ADVERTISEMENT

ನಿಮ್ಮ ಮಗುವಿಗೆ ನಿಘಂಟು ಬಳಕೆ ಗೊತ್ತೇ?

ರೇಷ್ಮಾ ಶೆಟ್ಟಿ
Published 2 ಜುಲೈ 2019, 19:30 IST
Last Updated 2 ಜುಲೈ 2019, 19:30 IST
   

ಅಭ್ಯಾಸವು ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ ಎಂಬ ಮಾತೊಂದಿದೆ. ಯಾವುದೇ ವಿಷಯವನ್ನಾಗಲಿ ಪ್ರತಿದಿನ ಅಭ್ಯಾಸ ಮಾಡಿದರೆ ಆ ವಿಷಯದಲ್ಲಿ ಪರಿಣತ ಎನ್ನಿಸಿಕೊಳ್ಳಬಹುದು. ಅಂತೆಯೇ ಭಾಷಾಜ್ಞಾನ ಕೂಡ.‌ ಬಾಲ್ಯದಿಂದಲೇ ಮಗುವಿನಲ್ಲಿ ಭಾಷಾಜ್ಞಾನ ವೃದ್ಧಿಸಬೇಕು ಎಂದರೆಶಬ್ದಕೋಶ ಅಥವಾ ನಿಘಂಟು ಬಳಸುವುದನ್ನು ರೂಢಿಸಬೇಕು. ಇದರಿಂದ ಅವರಲ್ಲಿ ಶಬ್ದ, ಅದರ ಅರ್ಥ, ವ್ಯಾಕರಣ, ವಿರುದ್ಧ ಪದಗಳ ಪರಿಚಯ ಚೆನ್ನಾಗಿ ಆಗುತ್ತದೆ.

ನಿಮ್ಮ ಮಗು ಪ್ರತಿಬಾರಿ ಹೊಸ ಪದದ ಅರ್ಥವನ್ನು ಕೇಳಿದಾಗ ಅದನ್ನು ವಿವರಿಸಿ ಹೇಳುವ ಬದಲು ಶಬ್ದಕೋಶದಲ್ಲಿ ಅರ್ಥವನ್ನು ಹುಡುಕಿ ಅದನ್ನು ನಿಮಗೆ ವಿವರಿಸಲು ತಿಳಿಸಿ. ಇದರಿಂದ ಮಗುವಿನಲ್ಲಿ ಶಬ್ದಾರ್ಥಗಳ ಅರಿವಿನ ಜೊತೆಗೆ ಜ್ಞಾನವೂ ಹೆಚ್ಚುತ್ತದೆ.

ಮನೆಯಲ್ಲಿ ನಿಮ್ಮ ಮಗುವಿನ ಪುಟ್ಟ ಗ್ರಂಥಾಲಯದಲ್ಲಿ ಕಡ್ಡಾಯವಾಗಿ ಶಬ್ದಕೋಶಕ್ಕೊಂದು ಜಾಗ ಮೀಸಲಿಡಬೇಕು. ಜೊತೆಗೆ ಸದಾ ಅದು ಕೈಗೆಟಕುವಂತಿರಲಿ. ಕಾಫಿ ಟೇಬಲ್, ಮಲಗುವ ಮಂಚದ ಬಳಿ.. ಹೀಗೆ ಮಕ್ಕಳ ಕೈಗೆ ಸುಲಭವಾಗಿ ನಿಘಂಟು ಸಿಗುವಂತೆ ನೋಡಿಕೊಳ್ಳಬೇಕು.

ADVERTISEMENT

ಇದು ತಂತ್ರಜ್ಞಾನ ಯುಗ. ಇಲ್ಲಿ ಎಲ್ಲವೂ ಕುಳಿತಲ್ಲೇ ಕೈಗೆಟಕುತ್ತವೆ. ಈಗ ಆನ್‌ಲೈನ್‌ನಲ್ಲಿ ಬಗೆ ಬಗೆಯ ಶಬ್ದಕೋಶಗಳು ಲಭ್ಯವಿವೆ. ಆದರೆ ಆನ್‌ಲೈನ್‌ ಇರಲಿ, ಆಫ್‌ಲೈನ್‌ ಇರಲಿ ಶಬ್ದಕೋಶವನ್ನು ಹೇಗೆ ಆಯ್ಕೆ ಮಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಮಕ್ಕಳ ವಯಸ್ಸಿಗೆ ತಕ್ಕಂಥದ್ದನ್ನು ಆರಿಸುವುದು ಮುಖ್ಯ. ಜೊತೆಗೆ ಚಿತ್ರಗಳ ಸಹಿತ ಅರ್ಥವಿರುವ ಶಬ್ದಕೋಶವಾದರೆ ಅದು ಮಗುವಿನ ಮನಸ್ಸಿನಲ್ಲಿ ಬೇಗ ಅಚ್ಚೊತ್ತುತ್ತದೆ.

ವರ್ಣಮಾಲೆ ಕಲಿಸಿ

ನಿಮ್ಮ ಪುಟ್ಟ ಕಂದ ಅ ಆ ಇ ಈ ಕನ್ನಡ ವರ್ಣಮಾಲೆ ಹಾಗೂ ಎ ಬಿ ಸಿ ಡಿ ಆಂಗ್ಲ ವರ್ಣಮಾಲೆಯನ್ನು ಸ್ವಷ್ಟವಾಗಿ ತಪ್ಪಿಲ್ಲದೆ ಉಚ್ಚರಿಸಬೇಕು ಎಂದರೆ ಮನೆಯಲ್ಲೇ ಅವರಿಗೆ ಅದನ್ನು ಕಲಿಸಲು ಪ್ರಾರಂಭಿಸಬೇಕು. ಕನ್ನಡ ಶಬ್ದಕೋಶ ಅಥವಾ ಆಂಗ್ಲ ನಿಘಂಟು ವರ್ಣಮಾಲೆಯನ್ನು ಒಳಗೊಂಡಿರುತ್ತವೆ. ಅದನ್ನು ಓದಿಸಿ ಪುಸ್ತಕವೊಂದರಲ್ಲಿ ಬರೆಸಿ, ಬಾಯಲ್ಲಿ ಹೇಳಿಸಿ ಅಭ್ಯಾಸ ಮಾಡಿಸಬೇಕು.ಬಿಟ್ಟ ಸ್ಥಳ ತುಂಬುವಂತಹ ಆಟಗಳನ್ನು ನೀಡುವ ಮೂಲಕ ಪದ ಬಳಕೆಯ ಸ್ಪಷ್ಟತೆಯ ಬಗ್ಗೆ ಅರಿವು ಮೂಡಿಸಬೇಕು.

ಶಬ್ದ ಹಾಗೂ ಸ್ವರ ಸಂಯೋಜನೆ

ಶಬ್ದ ಹಾಗೂ ಸ್ವರಗಳ ಸಂಯೋಜನೆ ಕನ್ನಡ, ಇಂಗ್ಲಿಷ್‌ ಅಥವಾ ಇತರ ಭಾಷೆಯಿರಲಿ ತುಂಬಾ ಮುಖ್ಯ. ಶಬ್ದದ ಉಚ್ಚಾರಣೆ ಸ್ವಷ್ಟವಾಗಬೇಕು ಎಂದರೆ ಉಚ್ಚಾರಣಾ ಮಾರ್ಗದರ್ಶಿಗಳ ಸಹಾಯ ಪಡೆಯಿರಿ.ಶಬ್ದಕೋಶದಲ್ಲಿ ನೀಡಿರುವ ಸ್ವರ(ಧ್ವನಿ) ಶಾಸ್ತ್ರದ ಚಿಹ್ನೆಗಳನ್ನು ನಿಮ್ಮ ಮಗು ಗುರುತಿಸುವಂತಾಗಬೇಕು. ಮಕ್ಕಳ ಮನಸ್ಸಿಗೆ ಇಷ್ಟವಾಗುವಂತಹ ಫೋನೆಟಿಕ್ಸ್ ಗೇಮ್‌ಗಳು ಈಗ ಆನ್‌ಲೈನ್‌ನಲ್ಲೂ ಲಭ್ಯವಿವೆ. ಅದನ್ನು ಆಡುತ್ತಲೇ ಕಲಿತರೆ ಮಕ್ಕಳಿಗೆ ಕಲಿಕೆಯ ಜೊತೆಗೆ ಖುಷಿಯೂ ಸಿಗುತ್ತದೆ.

ಯಾವುದೇ ಭಾಷೆಯಿರಲಿ, ವ್ಯಾಕರಣ ತುಂಬಾ ಮುಖ್ಯ ಎನ್ನಿಸಿಕೊಳ್ಳುತ್ತದೆ. ಕ್ರಿಯಾಪದ, ನಾಮಪದ, ಗುಣವಾಚಕಗಳು, ಉಪಸರ್ಗಗಳೆಲ್ಲವೂ ಇದರಲ್ಲಿ ಒಳಗೊಂಡಿರುತ್ತವೆ. ವಾಕ್ಯ ರಚನೆಯಲ್ಲಿ ಇವುಗಳ ಪಾತ್ರ ಮಹತ್ವದ್ದು. ಶಬ್ದಕೋಶದಲ್ಲಿ ಯಾವುದು ಕ್ರಿಯಾಪದ, ಯಾವುದು ನಾಮಪದ, ಯಾವುದು ಕ್ರಿಯಾವಿಶೇಷಣ ಎಂಬುದೆಲ್ಲವನ್ನೂ ಕೊನೆಯ ಪುಟಗಳಲ್ಲಿ ತಿಳಿಸಿರುತ್ತಾರೆ.ಇದರಿಂದ ಮಕ್ಕಳಿಗೆ ಹೊಸ ವಾಕ್ಯ ರಚನೆ ಹಾಗೂ ಸ್ವಷ್ಟವಾಗಿ ಆಂಗ್ಲಭಾಷೆಯಲ್ಲಿ ಮಾತನಾಡಲು ಸುಲಭವಾಗುತ್ತದೆ ಜೊತೆಗೆ ಆತ್ಮವಿಶ್ವಾಸ ಮೂಡುತ್ತದೆ.

ಪ್ರತ್ಯಯಗಳು

ಪ್ರತ್ಯಯಗಳೊಂದಿಗೆ ಕೆಲಸ ಮಾಡುವುದು ಒಂಥರಾ ತಮಾಷೆ ಇದ್ದಂತೆ. ಇದರಲ್ಲಿ ಪೂರ್ವ ಪ್ರತ್ಯಯ ಹಾಗೂ ಅಂತ್ಯ ಪ್ರತ್ಯಯ ಎಂಬ ಎರಡು ಅಂಶಗಳಿರುತ್ತವೆ. ಮೂಲ ಪದಕ್ಕೆ ಪೂರ್ವ ಪ್ರತ್ಯಯ ಹಾಗೂ ಅಂತ್ಯ ಪ್ರತ್ಯಯಗಳನ್ನು ಸೇರಿಸಿದಾಗ ಆ ಪದಕ್ಕೆ ಹೊಸ ಹೊಸ ಅರ್ಥ ಸಿಗುತ್ತದೆ. ಇದು ನಿಮ್ಮ ಮಗುವಿಗೆ ಹೊಸಹೊಸ ಶಬ್ದಗಳನ್ನು, ಅರ್ಥವನ್ನು ತಿಳಿಯಲು ಸಹಾಯವಾಗುತ್ತದೆ.

ಕಾಗುಣಿತ

ಚಿಕ್ಕವರಿರಲಿ ದೊಡ್ಡವರಿರಲಿ ಹೆಚ್ಚು ಸಮಸ್ಯೆ ಕೊಡುವುದು ಕಾಗುಣಿತ. ಸ್ವಯಂಚಾಲಿತ ಕಾಗುಣಿತ ಪರೀಕ್ಷಕಗಳು ನಮ್ಮಲ್ಲಿ ಅನೇಕರನ್ನು ಸೋಮಾರಿಗಳನ್ನಾಗಿಸಿದೆ. ಆದರೆ ಬಾಲ್ಯದಲ್ಲಿ ಮಕ್ಕಳಿಗೆ ನಿಘಂಟು ಓದಲು ಅಭ್ಯಾಸ ಮಾಡಿಸಿದರೆ ಕಾಗುಣಿತದಲ್ಲಿ ಮಾಡುವ ದೋಷವನ್ನು ಆದಷ್ಟು ಸರಿಪಡಿಸಬಹುದು. ಅವರಿಗೆ ಉಕ್ತಲೇಖನಗಳನ್ನು(ಡಿಕ್ಟೇಷನ್) ನೀಡುವ ಮೂಲಕ ಅವರಿಂದ ಸರಿಯಾದ ಶಬ್ದವನ್ನು ಬರೆಸಬಹುದು. ಜೊತೆಗೆ ಕಾಗುಣಿತ ದೋಷವನ್ನು ಸರಿಪಡಿಸಬಹುದು.

ಗುಣ ನಿರ್ದೇಶಕಗಳು

ನಿರ್ದೇಶಕ ಹಾಗೂ ಗುಣ ನಿರ್ದೇಶಕಗಳು ನಿಮ್ಮ ಮಗುವಿನ ಮೆದುಳಿನ ಮೂಲೆಯಲ್ಲಿ ಸ್ಥಿರವಾಗಿ ಕುಳಿತಿರಬೇಕು. ನಿಮ್ಮ ಮುದ್ದು ಮಗುವಿಗೆ ಪ್ರತಿ ಶಬ್ದದ ಅರ್ಥವು ಥಟ್ಟನೆ ತಲೆಯಲ್ಲಿ ಹೊಳೆಯುವಂತಿರಬೇಕು. ಇದರಿಂದ ಮುಂದಿನ ಶಬ್ದದ ಅರ್ಥವನ್ನು ಮಗು ಓದಿದ ಕೂಡಲೇ ಗ್ರಹಿಸುತ್ತದೆ. ಚಿತ್ರ ಸಹಿತ ಶಬ್ದಕೋಶಗಳು ಮಕ್ಕಳಿಗೆ ಈ ಕಾರಣಕ್ಕೂ ನೆರವಾಗುತ್ತವೆ.

ವಿರುದ್ಧ ಪದಗಳು

ಎಲ್ಲಾ ಉತ್ತಮ ಗುಣಮಟ್ಟದ ಶಬ್ದಕೋಶಗಳ ಕೊನೆಯಲ್ಲಿ ವಿರುದ್ಧ ಪದಗಳನ್ನು ನೀಡಿರುತ್ತಾರೆ. ಇದು ನಿಮ್ಮ ಮಗುವಿಗೆ ಶಬ್ದದ ಅರ್ಥವನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮ ಮಗುವಿನಲ್ಲಿ ಪದಪಟ್ಟಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಶಬ್ದಕೋಶದ ಪ್ರತಿಪುಟದ ಮೇಲುಗಡೆ ಎಡ ಹಾಗೂ ಬಲ ಮೂಲೆಗಳಲ್ಲಿ ಎರಡು ಶಬ್ದಗಳನ್ನು ನೀಡಿರುತ್ತಾರೆ. ಆ ಶಬ್ದಗಳು ಆ ಪುಟದಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ನಿಮ್ಮ ಮಗುವಿನೊಂದಿಗೆ ಪದ ಪರಿಶೋಧನೆಯ ಆಟಗಳನ್ನು ಆಡಿ. ಮಗುವಿಗೆ ಒಂದು ಪದವನ್ನು ಹೇಳಿ ಒಂದಷ್ಟು ಸಮಯ ನೀಡಿ, ನಿಮ್ಮ ಮಗು ಎಷ್ಟು ನಿಮಿಷದ ಒಳಗೆ ಆ ಪದವನ್ನು ಕಂಡುಹಿಡಿಯುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಶಬ್ದಕೋಶದ ಆಟಗಳು ಅನೇಕವಿವೆ ಮತ್ತು ಅವು ಸುಲಭವಾಗಿ ಸಿಗುತ್ತವೆ ಕೂಡ. ಫಿಕ್ಷನರಿ, ಸ್ಕ್ರಾಬಲ್, ವರ್ಡ್ ಕ್ವೆಸ್ಟ್. ಗೆಸ್ ಮೈ ನೇಮ್, ಕ್ರಾಸ್ ವರ್ಡ್ಸ್ (ಇದು ಎಲ್ಲ ವಯಸ್ಸಿನವರಿಗೂ), ವರ್ಡ್ ಸರ್ಚ್ ಅವುಗಳಲ್ಲಿ ಕೆಲವು. ಶಬ್ದಕೋಶವನ್ನು ಚೆನ್ನಾಗಿ ಗಮನಿಸಿದರೆ ಇದು ಒಂದು ನಿಧಿಯಿದ್ದಂತೆ. ಇದರಲ್ಲಿ ನಿಮಗೆ ಸಿಗದೇ ಇರುವುದು ಯಾವುದೂ ಇಲ್ಲ. ಶಿಸ್ತಿನಿಂದ ಶಬ್ದಕೋಶ ಓದುವುದನ್ನು ಅಭ್ಯಾಸ ಮಾಡಿದರೆ ನಿಮ್ಮ ಮಗು ಕಲಿಕೆಯಲ್ಲಿ ಬಹಳಷ್ಟು ಸಾಧಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.