ADVERTISEMENT

ಯಾದಗಿರಿ: ಸಾಂಸ್ಕೃತಿಕ ಕಲರವಕ್ಕೆ ‘ಯಾದವ’ ನಾಡು ಸಜ್ಜು

ಎರಡು ದಿನಗಳ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ ಇಂದು: 1,000 ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:21 IST
Last Updated 3 ಡಿಸೆಂಬರ್ 2025, 6:21 IST
ಯಾದಗಿರಿಯಲ್ಲಿ ಮಂಗಳವಾರ ಯುವಜನೋತ್ಸವದ ಅಂತಿಮ ಸಿದ್ಧತೆಯನ್ನು ವೀಕ್ಷಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಅಧಿಕಾರಿಗಳ ಜೊತೆ ಚರ್ಚಿಸಿದರು   
ಯಾದಗಿರಿಯಲ್ಲಿ ಮಂಗಳವಾರ ಯುವಜನೋತ್ಸವದ ಅಂತಿಮ ಸಿದ್ಧತೆಯನ್ನು ವೀಕ್ಷಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಅಧಿಕಾರಿಗಳ ಜೊತೆ ಚರ್ಚಿಸಿದರು      

ಯಾದಗಿರಿ: ಯಾದವ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಯಾದಗಿರಿಯಲ್ಲಿ ಎರಡು ದಿನಗಳ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಇಲ್ಲಿನ ಜಿಲ್ಲಾ ಕ್ರೀಡಾಂಗಣ ಸಜ್ಜಾಗಿದೆ. ಯುವಜನೋತ್ಸವಕ್ಕೆ ಜಿಲ್ಲಾ ಉಸ್ತವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಬುಧವಾರ ಬೆಳಿಗ್ಗೆ 11ಕ್ಕೆ ಮುಖ್ಯ ವೇದಿಕೆಯಲ್ಲಿ ಚಾಲನೆ ನೀಡುವರು.

5,000 ಆಸನಗಳ ಟೆಂಟ್‌ ಸಭಾಂಗಣವನ್ನು ಕ್ರೀಡಾಂಗಣದ ಮಧ್ಯದಲ್ಲಿ ನಿರ್ಮಿಸಲಾಗಿದೆ. ಸರ್ಕಾರಿ ಪದವಿ ಕಾಲೇಜು ಸಭಾಂಗಣ, ಸ್ಟೇಷನ್ ರಸ್ತೆಯ ವಿದ್ಯಾಮಂಗಲ ಕಾರ್ಯಾಲಯ, ಚಿತ್ತಾಪುರ ರಸ್ತೆಯ ಕನ್ನಡ ಭವನ, ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಏಳು ಬಗೆಯ ಸ್ಪರ್ಧೆಗಳು ಜರುಗಲಿವೆ.

ರಾಜ್ಯದ 31 ಜಿಲ್ಲೆಗಳಿಂದ 1,000 ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಜನಪದ ನೃತ್ಯ, ಜನಪದ ಗೀತೆ, ವಿಜ್ಞಾನ ವಸ್ತು ಪ್ರದರ್ಶನ, ಕಥೆ ಬರೆಯುವುದು, ಕವನ ರಚನೆ, ಚಿತ್ರಕಲೆ ಹಾಗೂ ಘೋಷಣೆ ಸ್ಪರ್ಧೆಗಳು ನಡೆಯಲಿವೆ. ಇಲ್ಲಿ ವಿಜೇತರಾದವರು ದೆಹಲಿಯಲ್ಲಿ ನಡೆಯುವ 29ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವರು.

ADVERTISEMENT

ನಗರ ಹಾಗೂ ಸುತ್ತಲಿನ ಒಂಬತ್ತು ಹಾಸ್ಟೆಲ್‌ಗಳಲ್ಲಿ ಸ್ಪರ್ಧಾಳುಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಕೆಆರ್‌ಟಿಸಿಯ 20ಕ್ಕೂ ಹೆಚ್ಚು ಬಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಜಿಲ್ಲಾ ಈಜುಕೊಳದಲ್ಲಿ ಸ್ಕೂಬ್‌ ಡೈವಿಂಗ್ ಮತ್ತು ಕೋಟೆಯಲ್ಲಿ ರಾಕ್‌ ಕ್ಲೈಬಿಂಗ್‌ ಸಾಹಸ ಕ್ರೀಡಾ ಚಟುವಟಿಕೆಗಳು ನಡೆಯಲಿವೆ. ಮಲ್ಲಕಂಬ ಪ್ರದರ್ಶನ, ಸ್ವಯಂ ರಕ್ಷಣೆಯ ಕರಾಟೆ ಹಾಗೂ ಭರತನಾಟ್ಯ ಪ್ರದರ್ಶನ ಸಹ ನಡೆಯಲಿದೆ.

ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಪ್ರಧಾನ ವೇದಿಕೆಗೆ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲನೆ ಮಾಡಿದರು. ಉತ್ಸವ ಆಯೋಜನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯೂ ‍ಪಡೆದರು.

‘ಕಳೆದ ಬಾರಿ ಇದೇ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆದಿದ್ದಾಗ ಊಟದ ಕೊರತೆ ಆಗಿತ್ತು. ಯುವಜನೋತ್ಸವದಲ್ಲಿ ಅಂತಹ ಅವ್ಯವಸ್ಥೆ ಮರುಕಳಿಸ ಬಾರದು. ಸ್ಪರ್ಧಾಳುಗಳು, ತಂಡದ ವ್ಯವಸ್ಥಾಪಕರು, ಇತರರಿಗೆ ಯಾವುದೇ ಅಭಾವ ಆಗದಂತೆ ಊಟ, ವಸತಿ, ಸಾರಿಗೆಯ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಮಾಡಬೇಕು’ ಎಂದು ಸೂಚನೆ ಕೊಟ್ಟರು. 

ಈ ವೇಳೆ ‘ಯುಡಾ‘ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಎಸ್‌‍ಪಿ ಪೃಥ್ವಿಕ್ ಶಂಕರ್, ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್, ಡಿಎಸ್‌ಪಿ ನಾಗರಾಜ ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯಾದಗಿರಿಯಲ್ಲಿ ಮಂಗಳವಾರ ರಾಜ್ಯಮಟ್ಟದ ಯುವಜನೋತ್ಸವದ ಅಂಗವಾಗಿ ಪ್ರಧಾನ ವೇದಿಕೆಯ ಅಂತಿಮ ಕಾರ್ಯದಲ್ಲಿ ನಿರತವಾಗಿದ್ದ ಕಾರ್ಮಿಕರು 

‘ಯಾದಗಿರಿ ಉತ್ಸವಕ್ಕೆ ಕಡೆಗಣನೆ’ ಕಳೆದ ಬಾರಿ ದಾವಣಗೆರೆಯಲ್ಲಿ ನಡೆದಿದ್ದ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಹೊರ ರಾಜ್ಯಗಳ ಕಲಾ ತಂಡಗಳನ್ನು ಕರೆಸಲಾಗಿತ್ತು. ಆದರೆ ಯಾದಗಿರಿಯಲ್ಲಿ ನಡೆಯುವ ಉತ್ಸವಕ್ಕೆ ಯಾವುದೇ ತಂಡಗಳಿಗೆ ಆಹ್ವಾನ ನೀಡದ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ‘ದಾವಣಗೆರೆಯಲ್ಲಿನ ಉತ್ಸವದಲ್ಲಿ ಮಹಾರಾಷ್ಟ್ರದ ಲಾವಣಿ ನೃತ್ಯ ತಂಡ ಕೇರಳದ ತೇಯಂ ನೃತ್ಯ ತಂಡ ಹಾಗೂ ಮಧ್ಯಪ್ರದೇಶದ ಬದಾಯಿ ಕಲಾ ತಂಡಗಳು ಪಾಲ್ಗೊಂಡಿದ್ದವು. ಜೊತೆಗೆ ಉತ್ಸವಕ್ಕೂ ರಂಗು ತುಂಬಿದ್ದವು. ಕಲ್ಯಾಣ ಕರ್ನಾಟಕದಲ್ಲಿ ನಡೆಯುವ ಉತ್ಸವದ ಬಗ್ಗೆ ಕಡೆಗಣಕೆ ಏಕೆ’ ಎಂದು ಪ್ರಶ್ನಿಸಿದ್ದಾರೆ. ಸಂಜೆಯೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸದ ಬಗ್ಗೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಗಮನಕ್ಕೆ ಬರುತ್ತಿದ್ದಂತೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಅವರನ್ನು ವೇದಿಕೆಯಲ್ಲಿಗೆ ಕರೆಯಿಸಿಕೊಂಡರು. ‘ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ತಕ್ಷಣವೇ ಕಲಾವಿದರನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಬೇಕು’ ಎಂದು ಸೂಚಿಸಿದರು. ‘ಕ್ಷೇತ್ರದ ಶಾಸಕನಾದ ನನಗೆ ಉತ್ಸವದ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲ. ಮುಂಚಿತವಾಗಿ ತಿಳಿಸಿದ್ದರೆ ಉತ್ತಮವಾದ ವ್ಯವಸ್ಥೆ ಮಾಡಬಹುದಿತ್ತು’ ಎಂದರು.   

9 ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ರಜೆ ‘ಉತ್ಸವದಲ್ಲಿ ಪಾಲ್ಗೊಳ್ಳುವ ಸುಮಾರು 1000 ಸ್ಪರ್ಧಾಳುಗಳಿಗೆ ನಗರ ಹಾಗೂ ಸುತ್ತಲಿನ 9 ಹಾಸ್ಟೆಲ್/ ವಸತಿ ಶಾಲೆಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಹೇಳಿದರು.

‘ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ’ ‘ಕಾಂಗ್ರೆಸ್‌ನಲ್ಲಿ ನನಗಿಂತ ಮೂರ್ನಾಲ್ಕು ಬಾರಿ ಗೆದ್ದು ಸಾಕಷ್ಟು ಅನುಭವ ಇರುವವರು ಸಾಕಷ್ಟು ಶಾಸಕರು ಇದ್ದಾರೆ. ಸಚಿವ ಸಂಪುಟದ ಬದಲಾದರೆ ಮೊದಲು ಅವರಿಗೆ ಸ್ಥಾನ ಸಿಗಲಿ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು. ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ‘ಸಿಎಂ ಬದಲಾವಣೆಯ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಸಿಎಂ ಬದಲಾವಣೆ ಆಗಬಹುದು ಆಗದೆಯೂ ಇರಬಹುದು. ಅದನ್ನು ನಾನು ಹೇಳಲು ಆಗುವುದಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.