥೆ ನೌಕರರು ಹೇಳುತ್ತಾರೆ.

ಹೆಚ್ಚುವರಿ ಭತ್ಯೆ ಇಲ್ಲ

ಕೋವಿಡ್‌ಗಿಂತ ಮುಂಚೆ ಸಿಬ್ಬಂದಿಗೆ 8 ಗಂಟೆಗಿಂತ ಹೆಚ್ಚು ಅವಧಿ ಕೆಲಸ ಮಾಡಿದರೆ ಹೆಚ್ಚುವರಿ ಭತ್ಯೆ (ಓಟಿ) ನೀಡಲಾಗುತ್ತಿತ್ತು.

ಅದನ್ನು 10 ಗಂಟೆ ಅವಧಿಗೆ ಹೆಚ್ಚಿಸಲಾಗಿತ್ತು. ಈಗ 16 ಗಂಟೆ ಕರ್ತವ್ಯ ಮಾಡಿದರೂ ಯಾರಿಗೂ ಭತ್ಯೆ ನೀಡುತ್ತಿಲ್ಲ.
ವಾಯವ್ಯ ಸಾರಿಗೆ ಮತ್ತು ಬೆಂಗಳೂರ ನಗರ ಸಾರಿಗೆ ಸಿಬ್ಬಂದಿಗೆ ವೇತನ ಬಿಡುಗಡೆ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಆದರೆ, ಕಲ್ಯಾಣ ಕರ್ನಾಟಕ ಸಾರಿಗೆ ನೌಕರರಿಗೆ ವೇತನ ಬಿಡುಗಡೆ ಮಾಡದೇ ಮಲತಾಯಿ ಧೋರಣೆ ತೋರಲಾಗುತ್ತಿದೆ ಎನ್ನುವುದು ನೌಕರರ ಆರೋಪವಾಗಿದೆ.

‘ಯಾದಗಿರಿ ಡೀಪೊದಲ್ಲಿ 400ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಎಲ್ಲರಿಗೂ ವೇತನದ ಸಮಸ್ಯೆ ಇದೆ. ಹಲವರು ಆರ್ಥಿಕ ಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಸರ್ಕಾರ ತುರ್ತಾಗಿ ವೇತನ ಬಿಡುಗಡೆ ಮಾಡಬೇಕಾಗಿದೆ.
ನೌಕರರ ಮೂಲ ವೇತನ ಆಧಾರದ ಮೇಲೆ ಓಟಿ ನೀಡಲಾಗುತ್ತಿತ್ತು. ಈಗ ಮತ್ತೆ ಹೆಚ್ಚುವರಿ ಭತ್ಯೆ ನೀಡಲು ಪ್ರಕ್ರಿಯೆ ನಡೆದಿದೆ’ ಎನ್ನುತ್ತಾರೆ ಡೀಪೊ ವ್ಯವಸ್ಥಾಪಕ ಪ್ರವೀಣ ಯಾದವ್‌ ಅವರು.

***

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ಕಲ್ಯಾಣವೇ ಇಲ್ಲದಂತೆ ಆಗಿದೆ. ಬಡ ಜನರೇ ಇಲ್ಲಿ ಹೆಚ್ಚು ನೌಕರಿ ಮಾಡುತ್ತಿದ್ದಾರೆ

-ಆರ್.‌ ದೇವಧಾನ್‌, ಅಧ್ಯಕ್ಷ, ಕರ್ನಾಟಕ ರಸ್ತೆ ಮಜ್ದೂರ್‌ ಸಂಘ ಒಕ್ಕೂಟ, ಯಾದಗಿರಿ

***

ಯಾದಗಿರಿ ವಿಭಾಗದಲ್ಲಿ 1,500 ನೌಕರರಿದ್ದು ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನ ಶೇ 50ರಷ್ಟು ವೇತನವಾಗಿದೆ. ನವೆಂಬರ್ ವೇತನ ಶೀಘ್ರ ಆಗುತ್ತದೆ

-ಎಂ.ಪಿ.ಶ್ರೀಹರಿಬಾಬು, ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.