ಅತ್ಯಾಚಾರ
ಸಾಂದರ್ಭಿಕ ಚಿತ್ರ
ಯಾದಗಿರಿ: ಹದಿನೇಳೂವರೆ ವರ್ಷದ ಬಾಲಕಿಗೆ ಜೀವ ಬೆದರಿಕೆ ಹಾಕಿ, ಬಲವಂತ ಮಾಡಿ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದಡಿ ಯುವಕನ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ಪೋಕ್ಸೊ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಗ್ರಾಮವೊಂದರ ನಿವಾಸಿ ನಬಿಸಾಬ್ ಖಾಸಿಂಸಾಬ್ ಅತ್ಯಾಚಾರ ಎಸಗಿದ ಆರೋಪಿ. ಬಾಲಕಿಯು 4ನೇ ತರಗತಿ ಓದಿ ಮನೆಯಲ್ಲಿದ್ದು ಹೊಲಕ್ಕೆ ಹೋಗುತ್ತಿದ್ದಳು. ಅದೇ ಗ್ರಾಮದ ನಬಿಸಾಬ್ ಬಾಲಕಿಗೆ ಪರಿಚಯವಾಗಿ ಸಲುಗೆಯಿಂದ ಮಾತನಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನನ್ನು ಪ್ರೀತಿಸುವಂತೆ ದುಂಬಾಲು ಬಿದ್ದು ಬಾಲಕಿಯನ್ನು ಪೀಡಿಸುತ್ತಿದ್ದನು. ಮದುವೆ ಮಾಡಿಕೊಳ್ಳುವೆ ತನ್ನೊಂದಿಗೆ ಬರುವಂತೆಯೂ ಒತ್ತಾಯಿಸುತ್ತಿದ್ದ. ಈ ಬಗ್ಗೆ ಪೋಷಕರಿಗೆ ಹೇಳುವುದಾಗಿ ಬಾಲಕಿ ಎಚ್ಚರಿಸಿದ್ದರೂ ಕೇಳಲಿಲ್ಲ. ಬಯಲು ಬಹಿರ್ದೆಸೆಗೆ ಹೋಗಿದ್ದ ಬಾಲಕಿಯನ್ನು ಬಲವಂತ ಮಾಡಿ, ಜೀವ ಬೆದರಿಕೆ ಹಾಕಿ ಬೈಕ್‌ನಲ್ಲಿ ಕರೆದುಕೊಂಡು ಹೋದನು ಎಂದಿದ್ದಾರೆ.
ಕಲಬುರಗಿ ನಗರದ ಲಾಡ್ಜ್ ಒಂದಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮರುದಿನ ಕುರಕುಂದಿ ಗ್ರಾಮದಲ್ಲಿನ ಸಂಬಂಧಿಕರ ಮನೆಗೆ ಬಾಲಕಿಯನ್ನು ಕರೆದೊಯ್ದ ನಬಿಸಾಬ್, ಸ್ನೇಹಿತೆ ಎಂದು ಹೇಳಿ ಮನೆಯಲ್ಲಿ ಬಿಟ್ಟು ಪರಾರಿಯಾಗಿದ್ದ. ಬಾಲಕಿ ಎರಡು ದಿನ ಅಲ್ಲಿಯೇ ಇದ್ದು ಬಳಿಕ ಸ್ವಗ್ರಾಮಕ್ಕೆ ತೆರಳಿದ್ದಾಗ ಅತ್ಯಾಚಾರ ಎಸಗಿದ್ದು ಗೊತ್ತಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.