ADVERTISEMENT

ಯಾದಗಿರಿ | ಗರ್ಭಿಣಿ, ಶಿಶು ಸಾವು : ವೈದ್ಯರ ನಿರ್ಲಕ್ಷ್ಯ– ಆರೋಪ

​ಪ್ರಜಾವಾಣಿ ವಾರ್ತೆ
Published 4 ಮೇ 2023, 20:57 IST
Last Updated 4 ಮೇ 2023, 20:57 IST
   

ಯಾದಗಿರಿ: ನಗರದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗಾಗಿ ಬಂದಿದ್ದ ತುಂಬು ಗರ್ಭಿಣಿ ಹಾಗೂ ಅವರ ಗರ್ಭದಲ್ಲಿಯೇ ಶಿಶು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ತಾಲ್ಲೂಕಿನ ಗೂಡೂರು ಗ್ರಾಮದ ಸಂಗೀತಾ ನಾಗರಾಜ (20) ಸಾವನ್ನಪ್ಪಿದ ಗರ್ಭಿಣಿ.

‘ಹೆರಿಗೆಗಾಗಿ ಬುಧವಾರ ಆಗಮಿಸಿದ್ದ ಗರ್ಭಿಣಿ ಸಂಗೀತಾ ಅವರನ್ನು ಗುರುವಾರ ಸಂಜೆ ಹೆರಿಗೆ ಕೋಣೆಗೆ ಕರೆದುಕೊಂಡು ಹೋಗಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಗರ್ಭಿಣಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ’ ಎಂದು ಸಂಬಂಧಿಕರಾದ ಮಹೇಶ ಆರೋಪಿಸಿದ್ದಾರೆ.

ADVERTISEMENT

‘ಸಹಜ ಹೆರಿಗೆ ಮಾಡುತ್ತೇವೆ ಎಂದು ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ವೈದ್ಯರು ಸರಿಯಾಗಿ ಪರೀಕ್ಷೆ ಮಾಡಿಲ್ಲ. ಕೇವಲ ನರ್ಸ್‌ ಮೇಲೆ ಬಿಟ್ಟಿದ್ದಾರೆ. ಗುರುವಾರ ಸಂಜೆ 4 ಗಂಟೆ ಸುಮಾರು ಆಪರೇಷನ್‌ ಕೋಣೆಗೆ ಗರ್ಭಿಣಿ ನಡೆದುಕೊಂಡು ಹೋಗಿದ್ದಾರೆ. ಇದಾದ ಕೆಲ ಹೊತ್ತಿನ ಮೇಲೆ ಗರ್ಭಿಣಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಸಾವನ್ನು ಮುಚ್ಚಿಟ್ಟು ಮತ್ತೊಂದು ಆಸ್ಪತ್ರೆಗೆ ಶಿಫಾರಸು ಮಾಡಲು ಯತ್ನಿಸಿದ್ದಾರೆ. ಇದು ವೈದ್ಯರು ಮಾಡುವ ಮೋಸವಾಗಿದೆ’ ಎಂದು ಮಹೇಶ ದೂರಿದ್ದಾರೆ.

‘ಗರ್ಭಿಣಿಗೆ ರಕ್ತದೋತ್ತಡ ಇತ್ತು. ಹೃದಯಾಘಾತದಿಂದ ಗರ್ಭಿಣಿ ಸಾವನ್ನಪ್ಪಿದ್ದಾರೆ. ಶಸ್ತ್ರಚಿಕಿತ್ಸೆಗೆ ಕರೆದುಕೊಂಡು ಹೋಗುವಾಗ ಕುಟುಂಬದವರಿಗೆ ಎಲ್ಲ ಮಾಹಿತಿ ನೀಡಿ ಸಹಿ ಪಡೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ರಿಜ್ವಾನ್‌ ಹೇಳಿದರು.

‘ಹೆರಿಗೆಗೆಂದು ತುಂಬು ಗರ್ಭಿಣಿ ಆಸ್ಪತ್ರೆಗೆ ಬಂದಿದ್ದರು. ಸಹಜ ಹೆರಿಗೆ ಮಾಡುವುದಾಗಿ ವೈದ್ಯರು ಹೇಳಿದ್ದರು. ಪ್ರತಿ ತಿಂಗಳು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಗೆ ಬಂದ ಮೇಲೆ ಸ್ಕ್ಯಾನಿಂಗ್ ಮಾಡಲಿಲ್ಲ. ವೈದ್ಯರು, ಸಿಬ್ಬಂದಿ ನಿರ್ಲಕ್ಷದಿಂದ ತಾಯಿ, ಮಗು ಸಾವನ್ನಪ್ಪಿದೆ’ ಎಂದು ಕುಟುಂಬಸ್ಥರು ಆರೋಪಿಸಿದರು.

ಆಸ್ಪತ್ರೆ ಮುಂದೆ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಪೊಲೀಸರು ಕುಟುಂಬದವರನ್ನು ಸಮಾಧಾನ ಪಡಿಸಿ, ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.