ಪ್ರಾತಿನಿಧಿಕ ಚಿತ್ರ
ಶಿಕ್ಷಣ ಇಲಾಖೆಯ ಆದೇಶದ ಪ್ರಕಾರ, ಶಾಲಾ ಮಕ್ಕಳಿಗೆ ಈ ಬಾರಿ 18 ದಿನಗಳ ದಸರಾ ರಜೆ ಸಿಗಲಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಮುಖ್ಯ. ಯೋಚಿಸಿ ಯೋಜಿಸಿದರೆ ರಜೆಯನ್ನು ಅರ್ಥಪೂರ್ಣವಾಗಿ ಕಳೆಯಬಹುದು. ಅದಕ್ಕಾಗಿ ಒಂದಿಷ್ಟು ಸಲಹೆಗಳು ಇಲ್ಲಿವೆ:
ಕೈಬರಹ ಸುಧಾರಣೆ: ಎಷ್ಟೇ ಆಧುನಿಕ ಸಾಧನಗಳು ಬಂದಿದ್ದರೂ ಕೈಬರಹಕ್ಕೆ ಸದಾ ಕಾಲ ಮಾನ್ಯತೆ ಇದ್ದೇ ಇರುತ್ತದೆ. ಆದ್ದರಿಂದ ಕೈಬರಹವನ್ನು ಸುಧಾರಿಸಿಕೊಳ್ಳಲು ಸಮಯವನ್ನು ಮೀಸಲಿಡಬೇಕು.
ಹವ್ಯಾಸ ವೃದ್ಧಿ: ಒಳ್ಳೆಯ ಹವ್ಯಾಸಗಳಿರುವ ವ್ಯಕ್ತಿ ಸದಾ ಸಂತೋಷದಿಂದ ಇರುತ್ತಾನೆ ಎಂದು ಹಿರಿಯರು ಹೇಳಿದ್ದಾರೆ. ಪ್ರತಿ ವಿದ್ಯಾರ್ಥಿಗೂ ಕಥೆ-ಕವನ ಬರವಣಿಗೆ, ಚಿತ್ರ ಬಿಡಿಸುವುದು, ಪೇಪರ್ ಕ್ರಾಫ್ಟ್‌ನಂತಹ ಒಂದಲ್ಲೊಂದು ಕ್ಷೇತ್ರದಲ್ಲಿ ಹವ್ಯಾಸ ಇರುತ್ತದೆ. ಸಮಯದ ಅಭಾವದಿಂದ ಅದರಲ್ಲಿ ತೊಡಗಿಸಿಕೊಳ್ಳಲು ಆಗಿರುವುದಿಲ್ಲ. ರಜೆಯಲ್ಲಿ ಇಂತಹ ಹವ್ಯಾಸಗಳನ್ನು ಪೋಷಿಸಿಕೊಂಡರೆ ತಮ್ಮ ಪ್ರತಿಭೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ.
ಆತ್ಮೀಯರ ಸಖ್ಯ: ಕುಟುಂಬಸ್ಥರು, ಬಂಧುಗಳು, ಗೆಳೆಯರೊಂದಿಗೆ ಹೆಚ್ಚು ಸಮಯ ಕಳೆಯಿರಿ, ಸಂಭ್ರಮದಿಂದ ಹಬ್ಬ ಆಚರಿಸಿ.
ಲಘು ಹೊರ ಸಂಚಾರ: ನಿಸರ್ಗದೊಂದಿಗೆ ಬೆರೆಯುವುದು ಮನಸ್ಸಿಗೆ ಹಾಗೂ ದೇಹಕ್ಕೆ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ರಜೆಯ ಸಮಯದಲ್ಲಿ ಪೋಷಕರು ಇಂತಹ ಯೋಜನೆಗಳನ್ನು ಹಾಕಿಕೊಂಡರೆ ಮಕ್ಕಳಲ್ಲಿ ಇನ್ನಷ್ಟು ಚೈತನ್ಯ ತುಂಬಿದಂತೆ ಆಗುತ್ತದೆ.
ರಕ್ಷಣಾ ಕೌಶಲ ಕೈಗೂಡಲಿ: ಮೊಬೈಲ್, ಕಂಪ್ಯೂಟರ್‌ನ ವ್ಯಾಪಕ ಬಳಕೆಯಿಂದ ಕೆಲವು ಮೂಲಭೂತ ಕೌಶಲಗಳ ಬಗ್ಗೆ ಎಷ್ಟೋ ಮಕ್ಕಳಿಗೆ ಪರಿಚಯವೇ ಇಲ್ಲದಂತಾಗಿದೆ. ಮರ ಹತ್ತುವುದು, ಈಜಿನಂತಹ ಕೌಶಲಗಳನ್ನು ಪೋಷಕರ ನೆರವಿನಿಂದ ರೂಢಿಸಿಕೊಳ್ಳುವುದು ಉತ್ತಮ.
ಒಟ್ಟಾರೆ, ಬರೀ ಪಠ್ಯ ಹಾಗೂ ಅಂಕಗಳ ಒತ್ತಡದಿಂದ ಹೊರಬಂದು, ನಾನಾ ಬಗೆಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಳ್ಳಬೇಕು. ರಜಾ ದಿನಗಳ ಲಭ್ಯತೆಗೆ ಅನುಗುಣವಾಗಿ ತೀರಾ ಹೊರೆಯೆನಿಸದಂತೆ ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು. ಆಗ, ದಸರಾ ರಜೆ ನಿಮ್ಮ ಪಾಲಿಗೆ ವರದಾನವಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.