
ಯಾದಗಿರಿ: ಕೃಷಿ ಪ್ರಧಾನವಾದ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳು ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಸೊರಗುತ್ತಿರುವುದರ ನಡುವೆ 15ನೇ ಹಣಕಾಸು ಯೋಜನೆ ಅನುದಾನ ಬಾರದೆ ಇರುವುದು ಅವುಗಳ ಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.
ಜಿಲ್ಲೆಯ ಒಟ್ಟು 22 ಗ್ರಾಮ ಪಂಚಾಯಿತಿಗಳಿಗೆ 2025-26ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಬರಬೇಕಿದ್ದ ₹ 51.80 ಕೋಟಿ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಗ್ರಾಮಗಳು ಆರ್ಥಿಕ ಶಕ್ತಿ ಇಲ್ಲದೆ ಸೊರಗಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಅಭಿವೃದ್ಧಿ ಯೋಜನೆಗಳು ಸ್ಥಗಿತದ ಹಂತ ತಲುಪಿವೆ.
ಹುಣಸಗಿ ಹಾಗೂ ಗುರುಮಠಕಲ್ ತಾಲ್ಲೂಕಿನ ತಲಾ 18, ಶಹಾಪುರ ತಾಲ್ಲೂಕಿನ 24, ಸುರಪುರ ತಾಲ್ಲೂಕಿನ 23, ವಡಗೇರಾ ತಾಲ್ಲೂಕಿನ 17 ಹಾಗೂ ಯಾದಗಿರಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ ಟೈಡ್ ಹಾಗೂ ಅನ್‌ಟೈಡ್ ಅನುದಾನದ ₹ 51.80 ಕೋಟಿಯಷ್ಟು ಬರಬೇಕಿದೆ. ಸ್ಥಳೀಯ ಮೂಲದ ಸಂಪನ್ಮೂಗಳನ್ನು ಅವಲಂಬಿಸಿಕೊಂಡು ಗ್ರಾಮ ಪಂಚಾಯಿತಿಗಳು ಆಡಳಿತ ನಡೆಸಲಾಗುತ್ತಿದೆ.
ನಿಧಾನಕ್ಕೆ ಬೇಸಿಗೆಯ ಪ್ರಖರ ಕಾವು ಏರುತ್ತಿದೆ. ಗ್ರಾಮೀಣ ಭಾಗಗಳ ಅಲ್ಲಲ್ಲಿ ಹಳ್ಳ–ಕೊಳ್ಳಗಳು, ಕರೆ–ಕಟ್ಟೆಗಳಲ್ಲಿನ ನೀರು ಬರಿದಾಗುತ್ತಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇಂತಹ ಸ್ಥಿತಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಲಕ್ಷಾಂತರ ರೂಪಾಯಿ ಅನುದಾನ ಇಲ್ಲದೆ ಕುಡಿಯುವ ನೀರು ಪೂರೈಸುವ ಸವಾಲು ಎದುರಾಗಿದೆ.
‘ಗ್ರಾಮಗಳಲ್ಲಿ ಕುಡಿಯುವ ನೀರು ನಿರ್ವಹಣೆ ಜೊತೆಗೆ ನೈರ್ಮಲ್ಯ, ಬೀದಿ ದೀಪಗಳ ನಿರ್ವಹಣೆ, ಪೈಪ್‌ಲೈನ್ ಹಾಗೂ ಮೋಟಾರ್ ಸೇರಿದಂತೆ ಇತರ ಸಣ್ಣಪುಟ್ಟ ದುರಸ್ತಿ, ಸ್ವಚ್ಛತಾ ಸಿಬ್ಬಂದಿಯ ವೇತನ, ಸಮುದಾಯಗಳ ಆಸ್ತಿ ನಿರ್ವಹಣೆಯಂತಹ ಕಾರ್ಯಗಳಿಗೂ ಅಡ್ಡಿಯಾಗುತ್ತಿದೆ’ ಎನ್ನುತ್ತಾರೆ ಅಧಿಕಾರಿಗಳು.
‘ಒಂದು ಕಡೆ ಅನುದಾನ ಬರುತ್ತಿಲ್ಲ. ಮತ್ತೊಂದು ಕಡೆ ಗ್ರಾಮ ಪಂಚಾಯಿತಿಗಳ ಸದಸ್ಯರ ಅಧಿಕಾರ ಅವಧಿಯೂ ಮುಕ್ತಾಯವಾಗಿದೆ. 122 ಗ್ರಾಮ ಪಂಚಾಯಿತಿಗಳ ಪೈಕಿ 117 ಗ್ರಾಮ ಪಂಚಾಯಿತಿಗಳ ಸದಸ್ಯರ ಅಧಿಕಾರ ಅವಧಿ ಮುಗಿದಿದೆ. ಆ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಗ್ರಾಮದ ಸ್ಥಳೀಯರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ’ ಎಂಬುದು ಸಾರ್ವಜನಿಕದ ಆರೋಪ.
‘ಬೊಮ್ಮನಹಳ್ಳಿ ಗ್ರಾಮದ ರಸ್ತೆಯಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ, ಸರಿಯಾದ ಚರಂಡಿ ಮತ್ತು ರಸ್ತೆ ಮಾಡುವಂತೆ ಮನವಿ ಮಾಡಿದರೆ ಪಂಚಾಯಿತಿಯವರು 15ನೇ ಹಣಕಾಸು ಆಯೋಗದಿಂದ ಅನುದಾನ ಬಂದಿಲ್ಲ ಎನ್ನುತ್ತಾರೆ. ಇಒ, ಸಿಇಒಗೆ ಪತ್ರ ಬರೆದರೂ ಸ್ಪಂದನೆ ಸಿಗುತ್ತಿಲ್ಲ. ವಿಶೇಷ ಕರ ವಸೂಲಿ ಅಭಿಯಾನದಿಂದ ಬಂದ ಹಣದಲ್ಲಿಯಾದರೂ ದುರಸ್ತಿ ಮಾಡಲಿ’ ಎನ್ನುತ್ತಾರೆ ನಿವಾಸಿ ಚಂದ್ರಕಾಂತ.
15ನೇ ಹಣಕಾಸು ಯೋಜನೆ ಅನುದಾನ ಬಾರದೆ ಇರುವುದರಿಂದ ಸ್ಥಳೀಯವಾಗಿ ಸಂಪನ್ಮೂಲವನ್ನು ಸಂಗ್ರಹ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಹೋಗಲಾಗುತ್ತಿದೆಲವೀಶ್ ಒರಡಿಯಾ ಜಿಲ್ಲಾ ಪಂಚಾಯಿತಿ ಸಿಇಒ
ಕರ ವಸೂಲಿಯೇ ಆಸರೆ
ಅನುದಾನ ಇಲ್ಲದೆ ಬಳಲುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ನಡೆಸುತ್ತಿರುವ ಕಸ ವಸೂಲಿಯ ವಿಶೇಷ ಅಭಿಯಾನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಒಂದಿಷ್ಟು ಆಸರೆಯಾಗಿದೆ. ಪಂಚಾಯಿತಿ ಸಿಬ್ಬಂದಿ ಗ್ರಾಮಗಳಲ್ಲಿನ ಮನೆ ಖಾಲಿ ಸ್ಥಳ ಲೇಔಟ್ ಅಂಗಡಿ ವಾಣಿಜ್ಯ ಮಳಿಗೆ ಹೋಟೆಲ್ ಕೈಗಾರಿಕೆಗಳಿಂದ ಕರ ವಸೂಲಿ ಮಾಡುವಲ್ಲಿ ನಿರತವಾಗಿದ್ದಾರೆ. ಪಂಚಾಯಿತಿಗಳ ಸಂಪನ್ಮೂಲ ಕ್ರೋಡೀಕರಣ ಮಾಡುತ್ತಿರುವುದು ಆಸದಾಯಕವಾಗಿದೆ. ಈ ವರ್ಷದ ₹ 17.27 ಕೋಟಿ ಚಾಲ್ತಿ ಬೇಡಿಕೆಯಲ್ಲಿ ಜನವರಿ 19ರ ವೇಳೆಗೆ ₹11.56 ಕೋಟಿ ಕರ ಸಂಗ್ರಹ ಮಾಡಿ ಶೇ 66.70ರಷ್ಟು ಗುರಿ ಸಾಧನೆ ಮಾಡಿ ರಾಜ್ಯದಲ್ಲಿ ಜಿಲ್ಲೆಯು 13ನೇ ಸ್ಥಾನಕ್ಕೆ ತಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.