ADVERTISEMENT

ಆರೋಗ್ಯವೋ–ಶಿಕ್ಷಣವೋ? ಪೋಷಕರಿಗೆ ಆಯ್ಕೆ ಗೊಂದಲ

ನ.17ರಿಂದ ಕಾಲೇಜು ಪುನರಾರಂಭ: ವಸತಿ ನಿಲಯ ನಿರ್ವಹಣೆಯೇ ಸವಾಲು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 1:56 IST
Last Updated 24 ಅಕ್ಟೋಬರ್ 2020, 1:56 IST
   

ಬೆಂಗಳೂರು: ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳನ್ನು ಪುನರಾರಂಭಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದು ವರ್ಷ ವ್ಯರ್ಥವಾದರೂ ಪರವಾಗಿಲ್ಲ, ಆರೋಗ್ಯ ಮುಖ್ಯ ಎಂದು ಭಾವಿಸಿರುವ ಹಲವು ಪೋಷ
ಕರು, ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಒಪ್ಪಿಗೆ ಇಲ್ಲ ಎಂದರೆ, ಸರ್ಕಾರ ಆಫ್‌ಲೈನ್‌–ಆನ್‌ಲೈನ್‌ ಎರಡೂ ಆಯ್ಕೆ ನೀಡಿರುವುದು ಉತ್ತಮ ನಿರ್ಧಾರ ಎಂದು ಇನ್ನೂ ಕೆಲವರು ಹೇಳುತ್ತಾರೆ. ‘ಕಾಲೇಜುಗಳನ್ನು ಪ್ರಾರಂಭಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಬಹಳಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ಕೇಳಲು ಸಾಧ್ಯವಾಗುತ್ತಿಲ್ಲ. ಕಾಲೇಜಿನ ಜೊತೆಗೆ, ಆದಷ್ಟು ಬೇಗ ಶಾಲೆಗಳನ್ನು ಪ್ರಾರಂಭಿಸಲೂ ಸರ್ಕಾರ ಮುಂದಾಗಬೇಕು’ ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಹೇಳುತ್ತಾರೆ.

ಕಾಲೇಜಿಗೆ ಹೋಗಿ ಸೋಂಕು ತಗುಲಿಸಿಕೊಳ್ಳುವುದಕ್ಕಿಂತ ಆನ್‌ಲೈನ್‌ನಲ್ಲಿ ಪಾಠ ಕೇಳುವುದೇ ಉತ್ತಮ ಎಂದು ಅನೇಕ ವಿದ್ಯಾರ್ಥಿಗಳು ಹೇಳಿದರೆ, ಪ್ರಾಯೋಗಿಕ ತರಗತಿಗಳನ್ನು ಆನ್‌ಲೈನ್‌ ಮೂಲಕ ಕಲಿಯಲು ಸಾಧ್ಯವಿಲ್ಲ.
ಮುಂದೆ ಕ್ಯಾಂಪಸ್‌ ಸಂದರ್ಶನದ ಸಮಯದಲ್ಲಿ ಸಮಸ್ಯೆಯಾಗುತ್ತದೆ. ಕಾಲೇಜಿಗೆ ಹೋಗಿ ಕಲಿಯುವುದೇ ಸೂಕ್ತ ಎಂದು ಇನ್ನೂ ಕೆಲವು ವಿದ್ಯಾರ್ಥಿಗಳು ಹೇಳುತ್ತಾರೆ.

‘ಕಾಲೇಜು ಪುನರಾರಂಭ ಮಾಡುವುದರಿಂದ ಅನುಕೂಲ–ಅನನುಕೂಲ ಎರಡೂ ಇವೆ. ಕಾಲೇಜಿನಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬಹುದು. ಆದರೆ, ಕಾಲೇಜು ಆವರಣದಲ್ಲಿನ ಕೆಫೆ–ಹೋಟೆಲ್‌, ಮೈದಾನದಲ್ಲಿಯೂ ವಿದ್ಯಾರ್ಥಿಗಳ ಮೇಲೆ ನಿಗಾ ಇಡುವುದು ಕಷ್ಟವಾಗುತ್ತದೆ’ ಎಂದು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯರೊಬ್ಬರು ಹೇಳುತ್ತಾರೆ.

‘ನಮ್ಮ ಜೀವ ನಮ್ಮ ಕೈಯಲ್ಲಿ’

ಇಂತಹ ಸಂದರ್ಭದಲ್ಲಿ ಒಮ್ಮತದ ಅಭಿಪ್ರಾಯ ಮೂಡುವುದು ಬಹಳ ಕಷ್ಟ. ಸರ್ಕಾರ ಆನ್‌ಲೈನ್‌–ಆಫ್‌ಲೈನ್ ಎರಡೂ ಆಯ್ಕೆ ನೀಡಿರುವುದು ಸ್ವಾಗತಾರ್ಹ. ಬೇರೆ ರಾಜ್ಯಗಳು ಹಿಂಜರಿದಾಗ, ನಮ್ಮ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಇಟಿ ಎಲ್ಲ ನಡೆಸಲಾಯಿತು. ಇದು ಸರ್ಕಾರದ ಆತ್ಮವಿಶ್ವಾಸ ಹೆಚ್ಚಿಸಿದೆ. ನಮ್ಮ ರಕ್ಷಣೆ ನಮ್ಮ ಕೈಯಲ್ಲಿ ಎಂದು ಸಕಲ ಮುಂಜಾಗ್ರತಾ ಕ್ರಮ ತೆಗೆದುಕೊಂಡರೆ ತರಗತಿ ನಡೆಸುವುದು ಕಷ್ಟವಾಗುವುದಿಲ್ಲ.

-ಡಾ. ಗೋವಿಂದ ಆರ್. ಕಡಂಬಿ, ಹಂಗಾಮಿ ಕುಲಪತಿ, ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯ

ಆನ್‌ಲೈನ್‌ ತರಗತಿಯೇ ಉತ್ತಮ

ಎಂಥದ್ದೇ ಸುರಕ್ಷತಾ ಕ್ರಮ ಕೈಗೊಂಡರೂ ಕಾಲೇಜು ವಾತಾವರಣದಲ್ಲಿ ಸೋಂಕು ಹರಡುವಿಕೆ ತಡೆಯುವುದು ಕಷ್ಟವಾಗುತ್ತದೆ. ಬಹುತೇಕರು ಸಾರ್ವಜನಿಕ ಸಾರಿಗೆಯನ್ನೇ ಬಳಸುತ್ತಾರೆ. ಒಬ್ಬರಿಗೆ ಬಂದರೆ ಎಲ್ಲವೂ ಸೋಂಕಿತರಾಗಬೇಕಾಗುತ್ತದೆ. ಆನ್‌ಲೈನ್‌ ತರಗತಿಯೇ ಸೂಕ್ತ.

-ಸೇತುಲಕ್ಷ್ಮಿ, ಬಿಎ ಪತ್ರಿಕೋದ್ಯಮ ವಿದ್ಯಾರ್ಥಿನಿ

ಕಾಲೇಜಿಗಿಂತ ಜೀವ ಮುಖ್ಯ

ಸೋಂಕು ಹರಡಲು ಆರಂಭವಾಗಿ ಆರು ತಿಂಗಳುಗಳೇ ಆಗಿವೆ. ಈಗ ನಾವು ಸುರಕ್ಷಿತವಾಗಿದ್ದೇವೆ. ಕಾಲೇಜಿಗೆ ಹೋಗಿ ಸೋಂಕು ತಗುಲಿಸಿಕೊಂಡರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಷ್ಟೂ ಆರ್ಥಿಕವಾಗಿ ನಾವು ಸ್ಥಿತಿವಂತರಲ್ಲ. ಆನ್‌ಲೈನ್‌ ತರಗತಿ ಕಷ್ಟವಾಗುತ್ತಿದೆ. ಆದರೆ, ಜೀವ ಮುಖ್ಯ. ನಾನು ಕಾಲೇಜಿಗಂತೂ ಹೋಗುವುದಿಲ್ಲ.

-ಮೋನಿಕಾ ಸೆಲೆಸ್, ಪದವಿ ವಿದ್ಯಾರ್ಥಿನಿ, ಸೇಂಟ್ ಜಾರ್ಜ್ ಕಾಲೇಜು

ಮನೆಯಲ್ಲಿ ಮಕ್ಕಳು ಓದುವುದಿಲ್ಲ

ಏನೇ ಮಾಡಿದರೂ ಮನೆಯಲ್ಲಿ ಮಕ್ಕಳು ಸರಿಯಾಗಿ ಓದುವುದಿಲ್ಲ. ಕಾಲೇಜು ಪ್ರಾರಂಭಿಸುವುದೇ ಉತ್ತಮ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಅಲ್ಲದೆ, ಈಗ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಯುತ್ತಿರುವುದರಿಂದ ಸಮಸ್ಯೆ ಆಗುವುದಿಲ್ಲ. ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ವಿಶ್ವಾಸವಿದೆ

-ತೇಜಸ್‌ಕುಮಾರ್, ಪೋಷಕ

ಪೂರ್ತಿ ಆನ್‌ಲೈನ್‌ ತರಗತಿ ನಡೆಸಲಿ

ಮಾಡುವುದಾದರೆ ಪೂರ್ತಿ ಆನ್‌ಲೈನ್‌ ತರಗತಿ ನಡೆಸಲಿ, ಇಲ್ಲದಿದ್ದರೆ ಸಂಪೂರ್ಣ ಆಫ್‌ಲೈನ್‌ ಮಾಡಲಿ. ಕಾಲೇಜು ಪ್ರಾರಂಭವಾದರೆ ಉಪನ್ಯಾಸಕರು ಆನ್‌ಲೈನ್‌ ತರಗತಿಯ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ.

-ಸೌಮ್ಯಾ ಸುಧಾಕರ್, ಪದವಿ ವಿದ್ಯಾರ್ಥಿನಿ, ಕೆಎಲ್‌ಇ ಕಾಲೇಜು

ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ

ಆನ್‌ಲೈನ್‌ ತರಗತಿಗಳು ಅಷ್ಟೊಂದು ಪರಿಣಾಮಕಾರಿಯಾಗುತ್ತಿಲ್ಲ. ಇದೇ ವ್ಯವಸ್ಥೆಯನ್ನೇ ಮುಂದುವರಿಸಲು ಆಗುವುದಿಲ್ಲ. ಕಾಲೇಜಿಗೆ ಹೋಗಿ ಕಲಿಯುವುದೇ ಹೆಚ್ಚು ಸೂಕ್ತ. ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ಕಾಲೇಜಿಗೆ ಹೋಗುತ್ತೇನೆ.

-ಆರ್. ಬಸವರಾಜು, ಪದವಿ ವಿದ್ಯಾರ್ಥಿ, ಸರ್ಕಾರಿ ಕಲಾ ಕಾಲೇಜು

ಕಾಲೇಜಿಗೆ ಹೋಗಿ ಕಲಿಯುವುದೇ ಉತ್ತಮ

ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮೆಟ್ರೊ ರೈಲು ಸೇರಿದಂತೆ ಸಂಚಾರ ವ್ಯವಸ್ಥೆ ಮೊದಲಿನಂತಾಗಿದೆ. ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತದೆ. ಮಕ್ಕಳು ಕಾಲೇಜಿಗೆ ಹೋಗಿ ಕಲಿಯುವುದೇ ಉತ್ತಮ. ಸರ್ಕಾರದ ನಿರ್ಧಾರ ಸ್ವಾಗತಾರ್ಹ.

-ಕೆ.ಎಂ. ಲೋಕೇಶ್, ಪೋಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.