ADVERTISEMENT

ನೇಮಕಾತಿ ಪ್ರಮಾಣದಲ್ಲಿ ಶೇ 25ರಷ್ಟು ಹೆಚ್ಚಳ: ಲಿಂಕ್ಡ್‌ಇನ್‌

ಪಿಟಿಐ
Published 29 ಸೆಪ್ಟೆಂಬರ್ 2020, 11:19 IST
Last Updated 29 ಸೆಪ್ಟೆಂಬರ್ 2020, 11:19 IST
ಲಿಂಕ್ಡ್ ಇನ್
ಲಿಂಕ್ಡ್ ಇನ್   

ಬೆಂಗಳೂರು: ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಪ್ರಮಾಣ ಹಾಗೂ ಮಹಿಳೆಯರು ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ ಎಂದು ವೃತ್ತಿಪರರ ಜಾಲತಾಣ ಲಿಂಕ್ಡ್‌ಇನ್‌ ಹೇಳಿದೆ. ಜೂನ್‌ ತಿಂಗಳಿಗೆ ಹೋಲಿಸಿದರೆ, ಜುಲೈ ಅಂತ್ಯದ ವೇಳೆಗೆ ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಪ್ರಮಾಣದಲ್ಲಿ ಶೇಕಡ 25ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಅದು ಹೇಳಿದೆ.

ಮಹಿಳೆಯರು ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಪ್ರಮಾಣವು ಏಪ್ರಿಲ್‌ನಲ್ಲಿ ಶೇಕಡ 30ರಷ್ಟು ಇತ್ತು. ಇದು ಜುಲೈ ಅಂತ್ಯದ ವೇಳೆಗೆ ಶೇ 37ರಷ್ಟಕ್ಕೆ ತಲುಪಿದೆ ಎಂದು ಅದು ಹೇಳಿದೆ. ಒಟ್ಟು 6.9 ಕೋಟಿ ಬಳಕೆದಾರರು ನೀಡುವ ಮಾಹಿತಿ ಆಧರಿಸಿ ಲಿಂಕ್ಡ್‌ಇನ್‌ ಈ ಅಂಕಿ–ಅಂಶ ಸಿದ್ಧಪಡಿಸಿದೆ.

ದೇಶದಲ್ಲಿ ಉದ್ಯೋಗ ನೇಮಕಾತಿಯು ಸುಧಾರಿಸುತ್ತಿದೆ, ಮಹಿಳೆಯರಿಗೆ ಅವಕಾಶ ಸಿಗುವುದು ಹೆಚ್ಚುತ್ತಿದೆ, ಈಗಿನ ಉದ್ಯೋಗ ಮಾರುಕಟ್ಟೆಯ ಸವಾಲುಗಳನ್ನು ಎದುರಿಸಿ ಉಳಿದುಕೊಳ್ಳಬೇಕು ಎಂದಾದರೆ ಹೊಸ ಡಿಜಿಟಲ್ ಕೌಶಲಗಳನ್ನು ಕಲಿತುಕೊಳ್ಳಬೇಕಿರುವುದು ಅನಿವಾರ್ಯ ಎಂದು ಲಿಂಕ್ಡ್‌ಇನ್‌ ಹೇಳಿದೆ.

ADVERTISEMENT

ಮಹಿಳೆಯರು ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಚ್ಚಾಗಿರುವುದಕ್ಕೆ ಲಿಂಕ್ಡ್‌ಇನ್‌ ಕೆಲವು ಕಾರಣಗಳನ್ನು ಗುರುತಿಸಿದೆ. ಸಂಗಾತಿಯಿಂದ ಹೆಚ್ಚಿನ ನೆರವು ಸಿಗುತ್ತಿರುವುದು, ಅಜ್ಜ–ಅಜ್ಜಿಯರು ಒತ್ತಾಸೆಯಾಗಿ ನಿಂತಿರುವುದು ಹಾಗೂ ಮನೆಯಿಂದಲೇ ಕಚೇರಿಯ ಕೆಲಸ ನಿಭಾಯಿಸಬೇಕಾಗಿರುವ ಈ ಸಂದರ್ಭದಲ್ಲಿ ಕೆಲಸದ ಅವಧಿಯಲ್ಲಿ ಸೂಕ್ತ ಬದಲಾವಣೆಗಳನ್ನು ತಂದುಕೊಳ್ಳಲು ಸಾಧ್ಯವಾಗಿರುವುದು ಅದು ಗುರುತಿಸಿರುವ ಕಾರಣಗಳು.

‘ಲಾಕ್‌ಡೌನ್‌ ಅವಧಿಯು ಮನೆಯಿಂದಲೇ ಕಚೇರಿ ಕೆಲಸ ನಿಭಾಯಿಸುವ ಸಂಸ್ಕೃತಿಯನ್ನು ಒಪ್ಪಿಕೊಳ್ಳುವಂತೆ ಮಾಡಿತು. ಅದರ ಜೊತೆಯಲ್ಲೇ, ಕೆಲಸದ ಅವಧಿಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವ ಅವಕಾಶವೂ ಲಭ್ಯವಾಯಿತು. ಇದು ಹೆಣ್ಣುಮಕ್ಕಳಿಗೆ ತಮ್ಮ ವೃತ್ತಿಬದುಕನ್ನು ಪುನಃ ಕಟ್ಟಿಕೊಳ್ಳಲು ಅವಕಾಶ ನೀಡಿದೆ’ ಎಂದು ಲಿಂಕ್ಡ್‌ಇನ್‌ ವಿಶ್ಲೇಷಿಸಿದೆ.

ತಯಾರಿಕಾ ವಲಯವೊಂದನ್ನು ಹೊರತುಪಡಿಸಿದರೆ, ಇತರ ಎಲ್ಲ ವಲಯಗಳಲ್ಲೂ ಮಹಿಳೆಯರ ಪ್ರಾತಿನಿಧ್ಯವು ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.