ತರಗತಿಯ ಮಕ್ಕಳಿಗೆ ಈ ವಾರ ಒಂದಿಷ್ಟು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತವೆ ಎಂದು ಶಿಕ್ಷಕರು ಹೇಳಿದರು ಎಂತಾದರೆ ಅವರ ಮುಖ ಅರಳುತ್ತದೆ. ತರಗತಿ ಕೊಠಡಿಯ ನಾಲ್ಕು ಗೋಡೆಗಳ ನಡುವೆ ನಡೆಯುವ ಕಲಿಕೆ ಮಕ್ಕಳಿಗೆ ಹೆಚ್ಚು ಸಂತಸವನ್ನು ನೀಡಲಾರದು. ತಾವು ಕಲಿತ ಪಾಠಗಳನ್ನೇ ವಿಭಿನ್ನವಾಗಿ ಸ್ಪರ್ಧಾತ್ಮಕ ಚಟುವಟಿಕೆಗಳ ಮೂಲಕ ತೆರೆದಿಟ್ಟರೆ, ಮಕ್ಕಳಿಗೆ ಕಲಿಕೆಯೇ ಒಂದು ಹಬ್ಬವಾಗುತ್ತದೆ. ಆ ನಿಟ್ಟಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಈ ಶೈಕ್ಷಣಿಕ ವರ್ಷದ ಫೆಬ್ರವರಿಯಲ್ಲಿ 1 ರಿಂದ 5 ನೇ ತರಗತಿ ಮಕ್ಕಳಿಗೆ “ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ(Foundation literacy and Numeracy) ಚಟುವಟಿಕೆಗಳ ಬಲವರ್ಧನೆಗೆ “ಕಲಿಕಾ ಹಬ್ಬ ” ನಡೆಸುತ್ತಿದೆ.
ಹಿಂದಿನ ಶೈಕ್ಷಣಿಕ ವರ್ಷಗಳ ಹಬ್ಬ
ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದಡಿ, 2013-14ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳ `ಕಲಿಕೋತ್ಸವ' ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿತ್ತು.1 ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ, ಅವರ ಕಲಿಕೆ ಹಾಗೂ ಕಲಿಕೆಯ ಖಾತರಿಯನ್ನು ಹಬ್ಬೋಪಾದಿಯಲ್ಲಿ ಆಚರಿಸುವುದೇ `ಕಲಿಕೋತ್ಸವ'ದ ಉದ್ದೇಶವಾಗಿತ್ತು.
ಕೋವಿಡ್ ನಲ್ಲಿ ಬಹಳಷ್ಟು ಇಂತಹ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಕೋವಿಡ್ ನ ಕಲಿಕಾ ಕೊರತೆಯನ್ನು ಸರಿದೂಗಿಸಲು 2022–23ನೇ ಸಾಲಿನಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. “ಪ್ರಶ್ನೆಯು ಪ್ರಜ್ಞೆಯಾಗಲಿ” ಎಂಬ ಆಶಯದಿಂದ ನಡೆದ ಈ ಕಾರ್ಯಕ್ರಮದಲ್ಲಿ 4 ರಿಂದ 9 ನೇ ತರಗತಿ ಮಕ್ಕಳು ಭಾಗವಹಿಸಿದ್ದರು.
ಕಲಿಕಾ ಹಬ್ಬದಲ್ಲಿ ಏನೇನಿರುತ್ತೆ?...
ಗಟ್ಟಿ ಓದು,ಕಥೆ ಹೇಳುವುದು,ಕೈಬರಹ ಮತ್ತು ಕ್ಯಾಲಿಗ್ರಫಿ,ಸಂತೋಷದಾಯಕ ಗಣಿತ,ಟ್ರಷರ್ ಹಂಟ್ ಅಥವಾ ಮೆಮೊರಿ ಪರೀಕ್ಷೆ, ರಸಪ್ರಶ್ನೆ,ಸಣ್ಣ ಸಣ್ಣ ಕಥೆ ಕಟ್ಟುವುದು ಈ ಚಟುವಟಿಕೆಗಳು ವೈಯಕ್ತಿಕ ಸ್ಪರ್ಧೆಯಾಗಿ ಕ್ಲಸ್ಟರ್ ಹಂತದ ಶಾಲೆಗಳ ನಡುವೆ ನಡೆಯುತ್ತದೆ.ಪಠ್ಯ ಪುಸ್ತಕದ ಆಚೆಗೂ ಗ್ರಂಥಾಲಯ ಪುಸ್ತಕದ ಓದು,ಕನ್ನಡ-ಇಂಗ್ಲೀಷ್ ಹಾಗೂ ತನ್ನ ಮನೆಯ ಮಾತೃಭಾಷೆಯಲ್ಲೂ ವಿದ್ಯಾರ್ಥಿ ಕಥೆ ಹೇಳುವ ಅವಕಾಶ ಇರುವುದರಿಂದ ಮೌಖಿಕ ಅಭಿವ್ಯಕ್ತಿಯ ಕೌಶಲ ಒರೆಹಚ್ಚಬಹುದು.ಎಳವೆಯಲ್ಲೇ ರೂಢಿಸಿಕೊಂಡ ಚಂದದ ಕೈಬರವನ್ನು ಸ್ಪರ್ಧೆಗೆ ಒಡ್ಡುವ ಮೂಲಕ ಕೈಬರಹದ ಶೈಲಿ ಮತ್ತು ತಪ್ಪಿಲ್ಲದ ಬರಹದ ಪ್ರದರ್ಶನವೂ ಸಾಧ್ಯವಾಗುತ್ತದೆ.ಮೋಜಿನ ಗಣಿತದ ಆಟಗಳ ಮೂಲಕ ಕಬ್ಬಿಣದ ಕಡಲೆ ಎಂದು ಪೂರ್ವಾಗ್ರಹಕ್ಕೆ ಒಳಗಾದ ಗಣಿತ ಕಲಿಕೆಯನ್ನು ಸಂತಸದಾಯಕವಾಗಿಸಬಹುದು.ಕ್ರಿಯಾಶೀಲತೆ ಯನ್ನು ಗುರುತಿಸಲು ಟ್ರಷರ್ ಹಂಟ್ ಮತ್ತು ಮೆಮೊರಿ ಪರೀಕ್ಷೆ ಆಟಗಳಿವೆ.ಕೌಶಲ್ಯಾಧಾರಿತ ಸಂಗತಿಗಳನ್ನು ಒಳಗೊಂಡಂತಹ ತರಗತಿಯ ಕಲಿಕಾ ವಿಷಯಗಳನ್ನಾಧರಿಸಿದ ರಸಪ್ರಶ್ನೆಯು ಮಕ್ಕಳ ಜ್ಞಾನಕ್ಕೆ ಸಾಣೆ ಹಿಡಿಯುತ್ತದೆ.ಶಿಕ್ಷಕರು ಮತ್ತು ಮಕ್ಕಳ ಸಹಯೋಗದೊಂದಿಗೆ ಕಥೆಗಳನ್ನು ಬರೆಯುವುದು,ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಸೇರಿ ಸಣ್ಣ ಕಥೆಗಳನ್ನು ಕಟ್ಟುವುದು ಈ ಸ್ಪರ್ಧೆಯ ಮೂಲಕ ಪೋಷಕರು ಮತ್ತು ಮಕ್ಕಳ ಸಹಸಂಬಂಧ ಬಲಗೊಳ್ಳುತ್ತದೆ.
ಮಕ್ಕಳ ಉತ್ಸಾಹ: ಕಲಿಕಾ ಹಬ್ಬದ ಚಟುವಟಿಕೆಗಳು ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ನಡೆಯುತ್ತವೆ. ಸರ್ಕಾರಿ ಶಾಲೆಯ ಕಿರಿಯ ಪ್ರಾಥಮಿಕ ಹಂತದ ಮಕ್ಕಳ ಕಲಿಕೆಯ ಬಗ್ಗೆ ಸಮುದಾಯದ ಗಮನ ಸೆಳೆಯುವಲ್ಲಿ ಈ ಕಲಿಕಾ ಹಬ್ಬ ಸಹಕಾರಿಯಾಗಿದೆ. ಪ್ರತಿಭಾ ಕಾರಂಜಿಯಲ್ಲಿ ಸಾಂಸ್ಕೃತಿಕ ಆಯಾಮದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಮಕ್ಕಳಿಗೆ, ಕಲಿಕೆಯ ಸಾಫಲ್ಯತೆಯನ್ನು ಪ್ರದರ್ಶಿಸುವ ಸದವಕಾಶವಾಗಿ ಈ ಕಲಿಕಾ ಹಬ್ಬ ರೂಪುಗೊಂಡಿದೆ.ಕ್ಲಸ್ಟರ್ ಹಂತದ ಇತರ ಶಾಲೆಗಳಿಗಿಂತ ತನ್ನ ಶಾಲೆಯು ಕಲಿಕಾ ಮಟ್ಟದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿ ಸಾಗುತ್ತಿದೆಯೆಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಿಳಿಯಲು ಕೂಡ ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ.
“ವಿಫಲತೆಗಳ ಬಗ್ಗೆ ಚಿಂತಿಸದಿರು” ಎಂಬಂತೆ ಸೋಲು-ಗೆಲುವುಗಳ ಸಮಾನ ಸ್ವೀಕಾರದ ಮನೋಭಾವವನ್ನು ಎಳೆಯ ಮಕ್ಕಳಲ್ಲಿ ಬೆಳೆಸಲು ಇಂತಹ ಚಟುವಟಿಕೆಗಳು ಬೇಕು. ಸರ್ಕಾರಿ ಶಾಲೆಗಳ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ, ದಾಖಲಾತಿಯನ್ನು ಸುಧಾರಿಸುವ,ಸಮುದಾಯದ ಜತೆಗೆ ಬಾಂಧವ್ಯ ವೃದ್ಧಿಸುವ ಸೇತುವಾಗಿ ಈ ಕಾರ್ಯಕ್ರಮವನ್ನು ನಾವೆಲ್ಲರೂ ಯಶಸ್ವಿಗೊಳಿಸೋಣವೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.