
ಯಾದಗಿರಿ: ‘ಹೋಳಿ ಹಬ್ಬವನ್ನು ಸರ್ವ ಜಮಾಜದವರು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಬೇಕು’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹೋಳಿ ಹಬ್ಬ ಆಚರಣೆ ಕುರಿತ ಶಾಂತಿ ಪಾಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಾದ್ಯಂತ ಮಾರ್ಚ್ 3ರಂದು ಕಾಮದಹನ, 4ರಂದು ಹೋಳಿ ಬಣ್ಣ ಹಚ್ಚುವ ಹಬ್ಬ ನಡೆಯಲಿದೆ. ಹಿಂದೂ, ಮುಸ್ಲಿಂ ಸೇರಿದಂತೆ ಸರ್ವಧರ್ಮೀಯರು ಪರಸ್ಪರ ಶಾಂತಿ ಹಾಗೂ ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು’ ಎಂದರು.
‘ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಎಲ್ಲರೂ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದದಿಂದ ವಿವಿಧ ಹಬ್ಬಗಳನ್ನು ಆಚರಿಸುತ್ತಾ ಸಹಕಾರ ನೀಡಲಾಗುತ್ತಿದೆ. ಈ ಬಾರಿಯ ಹೋಳಿ ಹಬ್ಬದ ಅಂತಹುದೆ ಸಹಕಾರ ನೀಡಿ ಸಂತಸದಿಂದ ಹಬ್ಬ ಆಚರಿಸಬೇಕು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು’ ಎಂದು ಹೇಳಿದರು.
‘ಈ ಹಬ್ಬದ ಸಂದರ್ಭದಲ್ಲಿ ಪಿಯು ವಿದ್ಯಾರ್ಥಿಗಳ ಪರೀಕ್ಷೆಗಳೂ ಇರುವುದರಿಂದ ವಿದ್ಯಾರ್ಥಿಗಳಿಗೆ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚಬಾರದು. ಸಾರ್ವಜನಿಕರು ರಾಸಾಯನಿಕಯುಕ್ತ ಬಣ್ಣ ಬಳಸಬಾರದು. ಕುಡಿಯುವ ನೀರಿನ ಮೂಲಗಳಲ್ಲಿ ರಾಸಾಯನಿಕ ಯುಕ್ತಬಣ್ಣ ಬೆರೆಸಬಾರದು’ ಎಂದರು.
‘ಬ್ರಿಡ್ಜ್ ಕಂ ಬ್ಯಾರೇಜ್ ವ್ಯಾಪ್ತಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಈಜು, ಸ್ನಾನ ಮಾಡಬಾರದು. ಅನ್ಯಧರ್ಮಿಯರಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಹಾಗೂ ಮಕ್ಕಳಿಗೆ ನೋವಾಗದಂತೆ ಬಣ್ಣ ಆಡಬೇಕು. ಬಣ್ಣ ಆಡುವುದನ್ನು ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಮುಕ್ತಾಯ ಮಾಡಬೇಕು. ಹಬ್ಬದ ಎರಡೂ ದಿನ ಮದ್ಯ ಮಾರಾಟ ನಿಷೇಧಿಸಲಾಗುವುದು’ ಎಂದು ಹೇಳಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ‘ಹೋಳಿ ಹಬ್ಬದ ಸಂದರ್ಭದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಅವಶ್ಯಕ ಕ್ರಮಗಳ ಕೈಗೊಂಡು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಹಬ್ಬದ ವೇಳೆ ಶಾಂತಿ ಕದಡುವವರ ಮೇಲೆ ತೀವ್ರ ನಿಗಾ ಇರಿಸಲಾಗುವುದು’ ಎಂದರು.
‘ರಂಜಾನ್ ತಿಂಗಳು ಹಾಗೂ ಹೋಳಿ ಹಬ್ಬ ಒಂದೇ ಬಾರಿ ಬಂದಿರುವುದರಿಂದ ಎಲ್ಲ ಧರ್ಮದವರು ಸೌಹಾರ್ದದಿಂದ ಹಬ್ಬಗಳನ್ನು ಆಚರಿಸಬೇಕು. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಲಾಗಿದ್ದು, ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮಂದಿರ ಮಸೀದಿ ಸಮೀಪ ಸೂಕ್ತ ಬಂದೋಬಸ್ತ್ ಮಾಡಲಾಗುವುದು. ಡಿ.ಜೆ.ಗಳಲ್ಲಿ ಪ್ರಚೋದನಕಾರಿ ಹಾಡುಗಳನ್ನು ಹಾಕುವಂತಿಲ್ಲ’ ಎಂದು ಹೇಳಿದರು.
‘ಒತ್ತಾಯಪೂರ್ವಕವಾಗಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಅನ್ಯ ಧರ್ಮೀಯರಿಗೆ ಬಣ್ಣ ಹಾಕಬಾರದು. ನಗರದ ಪ್ರಮುಖ ರಸ್ತೆಗಳಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಕೈಗೊಳ್ಳಲಾಗುವ ಬಂಡಿಗಳು ಸರಾಗವಾಗಿ ಹೋಗಲು ನಗರಸಭೆ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ಸಭೆಯಲ್ಲಿ ಡಿವೈಎಸ್‌ಪಿಗಳಾದ ಸುರೇಶ್, ಜಾವೇದ್ ಇನಾಮದಾರ, ಮುಖಂಡರಾದ ಶರಣಪ್ಪ ಗುಳಿಗಿ, ಮರೆಪ್ಪ ಚಟ್ಟರ್ಕರ್, ಶರಣಪ್ಪ ಜಾಕಾ, ಮಲ್ಲಿಕಾರ್ಜುನ ಕ್ರಾಂತಿ, ಭೀಮು ಪೂಜಾರಿ, ಸಬ್ದಾನ್ ಮೂಸಾ, ಹಾಫೀಜ್ ಪಟೇಲ್, ಜಿಲಾನಿ, ಬಾಬಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.