ADVERTISEMENT

3,484 DR/CAR ಪೊಲೀಸ್ ಕಾನ್‌ಸ್ಟೇಬಲ್‌ಗಳ ನೇಮಕಾತಿಗೆ ಚಾಲನೆ: ವಿವರ ಇಲ್ಲಿದೆ..

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 22 ಸೆಪ್ಟೆಂಬರ್ 2022, 0:30 IST
Last Updated 22 ಸೆಪ್ಟೆಂಬರ್ 2022, 0:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಳ ಕಾಲದ ನಂತರ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3,484 ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಕಾನ್‌ಸ್ಟೆಬಲ್‌ (ಡಿಆರ್) ಹಾಗೂ ನಗರ ಸಶಸ್ತ್ರ ಮೀಸಲು ಪೊಲೀಸ್ (ಸಿಎಆರ್) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪೊಲೀಸ್ ಇಲಾಖೆ ಸೇರಬೇಕು ಎಂಬ ಕನಸನ್ನು ಹೊತ್ತಿರುವ ಯುವಕರಿಗೆ ಹೊಸ ಸದಾವಕಾಶವೊಂದು ಒದಗಿ ಬಂದಿದೆ.

ಡಿಆರ್ ಹಾಗೂ ಸಿಎಆರ್ ಪೊಲೀಸ್ ಕಾನ್‌ಸ್ಟೆಬಲ್‌ಗಳ ನೇಮಕಾತಿ ಬಗ್ಗೆ ರಾಜ್ಯ ಸರ್ಕಾರ ಸೆ.12 ರಂದು ಅಧಿಸೂಚನೆ ಹೊರಡಿಸಿದೆ. ಕಲ್ಯಾಣ ಕರ್ನಾಟಕ (ಹೈ–ಕ ವಿಭಾಗ) ವಿಭಾಗದ ಹುದ್ದೆಗಳ ನೇಮಕಾತಿಗೂ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗಿದೆ.

ಹುದ್ದೆಗಳ ವಿಂಗಡಣೆ

ADVERTISEMENT

ರಾಜ್ಯದ ಎಲ್ಲ ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ 2,996 ಡಿಆರ್ ಹಾಗೂ ಸಿಎಆರ್ ಹುದ್ದೆಗಳಿವೆ. ಇದರೊಂದಿಗೆ ತೃತೀಯ ಲಿಂಗಿಗಳಿಗೂ(ಪುರುಷ) ಹೆಚ್ಚುವರಿಯಾಗಿ 68 ಹುದ್ದೆಗಳಿವೆ. ಕಲ್ಯಾಣ ಕರ್ನಾಟಕ ವೃಂದದಲ್ಲಿ 420 ಹುದ್ದೆಗಳನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನ ಅಕ್ಟೋಬರ್ 31. ಅರ್ಜಿಯನ್ನು ಇಲಾಖೆಯ ಅಧಿಕೃತ ಜಾಲತಾಣದ
(www.ksp-recruitment.in) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ನವೆಂಬರ್ 3ರವರೆಗೆ ಶುಲ್ಕ ಪಾವತಿಗೆ ಅವಕಾಶವಿದೆ.

ಶುಲ್ಕ ವಿವರ

ಸಾಮಾನ್ಯ, 2ಎ, 2ಬಿ, 3ಬಿ, 3ಎ ಅಭ್ಯರ್ಥಿಗಳು ₹400 , ಎಸ್‌ಸಿ, ಎಸ್‌ಟಿ ಹಾಗೂ ಪ್ರವರ್ಗ 1 ಅಭ್ಯರ್ಥಿ ಗಳು ₹200 ಶುಲ್ಕ ಪಾವತಿಸಬೇಕು.

ಶುಲ್ಕವನ್ನು ಆನ್‌ಲೈನ್‌ ಮೂಲಕವೂ ಪಾವತಿಸಬ ಹುದು. ನಗದು ರೂಪದಲ್ಲಿ ಬ್ಯಾಂಕ್ ಮೂಲಕವೂ ಪಾವತಿಸಬಹುದು.
ಶುಲ್ಕ ಪಾವತಿ ವೇಳೆ ತೊಂದರೆಯಾದರೆ ಸಹಾಯವಾಣಿ 080-22943346 ಸಂಪರ್ಕಿಸಬಹುದು.

ವಿದ್ಯಾರ್ಹತೆ, ವಯೋಮಿತಿ

ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣರಾಗಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ ಗರಿಷ್ಠ 25 ವರ್ಷಗಳು (ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ). ಎಸ್‌.ಸಿ, ಎಸ್‌.ಟಿ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 27 ವರ್ಷ.

ಆಯ್ಕೆ ವಿಧಾನ ಹೇಗೆ?

ಲಿಖಿತ ಪರೀಕ್ಷೆ, ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಲಿಖಿತ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಪ್ರವೇಶ ಪತ್ರ ಪಡೆದುಕೊಂಡು ಲಿಖಿತ ಪರೀಕ್ಷೆಗೆ ಹಾಜರಾಗಬೇಕು. ಇದೇ ವರ್ಷದ ನವೆಂಬರ್/ಡಿಸೆಂಬರ್‌ ವೇಳೆಗೆ ಲಿಖಿತ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.

ಪರೀಕ್ಷಾ ಪಠ್ಯಕ್ರಮ

ಸಿಎಆರ್/ಡಿಆರ್ ಹುದ್ದೆಗಳಿಗೆ ಸಂಬಂಧಿಸಿದಂತೆ 100 ಅಂಕಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬಹು ಆಯ್ಕೆ ಮಾದರಿಯ (ಆಬ್ಜೆಕ್ಟಿವ್) ಪ್ರಶ್ನೆ ಪತ್ರಿಕೆ ಇರುತ್ತದೆ. ಇದು ಒಂದೂವರೆ ಗಂಟೆ ಅವಧಿಯ ಪರೀಕ್ಷೆ.

ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತದ ಸಂವಿಧಾನ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಸಾಮಾನ್ಯ ಮಾನಸಿಕ ಸಾಮರ್ಥ್ಯ ಹಾಗೂ ನೀತಿ ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರಶ್ನೆಗಳಿರುತ್ತವೆ.

ಸರಿ ಉತ್ತರಕ್ಕೆ 1 ಅಂಕ ನೀಡಲಾಗುತ್ತದೆ. 4 ತಪ್ಪು ಉತ್ತರಗಳಿಗೆ 1 ಅಂಕ ಕಳೆಯಲಾಗುತ್ತದೆ (1ಕ್ಕೆ 0.25 ಅಂಕ). ಹಾಗಾಗಿ ಅಭ್ಯರ್ಥಿಗಳು ಸರಿಯಾದ ಉತ್ತರವನ್ನೇ ಗುರುತಿಸಲು ಪ್ರಯತ್ನಿಸ ಬೇಕು. ಒ.ಎಂ.ಆರ್ ಶೀಟ್ ನಲ್ಲಿ ಅಭ್ಯರ್ಥಿಗಳು ಉತ್ತರಿಸಬೇಕು.

ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿ ಗಳನ್ನು 1:5ರ ಅನುಪಾತದಲ್ಲಿ ದೇಹದಾರ್ಢ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ಅದರಲ್ಲಿ ಉತ್ತೀರ್ಣಗೊಂಡವರಿಗೆ ವೈದ್ಯಕೀಯ ಪರೀಕ್ಷೆ. ನಂತರ ಮೆರಿಟ್ ಆಧಾರ ಹಾಗೂ ಮೀಸಲಾತಿ ಅನುಗುಣವಾಗಿ ಆಯ್ಕೆ ಪಟ್ಟಿ ‍ಪ್ರಕಟವಾಗುತ್ತದೆ.

ವೇತನ ಶ್ರೇಣಿ

ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ ವೇತನ ಶ್ರೇಣಿ ₹23,500 ರಿಂದ ₹47,650ವರೆಗಿರುತ್ತದೆ. ನೇರ ನೇಮಕಾತಿ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳು ಎರಡೂವರೆ ವರ್ಷ ಕಾಯಂ ಪೂರ್ವ ತರಬೇತಿ ಅವಧಿಯಲ್ಲಿರುತ್ತಾರೆ.

ಯಾವ ಜಿಲ್ಲೆಗೆ ಹಾಗೂ ಕಮಿಷನರೇಟ್‌ಗೆ ಎಷ್ಟು ಡಿಆರ್ ಹಾಗೂ ಸಿಎಆರ್ ಹುದ್ದೆಗಳು ಮೀಸಲಿವೆ, ಕಲ್ಯಾಣ ಕರ್ನಾಟಕ ವೃಂದಕ್ಕೆ ಹಂಚಿಕೆ
ಆಗಿರುವ ಹುದ್ದೆಗಳು ಮತ್ತು ಇನ್ನಿತರ ಹೆಚ್ಚಿನ ಮಾಹಿತಿಗಳಿಗೆ ಆಸಕ್ತರು ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್https://recruitment.ksp.gov.in ನೋಡಬಹುದು.

––––

ಪ್ರಮಾಣ ಪತ್ರ ಸಲ್ಲಿಕೆ

ವಿವಿಧ ವರ್ಗದ ಮೀಸಲಾತಿ ಬಯಸಿ ಅರ್ಜಿ ಸಲ್ಲಿಸುವವರು ಆಯಾ ವರ್ಗದ ನಮೂನೆಯಲ್ಲೇ ಮೀಸಲಾತಿ ಪ್ರಮಾಣಪತ್ರಗಳನ್ನು ಪಡೆಯಬೇಕು. ಪ್ರಮಾಣಪತ್ರದ ಮಾದರಿಗಳನ್ನು ಇಲಾಖೆ ನೀಡಿರುವ ಮಾದರಿಯಲ್ಲಿ ಪಡೆದು ಇಟ್ಟುಕೊಳ್ಳಬೇಕು. ನೇಮಕಾತಿ ಹಂತದಲ್ಲಿ ಸಕ್ಷಮ ಪ್ರಾಧಿಕಾರ ಕೇಳಿದರೆ ಕೊಡಬೇಕು.

ದೇಹದಾರ್ಢ್ಯತೆ ಪರೀಕ್ಷೆ

ಎತ್ತರ 168 ಸೆಂ.ಮೀ, ಎದೆಯ ಸುತ್ತಳತೆ 86 ಸೆಂ.ಮೀ (ಬುಡಕಟ್ಟು ಅಭ್ಯರ್ಥಿಗಳಿಗೆ ಎತ್ತರದಲ್ಲಿ ಹಾಗೂ ಎದೆಯ ಸುತ್ತಳತೆಯಲ್ಲಿ ರಿಯಾಯಿತಿ ಇದೆ).

ಸಹಿಷ್ಣುತೆ ಪರೀಕ್ಷೆ

ಓಟ 1600 ಮೀಟರ್ (ಆರೂವರೆ ನಿಮಿಷದಲ್ಲಿ). ಎತ್ತರ ಜಿಗಿತ 1.20 ಮೀಟರ್‌ಗೆ ಕಡಿಮೆ ಇರದಂತೆ, ಉದ್ದ ಜಿಗಿತ 3.20 ಮೀಟರ್‌ಗೆ ಕಡಿಮೆ ಇಲ್ಲದಂತೆ (ಎರಡರಲ್ಲಿ ಒಂದು). ಗುಂಡು ಎಸೆತ 5.26 ಕೆ.ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.