
ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಅರ್ಹರಿಗೆ ಭೂಮಿ ಮಂಜೂರಾತಿ, ವಸತಿ, ಭೂ ಒಡೆತನ ಸಮಿತಿ ಸಭೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಘಟಕದ ಮುಖಂಡರು ಹಾಗೂ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಧರಣಿ ಸತ್ಯಾಗ್ರಹ ನಡೆಸಿದರು.
ವಿವಿಧ ಗ್ರಾಮಗಳಿಂದ ಬಂದಿದ್ದ ಮಹಿಳೆಯರು ಹಾಗೂ ಸಮಿತಿಯ ಮುಖಂಡರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಹತ್ತಿಗೂಡುರ, ಅನವಾರ, ತುಮಕೂರು, ಹಯ್ಯಾಳ(ಕೆ), ಕೊಂಗಂಡಿ ಸೇರಿದಂತೆ ಹಲವು ಗ್ರಾಮಗಳಲ್ಲಿನ ಭೂಮಿರಹಿತರು ದಶಕಗಳಿಂದ ಭೂಮಿಯಿಂದ ವಂಚಿತರಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಕಷ್ಟದ ಬದುಕು ನಡೆಸುತ್ತಿದ್ದಾರೆ. ಕೂಡಲೇ ಅರ್ಹರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಭೂಮಿ ಮಂಜೂರು ಮಾಡಿ ಕೊಡಬೇಕು’ ಎಂದು ಮುಖಂಡರು ಒತ್ತಾಯಿಸಿದ್ದಾರೆ.
‘ಭೂ ವಂಚಿತರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಜಮೀನು ನೀಡಬೇಕು ಎಂಬ ನಿಯಮ ಮತ್ತು ಕಾನೂನಿದೆ. ಆದರೆ, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸುತ್ತಿಲ್ಲ. ದೇವರು ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ’ಎಂದು ಆರೋಪಿಸಿದ್ದಾರೆ.
‘ಜಿಲ್ಲೆಯಲ್ಲಿ ಭೂ ಒಡೆತನ ಯೋಜನೆಯು ಸಂಪೂರ್ಣವಾಗಿ ಜಾರಿ ಮಾಡಬೇಕು. ಜಿಲ್ಲಾಧಿಕಾರಿಗಳು ಭೂ ಒಡೆತನ ಯೋಜನೆ ಸಮಿತಿ ಸಭೆಯನ್ನು ಕೂಡಲೇ ಕರೆಯಬೇಕು. ವಸತಿ ಇಲ್ಲದೆ ಪರದಾಡುತ್ತಿರುವವರಿಗೂ ನೆರವಾಗಬೇಕು. ಈ ಸಮಸ್ಯೆ ಗಂಭೀರವಾಗಿದ್ದು, ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಸೂರು ಕಲ್ಪಿಸುವ ವ್ಯವಸ್ಥೆ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದಿದ್ದಾರೆ.
ಧರಣಿಯಲ್ಲಿ ಸಮಿತಿ ರಾಜ್ಯಾಧ್ಯಕ್ಷ ಆರ್.ಅಶ್ವಥ ಅಂತೋಜಿ, ಜಿಲ್ಲಾ ಪದಾಧಿಕಾರಿಗಳಾದ ಶರಣರೆಡ್ಡಿ ಹತ್ತಿಗೂಡುರು, ಸಿದ್ದಪ್ಪ ಹೊಸ್ಮನಿ, ಮರೆಪ್ಪ ಹೊಸ್ಮನಿ, ಶರಣಪ್ಪ ಚಲುವಾದಿ, ಪರಶುರಾಮ್ ಚಲುವಾದಿ, ರೈತ ಹೋರಾಟಗಾರರಾದ ಮಲ್ಲಿಕಾರ್ಜುನ ಸತ್ಯಂಪೇಟೆ, ಮಲ್ಕಣ್ಣ ಚಿಂತಿ, ಕವಿತಾ, ಮರಿಯಮ್ಮ ಅನವಾರ, ಮರಿಯಮ್ಮ ಬಿಬಿಎಂಪಿ, ಸಂಗಮ್ಮ, ಶಿವಮ್ಮ, ಮಾಳಮ್ಮ ಸೇರಿ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.