ADVERTISEMENT

ಸ್ಪರ್ಧಾವಾಣಿ: ಅತಿಯಾದ ಅಂತರ್ಜಲ ಬಳಕೆ; 31.5 ಇಂಚು ಓರೆಯಾದ ಭೂಮಿ!

ಚನ್ನಬಸಪ್ಪ ರೊಟ್ಟಿ
Published 25 ಡಿಸೆಂಬರ್ 2024, 21:25 IST
Last Updated 25 ಡಿಸೆಂಬರ್ 2024, 21:25 IST
   

ಈಚೆಗೆ ಹವಾಮಾನ ಬದಲಾವಣೆ, ಜಾಗತಿಕ ಉಷ್ಣತೆಯ ಏರಿಕೆ ಹಾಗೂ ನಿಸರ್ಗದಲ್ಲಿ ಅತಿಯಾದ ಮಾನವ ಹಸ್ತಕ್ಷೇಪಗಳಿಂದಾಗಿ ಭೂಸಂರಚನೆ, ಭೌಗೋಳಿಕ ವಿದ್ಯಮಾನಗಳಲ್ಲೂ ಕೂಡ ಗಮನಾರ್ಹ ಬದಲಾವಣೆ ಕಂಡುಬರುತ್ತಿವೆ. ಈ ಬದಲಾವಣೆಗಳು ಮುಂದೊಮ್ಮೆ ಮನುಕುಲಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಈಗಲೇ ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಇಂಥ ಕೆಲ ಮಹತ್ವದ ಭೂವಿದ್ಯಮಾನಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

‘ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್‌’ ಸಂಸ್ಥೆಯ ಇತ್ತೀಚಿನ ಅಧ್ಯಯನ ಅತಿಯಾದ ಅಂತರ್ಜಲ ಹೊರತೆಗೆಯುವಿಕೆಯಿಂದಾಗಿ ಭೂಮಿಯ ತಿರುಗುವ ಧ್ರುವದಲ್ಲಿ ಪ್ರಮುಖ ಬದಲಾವಣೆಯಾಗಿದ್ದು, ಭೂಮಿ 31.5 ಇಂಚು ಓರೆಯಾಗಿದೆ ಎಂಬುದನ್ನು ಬಹಿರಂಗಪಡಿಸಿದೆ. ಕಿ–ವೀನ್ ಸಿಯೊ ಮತ್ತು ಅವರ ತಂಡದಿಂದ ನಡೆದ ಸಂಶೋಧನೆ 1993 ರಿಂದ 2010 ರವರೆಗಿನ ದತ್ತಾಂಶಗಳನ್ನು ಪರಿಶೀಲಿಸಿ ಈ ನಿರ್ಣಯಕ್ಕೆ ಬಂದಿದೆ. ಅತಿಯಾದ ಅಂತರ್ಜಲ ಹೊರತೆಗೆಯುವಿಕೆಯಿಂದಾಗಿ ಭೂಮಿಯ ಧ್ರುವವು ಸರಿಸುಮಾರು 80 ಸೆಂಟಿಮೀಟರ್‌ (31.5 ಇಂಚು) ಪೂರ್ವಕ್ಕೆ ಸ್ಥಳಾಂತರಗೊಂಡಿದೆ ಎಂದು ಈ ಅಧ್ಯಯನ ವರದಿ ಸೂಚಿಸಿದೆ.

ಭೂಮಿಯ ಅಂತರಾಳದಿಂದ ಸುಮಾರು 2,150 ಗಿಗಾಟನ್‌ಗಳಷ್ಟು ಅಂತರ್ಜಲವನ್ನು ಹೊರತೆಗೆದಿರುವುದರಿಂದ ಈ ರೀತಿ ವಿದ್ಯಮಾನ ನಡೆದಿದೆ ಎಂದು ತಜ್ಞರು ತಿಳಿಸಿದ್ದಾರೆ. ಅಂತರ್ಜಲಮಟ್ಟ ಕುಸಿತ ಸಮುದ್ರ ಮಟ್ಟದಲ್ಲಿ ಸುಮಾರು 0.24 ಇಂಚುಗಳಷ್ಟು ಏರಿಕೆಗೆ ಕಾರಣವಾಗಿದೆ. ಅಂತರ್ಜಲವನ್ನು ಹೊರತೆಗೆದು ಸಾಗರಗಳಿಗೆ ಹರಿಸುವುದರಿಂದ ಭೂಮಿಯ ದ್ರವ್ಯರಾಶಿ ಪುನರ್‌ರಚನೆಯಾಗಿದೆ. ದ್ರವ್ಯರಾಶಿ ಬದಲಾವಣೆ ಭೂಮಿಯ ಸಮತೋಲನವನ್ನು ಬದಲಾಯಿಸಿದ್ದು, ಧ್ರುವೀಯ ಚಲನೆಯ ಮೇಲೆ ಪ್ರಭಾವ ಬೀರಿದೆ ಎಂದು ಅಧ್ಯಯನ ತಿಳಿಸಿದೆ.

ADVERTISEMENT

ವಿಶೇಷವಾಗಿ ಪಶ್ಚಿಮ ಉತ್ತರ ಅಮೆರಿಕಾ ಮತ್ತು ವಾಯುವ್ಯ ಭಾರತದಲ್ಲಿ ಭೂಮಿಯ ಅಂತರ್ಜಲದ ಬಳಕೆಯ ಪ್ರಮಾಣ ಮಿತಿಮೀರಿದೆ ಎಂದು ಅಧ್ಯಯನವು ಎಚ್ಚರಿಸಿದೆ. ಅಂತರ್ಜಲ ಕುಸಿತವು ದೀರ್ಘಾವಧಿಯ ಹವಾಮಾನ ಸ್ಥಿರತೆಗೂ ಅಪಾಯವನ್ನು ಉಂಟುಮಾಡುತ್ತದೆ. ಸಾವಿರಾರು ವರ್ಷಗಳಿಂದ, ಭೂಮಿಯ ಅಕ್ಷದಲ್ಲಿನ ಬದಲಾವಣೆಗಳು ಜಾಗತಿಕ ಹವಾಮಾನ ವ್ಯವಸ್ಥೆಗಳ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರಲಿವೆ.

30 ವರ್ಷಗಳಲ್ಲಿ ಒಣಗಿದ ಶೇ 77ರಷ್ಟು ಭೂಭಾಗ!

ಕಳೆದ ಮೂರು ದಶಕಗಳಲ್ಲಿ ಭೂಮಿಯ ಶೇಕಡ 77ರಷ್ಟು ಭೂಮಿ ತೇವಾಂಶವನ್ನು ಕಳೆದುಕೊಂಡು ಒಣಗಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಇದರಿಂದ ಕೃಷಿ, ಜಲಸಂಪನ್ಮೂಲ ಮತ್ತು ವನ್ಯಜೀವಿಗಳಿಗೆ ಗಂಭೀರ ಅಪಾಯ ಉಂಟಾಗಿದೆ ಮತ್ತು ಈ ಸವಾಲುಗಳನ್ನು ಎದುರಿಸಲು ತುರ್ತು ಕ್ರಮ ಹಾಗೂ ಸುಸ್ಥಿರ ಭೂ ಬಳಕೆಯ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ಭೂಶುಷ್ಕತೆಯಿಂದ ಆಫ್ರಿಕಾ ಮತ್ತು ಏಷ್ಯಾದ ಮೇಲೆ ಹೆಚ್ಚಿನ ಆರ್ಥಿಕ ಪರಿಣಾಮಗಳು ಉಂಟಾಗಿವೆ ಎಂಬುದನ್ನು ವರದಿ ಗುರುತಿಸಿದೆ.
ಆಫ್ರಿಕಾ ಖಂಡ 1990 ಮತ್ತು 2015 ರ ನಡುವೆ ಭೂಶುಷ್ಕ ಮತ್ತು ಬರಗಾಲಗಳಿಂದ ತನ್ನ GDP ಯ ಸರಿಸುಮಾರು 12 ಪ್ರತಿಶತವನ್ನು ಕಳೆದುಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ಶೇ 16 ಪ್ರತಿಶತ GDP ನಷ್ಟ ಅನುಭವಿಸಲಿದೆ. ಏಷ್ಯಾ ಖಂಡ ಕೂಡ ಇದೇ ರೀತಿಯ ಪರಿಸ್ಥಿತಿಗಳಿಂದಾಗಿ ಸುಮಾರು 7 ಪ್ರತಿಶತದಷ್ಟು GDP ನಷ್ಟ ಅನುಭವಿಸಲಿದೆ ಎಂದು ವರದಿ ಹೇಳಿದೆ.

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮೆಕ್ಕೆಜೋಳ ಹಾಗೂ ಜೋಳದ ಉತ್ಪಾದನೆ 2050 ರ ವೇಳೆಗೆ ಶೇ 50 ರಷ್ಟು ಕುಸಿಯಲಿದೆ ಎಂಬ ಆತಂಕವನ್ನು ವರದಿ ವ್ಯಕ್ತಪಡಿಸಿದೆ. ಇದರಿಂದ ಆಹಾರ ಭದ್ರತೆಯೂ ಡೋಲಾಯಮಾನವಾಗಲಿದೆ. ಒಣಭೂಮಿಗಳಲ್ಲಿ ನೀರಿನ ಲಭ್ಯತೆಯು ಸೀಮಿತವಾಗಿರುತ್ತದೆ. 2050 ರ ವೇಳೆಗೆ ವಿಶ್ವದ ಮೂರನೇ ಎರಡರಷ್ಟು ಭೂಮಿಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಲಿದೆ ಎಂದು ವರದಿ ಭವಿಷ್ಯ ನುಡಿದಿದೆ.

ಈ ನಿಟ್ಟಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು, ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವುದು ಹಾಗೂ ಅಳಿವಿನಂಚು ತಲುಪಿರುವ ದುರ್ಬಲ ಪರಿಸರ ವ್ಯವಸ್ಥೆಗಳು ಮತ್ತು ಸಮುದಾಯಗಳನ್ನು ರಕ್ಷಿಸಲು ಪರಿಣಾಮಕಾರಿ ಕಾರ್ಯತಂತ್ರಗಳನ್ನು ಅಳವಡಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ.

2030ರ ಹೊತ್ತಿಗೆ ಆರ್ಕ್ಟಿಕ್‌ನ ಮಂಜುಗಡ್ಡೆ ಕರಗುವ ಸಾಧ್ಯತೆ

ಗೋಥೆನ್‌ಬರ್ಗ್ ವಿಶ್ವವಿದ್ಯಾಲಯ ಮತ್ತು ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ಆರ್ಕ್ಟಿಕ್ ಮಹಾಸಾಗರದಲ್ಲಿರುವ ಮಂಜುಗಡ್ಡೆ 2030 ರ ವೇಳೆಗೆ ಸಂಪೂರ್ಣ ಕರಗುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ಹಸಿರುಮನೆ ಅನಿಲಗಳ (GHGs) ಕಾರಣದಿಂದ ಈ ಬದಲಾವಣೆ ಉಂಟಾಗಲಿದ್ದು, ಇದರಿಂದ ಜಾಗತಿಕ ತಾಪಮಾನ ಹಾಗೂ ಸಮುದ್ರ ಮಟ್ಟದಲ್ಲಿ ಮತ್ತಷ್ಟು ಏರಿಕೆಯಾಗಲಿದೆ.

ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆ ಕಳೆದ 40 ವರ್ಷಗಳಲ್ಲಿ ಪ್ರತಿ ದಶಕಕ್ಕೆ ಸರಿಸುಮಾರು ಶೇ 12.6 ರಷ್ಟು ಕರಗುತ್ತಿದೆ. ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆಯ ಕರಗುವಿಕೆಯಿಂದ ಆರ್ಕ್ಟಿಕ್ ಪರಿಸರ ವ್ಯವಸ್ಥೆಗಗೂ ತೀವ್ರ ಅಪಾಯ ಉಂಟಾಗಲಿದ್ದು, ಹಿಮಕರಡಿಗಳು, ವಾಲ್ರಸ್‌ ಮತ್ತು ಸೀಲ್‌ಗಳಂಥ ಪ್ರಭೇದಗಳ ಅಸ್ತಿತ್ವಕ್ಕೆ ಕುತ್ತು ಬರಲಿದೆ.

(‘ಮಹತ್ವದ ಭೂ ವಿದ್ಯಮಾನಗಳು’ ಎಂಬ ಇಂಡಿಕೇಷನ್ ರೌಂಡ್‌ ಲೋಗೋದಲ್ಲಿ ಬಳಸಬಹುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.