ADVERTISEMENT

ಮೈಸೂರು: 'ಸ್ಪರ್ಧಾ ಮಾರ್ಗ' ತೋರಿದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 16:52 IST
Last Updated 24 ಜೂನ್ 2022, 16:52 IST
ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ನವೋದಯ ಫೌಂಡೇಶನ್ ಹಾಗೂ ನವೋ–ಪ್ರಮತಿ ಸಹಯೋಗದಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳ ಉಚಿತ ಕಾರ್ಯಾಗಾರವನ್ನು ಎಸ್ಪಿ ಆರ್.ಚೇತನ್ ಉದ್ಘಾಟಿಸಿದರು. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಡಾ.ರಾಜು, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಪಿ.ಮಣಿವಣ್ಣನ್, ಗೋಪಿನಾಥ್ ಸಿ.ವಿ., ಫಣಿರಾಜ್, ಸಂದೀಪ್ ಮಹಾಜನ್ ಇದ್ದಾರೆ
ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ನವೋದಯ ಫೌಂಡೇಶನ್ ಹಾಗೂ ನವೋ–ಪ್ರಮತಿ ಸಹಯೋಗದಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳ ಉಚಿತ ಕಾರ್ಯಾಗಾರವನ್ನು ಎಸ್ಪಿ ಆರ್.ಚೇತನ್ ಉದ್ಘಾಟಿಸಿದರು. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಡಾ.ರಾಜು, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಪಿ.ಮಣಿವಣ್ಣನ್, ಗೋಪಿನಾಥ್ ಸಿ.ವಿ., ಫಣಿರಾಜ್, ಸಂದೀಪ್ ಮಹಾಜನ್ ಇದ್ದಾರೆ   

ಮೈಸೂರು: ‘ಪ್ರಜಾವಾಣಿ’,‌ ‘ಡೆಕ್ಕನ್ ಹೆರಾಲ್ಡ್’, ನವೋದಯ ಪ್ರತಿಷ್ಠಾನ ಹಾಗೂ ನವೋ-ಪ್ರಮತಿ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಉಚಿತ ಕಾರ್ಯಾಗಾರವು ಯುಪಿಎಸ್‌ಸಿ, ಕೆಪಿಎಸ್‌ಸಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳ ಬಯಸು ವವರಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಸ್ಪರ್ಧೆಯ ‘ಮಾರ್ಗ’ವನ್ನು ತೋರಿಸಿತು.

ಅಧಿಕಾರಿಗಳು, ಆ ಕ್ಷೇತ್ರದ ಪರಿಣತರ ಮಾತುಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ನೂರಾರು ಯುವ ಜನರಿಗೆ ಪ್ರೇರಣೆ ನೀಡಿದವು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವುದು ಹೇಗೆ, ಅಗತ್ಯವಾದ ತಯಾರಿಗಳೇನು? ಎಂಬಿತ್ಯಾದಿ ಮಾಹಿತಿಯನ್ನು ವಿಸ್ತೃತವಾಗಿ ತಿಳಿಸಿ ಕೊಡಲಾಯಿತು. ಅಧಿಕಾರಿಗಳು ತಮ್ಮ ಅನುಭವ ಹಂಚಿಕೊಳ್ಳುವ ಜೊತೆಗೆ ಟಿಪ್ಸ್‌ಗಳನ್ನೂ ನೀಡಿದರು. ಆಕ್ಷಾಂಕ್ಷಿಗಳು ಪ‍್ರಶ್ನೆಗಳನ್ನು ಕೇಳುವ ಮೂಲಕ, ಪರೀಕ್ಷೆ ಕುರಿತಾದ ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು.

ಮಣಿವಣ್ಣನ್ ‘ಪಂಚಸೂತ್ರ’

ADVERTISEMENT

‘ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಲು ಹಲವು ವರ್ಷಗಳೇ ಬೇಕಾಗುತ್ತದೆ. ಆದರೆ, ಬೇಗ ಆಗಬೇಕು–ಸುಲಭವಾಗಿರಬೇಕು ಎಂದು ಕಾತರಿಸುತ್ತಿದ್ದೇವೆ. ಅದು ಸಾಧ್ಯವಾಗುವುದಿಲ್ಲ’ ಎಂದು ಮನವ ರಿಕೆ ಮಾಡಿಕೊಟ್ಟವರು ಸಮಾಜ ಕಲ್ಯಾಣ ‌ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಪಿ.ಮಣಿವಣ್ಣನ್.

ಆಸೆ, ಸೋಲನ್ನು ಎದುರಿಸುವ ಧೈರ್ಯ, ಸಂವಹನ ಕೌಶಲ, ಸಂತಸ ಹಾಗೂ ಕಂಫರ್ಟ್‌ ಝೋನ್‌ ಅನ್ನು ತ್ಯಾಗ ಮಾಡಬೇಕು ಮತ್ತು ಕಾರ್ಯ ತಂತ್ರ ರೂಪಿಸಿಕೊಳ್ಳಬೇಕು ಎಂಬ ‘ಪಂಚಸೂತ್ರ’ ಗಳನ್ನು ನೀಡಿದರು.

‘ಯುಪಿಎಸ್‌ಸಿ ಗುರಿ ಇಟ್ಟುಕೊಂಡ ಮೇಲೆ ತಲುಪುವವರೆಗೂ ವಿರಮಿಸ ಬಾರದು. ಆ ಗುಂಗಿನಲ್ಲೇ ಇರಬೇಕು. ಹಣ ಖರ್ಚಾಗುತ್ತಿದೆ, ಪ್ರಯತ್ನಗಳು ವಿಫಲವಾಗುತ್ತಿವೆ, ನೆಂಟರಿಷ್ಟರು ಕೊಂಕು ಮಾತನ್ನಾಡುತ್ತಿದ್ದಾರೆ ಎಂಬಿ ತ್ಯಾದಿಗಳ ಕಡೆಗೆ ಗಮನ ಕೊಡದೆ ದೃಷ್ಟಿ ಯನ್ನು ಗುರಿಯತ್ತ ನೆಟ್ಟಿರಬೇಕು’ ಎಂದು ತಿಳಿಸಿದ ಅವರು, ‘ಪರೀಕ್ಷೆಗೆ ಬೇರೆ ಊರಿನಲ್ಲಿದ್ದ ನಾನು ತಮ್ಮನ ಮದುವೆಗೂ ಹೋಗಿರಲಿಲ್ಲ’ ಎಂದರು.

‘ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ಬಾರಿ ಆಗಸ್ಟ್‌ನಿಂದ ಸೇನೆ ಹಾಗೂ ಪೊಲೀಸ್‌ ಇಲಾಖೆಯಲ್ಲಿನ ಹುದ್ದೆಗಳಿಗೂ ತರಬೇತಿ ಕೊಡಲಾಗುವುದು. ಜುಲೈನಲ್ಲಿ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ. ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ತರಬೇತಿಯೊಂದಿಗೆ ಶಿಷ್ಯವೇತನವನ್ನೂ ಕೊಡಲಾಗುವುದು. ಸ್ಪರ್ಧೆಯು ತೀವ್ರವಾಗಿರುವುದರಿಂದ ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.

‘ಯುಪಿಎಸ್‌ಸಿ ಪರೀಕ್ಷಾ ಕ್ರಮದ ಬಗ್ಗೆ ಯಾವ ಅನುಮಾನವೂ ಬೇಡ. ಮೌಲ್ಯಮಾಪನವನ್ನು ಅತ್ಯಂತ ವೈಜ್ಞಾನಿಕವಾಗಿ ನಡೆಸಲಾಗುತ್ತದೆ’ ಎಂದು ಸಂವಾದದಲ್ಲಿ ಉತ್ತರಿಸಿದರು.

‘ಮಾಸ್ಟರ್‌ ಮೈಂಡ್’ ಇ–ಪೇಪರ್‌ ಕುರಿತು ಎಜಿಎಂ ಎಂ.ವಿ.ಸುರೇಶ್ ಮಾಹಿತಿ ನೀಡಿದರು. ಪ್ರಸರಣ ವಿಭಾಗದ ಡಿಜಿಎಂ ಜಗನ್ನಾಥ್ ಜೋಯಿಸ್, ಹಿರಿಯ ವ್ಯವಸ್ಥಾಪಕ ಟಿ.ಎನ್.ಬಸವರಾಜ್, ಸಹಾಯಕ ವ್ಯವಸ್ಥಾಪಕ ಸಂದೀಪ್ ಟಿ.ಎಲ್., ನವೋ–ಪ್ರಮತಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಚಾಲಕ ಫಣಿರಾಜ್‌ ಎಸ್., ನವೋದಯ ಫೌಂಡೇಷನ್ ಅಧ್ಯಕ್ಷ ಡಾ.ರವಿ ಎಸ್.ಆರ್., ಸಿ.ಎಸ್.ಪ್ರಿಯದರ್ಶಿನಿ, ಶ್ವೇತಾ ಎಂ. ಪಾಲ್ಗೊಂಡಿದ್ದರು. ಮಾಸ್ಟರ್ ಟ್ರೇನರ್‌ ಡಾ.ಪರಶಿವಮೂರ್ತಿ ‘ವ್ಯಕ್ತಿತ್ವ ವಿಕಸನ’ ಕುರಿತು ಮಾತನಾಡಿದರು.

‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಸ್ವಾಗತಿಸಿದರು. ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಶ್ವೇತಾ ಎಸ್. ನಿರೂಪಿಸಿದರು.

ಯುವಜನರು ರಾಜ್ಯದ ಬೆಳಕಾಗಲೆಂದು...

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತ ನಾಡಿ, ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳು ಅಮೃತ ಮಹೋತ್ಸವ ವರ್ಷದಲ್ಲಿವೆ. ಯುವಜನರಿಗೆ ಅನುಕೂಲವಾಗಲೆಂದು ಇಂತಹ ಮಾರ್ಗದರ್ಶನ ಕಾರ್ಯಾಗಾರ ನಡೆಸುತ್ತಿದ್ದೇವೆ. ಪತ್ರಿಕೋದ್ಯಮದ ತತ್ವವನ್ನು ಬಿಡದೆ ಜನರಿಗೆ ಬೇಕಾದ ಸುದ್ದಿಗಳನ್ನು ಕೊಡುತ್ತಿದ್ದೇವೆ’ ಎಂದು ತಿಳಿಸಿದರು.

‘ಶಾಕಿಂಗ್ ನ್ಯೂಸ್, ಬ್ರೇಕಿಂಗ್‌ ನ್ಯೂಸ್ ಕೊಡುತ್ತಾರೆ ಎನ್ನುವುದು ಮಾಧ್ಯಮದ ಮೇಲೆ ಇರುವ ಸಾಮಾನ್ಯ ಆರೋಪ. ಆದರೆ, ನಾವು ಬೆಳಕು ಕೊಡುವ ಕೆಲಸ ಮಾಡುತ್ತಿದ್ದೇವೆ. ಯುವಜನರು ರಾಜ್ಯದ ಬೆಳಕಾಗಬೇಕು ಎನ್ನುವುದು ನಮ್ಮ ಉದ್ದೇಶ. ಯುವಜನರ ಶ್ರಮದ ಬೆವರಿನಿಂದ ಸುಗಂಧಭರಿತ ರಾಜ್ಯ ನಿರ್ಮಾಣವಾಗಬೇಕು ಎನ್ನುವುದು ನಮ್ಮ ಬಯಕೆಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರ ಅನುಕೂಲಕ್ಕಾಗಿ ‘ಮಾಸ್ಟರ್‌ಮೈಂಡ್’ ಇ–ಪೇಪರ್‌ ಹೊರತರುತ್ತಿದ್ದೇವೆ. ಸಮಾಜಕಲ್ಯಾಣ ಇಲಾಖೆ ಕೈಜೋಡಿಸಿದರೆ ರಾಜ್ಯದಲ್ಲಿ ನೂರಾರು ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನು ರೂಪಿಸಬಹುದಾಗಿದೆ’ ಎಂದು ಹೇಳಿದರು.

‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್‌’ ಓದು ಸಹಕಾರಿ; ಎಸ್‌ಪಿ ಆರ್‌.ಚೇತನ್‌

ಎಸ್‌ಪಿ ಆರ್.ಚೇತನ್‌ ಮಾತನಾಡಿ, ‘ಯುಪಿಎಸ್‌ಸಿ ‍ಪರೀಕ್ಷೆಯು ಹೆಚ್ಚು ಸಮಯ ಬೇಡುತ್ತದೆ. ಹೀಗಾಗಿ, ಆ ಮನಸ್ಥಿತಿಗೆ ಮೊದಲು ಸಜ್ಜಾಗಬೇಕು. ಗುರಿಯಲ್ಲಿ ಸ್ಪಷ್ಟತೆ ಇರಬೇಕು’ ಎಂದು ಕಿವಿಮಾತು ಹೇಳಿದರು.

‘ಯುಪಿಎಸ್‌ಸಿ ಪರೀಕ್ಷೆಯು ಬಹಳ ಕಷ್ಟವಾದುದು. 21 ವರ್ಷ ಮೇಲಿನ ಯಾವುದೇ ಪದವೀಧರರೂ ತೆಗೆದುಕೊಳ್ಳಬಹುದು. ವಿವಿಧ ವಿಷಯಗಳ ಪದವೀಧರರು ಸ್ಪರ್ಧಿಸುವುದರಿಂದ ಪೈಪೋಟಿಯು ದೊಡ್ಡ ಮಟ್ಟದಲ್ಲಿರುತ್ತದೆ. ಅದಕ್ಕೆ ತಕ್ಕಂತೆ ಸಜ್ಜಾಗಬೇಕು. ಈ ಮಾರ್ಗದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳು ಬಹಳ ಸಹಕಾರಿಯಾಗುತ್ತವೆ. ನಿತ್ಯವೂ ಕನಿಷ್ಠ ಒಂದು ಕನ್ನಡ ಹಾಗೂ ಇಂಗ್ಲಿಷ್‌ ದಿನಪತ್ರಿಕೆಗಳನ್ನು ಓದಬೇಕು. ಪ್ರಚಲಿತ ವಿದ್ಯಾಮಾನಗಳನ್ನು ತಿಳಿದುಕೊಳ್ಳುವುದಕ್ಕೆ ಇದು ಸಹಕಾರಿಯಾಗುತ್ತದೆ’ ಎಂದು ಎಂದು ಕಿವಿಮಾತು ಹೇಳಿದ ಅವರು, ನಾನೂ ‘ಪ್ರಜಾವಾಣಿ’ ಓದುತ್ತಾ ಬೆಳೆದವನು’ ಎಂದು ತಿಳಿಸಿದರು.

‘ಮೊಬೈಲ್‌ ಫೋನ್‌ ಬಳಕೆ ಇತಿ–ಮಿತಿಯಲ್ಲಿರಬೇಕು. ಸಾಮಾಜಿಕ ಜಾಲತಾಣದಿಂದ ದೂರವಿರಬೇಕು. ಏನು ಓದಬೇಕು ಎನ್ನುವ ಜತೆಗೆ ಏನನ್ನು ಓದಬಾರದು ಎಂಬುದನ್ನೂ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳು ಕಾರ್ಯಾಗಾರದ ಮೂಲಕ ಯುವಜನರಿಗೆ ಮಾರ್ಗದರ್ಶನ ನೀಡುತ್ತಿರುವುದು ಅಭಿನಂದನಾರ್ಹ’ ಎಂದರು.

‘ಪ್ರಸ್ತುತ ಆನ್‌ಲೈನ್‌ನಲ್ಲೂ ಬಹಳಷ್ಟು ಸಂಪನ್ಮೂಲ ಲಭ್ಯವಿದೆ. ಅದನ್ನು ಬಳಸಿಕೊಳ್ಳಬಹುದು’ ಎಂದು ಹೇಳಿದರು.

‘ನಾನು ಮಧ್ಯಮ ವರ್ಗ ಕುಟುಂಬ, ಹಳ್ಳಿಯ ಹಿನ್ನೆಲೆಯಿಂದ ಬಂದವನು. 6ನೇ ಯತ್ನದಲ್ಲಿ ಐಪಿಎಸ್ ಸಿಕ್ಕಿತು. ನನ್ನ ಬ್ಯಾಚ್‌ನಲ್ಲಿ ಆಯ್ಕೆಯಾದವರಲ್ಲಿ ಶೇ 60ರಷ್ಟು ಮಂದಿ ಗ್ರಾಮೀಣ ಹಿನ್ನೆಲೆಯವರಾಗಿದ್ದರು. ಶೇ 40ರಷ್ಟು ಮಂದಿ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲೇ ಪಡೆದವರಾಗಿದ್ದರು. ಯುಪಿಎಸ್‌ಸಿಯಲ್ಲಿ ಯಾವುದೇ ಪ್ರಭಾವವೂ ನಡೆಯುವುದಿಲ್ಲ. ಯಶಸ್ಸಿಗೆ ಅಡ್ಡದಾರಿಗಳಿಲ್ಲ. ಓದುವುದೊಂದೇ ದಾರಿ’ ಎಂದು ಸಂವಾದದಲ್ಲಿ ಪ್ರತಿಕ್ರಿಯಿಸಿದರು.

ಮಾಸ್ಟರ್‌ ಟ್ರೇನರ್ ಸಂದೀಪ್ ಮಹಾಜನ್, ‘ಯಾವುದೇ ಪರೀಕ್ಷೆ ತೆಗೆದುಕೊಂಡರೂ ಎಷ್ಟು ಓದಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ‘ಮಾಸ್ಟರ್‌ಮೈಂಡ್’ ಇ–ಪೇಪರ್‌ ಬಹಳ ಸಹಕಾರಿಯಾಗಿದೆ’ ಎಂದು ತಿಳಿಸಿದರು.

ಇತಿ–ಮಿತಿ ಅರಿತು ಗುರಿ ಇಟ್ಟುಕೊಳ್ಳಿ

ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಗೋಪಿನಾಥ್ ಸಿ.ವಿ., ‘ಬದುಕಿನಲ್ಲಿ ಯಾವುದೇ ಉದ್ದೇಶವಿಲ್ಲದಿದ್ದರೆ ಪ್ರಾಣಿಗಳಿಗೆ ನಾವು ಸಮಾನರಾಗುತ್ತೇವೆ. ಜ್ಞಾನವಿಲ್ಲದವರು ಪಶುಗಳಿಗೆ ಸಮ. ಹೀಗಾಗಿ, ಒಳ್ಳೆಯ ಜ್ಞಾನ ಹಾಗೂ ಗುರಿಯನ್ನು ಇಟ್ಟುಕೊಳ್ಳಬೇಕು. ಗುರಿಯನ್ನು ಮರೆತ ದಿನ ಬದುಕು ಕಷ್ಟವಾಗುತ್ತದೆ’ ಎಂದು ತಿಳಿಸಿದರು.

‘ಯುಪಿಎಸ್‌ಸಿ ಪರೀಕ್ಷೆಗೆ ಪ್ರತಿ ವರ್ಷ 12ರಿಂದ 13 ಲಕ್ಷ ಮಂದಿ ಹಾಜರಾಗುತ್ತಾರೆ. ಹೀಗಾಗಿ, ಸ್ಪರ್ಧೆಯು ಜಾಸ್ತಿಯಾಗಿದೆ. ಯಾವುದೇ ಪರೀಕ್ಷೆ ತೆಗೆದುಕೊಳ್ಳುವ ಮುನ್ನ ನಮ್ಮ ಇತಿ–ಮಿತಿ ಗುರುತಿಸಿಕೊಳ್ಳಬೇಕು. ಇಂಗ್ಲಿಷ್‌ ಜ್ಞಾನವಿಲ್ಲದಿದ್ದರೆ ಕಲಿಯಬೇಕು. ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರಬೇಕು’ ಎಂದು ಕಥನಗಳ ಮೂಲಕ ಕಟ್ಟಿಕೊಟ್ಟರು.

‘ಶೇ 95ರಷ್ಟು ಅಂಕಗಳನ್ನು ಪಡೆದಿದ್ದರೆ, ಆರ್ಥಿಕವಾಗಿ ಹಿಂದುಳಿದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋಚಿಂಗ್‌ ಕೊಡಿಸುತ್ತೇನೆ. ಆರ್ಥಿಕವಾಗಿಯೂ ನೆರವಾಗುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.