ADVERTISEMENT

ಯಾದಗಿರಿ| ಪೊಲೀಸ್ ರನ್ ಅಭಿಯಾನ: ಪ್ರಕಾಶ, ಬಸವರಾಜ ಪ್ರಥಮ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 5:12 IST
Last Updated 2 ಮಾರ್ಚ್ 2026, 5:12 IST
ಯಾದಗಿರಿಯಲ್ಲಿ ಭಾನುವಾರ ನಡೆದ ಕರ್ನಾಟಕ ಪೊಲೀಸ್ ರನ್‌ ಮ್ಯಾರಾಥಾನ್‌ಗೆ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, ಎಸ್‌ಪಿ ಪೃಥ್ವಿಕ್ ಶಂಕರ್ ಹಸಿರು ನಿಶಾನೆ ತೋರಿದರು  
ಯಾದಗಿರಿಯಲ್ಲಿ ಭಾನುವಾರ ನಡೆದ ಕರ್ನಾಟಕ ಪೊಲೀಸ್ ರನ್‌ ಮ್ಯಾರಾಥಾನ್‌ಗೆ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, ಎಸ್‌ಪಿ ಪೃಥ್ವಿಕ್ ಶಂಕರ್ ಹಸಿರು ನಿಶಾನೆ ತೋರಿದರು     

ಯಾದಗಿರಿ: ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಯ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’, ಮಾದಕ ದ್ರವ್ಯ ಮುಕ್ತ ಕರ್ನಾಟಕ, ಸೈಬರ್ ಅಪರಾಧಗಳು ಮುಕ್ತ ಭಾರತ, ಆರೋಗ್ಯದ ಅರಿವು ಮೂಡಿಸಲು ‘ಕರ್ನಾಟಕ ಪೊಲೀಸ್ ರನ್‌ ಅಭಿಯಾನದಡಿ’ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಎಸ್‌ಬಿಐ ವತಿಯಿಂದ ನಗರದಲ್ಲಿ ಭಾನುವಾರ 5 ಕಿ.ಮೀ. ಮತ್ತು 10 ಕಿ.ಮೀ. ಮ್ಯಾರಾಥಾನ್ ನಡೆಯಿತು.

ನಗರದ ಲುಂಬಿನಿ ಉದ್ಯಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಅವರು ಓಟಕ್ಕೆ ಚಾಲನೆ ನೀಡಿದರು. ‘ಉತ್ತಮ ಆರೋಗ್ಯಕ್ಕಾಗಿ ಮತ್ತು ವ್ಯಸನಮುಕ್ತ ಸಮಾಜಕ್ಕಾಗಿ’ ಎಂಬ ಘೋಷಣೆಯೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮ್ಯಾರಾಥಾನ್‌ ಓಟದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಯುವಜನತೆ ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಗಮನ ಸೆಳೆದರು.

ಗಂಜ್, ಶಾಸ್ತ್ರಿ ವೃತ್ತ, ಸುಭಾಷ್ ವೃತ್ತ, ಸರ್ಕಾರಿ ಪದವಿ ಮಹಾವಿದ್ಯಾಲಯ, ಕನಕ ಭವನ ಮೂಲಕ ಹಾಯ್ದು ಲುಂಬಿನಿ ಉದ್ಯಾನದಲ್ಲಿ ಮ್ಯಾರಾಥಾನ್ ಸಮಾಪನಗೊಂಡಿತು.

ADVERTISEMENT

10 ಕಿ.ಮೀ. ಮ್ಯಾರಾಥಾನ್‌ನಲ್ಲಿ ಕಾಲೇಜು ವಿದ್ಯಾರ್ಥಿ‌‌ಗಳಾದ ಪ್ರಕಾಶ ರಾಮಕೃಷ್ಣ ಪ್ರಥಮ, ಮಹಮದ್ ಅಲಿ ದ್ವಿತೀಯ ಹಾಗೂ ಡಿಎಆರ್‌ನ ಕಿಸನ್ ಪವಾರ್ ತೃತೀಯ ಸ್ಥಾನ ಪಡೆದರು.

5 ಕಿ.ಮೀ. ಮ್ಯಾರಾಥಾನ್‌ ಸ್ಪರ್ಧೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವ ಬಸವರಾಜ ಸಾಬಣ್ಣ ಪ್ರಥಮ, ಶಂಕ್ರಪ್ಪ ಸಾಬಣ್ಣ ದ್ವಿತೀಯ ಹಾಗೂ ಪ್ರಜ್ವಲ್ ಅಮರೇಶ ಅವರು ತೃತೀಯ ಸ್ಥಾನ ಗಳಿಸಿದರು.

ಮಹಿಳಾ ವಿಭಾಗದರು ಒಂದೇ ಮನೆಯ ಸಹೋದರಿಯರು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ. ಎಲ್‌ಕೆಇಟಿಎಸ್‌ ಕಾಲೇಜಿನ ಪೂಜಾ ಚವ್ಹಾಣ್ ಪ್ರಥಮ ಹಾಗೂ ಆಕೆಯ ತಂಗಿ, ನವನಂದಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಭವಾನಿ ಚವ್ಹಾಣ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಈ ವೇಳೆ ಮಾತನಾಡಿದ ಎಸ್‌.ಪಿ ಪೃಥ್ವಿಕ್ ಶಂಕರ್, ‘ಆರೋಗ್ಯವೇ ನಿಜವಾದ ಸಂಪತ್ತು. ಆರೋಗ್ಯವನ್ನು ನಿರ್ಲಕ್ಷಿಸದೆ ಅದನ್ನು ಕಾಪಾಡಿಕೊಂಡರೆ ಎಲ್ಲವೂ ಪಡೆಯಬಹುದು. ನಶೆ ಮುಕ್ತ ಕರ್ನಾಟಕ, ಸೈಬರ್ ಅಪರಾಧ ಮುಕ್ತ ಭಾರತ, ನಮ್ಮ ಪೊಲೀಸ್ ನಮ್ಮ ಹೆಮ್ಮೆ, ಉತ್ತಮ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ರನ್ ಸ್ಪರ್ಧೆ ಆಯೋಜನೆ ಮಾಡಲಾಗಿದೆ’ ಎಂದರು.

ಹೆಚ್ಚುವರಿ ಎಸ್‌ಪಿ ಧರಣೇಶ, ಡಿವೈಎಸ್‌ಪಿಗಳಾದ ಭರತಕುಮಾರ ತಳವಾರ, ಸುರೇಶ ನಾಯಕ, ಸಿಪಿಐ ಸುನಿಲ್ ಮೂಲಿಮನಿ, ಅಕ್ಕಮಹಾದೇವಿ‌ ಬಿರಾದಾರ, ಪಿಎಸ್‌ಐ ಮಂಜನಗೌಡ, ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.