ADVERTISEMENT

ಪರೀಕ್ಷೆಯ ದಿನ ತಿಂಡಿ ಹೀಗಿರಲಿ...

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 23:30 IST
Last Updated 18 ಫೆಬ್ರುವರಿ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪರೀಕ್ಷೆಯ ದಿನ ಮಕ್ಕಳು ಮತ್ತು ಪೋಷಕರು ಹೆಚ್ಚು ಒತ್ತಡ ಮತ್ತು ಆತಂಕದಲ್ಲಿರುತ್ತಾರೆ. ಹಾಗಂತ ಬೆಳಗಿನ ತಿಂಡಿ ಮಾಡಿಸದೆ ಮಕ್ಕಳನ್ನು ಖಾಲಿ ಹೊಟ್ಟೆಯಲ್ಲಿ ಪರೀಕ್ಷೆಗೆ ಕಳುಹಿಸಬೇಡಿ. ಬ್ರೆಡ್, ಬಿಸ್ಕತ್ತು, ಕಾಫಿ/ಹಾಲು ಇತ್ಯಾದಿಗಳಿಂದಲೂ ಹೊಟ್ಟೆ ತುಂಬಿಸಲು ಪ್ರಯತ್ನಿಸಬೇಡಿ.

ಮಕ್ಕಳು ಹೆಚ್ಚು ಹೊತ್ತು ಉಪವಾಸವಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿ ಅವರ ಏಕಾಗ್ರತೆಗೆ ತೊಂದರೆ ಉಂಟು ಮಾಡುತ್ತದೆ. ಉತ್ತರ ಪತ್ರಿಕೆಗಳನ್ನು ಬಿಡಿಸುವಲ್ಲಿ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪರೀಕ್ಷೆಯ ದಿನ ಬೆಳಗಿನ ಉಪಾಹಾರ ಅತ್ಯಗತ್ಯ.

ADVERTISEMENT

ಸಂಕೀರ್ಣ ಕಾರ್ಬೊಹೈಡ್ರೇಟ್‌ಗಳು ಮತ್ತು ಪ್ರೊಟೀನ್‌ ಭರಿತ ಖಾದ್ಯಗಳನ್ನು ಉಪಾಹಾರಗಳಲ್ಲಿ ಹೇರಳವಾಗಿರುವಂತೆ ನೋಡಿಕೊಳ್ಳಬೇಕು. ಇದು ದೇಹದಲ್ಲಿ ಗೆಸೆಮಿಕ್‌ ಇಂಡೆಕ್ಸ್‌ ಕಡಿಮೆ ಇರುವಂತೆ ಮಾಡುತ್ತದೆ. ದೇಹದಲ್ಲಿನ ಗ್ಲುಕೋಸ್‌ ಪ್ರಮಾಣ ಸುಸ್ಥಿತಿಯಲ್ಲಿಡುತ್ತದೆ. ಮಕ್ಕಳ ಹೊಟ್ಟೆ ದೀರ್ಘಕಾಲದವರೆಗೂ ತುಂಬಿದಂತೆ ಅನಿಸುತ್ತದೆ. ಉದಾಹರಣೆಗೆ: ಸಿರಿಧಾನ್ಯ ಹಾಗು ದ್ವಿದಳ ಧಾನ್ಯಗಳಿಂದ ಮಾಡಿದ ಇಡ್ಲಿ, ದೋಸೆ, ತರಕಾರಿ ಭರಿತ ಅವಲಕ್ಕಿ ಅಥವಾ ಉಪ್ಪಿಟ್ಟು, ದಾಲ್ ಕಿಚಡಿ ನೀಡಬಹುದಾಗಿದೆ. ಮೊಟ್ಟೆಗಳೊಂದಿಗೆ ಸಂಪೂರ್ಣ ಧಾನ್ಯದ ಬ್ರೆಡ್ ಸ್ಯಾಂಡ್‌ವಿಚ್, ಚಪಾತಿಯೊಂದಿಗೆ ಮೊಟ್ಟೆ ಅಥವಾ ಪನೀರ್ ಭುರ್ಜಿ, ಬೀಜಗಳೊಂದಿಗೆ ಓಟ್ಸ್, ಮ್ಯೂಸ್ಲಿ ಇತ್ಯಾದಿ ಆರೋಗ್ಯಕರವಾದ ಉಪಾಹಾರವನ್ನು ಮಕ್ಕಳಿಗೆ ಕೊಡಿ. ಜತೆಗೆ ರಾತ್ರಿ ನೆನೆಸಿದ ಬಾದಾಮಿ, ರಾಗಿ ಗಂಜಿ ಅಥವಾ ಮಾಲ್ಟ್ ಬಾದಾಮಿ ಹಾಲು ನೀಡಬಹುದು.

ಹಣ್ಣುಗಳಲ್ಲಿ ಬಾಳೆಹಣ್ಣು ಶಕ್ತಿಯ ಉತ್ತಮ ಮೂಲವಾಗಿದೆ ಮತ್ತು ಸಂಪೂರ್ಣ ಪೋಷಕಾಂಶಗಳನ್ನು ಒದಗಿಸುತ್ತವೆ. ಬಾಳೆಹಣ್ಣಿನಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲ ವಿಷಯಗಳನ್ನು ಕಲಿಯುವ ಮತ್ತು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಮನಸ್ಥಿತಿಯನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು, ಮಾನಸಿಕ ಗೊಂದಲ ಮತ್ತು ಅವ್ಯವಸ್ಥೆಯನ್ನು ತಡೆಯಲು ಪರೀಕ್ಷೆಯ ಮೊದಲು ಬಾಳೆಹಣ್ಣನ್ನು ಸೇವಿಸುವುದು ಒಳ್ಳೆಯದು.

ಮೊಸರು ಪ್ರೊಟೀನ್‌ ಮಾತ್ರವಲ್ಲದೆ ಉತ್ತಮ ಪ್ರೋಬಯಾಟಿಕ್ ಕೂಡ.. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಜೀರ್ಣ, ಹೊಟ್ಟೆ ಉಬ್ಬರವನ್ನು ತಡೆಯುತ್ತದೆ. ಅತ್ಯಂತ ಮುಖ್ಯವಾಗಿ! ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಆಧಾರ ಸ್ತಂಭಗಳಂತೆ ನಿಂತಿರುತ್ತಾರೆ. ಪರೀಕ್ಷೆಯಲ್ಲಿ ಸಿಗುವ ಅಂಕಗಳಿಗಿಂತ ಬದುಕು ದೊಡ್ಡದು ಎಂಬ ಭರವಸೆಯನ್ನು ಮಕ್ಕಳಲ್ಲಿ ತುಂಬುವುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.