ಗುರುಮಠಕಲ್ ಪಟ್ಟಣದ ಹೊರವಲಯದ ಎಸ್.ಎಲ್.ಟಿ. ರೈಸ್ ಮಿಲ್ ಮತ್ತು ಎಸ್.ಎಲ್.ವಿ. ರೈಸ್ ಮಿಲ್ (ಸಂಗ್ರಹ ಚಿತ್ರ)
ಗುರುಮಠಕಲ್/ಯಾದಗಿರಿ: ಪಟ್ಟಣದ ಹೊರವಲಯದಲ್ಲಿನ ನರೆಂದ್ರ ರಾಠೋಡ ಕುಟುಂಬದ ಶ್ರೀ ಲಕ್ಷ್ಮೀ ತಿಮ್ಮಪ್ಪ ಕಾಟನ್ ಆಂಡ್ ಜಿನ್ನಿಂಗ್ ಮಿಲ್ ನಲ್ಲಿನ ಎರಡೂ ಗೋದಾಮುಗಳನ್ನು ಪರಿಶೀಲನೆ ಮಾಡುವ ವೇಳೆ ಕರ್ನಾಟಕ ಸರ್ಕಾರದ ಅನ್ನಭಾಗ್ಯದ ಅಕ್ಕಿ ಮತ್ತು ಜೋಳ ಹಾಗೂ ಕ್ಷೀರ ಭಾಗ್ಯದ ಹಾಲಿನ ಪುಡಿ ಪಾಕೇಟ್‌ಗಳು ಪತ್ತೆಯಾಗಿದ್ದು, ಪ್ರಕರಣ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಈ ಹಿಂದೆ ರಾಠೋಡ ಕುಟುಂಬದ ಲಕ್ಷ್ಮೀ ವೆಂಕಟೇಶ್ವರ ಇಂಡಸ್ಟ್ರೀಸ್ ಮತ್ತು ಲಕ್ಷ್ಮೀ ಬಾಲಾಜಿ ಇಂಡಸ್ಟ್ರೀಸ್ (ರೈಸ್ ಮಿಲ್ ಗಳು) ಮೇಲೆ ಸೆ.5 ರಂದು ತಡರಾತ್ರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಎಸ್.ಪಿ. ಪೃಥ್ವಿಕ್ ಶಂಕರ್ ನೇತೃತ್ವದ ತಂಡ ದಾಳಿ ನಡೆಸಿದಾಗ ಪಡಿತರ ಅಕ್ಕಿ ಪತ್ತೆಯಾಗಿತ್ತು.
ಸತತ ಮೂರು ದಿನಗಳ ಪರಿಶೀಲನೆ ಮತ್ತು ಅಕ್ಕಿಯ ತೂಕ, ಮೌಲ್ಯ ನಿರ್ಧಾರದ ನಂತರ, ₹ 1.21 ಕೋಟಿ ಮೌಲ್ಯದ ಪಡಿತರ ಅಕ್ಕಿಯ ಅಕ್ರಮ ದಾಸ್ತಾನಿನ ಕುರಿತು ನರೇಂದ್ರ ರಾಠೋಡ, ಅಯ್ಯಪ್ಪ ರಾಠೋಡ, ಚಂದ್ರಿಕಾ ಮತ್ತು ಲಕ್ಷ್ಮೀಬಾಯಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸಿಗದ ಜಾಮೀನು: ಅಕ್ಕಿ ಪತ್ತೆ, ಪ್ರಕರಣ ದಾಖಲಾಗುವ ಸಾಧ್ಯತೆ ಹಿನ್ನಲೆ ಚಂದ್ರಕಾ, ಲಕ್ಷ್ಮೀಬಾಯಿ ನಿರೀಕ್ಷಣಾ ಜಾಮೀನಿಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಸಿಐಡಿ ತನಿಖೆ: ದೊಡ್ಡ ಪ್ರಮಾಣದ ಅಕ್ಕಿ ದಾಸ್ತಾನು ಪತ್ತೆಯಾದ ಹಿನ್ನಲೆ ಪ್ರಕರಣವನ್ನು ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್, ಎಸ್‌ಪಿ. ಎಂ.ಡಿ. ಶರತ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅನಿಲ್ ಕುಮಾರ ಮತ್ತು ಸಚಿನ್‌ಕುಮಾರ್, ಎಎಸ್ಐ ಹರ್ಷಕುಮಾರ್, ದಿನೇಶ ಅವರಿದ್ದ ಸಿಐಡಿ ತಂಡಕ್ಕೆ ತನಿಖೆಗೆ ವಹಿಸಲಾಗಿತ್ತು.
ತಂಡವು ರೈಸ್ ಮಿಲ್ ಗಳಲ್ಲಿ ಮಹಜರು ನಡೆಸಿ, ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ದೀಪಾವಳಿ ಹಬ್ಬದ ನಂತರ ತನಿಖೆ ಮತ್ತೆ ಚುರುಕುಗೊಳ್ಳುವ ಸಾಧ್ಯತೆಯಿದೆ ಎನ್ನುತ್ತವೆ ಮೂಲಗಳು.
ಪ್ರಕರಣ ದಾಕಲು: ಇನ್ನೂ ಸಿಐಡಿ ತನಿಖೆ ನಡೆಯುತ್ತಿರುವ ರೈಸ್‌ಮಿಲ್ ಮುಂದಿನ ಕಾಟನ್ ಮತ್ತು ಜಿನ್ನಿಂಗ್‌ಮಿಲ್‌ನಲ್ಲಿ ಅನ್ನಭಾಗ್ಯದ ಅಕ್ಕಿ, ಜೋಳ, ಕ್ಷೀರಭಾಗ್ಯದ ಹಾಲಿನ ಪುಡಿ ಪತ್ತೆಯಾಗಿರುವ ಕುರಿತು ಅಯ್ಯಪ್ಪ ರಾಠೋಡ್ ವಿರುದ್ಧ ಗುರುಮಠಕಲ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಕಲಾಗಿವೆ.
ಸತತ ಮೂರು ದಿನಗಳ ಪರಿಶೀಲನೆ ನಂತರ ‘ಅಕ್ಕಿ ಮತ್ತು ಜೋಳದ ಅಕ್ರಮ ದಾಸ್ತಾನಿನ ಕುರಿತು ಆಹಾರ ನಿರೀಕ್ಷಕ ಅನ್ವರ್ ಹುಸೇನ್ ದೂರಿನನ್ವಯ ಅ.17 (ಶುಕ್ರವಾರ) ರಂದು ಪ್ರಕರಣ ದಾಕಲಾಗಿದೆ ಮತ್ತು ಅ.18 (ಶನಿವಾರ) ರಂದು ಪಿಎಂ ಪೋಷಣ ಶಕ್ತಿ ನಿರ್ಮಾಣ (ತಾಲ್ಲೂಕು ಪಂಚಾಯಿತಿ) ಎಡಿ ಚೆನ್ನಪ್ಪ ಅವರು ನೀಡಿದ ದೂರಿನಂತೆ ‘ರಾಜ್ಯ ಸರ್ಕಾರದ ಕ್ಷೀರಭಾಗ್ಯ ಯೋಜನೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸರಬರಾಜು ಮಾಡಬೇಕಿದ್ದ ₹75,757.5 ಮೌಲ್ಯದ ‘ನಂದಿನಿ ಹೋಲ್ ಮಿಲ್ಕ್ ಪೌಡರ್’ (ಕೆನೆ ಭರಿತ ಹಾಲು) 1 ಕೆ.ಜಿ. ತೂಕದ 222 ಪ್ಯಾಕೇಟ್‌ಗಳು ಪತ್ತೆಯಾದ ಕುರಿತು ಅಯ್ಯಪ್ಪ ರಾಠೋಡ ವಿರುದ್ಧ ಪ್ರಕರಣ ದಾಳಲಿಸಲಾಗಿದೆ’ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಜನ-ಮನ: ಅಕ್ಕಿ, ಜೋಳದ ಜತೆಗೆ ಹಾಲಿನ ಪುಡಿಯೂ ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಭಾರಿ ಕುತೂಹಲಕ್ಕೆ ಕಾರ್ಣವಾಗಿದೆ. ಈ ಮೊದಲು ದಾಳಿಯಾದಾಗ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ವಿರುದ್ಧದ ರಾಜಕೀಯ ಕಾರಣಕ್ಕಾಗಿ ದಾಳಿ ನಡೆದಿರುಬಹುದು ಎನ್ನುವ ಮಾತುಗಳು ಹರಿದಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.