ಪರೀಕ್ಷೆ
ನಮಗೆ ಇಬ್ಬರು ಮಕ್ಕಳು. ಮಗಳು ಎಂಜಿನಿಯರಿಂಗ್ ಓದುತ್ತಿದ್ದಾಳೆ. ಮಗ ದೊಡ್ಡವನು, ಎಂಜಿನಿಯರಿಂಗ್ ಮಾಡಿ, ಎರಡು ವರ್ಷಗಳಿಂದ ಉದ್ಯೋಗದಲ್ಲಿದ್ದಾನೆ. ಆರಂಭದಿಂದಲೂ ಮಗನದ್ದು ಸಂಕೋಚಪ್ರವೃತ್ತಿ, ಹಿಂಜರಿಕೆಯ ಸ್ವಭಾವ. ಆದರೆ ಓದಿನಲ್ಲಿ ಜಾಣ. ಉದ್ಯೋಗದಾತರಿಂದಲೂ ಉತ್ತಮ ಕೆಲಸಗಾರ ಅನ್ನಿಸಿಕೊಂಡಿದ್ದಾನೆ. ಆದರೆ, ಮೂರು ತಿಂಗಳಿಂದ ‘ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಜೀವನದಲ್ಲಿ ಆಸಕ್ತಿ ಇಲ್ಲ. ನಾನು ಸತ್ತರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ’ ಎಂದು ಮೆಸೇಜು ಹಾಕುತ್ತಾನೆ. ಅಪರಿಚಿತ ಊರಿಗೆ ಹೋಗಿ ಇಂಥ ಮೆಸೇಜು ಕಳಿಸಿ, ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾನೆ. ಇದಕ್ಕೆ ಕಾರಣವೇನು?
ಉತ್ತರ: ಮಗನಿಗೆ ಬಹುಶಃ ಇಪ್ಪತ್ತೈದರಿಂದ ಇಪ್ಪತ್ತಾರು ವರ್ಷವಿರಬಹುದು. ನೀವು ಕೊಟ್ಟಿದ್ದು ಅಪೂರ್ಣ ವಿವರಗಳು ಇರಲಿ. ಮೊದಲಿಗೆ ಗಾಬರಿಯಾಗುವುದನ್ನು ಬಿಡಿ. ಹಾಗೆಂದು ಲಘುವಾಗಿ ಪರಿಗಣಿಸಬೇಡಿ. ಅವನು ತೀವ್ರ ತೊಳಲಾಟದಲ್ಲಿರುವಂತೆ ಕಾಣುತ್ತದೆ. ಅವನ ಜೀವನಾನುಭವದಲ್ಲಿ, ಅವನ ಸಮಸ್ಯೆಗೆ ಪರಿಹಾರ ಕಾಣುತ್ತಿಲ್ಲ. ಅದಕ್ಕೇ ಅವನು ಹಾಗೆ ಮೆಸೇಜು ಕಳಿಸುತ್ತಾನೆ. ನಿಮ್ಮಿಂದ ಪರಿಹಾರವನ್ನು ನಿರೀಕ್ಷಿಸುತ್ತಿದ್ದಾನೆ. ಅವನ ಮನಸ್ಸಿನೊಳಗಿನ ಆತಂಕ, ಭಯ ನಿಮ್ಮ ಗಮನಕ್ಕೆ ಬಂದಿಲ್ಲದೇ ಇರಬಹುದು.
ಮಗನಿಗೆ ಭಯವಿದೆ. ಮೊದಲಿನಿಂದಲೂ ಓದಾಳಿಯಾಗಿಯೂ, ಸಂಕೋಚದ ಸ್ವಭಾವದವ ನಾಗಿಯೂ, ಸಾಕಷ್ಟು ಅಂತರ್ಮುಖಿಯಾಗಿಯೂ ಇರುವ ಸಾಧ್ಯತೆ ಇದೆ. ತೀರ ಆರ್ಥಿಕವಾಗಿ ಕಷ್ಟವಿದ್ದು, ಅವಮಾನಗಳನ್ನು ನುಂಗಿಕೊಂಡು, ಬೆಳೆದಿರುವ ಹಿನ್ನೆಲೆ ಇದ್ದಾಗ, ವ್ಯಕ್ತಿತ್ವದಲ್ಲಿ ‘ಸ್ಪ್ಲಿಟ್’ (ಮಾನಸಿಕವಾಗಿ ಒಡಕು | ದ್ವಿತ್) ಉಂಟಾಗಿರುವ ಸಾಧ್ಯತೆ ಇರುತ್ತದೆ. ಆಘಾತದ ಪರಿಣಾಮ ಅವನ ಸುಪ್ತಮನಸ್ಸಿನಲ್ಲಿ ತೀವ್ರ ಪರಿಣಾಮವನ್ನುಂಟು ಮಾಡಿರಬಹುದು. ಅವನಿಗೆ ಆಪ್ತರಾದ ಗೆಳೆಯರು ಇರುವ ಸಾಧ್ಯತೆಯೂ ಕಡಿಮೆ. ಇದ್ದ ಗೆಳೆಯರೂ ಬೇರೆಲ್ಲೋ ಹೋಗಿರಬಹುದು. ಅಥವಾ, ಅವರು ಯಶಸ್ಸಿನ ಹಾದಿಯಲ್ಲಿ ಇವನಿಗಿಂತ ಮುಂದಿರಬಹುದು. ಇವನೊಳಗಿನ ಕೀಳರಿಮೆ ಹೆಚ್ಚಿ, ಚುಚ್ಚುತ್ತಿರಬಹುದು. ಹೀಗೆ ನೂರೆಂಟು ಕಾರಣಗಳನ್ನು ಪಟ್ಟಿ ಮಾಡಬಹುದು.
ಮಗನಿಗೆ ಯಾವುದನ್ನೋ ಕಳೆದುಕೊಂಡ ಆತಂಕವಿರಬಹುದು. ಅದನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬಹುದಾದ ಸಣ್ಣ ಆಸೆಯೂ ಇದೆ. ಪರೋಕ್ಷವಾಗಿ, ಪಾಲಕರಾದ ಸಹಾಯವನ್ನೂ ನಿರೀಕ್ಷಿಸುತ್ತಿರಬಹುದು. ಅವನಿಗೆ ಒಳ್ಳೆಯ ಕೆಲಸವಿದೆ. ಒಳ್ಳೆಯ ಸಂಬಳ ಇದೆ. ಆಫೀಸಿನಲ್ಲಿ ಗೌರವವಿದೆ. ಇಷ್ಟಾಗಿದ್ದಾಗ್ಯೂ ಅವನಿಗೆ ಆತ್ಮಹತ್ಯೆಯ ಆಲೋಚನೆ ಬರುತ್ತಿದೆ ಎಂದ ಮೇಲೆ, ಅವನಿಗೆ ಬಹುಶಃ ಪ್ರೀತಿಯ ವಿಷಯದಲ್ಲಿ ಏರುಪೇರಾಗಿರುವ ಸಾಧ್ಯತೆ ಹೆಚ್ಚಿದೆ. ಅವಳು ಅವನನ್ನು ತಿರಸ್ಕರಿಸಿರಬಹುದು. ಅವಳ ತಿರಸ್ಕಾರವನ್ನು ಜೀರ್ಣಿಸಿಕೊಳ್ಳಲಿಕ್ಕಾಗದೇ ಅವನು ನರಳುತ್ತಿರಬಹುದು. ಅವಳನ್ನು ಪಡೆದುಕೊಳ್ಳುವುದಕ್ಕೆ ಪಾಲಕರ ಸಹಾಯದ ನಿರೀಕ್ಷೆಯಲ್ಲಿರಬಹುದು. ಈ ದಿಸೆಯಲ್ಲಿಯೂ ನೀವು ಅವನ ಹತ್ತಿರ ಆತ್ಮೀಯವಾಗಿ ಮಾತನಾಡುವುದು ಒಳ್ಳೆಯದು.
ಇಷ್ಟಕ್ಕೂ ಅವನಲ್ಲಿ ಧನಾತ್ಮಕ ಬದಲಾವಣೆಗಳು ಕಾಣದಿದ್ದರೆ, ಸೂಕ್ತ ಮನೋವೈದ್ಯರನ್ನು ಸಂಪರ್ಕಿಸಿ. ‘ತೋಳ ಬಂತು ತೋಳ’ ಎನ್ನುವ ಕತೆಯ ಹಾಗೆ ಜೀವನದಲ್ಲಿ, ಆಗಬಾರದು. ಅಷ್ಟು ಎಚ್ಚರಿಕೆ ಎರಡೂ ಕಡೆಗಳಿಂದ ಇದ್ದರೆ ಒಳ್ಳೆಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.