
* ನಾನು ವಿಜ್ಞಾನ ವಿಷಯದಲ್ಲಿ ಪಿಸಿಎಂಬಿ ತೆಗೆದುಕೊಂಡು ದ್ವಿತೀಯ ಪಿಯುಸಿ ಮುಗಿಸಿದ್ದೇನೆ. ನನಗೆ ಬಿ.ಆರ್ಕ್ (ವಾಸ್ತುಶಿಲ್ಪ) ಮೇಲೆ ತುಂಬಾ ಆಸಕ್ತಿ ಇದೆ. ಆದರೆ ಬಿ.ಆರ್ಕ್. ನಂತರ ಮುಂದೆ ಯಾವ ಯಾವ ಉದ್ಯೋಗ ಅವಕಾಶಗಳು ಇವೆ ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡುವಿರಾ?
ಅಭಿಲಾಷ್, ಊರು ಬೇಡ
ಉತ್ತರ:ಅಭಿಲಾಷ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಶಿಕ್ಷಣದ ನಂತರ ಇದಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ಆರ್ಕಿಟೆಕ್ಟ್ ಆಗಿ ಆಸಕ್ತಿದಾಯಕ ಕೆಲಸಗಳನ್ನು ಮಾಡಬಹುದು. ನಿರ್ಮಾಣ ಅಥವಾ ಕನ್‌ಸ್ಟ್ರಕ್ಷನ್ ಕ್ಷೇತ್ರದಲ್ಲಿ ವಿಪುಲವಾದ ಉದ್ಯೋಗ ಅವಕಾಶಗಳಿವೆ. ವಾಣಿಜ್ಯ ಮಳಿಗೆಗಳ ವಿನ್ಯಾಸ, ಮನೆ, ಕಟ್ಟಡ ಮತ್ತು ಒಳಾಂಗಣಗಳ ವಿನ್ಯಾಸ, ಅಪಾರ್ಟ್‌ಮೆಂಟ್, ಹೋಟೆಲ್, ಆಸ್ಪತ್ರೆ, ಶಾಲೆ, ಕಾಲೇಜು, ಸರ್ಕಾರಿ ಕಟ್ಟಡ, ಸ್ಮಾರಕಗಳು, ಸ್ಟೇಡಿಯಂ, ಗ್ಯಾಲರಿ.. ಹೀಗೆ ಹತ್ತು ಹಲವಾರು ವಿಶೇಷವಾದ ಕಟ್ಟಡಗಳ ವಿನ್ಯಾಸದ ಕ್ಷೇತ್ರಗಳಲ್ಲಿ ಡಿಸೈನರ್, ಎಂಜಿನಿಯರ್, ಎನಾಲಿಸ್ಟ್, ಇಂಟೀರಿಯರ್ ಡಿಸೈನರ್, ಪ್ರಾಜೆಕ್ಟ್ ಮ್ಯಾನೇಜರ್, ಆರ್ಟ್ ಡೈರಕ್ಟರ್‌ಗಳಾಗಿ ಕೆಲಸ ನಿರ್ವಹಿಸಬಹುದು.
ಖಾಸಗಿ ನಿರ್ಮಾಣ ಮತ್ತು ವಿನ್ಯಾಸ ಕಂಪನಿಗಳಲ್ಲದೆ ಸರ್ಕಾರಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿರುತ್ತವೆ. ಪುರಾತತ್ವ ಇಲಾಖೆ, ನ್ಯಾಷನಲ್ ಬಿಲ್ಡಿಂಗ್ ಆರ್ಗನೈಜೇಶನ್, ರಕ್ಷಣಾ ಸಚಿವಾಲಯ, ರೈಲ್ವೆ ಇಲಾಖೆ, ವಸತಿ ಮತ್ತು ನಗರಾಭಿವೃದ್ಧಿ ನಿಗಮ, ಪಬ್ಲಿಕ್ ವರ್ಕ್ ಇಲಾಖೆ ಇತ್ಯಾದಿ ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿಯ ಅವಕಾಶಗಳಿರುತ್ತವೆ. ಅಮೆರಿಕಾ, ಆಸ್ಟ್ರೇಲಿಯಾ, ದುಬೈಗಳಂತಹ ವಿದೇಶಿ ರಾಷ್ಟ್ರಗಳಲ್ಲೂ ಆಕರ್ಷಕ ಸಂಬಳದೊಂದಿಗೆ ಉತ್ತಮ ಅವಕಾಶಗಳಿರುತ್ತವೆ. ಉತ್ತಮ ಅನುಭವದ ನಂತರ ಸ್ವಂತ ಉದ್ಯಮವನ್ನು ಸ್ಥಾಪಿಸಿ ಅಥವಾ ಕನ್ಸಲ್ಟಂಟ್ ಆಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು.
ಆರ್ಕಿಟೆಕ್ಚರ್ ಕ್ಷೇತ್ರದಲ್ಲಿ ಎನ್.ಐ.ಟಿ., ಐ.ಐ.ಟಿ., ಸ್ಕೂಲ್ ಆಫ್ ಪ್ಲ್ಯಾನಿಂಗ್ ಮತ್ತು ಆರ್ಕಿಟೆಕ್ಚರ್ ದೆಹಲಿ ಹಾಗೂ ಇನ್ನೂ ಬಹಳಷ್ಟು ಒಳ್ಳೆಯ ವಿದ್ಯಾಸಂಸ್ಥೆಗಳು ಭಾರತದಲ್ಲಿ ಇರುವುದರಿಂದ ಅಂತಹ ಸಂಸ್ಥೆಗಳಿಂದ ಶಿಕ್ಷಣ ಪೂರೈಸಿದರೆ ಉತ್ತಮ. ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಶಿಕ್ಷಣದ ನಂತರ ಉನ್ನತ ಶಿಕ್ಷಣವಾದ ಸ್ನಾತಕೋತ್ತರ ಪದವಿ, ಪಿಎಚ್.ಡಿ. ಪೂರೈಸಿ ಶಿಕ್ಷಣ ಕ್ಷೇತ್ರದಲ್ಲಿಯೂ ಕೆಲಸ ನಿರ್ವಹಿಸಬಹುದು.
ಸೃಜನಶೀಲತೆ, ತಾಳ್ಮೆ, ತೀಕ್ಷ್ಣ ಗಮನಶಕ್ತಿ ಇತ್ಯಾದಿ ಅವಶ್ಯಕತೆಯಿರುವ ವ್ಯಕ್ತಿತ್ವ ಲಕ್ಷಣಗಳಲ್ಲದೇ, ಕಲೆ, ವಿನ್ಯಾಸ, ಉತ್ತಮ ಸಂವಹನ ಇತ್ಯಾದಿ ಕೌಶಲಗಳು ಕೂಡ ಬೇಕಾಗುತ್ತವೆ. ಕಾಲೇಜಿನ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಥೆಯಲ್ಲಿ ಇಂಟರ್ನ್‌ಶಿಪ್, ವಾಸ್ತುಶಿಲ್ಪ ಕ್ಷೇತ್ರದಲ್ಲಿನ ಇತಿಹಾಸದ ಜ್ಞಾನ, ಪ್ರಸಕ್ತ ವಿದ್ಯಮಾನಗಳ ಆಗುಹೋಗುಗಳ ಕುರಿತಾದ ತಿಳಿವಳಿಕೆ, ವಿನ್ಯಾಸಗಳಿಗೆ ಬೇಕಾಗುವ ಕಂಪ್ಯೂಟರ್ ಸಾಫ್ಟ್‌ವೇರ್‌ಗಳಲ್ಲಿ ಕೌಶಲ ನಿಮ್ಮನ್ನು ಈ ಕ್ಷೇತ್ರದಲ್ಲಿ ಹೆಚ್ಚು ನುರಿತರಾಗುವಂತೆ ಮಾಡುತ್ತದೆ.
***
ನಾನು ದ್ವಿತೀಯ ಪಿಯುಸಿ ವಿಜ್ಞಾನ (ಪಿಸಿಎಂಸಿ) ವಿಭಾಗದಲ್ಲಿ ಓದಿದ್ದೇನೆ. ನನಗೆ ಎಂಜಿನಿಯರಿಂಗ್‌ನಲ್ಲಿ ಆಸಕ್ತಿ ಇಲ್ಲ. ನಾನು ಪ್ರಥಮ ಪಿಯುಸಿಯಲ್ಲಿ ಸಿಇಟಿ ಅಥವಾ ಜೆಇಇ ಕೋಚಿಂಗ್ ತೆಗೆದುಕೊಂಡಿಲ್ಲ. ಇರುವುದು ಮೈಸೂರಿನಲ್ಲಿ. ನನಗೆ ಮಾಧ್ಯಮ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳುವ ಆಸೆ ಇದೆ. ನಾನು ಅನಿಮೇಷನ್ ಮತ್ತು ಸಮೂಹ ಸಂವಹನ ವಿಷಯದ ಬಗ್ಗೆ ಹುಡುಕಾಡಿದ್ದೇನೆ. ನನಗೆ ಸರಿಯಾದ ಮಾಹಿತಿ ಸಿಗಲಿಲ್ಲ. ಇದು ಪದವಿ ಆಧಾರಿತ ಕೋರ್ಸೆ? ಯಾವೆಲ್ಲಾ ವಿಷಯಗಳನ್ನು ಇದು ಒಳಗೊಂಡಿದೆ. ಈ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ನೀಡಿ. ನಾನು ಪದವಿ ಮಾಡಬಹುದೇ ಅಥವಾ ಡಿಪ್ಲೊಮಾ ಕೋರ್ಸ್ ಮಾಡಬಹುದೇ ತಿಳಿಸಿ.
–ಹೆಸರು ಬೇಡ, ಮೈಸೂರು
ಉತ್ತರ:ಅನಿಮೇಷನ್ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಲು ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾಗಳಂತಹ ಅಲ್ಪಾವಧಿಯ ಕೋರ್ಸ್‌ಗಳಿಂದ ಹಿಡಿದು ಪದವಿಯಂತಹ ದೀರ್ಘ ಅವಧಿಯ ಕೋರ್ಸ್‌ಗಳನ್ನು ಕಲಿಯಬಹುದು. ಅನೇಕ ಸಂಸ್ಥೆಗಳಲ್ಲಿ ಅನಿಮೇಷನ್ ನಲ್ಲಿ ಬಿ.ಎಸ್‌ಸಿ., ಅನಿಮೇಷನ್ ಟೆಕ್ನಾಲಜಿಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಮತ್ತು ಡಿಪ್ಲೊಮಾ ಕೋರ್ಸ್‌ಗಳು ಲಭ್ಯವಿವೆ.
ಅನಿಮೇಷನ್ ಕೋರ್ಸ್‌ನಲ್ಲಿ ಚಿತ್ರಕಲೆ, ಧ್ವನಿ ಮತ್ತು ದೃಶ್ಯ ಸಂಕಲನ, ಬೆಳಕಿನ ವಿನ್ಯಾಸ, ಗ್ರಾಫಿಕ್ ಡಿಸೈನ್, ಬಣ್ಣಗಳ ಪರಿಕಲ್ಪನೆ, 2-ಡಿ, 3-ಡಿ ಅನಿಮೇಷನ್, ಕಂಪ್ಯೂಟರ್ ಸಾಫ್ಟವೇರ್‌ಗಳು, ಸಿನಿಮಾ ತಯಾರಿ, ಚಿತ್ರ ನಿರ್ಮಾಣದ ಪೂರ್ವ ಮತ್ತು ನಂತರದ ಪ್ರಕ್ರಿಯೆಗಳು ಇತ್ಯಾದಿ ಮೂಲಭೂತ ವಿಷಯಗಳ ಬಗ್ಗೆ ಕಲಿಕೆ ಇರುತ್ತದೆ.
ಉತ್ತಮ ಪ್ರಾಯೋಗಿಕ ಜ್ಞಾನ ಮತ್ತು ಕೌಶಲ ಕೊಡುವ, ಒಳ್ಳೆಯ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ಅನುಭವವನ್ನು ಕೊಡಮಾಡುವ ಶಿಕ್ಷಣ ಸಂಸ್ಥೆಯನ್ನು ಆಯ್ದುಕೊಳ್ಳಿ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಆ್ಯಂಡ್ ಅನಿಮೇಷನ್, ಸೃಷ್ಟಿ ಸ್ಕೂಲ್ ಆಫ್ ಆರ್ಟ್ ಡಿಸೈನ್ ಮತ್ತು ಟೆಕ್ನಾಲಜಿ ಮೊದಲಾದ ವಿದ್ಯಾಸಂಸ್ಥೆಗಳು ಅನಿಮೇಷನ್ ಕ್ಷೇತ್ರದಲ್ಲಿ ಕರ್ನಾಟಕದಲ್ಲಿನ ಪ್ರತಿಷ್ಠಿತ ಸಂಸ್ಥೆಗಳಾಗಿವೆ.
ಕಲ್ಪನಾಶಕ್ತಿ, ಸೃಜನಶೀಲತೆ, ತಾಳ್ಮೆ, ಚಿತ್ರಕಲೆ, ತೀಕ್ಷ್ಣ ಗಮನಿಸುವಿಕೆ ಇತ್ಯಾದಿಗಳು ಈ ಕ್ಷೇತ್ರದಲ್ಲಿರುವವರಿಗೆ ಬೇಕಾಗುವ ಗುಣ ಮತ್ತು ಕೌಶಲಗಳು.
ಸದ್ಯ ಅನಿಮೇಷನ್ ಕ್ಷೇತ್ರ ವೇಗವಾಗಿ ಬೆಳೆಯುತ್ತಿರುವ ಉದ್ಯೋಗ ಕ್ಷೇತ್ರಗಳಲ್ಲಿ ಒಂದಾಗಿದ್ದು ಉತ್ತಮ ಉದ್ಯೋಗಾವಕಾಶಗಳನ್ನು ಹೊಂದಿದೆ. ಸಿನಿಮಾ, ಕಿರುತೆರೆ, ಕಾರ್ಟೂನ್, ಜಾಹೀರಾತು, ಶಿಕ್ಷಣ, ಮಲ್ಟಿಮೀಡಿಯಾ, ಕಲೆ, ಮುದ್ರಣ ಮಾಧ್ಯಮ, ಕಾಮಿಕ್ ಪುಸ್ತಕ ಕ್ಷೇತ್ರ, ಅಂತರ್ಜಾಲ, ಗೇಮಿಂಗ್‌ನಂತಹ ಕ್ಷೇತ್ರಗಳಲ್ಲಿ ಡಿಸೈನರ್ಸ್, ಲೈಟಿಂಗ್ ಆರ್ಟಿಸ್ಟ್, ವಿ.ಎಫ್.ಎಸ್. ಆರ್ಟಿಸ್ಟ್ ಇತ್ಯಾದಿ ಹುದ್ದೆಗಳಲ್ಲಿ ಉದ್ಯೋಗ ಅವಕಾಶಗಳಿವೆ.
***
ನಾನು ಈಗ ದ್ವಿತೀಯ ಪಿಯುಸಿ ಮುಗಿಸಿದ್ದೇನೆ ಮತ್ತೆ ಜನವರಿ ತಿಂಗಳಲ್ಲಿ ಜೆಇಇ ಮೇನ್ಸ್ (ಬಿ.ಆರ್ಕ್.) ಬರೆದಿದ್ದೇನೆ. ಅದರ ಫಲಿತಾಂಶ ಶೇ 88 ಬಂದಿದೆ. ನನಗೆ ಆರ್ಕಿಟೆಕ್ಚರ್ ಅಥವಾ ಅನಿಮೇಶನ್ (ಗ್ರಾಫಿಕ್ಸ್) ಕೋರ್ಸ್ ಮಾಡುವ ಆಸೆ ಇದೆ. ನಾನು ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಉಂಟಾಗಿದೆ. ಎನ್‌ಐಟಿ ಸೇರಬೇಕೋ ಅಥವಾ ಅನಿಮೇಷನ್ ಕೋರ್ಸ್ ಆಯ್ಕೆ ಮಾಡಲೊ? ಅನಿಮೇಷನ್ ಕೋರ್ಸ್ ಆಯ್ಕೆ ಮಾಡಿದರೆ ಮುಂದೆ ಭವಿಷ್ಯ ಹೇಗೆ ಇರುತ್ತದೆ ಮತ್ತೆ ಈಗ ಅದರ ಟ್ರೆಂಡ್ ಹೇಗೆ ಇದೆ? ಜೊತೆಗೆ ನಾನು ಕಡಿಮೆ ಮಾತನಾಡುತ್ತಿದ್ದು, ಇದು ಮುಂದೆ ಸಮಸ್ಯೆ ಆಗುತ್ತದೆಯೇ?
–ಹೆಸರು, ಊರು ಬೇಡ
ಉತ್ತರ:ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಮತ್ತು ಆನಿಮೇಷನ್ ಕುರಿತಾದ ಮಾಹಿತಿಗೆ ಮೇಲಿನ ಎರಡು ಉತ್ತರಗಳನ್ನು ಗಮನಿಸಿ. ಆರ್ಕಿಟೆಕ್ಚರ್ ನಿಮ್ಮ ಆಸಕ್ತಿಯ ಕ್ಷೇತ್ರವಾಗಿದ್ದಲ್ಲಿ, ಎನ್.ಐ.ಟಿ. ಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಲಿಯುವ ಅವಕಾಶ ಸಿಗುವುದು ಒಂದು ಉತ್ತಮ ಅವಕಾಶ.
ಎರಡೂ ಕ್ಷೇತ್ರಗಳು ತಮ್ಮದೇ ಆದ ರೀತಿಯಲ್ಲಿ ಉತ್ತಮ ಉದ್ಯೋಗ ಅವಕಾಶಗಳನ್ನು ಹೊಂದಿವೆ. ಹೀಗಾಗಿ ಎರಡು ಕ್ಷೇತ್ರಗಳಲ್ಲಿ ಯಾವುದು ಉತ್ತಮ ಎಂದು ನಿರ್ಧರಿಸುವುದಕ್ಕಿಂತ, ನಿಮ್ಮ ಆಸಕ್ತಿ, ಅಭಿರುಚಿ, ಕೌಶಲ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ನಿಮಗೆ ಯಾವುದು ಹೆಚ್ಚು ಸೂಕ್ತ ಎಂದು ನಿರ್ಧರಿಸಬೇಕಾಗುತ್ತದೆ. ಅದಕ್ಕಾಗಿ ಮೊದಲಿಗೆ ಎರಡು ಕ್ಷೇತ್ರಗಳ ಬಗ್ಗೆ ತಿಳಿಯಿರಿ. ನಂತರ ಒಂದು ಖಾಲಿ ಹಾಳೆಯಲ್ಲಿ ನಿಮ್ಮ ಆಸಕ್ತಿ, ಸಾಮರ್ಥ್ಯ, ಕೌಶಲಗಳನ್ನು ಪಟ್ಟಿ ಮಾಡಿ. ಇನ್ನೊಂದು ಹಾಳೆಯಲ್ಲಿ ಆ ಎರಡು ಕ್ಷೇತ್ರಗಳಿಗೆ ಬೇಕಾಗುವ ಸಾಮರ್ಥ್ಯ, ಕೌಶಲಗಳನ್ನು ಪಟ್ಟಿ ಮಾಡಿ. ನಂತರ ಎರಡು ಕ್ಷೇತ್ರಗಳಲ್ಲಿ ಯಾವ ಕ್ಷೇತ್ರ ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚು ಹೊಂದುತ್ತದೆ ಎಂದು ಪರಿಶೀಲಿಸಿ ನಿರ್ಧರಿಸಿ. ಎರಡು ಕ್ಷೇತ್ರ ಗಳೂ ಸಮಾನವಾಗಿ ಹೊಂದುತ್ತವೆ ಎಂದಾದರೆ ನಿಮ್ಮ ಆಸಕ್ತಿಯ ಸೆಳೆತಕ್ಕೆ ಪ್ರಾಧಾನ್ಯತೆ ಕೊಡಿ.
ಕಡಿಮೆ ಮಾತನಾಡುವ ನಿಮ್ಮ ಗುಣವನ್ನು ಇಲ್ಲಿ ಮುಖ್ಯವಾಗಿ ಪರಿಗಣಿಸಬೇಕಾಗಿಲ್ಲ. ವೈಯಕ್ತಿಕವಾಗಿ ನಾವು ಕಡಿಮೆ ಅಥವಾ ಹೆಚ್ಚು ಮಾತನಾಡಬಹುದು, ಅದು ನಮ್ಮ ವ್ಯಕ್ತಿತ್ವದ ಭಾಗವನ್ನಾಗಿ ನೋಡಬೇಕೇ ವಿನಃ ಸಮಸ್ಯೆಯಾಗಿ ಅಥವಾ ವಿಶೇಷವಾಗಿ ಪರಿಗಣಿಸಬೇಕಾಗಿಲ್ಲ. ಉದ್ಯೋಗಕ್ಕೆ ಸಂಬಂಧಿಸಿದಂತೆ ಮಾತಿನಲ್ಲಿ ಹೆಚ್ಚು ಕಡಿಮೆ ಎಂದೇನಿಲ್ಲ. ಆಯಾ ಸಂದರ್ಭ, ಸನ್ನಿವೇಶಕ್ಕೆ ಎಷ್ಟು ಬೇಕೊ ಅಷ್ಟನ್ನು ಮಾತನಾಡುವ ಕಲೆಯನ್ನು ರೂಢಿಸಿಕೊಳ‍್ಳುವುದು ಮುಖ್ಯವಾಗುತ್ತದೆ. ಅದು ಸಮಯ ಮತ್ತು ಅನುಭವದೊಂದಿಗೆ ರೂಢಿ ಆಗುತ್ತದೆ. ನಿಮ್ಮ ಸುತ್ತಲಿನ ಯಶಸ್ವಿ ಸಂವಹನಕಾರರನ್ನು, ಅಂತರ್ಜಾಲದಲ್ಲಿ ಉತ್ತಮ ಸಂದರ್ಶನಕಾರರನ್ನು, ಟಿ.ಇ.ಡಿ. ಟಾಕ್ಸ್‌ಗಳಲ್ಲಿನ ಸಾಧಕರ ಭಾಷಣಗಳನ್ನು ವೀಕ್ಷಿಸಿ ಮತ್ತು ಅವರ ಸಂವಹನ ಪ್ರಕಾರವನ್ನು ಗಮನಿಸಿ. ಸಂವಹನ ರೂಢಿಸಿಕೊಳ್ಳುವ ಕಲೆಯೇ ಹೊರತು ಹುಟ್ಟಿನಿಂದ ಬರುವ ವಿಷಯವೇನಲ್ಲ. ಹೀಗಾಗಿ ಸ್ವಲ್ಪ ಪರಿಶ್ರಮದಿಂದ ನಿಮಗೆ ಬೇಕಾದಂತೆ ರೂಢಿಸಿಕೊಳ್ಳಬಹುದು.
ಆದರೆ ಸಾಮಾನ್ಯವಾಗಿ ಜನರೊಂದಿಗೆ ಬೆರೆಯಲು ಮತ್ತು ಸಂವಹನ ನಡೆಸಲು ನಿಮಗೆ ತೊಂದರೆ ಇದ್ದರೆ ಆ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಜ್ಞರಿಂದ ಸೂಕ್ತ ನೆರವು ಪಡೆಯಿರಿ.
(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.