ADVERTISEMENT

ಶಿಕ್ಷಣ | ಗಣಿತ ಕಬ್ಬಿಣದ ಕಡಲೆಯಲ್ಲ, ಈಗ ಹುರಿಗಡಲೆ!

ಎ.ಎಂ.ಸುರೇಶ
Published 21 ಡಿಸೆಂಬರ್ 2025, 23:30 IST
Last Updated 21 ಡಿಸೆಂಬರ್ 2025, 23:30 IST
   
ಗ್ರಾಮೀಣ ಪ್ರದೇಶದ ಬಹುತೇಕ ಮಕ್ಕಳಿಗೆ ಗಣಿತ ಕಬ್ಬಿಣದ ಕಡಲೆ. ಬೇರೆ ವಿಷಯಗಳ ಕಲಿಕೆಯಲ್ಲಿ ಉತ್ತಮವಾಗಿದ್ದರೂ ಗಣಿತದಲ್ಲಿ ಹಿಂದೆ ಇರುವುದನ್ನು ಮನಗಂಡು, ಇದಕ್ಕೆ ಪರಿಹಾರ ಕಂಡುಕೊಳ್ಳಲು ‘ಗಣಿತ ಗಣಕ’ ಎಂಬ ಯೋಜನೆ ಜಾರಿಗೊಳಿಸಲಾಗಿದೆ.

ರಾಜ್ಯದಲ್ಲಿನ ಮಕ್ಕಳಲ್ಲಿ ಗಣಿತ ಕಲಿಕೆಗೆ ಉತ್ತೇಜನ ನೀಡುವ ಮತ್ತು ಅವರಲ್ಲಿನ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ರೂಪಿಸಿರುವ ‘ಗಣಿತ ಗಣಕ’ ಯೋಜನೆಯಿಂದಾಗಿ ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ ಕಂಡುಬರುತ್ತಿದೆ.

3ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರದಂತಹ ವಿಷಯಗಳನ್ನು ಶಾಲಾ ಅವಧಿಯ ನಂತರ ಸಂಜೆ ಹೊತ್ತು ಪೋಷಕರ ಸಮ್ಮುಖದಲ್ಲಿ ಹೇಳಿಕೊಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. 

ಗಣಿತ ಗಣಕ ಯೋಜನೆಯಡಿ, ಸಂಜೆ 6ರ ನಂತರ 8 ಗಂಟೆಯ ಒಳಗೆ ಫೋನ್‌ ಮೂಲಕವೇ ಮಕ್ಕಳಿಗೆ ಗಣಿತದ ಕೌಶಲಗಳನ್ನು ಶಿಕ್ಷಕರು ತಿಳಿಸಿಕೊಡುತ್ತಾರೆ. ಒಬ್ಬ ಶಿಕ್ಷಕರಿಗೆ 18 ಮಕ್ಕಳ ಜವಾಬ್ದಾರಿಯನ್ನು ವಹಿಸಲಾಗಿದೆ. ಆ ಮಕ್ಕಳಿಗೆ ಕರೆ ಮಾಡಿ ಅನುಮಾನಗಳನ್ನು ಬಗೆಹರಿಸುವುದರ ಜೊತೆಗೆ, ಸರಳವಾಗಿ ಅರ್ಥವಾಗುವ ಹಾಗೆ ಕೌಶಲಗಳನ್ನು ಅವರು ತಿಳಿಸಿಕೊಡುತ್ತಾರೆ.

ADVERTISEMENT

ಆರಂಭದಲ್ಲಿ 17 ಜಿಲ್ಲೆಗಳ 93 ಮಹತ್ವಾಕಾಂಕ್ಷಿ ತಾಲ್ಲೂಕುಗಳ 14,711 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಸುಮಾರು 6.99 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದರು. ಆ ಮಕ್ಕಳು ಇನ್ನೂ ಹೆಚ್ಚಿನ ಕಾಳಜಿಯಿಂದ ಕಲಿಕೆಯಲ್ಲಿ ತೊಡಗಿಕೊಳ್ಳಲು ಈ ಯೋಜನೆ ಪ್ರೇರಣೆಯಾಗಿದೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.

ಸಕಾರಾತ್ಮಕ ಫಲಿತಾಂಶ ಬಂದಿರುವುದನ್ನು ಮನಗಂಡು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ರಾಜ್ಯದಲ್ಲಿನ 38,548 ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಸುಮಾರು 13.51 ಲಕ್ಷ ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಗಣಿತ ವಿಷಯದ ಬಗ್ಗೆ ಆಸಕ್ತಿ ಮೂಡಿಸುವ ಹಾಗೂ ಮೂಲ ಪರಿಕಲ್ಪನೆಗಳ ಕುರಿತು ತಿಳಿಸಿಕೊಡುವ ಕಾರ್ಯವನ್ನು ಫೋನ್‌ ಕರೆಗಳ ಮೂಲಕ (ರಿಮೋಟ್‌ ಟ್ಯೂಟರಿಂಗ್‌) ಶಿಕ್ಷಕರು ಮಾಡುತ್ತಿದ್ದಾರೆ. ಸಮಗ್ರ ಶಿಕ್ಷಣ ಕರ್ನಾಟಕ, ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜೆ–ಪಾಲ್‌, ಅಲೋಕಿಟ್‌ ಮತ್ತು ಯೂತ್‌ ಇಂಪ್ಯಾಕ್ಟ್‌ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಅಲೋಕಿಟ್‌ ಮತ್ತು ಯೂತ್‌ ಇಂಪ್ಯಾಕ್ಟ್‌ ಸ್ವಯಂ ಸೇವಾ ಸಂಸ್ಥೆಗಳಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಸುಧಾರಿಸಲು, ಮೇಲ್ವಿಚಾರಣೆ ಮಾಡಲು ಸರ್ಕಾರಕ್ಕೆ ಬೆಂಬಲವಾಗಿ ನಿಂತಿವೆ. ಈ ಕಾರ್ಯಕ್ರಮದ ವಿನ್ಯಾಸ , ಅನುಷ್ಠಾನಕ್ಕೆ ಅವು ಬೆಂಬಲವಾಗಿ ನಿಂತಿದ್ದು, ವಿದ್ಯಾರ್ಥಿಗಳಲ್ಲಿನ ಕಲಿಕಾ ಅಂತರ ಹೋಗಲಾಡಿಸಲು ನೆರವಾಗುತ್ತಿವೆ.

75,000 ಗಣಿತ ಶಿಕ್ಷಕರು ಭಾಗಿ

ಗಣಿತ ಗಣಕ ಕಾರ್ಯಕ್ರಮದ ಅನುಷ್ಠಾನದಲ್ಲಿ ಸುಮಾರು 75,000 ಗಣಿತ ಶಿಕ್ಷಕರು ಭಾಗಿಯಾಗಿದ್ದಾರೆ. ಅವರಿಗೆಲ್ಲ ಅಗತ್ಯ ತರಬೇತಿ ನೀಡಲಾಗಿದೆ. ಈ ಶಿಕ್ಷಕರು ನಿಗದಿಪಡಿಸಿದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಫೋನ್‌ ಕರೆ ಮಾಡಿ, ಗಣಿತದಲ್ಲಿನ ಕ್ಲಿಷ್ಟಕರ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗುತ್ತಾರೆ. ಈ ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ.

ವಿದ್ಯಾರ್ಥಿಗಳಿಗೆ ಕರೆ ಮಾಡಲು ತಗಲುವ ವೆಚ್ಚವನ್ನು ಸರ್ಕಾರವು ಶಿಕ್ಷಕರಿಗೆ ಮರುಪಾವತಿ ಮಾಡುತ್ತದೆ. ಪ್ರತಿಯೊಬ್ಬ ಶಿಕ್ಷಕರಿಗೆ ಸಹಾಯಧನವಾಗಿ ಒಟ್ಟಾರೆ ಅವಧಿಗೆ ₹ 800 ನಿಗದಿ ಮಾಡಲಾಗಿದೆ. ಇದಕ್ಕಾಗಿ ಸರ್ಕಾರ ಒಟ್ಟು ₹ 6 ಕೋಟಿ ಅನುದಾನ ನಿಗದಿಪಡಿಸಿದೆ. ಈ ಹಣವನ್ನು ಶಿಕ್ಷಕರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. 

ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಪ್ರೇರಿತರಾಗಿರುವ ಪೋಷಕರೇ ಈಗ ಜವಾಬ್ದಾರಿ ತೆಗೆದುಕೊಂಡು ಸಂಜೆ ಹೊತ್ತು ಮಕ್ಕಳಿಗೆ ಗಣಿತದ ಲೆಕ್ಕಗಳನ್ನು ಮಾಡಿಸುತ್ತಿದ್ದಾರೆ.
–ಕೆ.ವಿದ್ಯಾಕುಮಾರಿ, ರಾಜ್ಯ ಯೋಜನಾ ನಿರ್ದೇಶಕಿ, ಸಮಗ್ರ ಶಿಕ್ಷಣ ಕರ್ನಾಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.