ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಬಯಸುವವರು, ಕೆಲಸದ ನಿಮಿತ್ತ ಹೋಗಬೇಕಾದವರು ಎಲ್ಲರೂ ತಮ್ಮ ಅಗತ್ಯಕ್ಕೆ ತಕ್ಕಂತೆ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದಲ್ಲಿ ವಿದೇಶಿ ಭಾಷೆಗಳನ್ನು ಕಲಿಯಬಹುದು
ಸಂವಹನ ಮತ್ತು ಉದ್ಯೋಗದ ದೃಷ್ಟಿಯಿಂದ ಇತ್ತೀಚೆಗೆ ವಿದೇಶಿ ಭಾಷೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಕೇಂದ್ರವು ಸರ್ಟಿಫಿಕೆಟ್ ಕೋರ್ಸ್‌ನಿಂದ ಹಿಡಿದು ಪಿಎಚ್.ಡಿವರೆಗೂ ವಿದೇಶಿ ಭಾಷೆಗಳಲ್ಲಿ ಕಲಿಯಲು ಅವಕಾಶ ಕಲ್ಪಿಸಿದೆ.
ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಜಪನೀಸ್, ಚೈನೀಸ್, ಕೊರಿಯನ್, ರಷ್ಯನ್ ಸೇರಿದಂತೆ ಹಲವು ಭಾಷೆಗಳಲ್ಲಿ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ವಿದೇಶಕ್ಕೆ ಹೋಗಬೇಕಾಗಿದೆ, ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸುವುದು ಹೇಗೆ ಎಂದು ಯೋಚಿಸುತ್ತಿರುವವರು ಬರೀ ಎರಡು ತಿಂಗಳ ಅವಧಿಯ ಸಂವಹನ ಕೋರ್ಸ್ ಸೇರಬಹುದು.
ಇದರಲ್ಲಿ ವಿದೇಶದಲ್ಲಿ ಬೇರೆಯವರೊಂದಿಗೆ ಸಂವಹನ ನಡೆಸಲು ಬೇಕಾಗುವಷ್ಟು ಕೌಶಲ ಹೊಂದುವ ಬಗ್ಗೆ ತಿಳಿಸಿಕೊಡಲಾಗುತ್ತದೆ. ಉದಾಹರಣೆಗೆ, ರಷ್ಯಾಗೆ ಹೋದರೆ, ಅಲ್ಲಿ ತಲುಪಬೇಕಾದ ವಿಳಾಸ ಪತ್ತೆ ಹಚ್ಚುವುದು, ಟ್ಯಾಕ್ಸಿ ಪ್ರಯಾಣ ದರ ಎಷ್ಟಿದೆ, ಅಂಗಡಿ, ಮಾಲ್ ಎಲ್ಲಿವೆ ಎಂಬಂತಹ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವಂತೆ ರಷ್ಯನ್ ಭಾಷೆಯಲ್ಲಿ ಸಂವಹನ ನಡೆಸುವುದನ್ನು ಕಲಿಸಲಾಗುತ್ತದೆ.
ಇದಲ್ಲದೆ ಹತ್ತು ತಿಂಗಳ ಸರ್ಟಿಫಿಕೆಟ್ ಕೋರ್ಸ್, ಡಿಪ್ಲೊಮಾ, ಸ್ನಾತಕೋತ್ತರ ಡಿಪ್ಲೊಮಾ, ಎಂ.ಎ ಹಾಗೂ ಪಿಎಚ್.ಡಿಗೂ ಅವಕಾಶ ಇದೆ. ಇದೇ ಮೊದಲ ಬಾರಿಗೆ ಬಿ.ಎ.ಯಲ್ಲಿ ಫ್ರೆಂಚ್ ಅನ್ನು ಮೇಜರ್ ಆಗಿ ಇಟ್ಟುಕೊಂಡು, ಫ್ರೆಂಚ್, ಇಂಗ್ಲಿಷ್, ಪತ್ರಿಕೋದ್ಯಮ ಸಂಯೋಜನೆಯ ಹೊಸ ಕೋರ್ಸ್ ಆರಂಭಿಸಲಾಗಿದೆ.
ಎಲ್ಲೆಲ್ಲಿ ಉದ್ಯೋಗ ಅವಕಾಶಗಳು ಇವೆ ಎಂದು ಆರು ತಿಂಗಳ ಕಾಲ ಸಮೀಕ್ಷೆ ನಡೆಸಿದ ಬಳಿಕ ಈ ಕೋರ್ಸ್ ಆರಂಭಿಸಲಾಗಿದೆ. ಕಲೆ, ವಿಜ್ಞಾನ, ವಾಣಿಜ್ಯ ಸೇರಿದಂತೆ ಯಾವುದೇ ವಿಭಾಗದವರು ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಜ್ಯೋತಿ ವೆಂಕಟೇಶ್.
ಕಡಿಮೆ ಶುಲ್ಕದಲ್ಲಿ ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅವಕಾಶ ಇರುವುದರಿಂದ ಆರ್ಥಿಕವಾಗಿ ಹೊರೆಯಾಗುವುದಿಲ್ಲ. ಶನಿವಾರ, ಭಾನುವಾರವೂ ತರಗತಿಗಳು ಇರುತ್ತವೆ. ಹೀಗಾಗಿ, ವಾರಪೂರ್ತಿ ಕೆಲಸ ಮಾಡಿ, ವಾರಾಂತ್ಯದಲ್ಲಿ ತರಗತಿಗೆ ಹಾಜರಾಗಬಹುದು.
ಓದುವ ಆಸಕ್ತಿ ಇದ್ದು, ವಿದೇಶಕ್ಕೆ ಹೋಗಲು ಬಯಸುವವರು ಸ್ನಾತಕೋತ್ತರ ಪದವಿ ಪಡೆಯಬಹುದು. ಪದವಿಯಲ್ಲಿ ಫ್ರೆಂಚ್, ಜರ್ಮನ್ ಇವೆ. ಇದನ್ನು ಮಾಡಿದವರು ಸ್ನಾತಕೋತ್ತರ ಪದವಿಗೆ ಸೇರಬಹುದು.
ಉನ್ನತ ವ್ಯಾಸಂಗಕ್ಕೆ ಹೋಗುವುದಿಲ್ಲ, ಸಂವಹನ ಕೌಶಲ ಬೆಳೆಸಿಕೊಂಡರೆ ಸಾಕು ಎನ್ನುವವರು ಡಿಪ್ಲೊಮಾ ಮಾಡಬಹುದು. ಹತ್ತು ತಿಂಗಳ ಈ ಕೋರ್ಸ್ ಎರಡು ಸೆಮಿಸ್ಟರ್ ಒಳಗೊಂಡಿದೆ. ಒಟ್ಟು 14 ಭಾಷೆಗಳಲ್ಲಿ ಸರ್ಟಿಫಿಕೆಟ್, ಡಿಪ್ಲೊಮಾ, ಪದವಿ ಕೋರ್ಸ್‌ಗಳು ಇದ್ದು, ಯಾವ ಭಾಷೆಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.
ಉದ್ಯೋಗಕ್ಕಾಗಿ ಹೊರದೇಶಗಳಿಗೆ ಹೋಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಸ್ಥಳೀಯ ಭಾಷೆ ಗೊತ್ತಿದ್ದರೆ ಕೆಲಸಕ್ಕೆ ಇನ್ನಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ಜ್ಯೋತಿ ವೆಂಕಟೇಶ್.
ದಕ್ಷಿಣ ಭಾರತದಲ್ಲಿ ಅತಿಹೆಚ್ಚು ವಿದೇಶಿ ಭಾಷೆಗಳ ಕೋರ್ಸ್‌ಗಳನ್ನು ಹೊಂದಿರುವ ಏಕೈಕ ವಿಶ್ವವಿದ್ಯಾಲಯ ಇದಾಗಿದೆ. ಇಲ್ಲಿ ತರಬೇತಿ ಹೊಂದಿದ ಅಧ್ಯಾಪಕರು ಇದ್ದು, ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಆದರೆ, ಬಹಳಷ್ಟು ಜನರಿಗೆ ವಿದೇಶಿ ಭಾಷೆಗಳ ಕಲಿಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನ ಅರಿವು ಇಲ್ಲ.
ವಿದೇಶಿ ಸಹಭಾಗಿತ್ವದಲ್ಲಿ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಇದಲ್ಲದೆ ವಿದೇಶದ ಕಂಪನಿಗಳು ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಿಗೆ ಕಾಲಿಟ್ಟಿವೆ. ವಿದೇಶಿ ಭಾಷೆ ಗೊತ್ತಿದ್ದರೆ, ಅಂತಹ ಕಡೆ ಕೆಲಸ ಮಾಡಲು ಅನುಕೂಲವಾಗಲಿದೆ.
ಕಾನೂನು, ಹಣಕಾಸು, ಆರೋಗ್ಯ ಕ್ಷೇತ್ರಗಳಲ್ಲಿ ಕಂಟೆಂಟ್ ರೈಟರ್‌ಗಳಿಗೆ ಭಾರಿ ಬೇಡಿಕೆ ಇದೆ. ವಿದೇಶಗಳಿಂದ ಅನುದಾನ ಪಡೆಯುವ ನೂರಾರು ಸ್ವಯಂಸೇವಾ ಸಂಸ್ಥೆಗಳಿವೆ. ಅಂತಹ ಕಡೆ ಕಾರ್ಯನಿರ್ವಹಿಸಲು ಒಂದೇ ಭಾಷೆಗಿಂತ ಹೆಚ್ಚಿನ ಭಾಷೆಗಳಲ್ಲಿ ವ್ಯವಹಾರ ಕೌಶಲದ ಅಗತ್ಯವಿರುತ್ತದೆ.
ನಾಗರಿಕ ಸೇವಾ ಪರೀಕ್ಷೆಗಳಲ್ಲೂ ವಿದೇಶಿ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿದೇಶಾಂಗ ಸೇವೆಗೆ ಸೇರಿದರೆ ಬೇರೆ ದೇಶಗಳಲ್ಲಿ ರಾಯಭಾರಿಗಳಾಗಿ ಕೆಲಸ ಮಾಡಲು ಸುಲಭವಾಗುತ್ತದೆ. ಇದಲ್ಲದೆ ದೇಶದ ಪ್ರಮುಖ ನಗರಗಳಲ್ಲಿ ವಿದೇಶಗಳ ಕಾನ್ಸುಲೆಟ್ ಕಚೇರಿಗಳಿವೆ. ಅಂತಹ ಕಡೆ ಕಾರ್ಯನಿರ್ವಹಿಸಲು ವಿದೇಶಿ ಭಾಷೆಗಳ ಕಲಿಕೆ ನೆರವಿಗೆ ಬರಲಿದೆ ಎಂಬುದು ಜ್ಯೋತಿ ಅವರ ಅನಿಸಿಕೆ.
ಯಾವುದೇ ಕ್ಷೇತ್ರಕ್ಕೆ ಹೋದರೂ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ಉದ್ಯೋಗ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ಸಂವಹನ ಕೌಶಲ ಬಹಳ ಮುಖ್ಯ. ಇನ್ನು ಉದ್ಯೋಗಕ್ಕಾಗಿ ಬೇರೆ ಕಡೆ ಹೋದಾಗ ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಮಾತನಾಡಿದರೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಹೀಗಾಗಿ, ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿತವರಿಗೆ ಅವಕಾಶಗಳ ಬಾಗಿಲು ಸದಾ ತೆರೆದಿರುತ್ತದೆ.
ವಿದೇಶಿ ಭಾಷೆಗಳ ಕೋರ್ಸ್‌ಗಳಿಗೆ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆಯಲು ಈಗಲೂ ಅವಕಾಶ ಇದೆ.
ಮಾಹಿತಿಗೆ ಸಂಪರ್ಕ ಸಂಖ್ಯೆ: 080 29572019, 6361756549
ವಿಳಾಸ: ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರ, ಅರಮನೆ ರಸ್ತೆ, ಹೊಸ ಅಕಡೆಮಿಕ್ ಬ್ಲಾಕ್, 3ನೇ ಮಹಡಿ, ಸೆಂಟ್ರಲ್ ಕಾಲೇಜು ಹಿಂಭಾಗ, ಬೆಂಗಳೂರು ನಗರ ವಿ.ವಿ, ಬೆಂಗಳೂರು–09
ನಾಗರಿಕ ಸೇವಾ ಪರೀಕ್ಷೆಗಳಲ್ಲೂ ವಿದೇಶಿ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿದೇಶಾಂಗ ಸೇವೆಗೆ ಸೇರಿದರೆ ಬೇರೆ ದೇಶಗಳಲ್ಲಿ ರಾಯಭಾರಿಗಳಾಗಿ ಕೆಲಸ ಮಾಡಲು ಸುಲಭವಾಗುತ್ತದೆ. ಇದಲ್ಲದೆ ದೇಶದ ಪ್ರಮುಖ ನಗರಗಳಲ್ಲಿ ವಿದೇಶಗಳ ಕಾನ್ಸುಲೆಟ್ ಕಚೇರಿಗಳಿವೆ. ಅಂತಹ ಕಡೆ ಕಾರ್ಯನಿರ್ವಹಿಸಲು ವಿದೇಶಿ ಭಾಷೆಗಳ ಕಲಿಕೆ ನೆರವಿಗೆ ಬರಲಿದೆಪ್ರೊ. ಜ್ಯೋತಿ ವೆಂಕಟೇಶ್, ನಿರ್ದೇಶಕಿ , ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರ , ಬೆಂಗಳೂರು ನಗರ ವಿ.ವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.