ADVERTISEMENT

ಗುಜರಾತಿನ ಡೈನೊಸಾರ್ ವಸ್ತುಸಂಗ್ರಹಾಲಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 19:30 IST
Last Updated 22 ಫೆಬ್ರುವರಿ 2020, 19:30 IST
ಡೈನೊಸಾರ್
ಡೈನೊಸಾರ್   

ಭಾರತದ ಏಕೈಕ ಡೈನೊಸಾರ್ ಪಾರ್ಕ್‌ ಇರುವುದು ಗುಜರಾತ್ ರಾಜ್ಯದ ರಾಜಧಾನಿ ಗಾಂಧಿನಗರದಲ್ಲಿ. ಈ ಪಾರ್ಕ್‌ನ ಹೆಸರು ‘ಇಂಡ್ರೋಡ ಡೈನೊಸಾರ್ ಮತ್ತು ಪಳೆಯುಳಿಕೆ ಪಾರ್ಕ್‌’.

ಶ್ರೀಮಂತ ಸಂಸ್ಕೃತಿ, ಕಲೆ, ಯಾತ್ರಾ ಸ್ಥಳಗಳು ಹಾಗೂ ಬಾಯಿಯಲ್ಲಿ ನೀರೂರಿಸುವ ಖಾದ್ಯಗಳಿಗೆ ಗುಜರಾತ್ ಹಿಂದಿನಿಂದಲೂ ಹೆಸರು ಪಡೆದಿದೆ. ಆದರೆ, ಈ ರಾಜ್ಯವು ಡೈನೊಸಾರ್‌ಗಳ ಪಳೆಯುಳಿಕೆಗಳನ್ನೂ ಹೊಂದಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಈಗ ಈ ಪಾರ್ಕ್‌ ಇರುವ ಸ್ಥಳ ಹಾಗೂ ಇದರ ಸುತ್ತಮುತ್ತಲಿನ ಪ್ರದೇಶಗಳು ಹಿಂದೆ ಡೈನೊಸಾರ್‌ಗಳ ಆವಾಸಸ್ಥಾನ ಆಗಿತ್ತು ಎನ್ನುವುದು ವಿಜ್ಞಾನಿಗಳ ನಂಬಿಕೆ.

ಬಾಲಾಸಿನೋರ್‌ನ ರಾಯೊಲಿ ಎಂಬ ಹಳ್ಳಿಯು ಗಾಂಧಿನಗರದಿಂದ ಅಂದಾಜು 100 ಕಿ.ಮೀ. ದೂರದಲ್ಲಿ ಇದೆ. ಇಲ್ಲಿ ಡೈನೊಸಾರ್‌ಗಳ ಮೂಳೆಗಳು ಹಾಗೂ ಮೊಟ್ಟೆಗಳ ಪಳೆಯುಳಿಕೆಗಳು ಇರುವುದನ್ನು ವಿಜ್ಞಾನಿಗಳು 1980ರ ದಶಕದಲ್ಲಿ ಪತ್ತೆ ಮಾಡಿದರು. ಅಲ್ಲಿ 13ಕ್ಕೂ ಹೆಚ್ಚಿನ ವಿಧದ ಡೈನೊಸಾರ್‌ಗಳು ಸರಿಸುಮಾರು ಆರೂವರೆ ಕೋಟಿಗೂ ಹೆಚ್ಚು ವರ್ಷಗಳ ಹಿಂದೆ ಬದುಕಿದ್ದವು ಎಂಬುದನ್ನು ಅಧ್ಯಯನಗಳು ಹೇಳಿವೆ.

ADVERTISEMENT

ಇತಿಹಾಸಪೂರ್ವ ಕಾಲಘಟ್ಟದ ಈ ಕೌತುಕಮಯ ಜಗತ್ತಿನ ಬಗ್ಗೆ ಇನ್ನಷ್ಟು ಹೆಚ್ಚು ತಿಳಿದುಕೊಳ್ಳಲು ಆಸಕ್ತಿ ಇರುವವರು ಬಾಲಾಸಿನೋರ್‌ನಲ್ಲಿ ಹೊಸದಾಗಿ ಆರಂಭವಾಗಿರುವ ಡೈನೊಸಾರ್‌ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಲೇಬೇಕು. ಇದು ಭಾರತದಲ್ಲಿ ಡೈನೊಸಾರ್‌ಗಳಿಗೆ ಸಂಬಂಧಿಸಿದ ಮೊದಲ ವಸ್ತುಸಂಗ್ರಹಾಲಯ. ಈ ವಸ್ತುಸಂಗ್ರಹಾಲಯವು 25 ಸಾವಿರ ಚದರ ಅಡಿಗಳಿಗಿಂತ ಹೆಚ್ಚಿನ ವಿಸ್ತೀರ್ಣದ ಜಾಗದಲ್ಲಿ ಇದೆ. ಇಲ್ಲಿ 10 ಗ್ಯಾಲರಿಗಳು ಇವೆ.

ಈ ವಸ್ತುಸಂಗ್ರಹಾಲಯದಲ್ಲಿ ಡೈನೊಸಾರ್‌ಗಳ 40 ಪ್ರತಿಕೃತಿಗಳು ಇವೆ. ಇವು ಡೈನೊಸಾರ್‌ಗಳ ಗಾತ್ರ, ಆಕಾರ, ಅವುಗಳ ಜೀವನಕ್ರಮ, ವಾಸಸ್ಥಳ ಕುರಿತು ಅರಿತುಕೊಳ್ಳಲು ಸಹಾಯ ಮಾಡುತ್ತವೆ. ಸಾರೊಪಾಡ್‌ ಎನ್ನುವ ಸಸ್ಯಾಹಾರಿ ಡೈನೊಸಾರ್‌ಗಳ ಮೊಟ್ಟೆಗಳನ್ನು ತಿಂದು ಬದುಕುತ್ತಿದ್ದ ಮೂರೂವರೆ ಮೀಟರ್ ಉದ್ದದ ಹಾವಿನ ಪಳೆಯುಳಿಕೆಯು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು.

ಇದು ಅತ್ಯಾಧುನಿಕ ವಸ್ತುಸಂಗ್ರಹಾಲಯ ಕೂಡ ಹೌದು. ಇಲ್ಲಿ ‘ಕಾಲಯಂತ್ರ’ವೂ ಇದೆ. 5–ಡಿ ಥಿಯೇಟರ್ ಇದೆ. ಮಕ್ಕಳಿಗಾಗಿ ಡೈನೊಸಾರಸ್‌ ಸಂಬಂಧಿತ ಮನರಂಜನಾ ತಾಣ ಕೂಡ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.