ಕೆಂಭಾವಿ ಪಟ್ಟಣದ ಜ್ಞಾನದೀಪ ಶಾಲೆಯಲ್ಲಿ ಕೊಳವೆ ಬಾವಿಯ ಪೈಪ್ ಮೇಲೆತ್ತಲು ಶಾಲೆಯ ಮಕ್ಕಳನ್ನು ಬಳಸಿಕೊಂಡಿರುವುದು
ಯಾದಗಿರಿ: ಜಿಲ್ಲೆಯ ಕೆಂಭಾವಿ ಪಟ್ಟಣದ ಖಾಸಗಿ ಶಾಲೆಯ ಆಡಳಿತ ಮಂಡಳಿ ಸಿಬ್ಬಂದಿ ಶಾಲೆಯಲ್ಲಿದ್ದ ಕೊಳವೆ ಬಾವಿಯ ಪೈಪ್ ಮೇಲೆತ್ತಲು ಶಾಲೆಯ ಮಕ್ಕಳನ್ನು ಬಳಸಿಕೊಂಡ ಘಟನೆ ನಡೆದು ಐದು ದಿನಗಳು ಕಳೆದರೂ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳದ ಶಿಕ್ಷಣ ಇಲಾಖೆಯ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಕೆಂಭಾವಿ ಪಟ್ಟಣದ ಸುರಪುರ-ಹುನಗುಂದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜ್ಞಾನದೀಪ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಎಲ್ಲೆಡೆ ವಿಡಿಯೊ ವೈರಲ್ ಆಗಿತ್ತು. ಶಾಲೆಯ ಕಾಂಪೌಂಡ್ ಬಳಿ ಇದ್ದ ಕೊಳವೆ ಬಾವಿ ದುರಸ್ತಿಗೆ ಸುಮಾರು ಮುನ್ನೂರಕ್ಕೂ ಹೆಚ್ಚು ಆಳವಿರುವ ಪೈಪ್ ಮೇಲೆತ್ತಲು ಶಾಲಾ ಮುಖ್ಯಸ್ಥರು ಮತ್ತು ಸಿಬ್ಬಂದಿ ಶಾಲೆಯ ಮಕ್ಕಳನ್ನು ಬಳಸಿಕೊಂಡ ಘಟನೆ ಜರುಗುತ್ತಿದ್ದಂತೆ ಖುದ್ದಾಗಿ ಮಕ್ಕಳ ಹಿತರಕ್ಷಣಾ ಸಮಿತಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯೂ ನಡೆಸಿದ್ದರು.
ಅಧಿಕಾರಿಗಳ ಭೇಟಿ ವೇಳೆ ಹಲವು ಭಯಾನಕ ಘಟನೆ ಕಣ್ಣಿಗೆ ಕಂಡರೂ ಶಾಲೆಯ ವಿರುದ್ಧ ಇಲ್ಲಿಯವರೆಗೂ ಕ್ರಮ ಕೈಗೊಳ್ಳದ ಅಧಿಕಾರಿಗಳ ನಡೆಗೆ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ ಮಕ್ಕಳ ಹಕ್ಕುಗಳ ಆಯೋಗ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಡಿಡಿಪಿಐ ಅವರಿಗೂ ತಕ್ಷಣವೇ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಕಟ್ಟುನಿಟ್ಟಿನ ಸೂಚನೆಯೂ ನೀಡಿದ್ದರು. ಗಾಳಿಗೆ ತೂರಿರುವ ಅಧಿಕಾರಿಗಳು ಇಲ್ಲಿಯವರೆಗೂ ಈ ಘಟನೆಯನ್ನು ಲಘುವಾಗಿ ಪರಿಗಣಿಸಿದ್ದು ಇದರಿಂದ ಖಾಸಗಿ ಶಾಲೆಗೆ ಕಳಿಸುತ್ತಿರುವ ಅನೇಕ ಪಾಲಕರಿಗೆ ದಿಗಿಲು ಉಂಟಾಗಿದೆ. ಕೂಡಲೇ ಈ ಬಗ್ಗೆ ಶಿಕ್ಷಣ ಇಲಾಖೆ ದಿಟ್ಟ ಕ್ರಮ ಕೈಗೊಂಡು ಶಾಲೆಯ ಆಡಳಿತದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಮುಂದೆ ಇಂಥ ಘಟನೆ ಯಾವುದೇ ಶಾಲೆಗಳಲ್ಲಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.
‘ಘಟನೆ ನಡೆದ ದಿನವೇ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಮೊಬೈಲ್ ಸಂದೇಶದ ಮೂಲಕ ಪ್ರಕರಣ ದಾಖಲಿಸುವಂತೆ ಕಟ್ಟುನಿಟ್ಟಿನ ಸೂಚನೆಯೂ ನೀಡಿದ್ದೆ. ಈಗ ಮಕ್ಕಳ ಹಕ್ಕುಗಳ ಆಯೋಗವೂ ಸೂಚನೆ ನೀಡಿದೆ’ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ಹೇಳುತ್ತಾರೆ.
‘ಮಕ್ಕಳ ಜೀವದ ಜೊತೆ ಆಟವಾಡಿದ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳದ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ’ ಎಂದು ಕರವೇ ಮುಖಂಡ ಶ್ರೀಶೈಲ್ ಕಾಚಾಪುರ ಆರೋಪಿಸಿದರು.
ಈ ಬಗ್ಗೆ ಬಿಇಒ ಜೊತೆ ಮಾತನಾಡಿ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಇಂದೆ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗುವುದುಚನ್ನಬಸಪ್ಪ ಮುಧೋಳ ಡಿಡಿಪಿಐ ಯಾದಗಿರಿ
ಈ ಘಟನೆ ಇಡೀ ರಾಜ್ಯದ ಗಮನ ಸೆಳೆದಿದ್ದರೂ ಇಲ್ಲಿಯವರೆಗೂ ಶಾಲೆಯ ಬಗ್ಗೆ ಕನಿಕರ ತೋರುತ್ತಿರುವ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಖಂಡನೀಯಶ್ರೀಶೈಲ್ ಕಾಚಾಪುರ, ಕರವೇ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.