ADVERTISEMENT

ಸ್ಪರ್ಧಾ ವಾಣಿ | ವಿದೇಶಿ ವಿದ್ಯಮಾನ: ಉತ್ತರ ಕೊರಿಯಾ ‘ಶಬ್ದ ಬಾಂಬ್’!

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 22:30 IST
Last Updated 30 ಏಪ್ರಿಲ್ 2025, 22:30 IST
   

ದುಬೈನಲ್ಲಿ ಏರಿಯಲ್ ಟ್ಯಾಕ್ಸಿ ಸೇವೆ 2026 ರಲ್ಲಿ ಆರಂಭ

l ದುಬೈನಲ್ಲಿ ಮೊದಲ ಏರಿಯಲ್ ಟ್ಯಾಕ್ಸಿ ಸೇವೆ 2026ರಲ್ಲಿ ಆರಂಭವಾಗಲಿದೆ. ಈ ನವೀನ ಸೌಲಭ್ಯದ ಮೂಲ ನಿಲ್ದಾಣವನ್ನು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾಗಿದೆ.

l ಈ ವರ್ಟಿಪೋರ್ಟ್ (ಏರಿಯಲ್ ಟ್ಯಾಕ್ಸಿ ನಿಲುಗಡೆಯ ಸ್ಥಳ) 3,100 ಚದರ ಮೀಟರ್‌ಗಳನ್ನು ವ್ಯಾಪಿಸಿದೆ. ಇದು ವಾರ್ಷಿಕವಾಗಿ 42,000 ಲ್ಯಾಂಡಿಂಗ್‌ಗಳನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ. ‌

l ಈ ವರ್ಟಿಪೋರ್ಟ್ ಪ್ರತಿ ವರ್ಷ 1,70,000 ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತದೆ. ದುಬೈನ ಡೌನ್‌ಟೌನ್, ದುಬೈ ಮರೀನಾ ಮತ್ತು ಪಾಮ್ ಜುಮೇರಾದಲ್ಲಿಯೂ ವರ್ಟಿಪೋರ್ಟ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.

ADVERTISEMENT

l ಏರ್ ಟ್ಯಾಕ್ಸಿ  ಈ ಸೇವೆಯು ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ. ಪ್ರಸ್ತಿತ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಾಮ್ ಜುಮೇರಾಕ್ಕೆ ಪ್ರಯಾಣಿಸಲು 45 ನಿಮಿಷಗಳ ಅವಧಿಯ ಅಗತ್ಯವಿದ್ದು, ಏರ್ ಟ್ಯಾಕ್ಸಿ ಸೇವೆ ಆರಂಭವಾದ ನಂತರ ಇದು 10 ನಿಮಿಷಗಳಿಗೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

l ಈ ಯೋಜನೆ ಜಾಬಿ ಏವಿಯೇಷನ್, ಸ್ಕೈಪೋರ್ಟ್ಸ್ ಸೇರಿ ಹಲವು ಅಂತರರಾಷ್ಟ್ರೀಯ ನಿರ್ವಾಹಕರ ಸಹಯೋಗ ಒಳಗೊಂಡಿದೆ.

l ‘Joby S4’ ಹೆಸರಿನ ವೈಮಾನಿಕ ಟ್ಯಾಕ್ಸಿ ಈ ಯೋಜನೆಯಡಿ ಕಾರ್ಯನಿರ್ವಹಿಸಲಿದ್ದು, ಇದು ಲಂಬವಾದ ಟೇಕ್–ಆಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯಗಳನ್ನು ಹೊಂದಿದೆ.

l ‘Joby S4’ ವೈಮಾನಿಕ ಟ್ಯಾಕ್ಸಿ ಪರಿಸರ ಸ್ನೇಹಿ ಆಯ್ಕೆಯಾಗಿದ್ದು, ಶೂನ್ಯ ಹೊರಸೂಸುವಿಕೆ ಇದರ ವಿಶೇಷವಾಗಿದೆ. ಇದು ಗಂಟೆಗೆ ಗರಿಷ್ಠ 321 ಕಿ.ಮೀ. ವೇಗದಲ್ಲಿ 161 ಕಿ.ಮೀ.ವರೆಗೆ ಹಾರಾಟದ ಸಾಮರ್ಥ್ಯವನ್ನು ಹೊಂದಿದೆ.

l ‘Joby S4’ನಲ್ಲಿ ಏಕಕಾಲಕ್ಕೆ ನಾಲ್ವರು ಪ್ರಯಾಣಿಕರು ಮತ್ತು ಪೈಲಟ್‌ ಪ್ರಯಾಣಿಸಬಹುದಾಗಿದೆ. ಇದು ಸಾಂಪ್ರದಾಯಿಕ ಹೆಲಿಕಾಪ್ಟರ್‌ಗಳಿಗಿಂತ ಕಡಿಮೆ ಶಬ್ದವನ್ನು ಉಂಟು ಮಾಡುತ್ತದೆ.

ಆಸ್ಟ್ರೇಲಿಯಾ: 16 ವರ್ಷದವರೆಗೆ ಸಾಮಾಜಿಕ ಮಾಧ್ಯಮ ನಿರ್ಬಂಧ

l ಆಸ್ಟ್ರೇಲಿಯನ್ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಪ್ರವೇಶಕ್ಕೆ ನಿರ್ಬಂಧ ವೀಧಿಸಿ ಕಾನೂನು ಜಾರಿಗೊಳಿಸುವ ಯೋಜನೆಯನ್ನು ಪ್ರಕಟಿಸಿದೆ.

l ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಈ ಉಪಕ್ರಮವನ್ನು
ಘೋಷಿಸಿದ್ದು, ಈ ಕುರಿತು ಪರ–ವಿರೋಧ ನಿಲುವು ವ್ಯಕ್ತವಾಗಿವೆ.

l ಪ್ರಸ್ತಾವಿತ ಶಾಸನ ಮಕ್ಕಳ ಸಾಮಾಜಿಕ ಮಾಧ್ಯಮ ಸುರಕ್ಷತೆ ಮಸೂದೆ–2024ರ ಅನ್ವಯ ಜಾರಿಗೊಳ್ಳಲಿದೆ.

l ಹದಿಹರೆಯದವರಲ್ಲಿ ಸಾಮಾಜಿಕ ಮಾಧ್ಯಮದ ಸಮಸ್ಯಾತ್ಮಕ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಆಸ್ಟ್ರೇಲಿಯಾ ಸರ್ಕಾರ ಸ್ಪಷ್ಟಪಡಿಸಿದೆ.

l ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನವು 2022 ರಲ್ಲಿ ಶೇ 11 ರಷ್ಟು ಹುಡುಗರು, ಶೇ 13 ರಷ್ಟು ಹುಡುಗಿಯರು ಸಾಮಾಜಿಕ ಜಾಲತಾಣದ ಸಮಸ್ಯಾತ್ಮಕ ಬಳಕೆ ಮಾಡಿದ್ದಾರೆ.

l ಸಾಮಾಜಿಕ ಜಾಲತಾಣದ ಸಮಸ್ಯಾತ್ಮಕ ಬಳಕೆ ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಮಾದಕ ದ್ರವ್ಯ ಸೇವನೆ, ತೀವ್ರ ಒತ್ತಡ ಹೆಚ್ಚಳ, ಮುಕ್ತ ಲೈಂಗಿಕತೆ, ಲೈಂಗಿಕ ಹಾಗೂ ಮಾನಸಿಕ ಶೋಷಣೆಯಂಥ ಬೆಳವಣಿಗೆಗಳಿಗೆ ಕಾರಣವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

l ಪೋಷಕರು ಮಕ್ಕಳ ಆನ್‌ಲೈನ್ ನಡವಳಿಕೆಯ ಬಗ್ಗೆ ಗಮನಹರಿಸುವ ಕುರಿತು ಅಮೆರಿಕದ ‘ಸರ್ಜನ್ ಜನರಲ್’ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದ್ದಾರೆ.

l ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸಾಮಾಜಿಕ ಮಾಧ್ಯಮ ಕಂಪನಿಗಳು ಗೋಪ್ಯತೆ ಕ್ರಮಗಳನ್ನು ಹೆಚ್ಚಿಸಲು ಮತ್ತು ವಯಸ್ಸಿನ ಮಿತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒತ್ತಾಯಿಸಿದೆ.

l ಪೋಷಕರು ಮಕ್ಕಳನ್ನು ಮೊಬೈಲ್‌ ಗೀಳಿನಿಂದ ಹೊರತಂದು ಆರೋಗ್ಯಕರ ಸಾಮಾಜಿಕ ಬೆಳವಣಿಗೆ ಉತ್ತೇಜಿಸಲು ವ್ಯಕ್ತಿಗತ ಸ್ನೇಹವನ್ನು ಪ್ರೋತ್ಸಾಹಿಸಬೇಕು ಹಾಗೂ ಸ್ವತಃ ಪೋಷಕರೇ ಜವಾಬ್ದಾರಿಯುತ ಆನ್‌ಲೈನ್ ನಡವಳಿಕೆ ರೂಪಿಸಿಕೊಳ್ಳಬೇಕು ಮತ್ತು ತಂತ್ರಜ್ಞಾನದ ಸಮರ್ಪಕ ಬಳಕೆ ಹಾಗೂ ದುರ್ಬಳಕೆ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂಬುದಾಗಿ ಆಸ್ಟ್ರೇಲಿಯಾ ಸರ್ಕಾರ ಪ್ರತಿಪಾದಿಸಿದೆ.

ಉತ್ತರ ಕೊರಿಯಾ ‘ಶಬ್ದ ಬಾಂಬ್’!

l ಉತ್ತರ ಮತ್ತು ದಕ್ಷಿಣ ಕೊರಿಯಾದ ನಡುವೆ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಮಾನಸಿಕ ಯುದ್ಧದ ರೂಪವಾಗಿ ಧ್ವನಿವರ್ಧಕಗಳನ್ನು ಬಳಸುತ್ತಿದೆ.

l ಧ್ವನಿವರ್ಧಕಗಳಿಂದ ಕರ್ಕಶವಾದ ಹಾಗೂ ಗೊಂದಲದಿಂದ ಕೂಡಿದ ವಾಕ್ಯ, ಶಬ್ದಗಳನ್ನು ಕೇಳಿಸುವ ಮೂಲಕ ದಕ್ಷಿಣ ಕೊರಿಯಾದ ಗಡಿ ಭಾಗಗಳ ಜನ–ಜಾನುವಾರುಗಳ ನೆಮ್ಮದಿಗೆ ಭಂಗ ತರುವ ಕೆಲಸವನ್ನು ಉತ್ತರ ಕೊರಿಯಾ ಮಾಡುತ್ತಿದೆ.

l ಈ ಶಬ್ದಗಳಲ್ಲಿ ವಿಚಿತ್ರವಾದ, ಭಾಯವನ್ನುಂಟು ಮಾಡುವ ಕೂಗಾಟಗಳು ಮತ್ತು ಕಿರುಚಾಟಗಳು ಸೇರಿವೆ. ಇದರಿಂದ ದಕ್ಷಿಣ ಕೊರಿಯಾದ ಗಡಿ ಗ್ರಾಮಸ್ಥರು ತೀವ್ರ ತೊಂದರೆಗೆ ಈಡಾಗುತ್ತಿದ್ದು, ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.

l ಉತ್ತರ ಕೊರಿಯಾ ದಕ್ಷಿಣ ಕೊರಿಯಾದೊಂದಿಗಿನ ಸಾರಿಗೆ ಸಂಪರ್ಕ ನಾಶಪಡಿಸಿದೆ. ಇದರಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ.

l 1950 ರಿಂದ 1953 ರವರೆಗೆ ನಡೆದ ಕೊರಿಯನ್ ಯುದ್ಧ ಔಪಚಾರಿಕ ಶಾಂತಿ ಒಪ್ಪಂದವಿಲ್ಲದೇ ಕೊನೆಗೊಂಡ ಹಿನ್ನೆಲೆಯಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾ ಉದ್ವಿಗ್ನತೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.