ADVERTISEMENT

ಯಾದಗಿರಿ ಬಂಜಾರ ನೃತ್ಯ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ: ಆಕ್ಷೇಪ

ರಾಜ್ಯ ಮಟ್ಟದ ಯುವಜನೋತ್ಸವ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 6:41 IST
Last Updated 5 ಡಿಸೆಂಬರ್ 2025, 6:41 IST
ಯಾದಗಿರಿಯಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಯುವಜನೋತ್ಸವದ ಜನಪದ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದ ಯಾದಗಿರಿ ತಂಡಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಚೆಕ್ ವಿತರಣೆ ಮಾಡಿದರು
ಯಾದಗಿರಿಯಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಯುವಜನೋತ್ಸವದ ಜನಪದ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದ ಯಾದಗಿರಿ ತಂಡಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಚೆಕ್ ವಿತರಣೆ ಮಾಡಿದರು   

ಪ್ರಜಾವಾಣಿ ವಾರ್ತೆ

ಯಾದಗಿರಿ: ನಗರದಲ್ಲಿ ಎರಡು ದಿನಗಳವರೆಗೆ ನಡೆದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಗುರುವಾರ ತೆರೆಬಿದ್ದಿದ್ದು, ಜನಪದ ನೃತ್ಯದ ಗುಂಪು ಸ್ಪರ್ಧೆಯಲ್ಲಿ ಯಾದಗಿರಿ ತಂಡವು, ಬಂಜಾರ ನೃತ್ಯದಲ್ಲಿ ಪ‍್ರಥಮ ಸ್ಥಾನ ಪಡೆದಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.

ಜನಪದ ನೃತ್ಯದಲ್ಲಿ 26 ತಂಡಗಳು ಸ್ಪರ್ಧಿಸಿದ್ದು, ಹಾಸನದ ಡೊಳ್ಳು ಕುಣಿತ ದ್ವಿತೀಯ ಹಾಗೂ ಉಡುಪಿಯ ಕಂಗಿಲು ನೃತ್ಯ ತೃತೀಯ ಸ್ಥಾನ ಗಳಿಸಿದವು. ಸ್ಥಳೀಯ ತಂಡಕ್ಕೆ ಆದ್ಯತೆ ಕೊಟ್ಟು, ಬೇರೆ ಜಿಲ್ಲೆಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ‘ತೀರ್ಪುಗಾರರನ್ನು ಆಯ್ಕೆ ಮಾಡಿದ್ದು ಜಿಲ್ಲಾಡಳಿತವಲ್ಲ. ಅವರನ್ನು ಅನುಭವ ಮತ್ತು ಹಿರಿತನದ ಮೇಲೆ ಬೆಂಗಳೂರಿನ ಹಂತದಲ್ಲಿ ಆಯ್ಕೆಯಾಗಿದ್ದಾರೆ. ಫಲಿತಾಂಶದ ಬಗ್ಗೆ ಆಕ್ಷೇಪಿಸುವವರು ಕ್ರೀಡಾ ಆಯುಕ್ತರನ್ನು ಭೇಟಿಯಾಗಿ ದೂರು ಕೊಡಲಿ’ ಎಂದರು.

‘ನಶಿಸಿ ಹೋಗುತ್ತಿರುವ ಅಪ್ಪಟ ಗ್ರಾಮೀಣ ಸೊಗಡಿನ ಬಂಜಾರ ನೃತ್ಯವನ್ನು ಸೊಗಸಾಗಿ ಪ್ರದರ್ಶಿಸಿದ್ದಾರೆ. ಡಾಮ್ ಡುಮ್ ಶಬ್ದಕ್ಕೆ ಹೆಜ್ಜೆ ಹಾಕಿ, ನಾಲ್ಕೈದು ನೃತ್ಯಗಳನ್ನು ಮಿಶ್ರಣ ಮಾಡಿದರೆ ಅದು ಜನಪ‍ದ ನೃತ್ಯ ಆಗುವುದಿಲ್ಲ. ಜನಪದದ ಮೂಲ ತಿಳಿದು ಅದಕ್ಕೆ ತಕ್ಕಂತಹ ದಿರಿಸು, ಮೇಕಪ್ ಮಾಡಿಕೊಂಡು ಯಾದಗಿರಿ ತಂಡ ಪ್ರದರ್ಶನ ನೀಡಿದೆ. ಅವರಿಗೆ ಪ್ರಥಮ ಸ್ಥಾನಕ್ಕೆ ಏಕೆ ಕೊಟ್ಟಿದ್ದೇವೆ ಎಂಬುದನ್ನು ಬರಹದಲ್ಲಿ ಕೊಟ್ಟಿದ್ದೇವೆ. ಯಾರಿಗೂ ತಾರಮ್ಯ ಮಾಡಿಲ್ಲ’ ಎಂದು ತೀರ್ಪುಗಾರ ಬಿ.ಕೆ.ನಂಜುಂಡಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. 

ಸ್ಪರ್ಧೆಗಳ ವಿಜೇತರು: ಜನಪದ ಗೀತೆ– ಮಂಡ್ಯ ಪ್ರಥಮ, ಚಿಕ್ಕಮಗಳೂರು ದ್ವಿತೀಯ, ಬೆಂಗಳೂರು ನಗರ ತೃತೀಯ.

ಕಥೆ ಬರೆಯುವುದು: ಬಾಗಲಕೋಟೆಯ ಹನುಮಂತ ಕಾಂಬಳೆ ಪ್ರಥಮ, ತುಮಕೂರಿನ ಚಿರಂಜೀವಿ ಕೆ. ದ್ವಿತೀಯ ಹಾಗೂ ರಾಮನಗರದ ರವಿ ನಾಯಕ್ ತೃತೀಯ ಸ್ಥಾನ.

ಭಾಷಣ: ಚಿಕ್ಕಮಗಳೂರಿನ ವರುಣ ಆರ್ಯ ಪ್ರಥಮ, ಮೈಸೂರಿನ ಪಾಷಾ ದ್ವಿತೀಯ ಹಾಗೂ ಉಡುಪಿಯ ಶರಣಯ್ಯ ನಾಯ್ಕ ತೃತೀಯ ಸ್ಥಾನ.

ಕವಿತೆ ರಚನೆ– ಉತ್ತರ ಕನ್ನಡದ ಆಸ್ಟಿಯಾ ಶೇಖ್ ಪ್ರಥಮ, ಮಂಡ್ಯದ ಸಿಂಚನ ಎಸ್‌. ದ್ವಿತೀಯ ಹಾಗೂ ಬಾಗಲಕೋಟೆಯ ಜಾಫರ್ ಐ ಜಾಲಗಾರ ತೃತೀಯ ಸ್ಥಾನ.

ಚಿತ್ರಕಲೆ: ಮೈಸೂರಿನ ನಂದನ್ ಪ್ರಥಮ, ಗದಗದ ಗಿರೀಶ್ ಎಂ. ಶಿಳ್ಳಿ ದ್ವಿತೀಯ ಹಾಗೂ ಬೆಂಗಳೂರಿನ ರೋಸಲಿನ್ ಬೇವೂರ ತೃತೀಯ ಸ್ಥಾನ.

ವಿಜ್ಞಾನ ಮೇಳೆ: ಬಳ್ಳಾರಿಯ ಜಯಶ್ರೀ ತಂಡ ಪ್ರಥಮ, ಚಿಕ್ಕಮಗಳೂರಿನ ರೋಷನ್ ಬೇಗ್ ತಂಡ ದ್ವಿತೀಯ ಹಾಗೂ ಕೊಡಗಿನ ಡೇರಿನ್‌ ಬ್ರೇನ್ ಸಿಮೋನ್ ತಂಡ ತೃತೀಯ ಸ್ಥಾನ ಪಡೆಯಿತು.

ಪ್ರಥಮ ಸ್ಥಾನ ಪಡೆದವರು ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.