ADVERTISEMENT

ಯಾದಗಿರಿ: ಖಾಲಿ ಹುದ್ದೆ ಭರ್ತಿಗೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 5:56 IST
Last Updated 9 ಜನವರಿ 2026, 5:56 IST
ಯಾದಗಿರಿಯಲ್ಲಿ ಗುರುವಾರ ಎಐಡಿವೈಒ ಜಿಲ್ಲಾ ಮುಖಂಡರು ಸರ್ಕಾರಿ ಖಾಲಿ ಹುದ್ದೆಗಳ ಭರ್ತಿಗಾಗಿ ಸಹಿ ಸಂಗ್ರಹ ಅಭಿಯಾನ ನಡೆಸಿದರು
ಯಾದಗಿರಿಯಲ್ಲಿ ಗುರುವಾರ ಎಐಡಿವೈಒ ಜಿಲ್ಲಾ ಮುಖಂಡರು ಸರ್ಕಾರಿ ಖಾಲಿ ಹುದ್ದೆಗಳ ಭರ್ತಿಗಾಗಿ ಸಹಿ ಸಂಗ್ರಹ ಅಭಿಯಾನ ನಡೆಸಿದರು   

ಯಾದಗಿರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಮುಖಂಡರು ನಗರದ ವಿವಿಧೆಡೆ ಗುರುವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು.

ಕೇಂದ್ರ ಸರ್ಕಾರದ 78 ಇಲಾಖೆಗಳಲ್ಲಿ ಖಾಲಿ ಇರುವ 9.79 ಲಕ್ಷ ಹುದ್ದೆಗಳು ಹಾಗೂ ರಾಜ್ಯ ಸರ್ಕಾರದಲ್ಲಿ 43 ಇಲಾಖೆಗಳಲ್ಲಿನ 2.85 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು. ನೇಮಕಾತಿ ವಯೋಮಿತಿಯನ್ನು ಕನಿಷ್ಠ ಐದು ವರ್ಷ ಹೆಚ್ಚಿಸಿ, ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆಗಳು ನಡೆಸಬೇಕು. ಅರ್ಜಿ ಸಲ್ಲಿಕೆಯ ಶುಲ್ಕವನ್ನು ಕೈಟ್ಟು, ಪರೀಕ್ಷೆಗಳಿಗೆ ಹಾಜರಾಗಲು ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಆತ್ತಾಯಿಸಿದರು.

ರಾಜ್ಯ ಉಪಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿದ ಎಲ್ಲ ಪಕ್ಷಗಳ ನಾಯಕರು ಯುವಕರನ್ನು ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ. ದೇಶದ ಪ್ರಗತಿಗೆ ಶಕ್ತಿಯಾಗಿರುವ ಯುವಜನರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಅವರ ಮಾನಸಿಕ, ದೈಹಿಕ ಬೆಳವಣಿಗೆ ಬಗ್ಗೆ ಕಾಳಜಿ ಇಲ್ಲ. ವಯೋಮಿತಿ ಮೀರುತ್ತಿರುವ ಎಷ್ಟೋ ಯುವಜನರು ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇನ್ನೊಂದೆಡೆ ಕುಡಿತ, ಜೂಜು, ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ’ ಎಂದರು.

ADVERTISEMENT

‘ಯೋಗ್ಯವಾದ ಜೀವನ ನಡೆಸಲು, ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದ ವೇತನದಲ್ಲಿ ಗುತ್ತಿಗೆ, ಹೊರಗುತ್ತಿಗೆ, ಅತಿಥಿ ಶಿಕ್ಷಕರ ಹೆಸರಿನಲ್ಲಿ ಸರ್ಕಾರಗಳು ದುಡಿಸಿಕೊಳ್ಳುತ್ತಿವೆ. ಈಚಿಗೆ ಧಾರವಾಡದಲ್ಲಿ ಉದ್ಯೋಗ ಕೊಡಿ ಎಂದು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಉದ್ಯೋಗ ಆಕಾಂಕ್ಷಿಗಳ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಇದು ಖಂಡನೀಯ. ಉಭಯ ಸರ್ಕಾರಗಳು ಕೂಡಲೇ ಹುದ್ದೆಗಳನ್ನು ಭರ್ತಿಗೆ ಅಧಿಸೂಚನೆ ಹೊರಡಿಸಲು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ಸದಸ್ಯರಾದ ವೆಂಕಟೇಶ ಕೆ., ಬಸವರಾಜ, ಆನಂದ, ಮಂಜುನಾಥ, ಹನುಮಂತ, ಮಮತಾ, ಈಶಮ್ಮ, ಈಶಪ್ಪ, ಮೌನೇಶ, ನಾಗರಾಜ್ ಸೇರಿ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.