ADVERTISEMENT

‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳ | ಪಿಯುಸಿ ಮುಂದೇನು?: ಇಲ್ಲಿವೆ ಕೆಲವು ಸಲಹೆಗಳು..

ಪ್ರದೀಪ್ ಎಸ್ ವೆಂಕಟರಾಮ್
Published 8 ಫೆಬ್ರುವರಿ 2026, 23:30 IST
Last Updated 8 ಫೆಬ್ರುವರಿ 2026, 23:30 IST
   
ಪಿಯುಸಿ ನಂತರ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ, ಬದಲಾದ ಕಾಲಕ್ಕೆ ತಕ್ಕಂತೆ ಆಯ್ದುಕೊಳ್ಳಬಹುದಾದ ಬಗೆಬಗೆಯ ಕೋರ್ಸ್‌ಗಳು ಈಗ ವಿವಿಧ ಕಾಲೇಜುಗಳಲ್ಲಿ ಲಭ್ಯ ಇವೆ. ಅಂತಹ ಕೆಲವು ವಿಶೇಷ ಕೋರ್ಸ್‌ಗಳ ಬಗ್ಗೆ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ಸರಣಿ ಲೇಖನ ಪ್ರಕಟವಾಗಲಿದೆ

ಇತ್ತೀಚಿನ ಪ್ರಕರಣ. ಅನುರಾಧಾಳ ಪೋಷಕರು ತುರ್ತು ಮಾರ್ಗದರ್ಶನಕ್ಕಾಗಿ ಬಂದಿದ್ದರು. ‘ಪಿಯುಸಿ ನಂತರ ಏನು?’ ಎಂಬ ಪ್ರಶ್ನೆ ಅನುರಾಧಾಳನ್ನು ಸದಾ ಕಾಡುತ್ತಿತ್ತು. ಎಲ್ಲರೂ ವಿಧವಿಧವಾದ ಸಲಹೆ ನೀಡುತ್ತಿದ್ದುದರಿಂದ ಆಕೆ ಗೊಂದಲದಲ್ಲಿದ್ದಳು; ಆತಂಕ, ಭಯ ಹೆಚ್ಚಾಗುತ್ತಿತ್ತು. ಮಾರ್ಗದರ್ಶನ ಪ್ರಕ್ರಿಯೆಯ ಮೂಲಕ ತನ್ನ ಆಸಕ್ತಿ ಮತ್ತು ಸಾಮರ್ಥ್ಯವನ್ನು ಅರಿತು, ಸರಿಯಾದ ಕೋರ್ಸ್ ಆಯ್ಕೆ ಮಾಡಿಕೊಂಡ ಬಳಿಕ ಅವಳ ಆತ್ಮವಿಶ್ವಾಸ ಹೆಚ್ಚಾಗಿ, ಭವಿಷ್ಯ ಸ್ಪಷ್ಟವಾಗಿ ಕಾಣತೊಡಗಿತು.

ಹೊಸ ವರ್ಷ ಶುರುವಾಗುತ್ತಿದ್ದಂತೆ, ಪಿಯುಸಿ ನಂತರ ಮುಂದೇನು ಎನ್ನುವುದರ ಬಗ್ಗೆ ವಿದ್ಯಾರ್ಥಿಗಳು, ಪೋಷಕರ ಆತಂಕ ಸರ್ವೇಸಾಮಾನ್ಯ. ಆರ್ಥಿಕಾಭಿವೃದ್ಧಿ, ತಂತ್ರಜ್ಞಾನ, ಆದಾಯ ಹೆಚ್ಚಳ, ಗ್ರಾಹಕರ ಆದ್ಯತೆಗಳು ಬದಲಾಗುತ್ತಿದ್ದಂತೆ ಕೆಲವು ನೂತನ ಕೋರ್ಸ್‌ಗಳು ಮುನ್ನೆಲೆಗೆ ಬರುವುದು ಸಹಜ. ಅವುಗಳನ್ನು ಆಯ್ದುಕೊಳ್ಳುವುದಕ್ಕೆ ಹೇಗೆ ಸಿದ್ಧರಾಗಬೇಕು? ಇದೋ ಇಲ್ಲಿವೆ ಕೆಲವು ಸಲಹೆಗಳು:

  1. ಪಿಯುಸಿ- ಪ್ರಮುಖ ಘಟ್ಟ: ಪಿಯುಸಿ ಒಂದು ನಿರ್ಣಾಯಕ ಹಂತ ಎನ್ನುವುದರಲ್ಲಿ ಸಂಶಯವಿಲ್ಲ. ಎಸ್‍ಎಸ್‍ಎಲ್‍ಸಿ ನಂತರ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಅದೇ ವಿಭಾಗದಲ್ಲಿ ಮುಂದುವರಿಯುವುದು ಸೂಕ್ತ. ಆದರೆ, ಬಲವಾದ ಕಾರಣಗಳಿದ್ದರೆ ಬದಲಾವಣೆ ಸಾಧ್ಯ. ಪಿಯುಸಿ ಪರೀಕ್ಷೆಯ ತಯಾರಿ ಮತ್ತು ಪ್ರವೇಶ ಪರೀಕ್ಷೆಗಳ ಸಿದ್ಧತೆ ಜೊತೆಗೆ ಸೂಕ್ತವೆನಿಸುವ ಕೋರ್ಸ್ ಆಯ್ಕೆಯ ನಿರ್ಧಾರ ಪ್ರಕ್ರಿಯೆ ತುಂಬಾ ಕಠಿಣವೂ ಸವಾಲಿನದ್ದೂ ಆಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಭವಿಷ್ಯದ ಗುರಿಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಹಂತದಲ್ಲಿ ಸರಿಯಾದ ಮಾರ್ಗದರ್ಶನ ದೊರಕಿದರೆ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯ.

    ADVERTISEMENT
  2. ಆಸಕ್ತಿ, ಅಭಿರುಚಿ, ಆಕಾಂಕ್ಷೆ: ವಿದ್ಯಾರ್ಥಿಯು ಶಿಕ್ಷಣ ಮತ್ತು ವೃತ್ತಿ ನಿರ್ಧಾರಕ್ಕೆ ಮುನ್ನ, ತನ್ನ ಆಸಕ್ತಿ ಮತ್ತು ಅಭಿರುಚಿಯನ್ನು ಅರಿತುಕೊಳ್ಳುವುದು ಕಡ್ಡಾಯ. ಯಾವ ವಿಷಯದಲ್ಲಿ ವಿದ್ಯಾರ್ಥಿಗೆ ಆಸಕ್ತಿ, ಅಭಿರುಚಿ, ಸ್ವಾಭಾವಿಕ ಪ್ರತಿಭೆ ಇದೆ ಎಂಬುದನ್ನು ಗುರುತಿಸಬೇಕು. ಕೆಲವರಿಗೆ ವಿಜ್ಞಾನ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ಇನ್ನಿತರರು ಕಲೆ, ವಾಣಿಜ್ಯ, ಕ್ರೀಡೆ ಅಥವಾ ಸೃಜನಾತ್ಮಕ ಕ್ಷೇತ್ರಗಳತ್ತ ಆಕರ್ಷಿತರಾಗಿರುತ್ತಾರೆ. ಜೊತೆಗೆ, ವಿದ್ಯಾರ್ಥಿಯ ಆಕಾಂಕ್ಷೆಗಳು, ಅಂದರೆ ಜೀವನದಲ್ಲಿ ಏನು ಸಾಧಿಸಬೇಕು ಎಂಬ ಕನಸುಗಳು, ಕೋರ್ಸ್ ಆಯ್ಕೆಗೆ ದಿಕ್ಕು ತೋರುತ್ತವೆ.

  3. ಕೌಟುಂಬಿಕ ಹಿನ್ನೆಲೆ, ಆದ್ಯತೆ: ವಿದ್ಯಾರ್ಥಿಯ ಕೋರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ಕೌಟುಂಬಿಕ ಹಿನ್ನೆಲೆಯನ್ನೂ ಗಮನಿಸಬೇಕು. ಆರ್ಥಿಕ ಸ್ಥಿತಿ, ಪೋಷಕರ ಹಿನ್ನೆಲೆ ಮತ್ತು ನಿರೀಕ್ಷೆಗಳು, ಕುಟುಂಬದ ಮೌಲ್ಯಗಳು ಮತ್ತು ಸಂಪನ್ಮೂಲಗಳು ಕೋರ್ಸ್ ಹಾಗೂ ಕಾಲೇಜು ಆಯ್ಕೆಯ ಮೇಲೆ ಪ್ರಭಾವ ಬೀರುತ್ತವೆ. ಕೆಲ ಸಂದರ್ಭಗಳಲ್ಲಿ ಪೋಷಕರು ತಮ್ಮ ಅಪೇಕ್ಷೆ, ಅನುಭವದ ಆಧಾರದ ಮೇಲೆ ಸಲಹೆ ನೀಡುತ್ತಾರೆ ಅಥವಾ ಒತ್ತಡ ಹೇರುತ್ತಾರೆ. ಆದರೆ, ಅದೇ ನಿರ್ಣಾಯಕ ಆಗಬಾರದು. ಪೋಷಕರ ಸಲಹೆಗಳು ಮತ್ತು ವಿದ್ಯಾರ್ಥಿಯ ಆಸಕ್ತಿ, ಆಕಾಂಕ್ಷೆಗಳ ನಡುವೆ ಸಮತೋಲನ ಇರಬೇಕು. ಇಂತಹ ಸಂದರ್ಭಗಳಲ್ಲಿ, ಪರಸ್ಪರ ಸಂವಾದ ಮತ್ತು ಅರ್ಥಮಾಡಿಕೊಳ್ಳುವಿಕೆ ಅನಿವಾರ್ಯ.

  4. ವೃತ್ತಿ ಯೋಜನೆ: ವಿದ್ಯಾಭ್ಯಾಸದ ನಂತರ ಅನುಸರಿಸಬೇಕಾದ ವೃತ್ತಿಯನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಯಾವ ಕೋರ್ಸ್‌ ಅಧ್ಯಯನ ಮಾಡಬೇಕು ಎನ್ನುವ ಪರಿಕಲ್ಪನೆಯೇ ವೃತ್ತಿ ಯೋಜನೆ. ಶಿಕ್ಷಣವು ಅಂತಿಮ ಗುರಿಯಲ್ಲ, ಅದು ವೃತ್ತಿಯತ್ತ ಕರೆದೊಯ್ಯುವ ಹಂತ. ಆದ್ದರಿಂದ, ಪಿಯುಸಿ ನಂತರ ಕೋರ್ಸ್ ಆಯ್ಕೆ ಮಾಡುವಾಗ ದೀರ್ಘಕಾಲೀನ ವೃತ್ತಿ ಯೋಜನೆ ಅಗತ್ಯ. ಆಯ್ಕೆ ಮಾಡುವ ಕೋರ್ಸ್ ಯಾವ ರೀತಿಯ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ, ಉನ್ನತ ಅಧ್ಯಯನದ ಅಗತ್ಯಗಳೇನು, ಅವಕಾಶಗಳೇನು, ಭವಿಷ್ಯದಲ್ಲಿ ಉದ್ಯೋಗ ಕ್ಷೇತ್ರದಲ್ಲಿನ ಬೇಡಿಕೆ, ಪ್ರಾಥಮಿಕ ಮತ್ತು ವೃತ್ತಿ ಸಂಬಂಧಿತ ಕೌಶಲಗಳ ಅಭಿವೃದ್ಧಿ ಎಲ್ಲವನ್ನೂ ಪರಿಶೀಲಿಸಬೇಕು.

  5. ಕೋರ್ಸ್, ಕಾಲೇಜು ಆಯ್ಕೆ: ಸರಿಯಾದ ಕೋರ್ಸ್ ಮತ್ತು ಕಾಲೇಜಿನ ಆಯ್ಕೆಯು ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುತ್ತದೆ. ಕೋರ್ಸ್‌ನ ಪಠ್ಯಕ್ರಮ, ಪ್ರಾಯೋಗಿಕ ತರಬೇತಿ, ಉದ್ಯೋಗಾವಕಾಶಗಳು ಮತ್ತು ಉನ್ನತ ಅಧ್ಯಯನದ ಸಾಧ್ಯತೆಗಳನ್ನು ಗಮನಿಸಬೇಕು. ಜೊತೆಗೆ, ಕಾಲೇಜಿನ ಗುಣಮಟ್ಟ, ಅಧ್ಯಾಪಕರ ಅನುಭವ, ಮೂಲಸೌಕರ್ಯಗಳು, ಉದ್ಯಮಗಳೆಡೆಗಿನ ಸಂಪರ್ಕವು ಗಮನಿಸಬೇಕಾದ ಪ್ರಮುಖ ಅಂಶಗಳು. ವಿದ್ಯಾರ್ಥಿಗೆ ಸೂಕ್ತವಾದ ಕೋರ್ಸ್ ಮತ್ತು ಉತ್ತಮ ಕಲಿಕೆಯ ವಾತಾವರಣ ಇರುವ ಕಾಲೇಜನ್ನು ಆಯ್ಕೆ ಮಾಡುವುದು ಒಳಿತು.

ವಿದ್ಯಾರ್ಥಿಗಳು ಈಗ ಅನುಸರಿಸುತ್ತಿರುವ ‘ಮೊದಲು ಕೋರ್ಸ್, ಆನಂತರ ವೃತ್ತಿ’ ಎನ್ನುವ ಪದ್ಧತಿ ಬದಲಾಯಿಸಿ, ‘ಮೊದಲು ವೃತ್ತಿಯ ಆಯ್ಕೆ, ಆನಂತರವೇ ಕೋರ್ಸ್ ಆಯ್ಕೆ’ ಎನ್ನುವ ತತ್ವವನ್ನು ಅನುಸರಿಸಿದರೆ, ವೃತ್ತಿಯಲ್ಲಿ ಯಶಸ್ಸು ಮತ್ತು ಬದುಕಿನಲ್ಲಿ ಸಂತೃಪ್ತಿಯನ್ನು ಸಾಧಿಸಬಹುದು.

ಲೇಖಕ: ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ

ಶೈಕ್ಷಣಿಕ ಮೇಳ ನಿಮಗಾಗಿ
‘ಪಿಯುಸಿ ನಂತರ ಮುಂದೇನು?’ ಎನ್ನುವ ಪ್ರಶ್ನೆ ಕಾಡುತ್ತಿದೆಯೇ? ಚಿಂತೆ ಬಿಡಿ. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಏಪ್ರಿಲ್‌ನಲ್ಲಿ ಆಯೋಜಿಸಲಿರುವ ‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳದಲ್ಲಿ ಪಾಲ್ಗೊಳ್ಳಿ, ನಿಮ್ಮ ಪ್ರಶ್ನೆಗೆ ಸೂಕ್ತ ಉತ್ತರ ಕಂಡುಕೊಂಡು ಉತ್ತಮ ಭವಿಷ್ಯ ನಿಮ್ಮದಾಗಿಸಿಕೊಳ್ಳಿ. ಅಷ್ಟೇ ಅಲ್ಲ, ಸಿಇಟಿ, ಕಾಮೆಡ್‌–ಕೆ, ವೃತ್ತಿಪರ ಕೋರ್ಸ್‌ ಸೇರಿದಂತೆ ವಿವಿಧ ಕೋರ್ಸ್‌ಗಳು, ಉದ್ಯೋಗಾವಕಾಶ, ಕಾಲೇಜುಗಳಲ್ಲಿ ಸಿಗುವ ಬಗೆಬಗೆ ಸೌಲಭ್ಯಗಳ ಮಾಹಿತಿ, ವಿಶೇಷ ಗೋಷ್ಠಿಗಳು, ಸಂವಾದ... ಎಲ್ಲವೂ ನಿಮಗಾಗಿ. ಮೇಳದ ದಿನಾಂಕಕ್ಕಾಗಿ ನಿರೀಕ್ಷಿಸಿ, ಶೈಕ್ಷಣಿಕ ಮಾಹಿತಿಯ ಕಣಜವನ್ನು ಎದುರುಗೊಳ್ಳಲು ಸಿದ್ಧರಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.