ADVERTISEMENT

ನಿರಾಶ್ರಿತರಿಗೆ ಆಶ್ರಯ ಒದಗಿಸುವುದು ಕರ್ತವ್ಯ: ಯಾದಗಿರಿ ನಗರಸಭೆ ಪೌರಾಯುಕ್ತ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 6:36 IST
Last Updated 19 ಡಿಸೆಂಬರ್ 2025, 6:36 IST
ಯಾದಗಿರಿ ನಗರಸಭೆಯ ಸಭಾಂಗಣದಲ್ಲಿ ನಡೆದ ಆಶ್ರಯ ನಿರ್ವಹಣಾ ಸಮಿತಿಯ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು 
ಯಾದಗಿರಿ ನಗರಸಭೆಯ ಸಭಾಂಗಣದಲ್ಲಿ ನಡೆದ ಆಶ್ರಯ ನಿರ್ವಹಣಾ ಸಮಿತಿಯ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು    

ಯಾದಗಿರಿ: ‘ನಗರದಲ್ಲಿ ವಸತಿ ರಹಿತರಿಗೆ ಇರುವ ಆಶ್ರಯ ಕೇಂದ್ರವು ನಿರಾಶ್ರಿತರಿಗೆ ಬಹಳ ಅನುಕೂಲವಾಗಿದ್ದು, ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವುದು ನಮ್ಮ ಕರ್ತವ್ಯ’ ಎಂದು ನಗರಸಭೆಯ ಪೌರಾಯುಕ್ತ ಉಮೇಶ ಚವ್ಹಾಣ್ ಹೇಳಿದರು.

ಇಲ್ಲಿನ ನಗರಸಭೆಯಲ್ಲಿ ಗುರುವಾರ ಜಿಲ್ಲಾ ಕೌಶಲಾಭಿವೃದ್ದಿ ಉದ್ಯಮಶೀಲತೆ ಹಾಗೂ ಡೇ- ನಲ್ಮಾ ಅಭಿಯಾನ ಮತ್ತು ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆದ ನಗರ ವಸತಿ ರಹಿತರ ಆಶ್ರಯ ಕೇಂದ್ರದ ಆಶ್ರಯ ನಿರ್ವಹಣಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

‘ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ, ಯೋಗ ಮತ್ತು ಧ್ಯಾನ ಶಿಬಿರ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಸ್ತಾವ ಸಲ್ಲಿಸಿ’ ಎಂದು ಸೂಚಿಸಿದರು.

ADVERTISEMENT

‘ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಇರುವ ನಿರಾಶ್ರಿತರಿಗೆ ತೊಂದರೆಯಾದಾಗ ಪೊಲೀಸ್ ಇಲಾಖೆಯ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು. ತಕ್ಷಣ ಸ್ಪಂದಿಸಿದ ಇಲಾಖೆಯವರು, ‘ಯಾವುದೇ ತೊಂದರೆಗಳಿಗೆ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಬೇಕು’ ಎಂದರು.

ಕೌಶಲಾಭಿವೃದ್ದಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ ಮಾತನಾಡಿ, ‘ನಗರದಲ್ಲಿ ಕಾರ್ಮಿಕರಾಗಿದ್ದು, ವಸತಿ ಇಲ್ಲದವರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡುವ ಉದ್ದೇಶದಿಂದ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ವಾಸ್ತವ್ಯ ಇರುವವರಿಗೆ ಊಟ, ತಿಂಡಿಯ ಅಗತ್ಯವಿಲ್ಲದಿದ್ದರೂ ಮಾನವೀಯ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ಕೆ.ವೈದ್ಯ, ನಗರ ಪೊಲೀಸ್ ಠಾಣೆಯ ಸಿಬ್ಬಂದಿ ರವಿ ರಾಠೋಡ್, ಕಿರಿಯ ಎಂಜಿನಿಯರ್ ಲೋಕೇಶ್ವರಿ, ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಭೀಮಾಶಂಕರ ದೊಡ್ಮನಿ, ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ, ಸಿಆರ್‌ಪಿಗಳಾದ ಸಾಬಮ್ಮ, ಅವ್ವಮ್ಮ, ಪ್ರೇಮಾ, ಆಶ್ರಯ ಕೇಂದ್ರದ ವ್ಯವಸ್ಥಾಪಕ ಬೀರಲಿಂಗಪ್ಪ ಕಿಲ್ಲನಕೇರಾ, ಕೇರ್ ಟೇಕರ್‌ಗಳಾದ ದೇವಮ್ಮ, ಸಿದ್ರಾಮ, ವಸತಿ ರಹಿತರಾದ ರಾಘವೇಂದ್ರ, ಪಟೇಲ್‌ ಸಾಬ್, ಈರಪ್ಪ, ಬಾಬು ಸೇರಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.