ADVERTISEMENT

ಮಕ್ಕಳಿಗೆಷ್ಟು ಹೊತ್ತು ಸ್ಕ್ರೀನ್‌ ಸಮಯ ನೀಡಬೇಕು?

ಎಸ್.ರಶ್ಮಿ
Published 26 ನವೆಂಬರ್ 2019, 19:30 IST
Last Updated 26 ನವೆಂಬರ್ 2019, 19:30 IST
Happy Indian family watching TV at homeFamily watching TV
Happy Indian family watching TV at homeFamily watching TV   

ಇದು ಡಿಜಿಟಲ್‌ ಯುಗ. ಮಕ್ಕಳು ಎಳವೆಯಲ್ಲೇ ಟಿ.ವಿ., ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ನಂತಹ ಉಪಕರಣಗಳಿಗೆ ತೆರೆದುಕೊಳ್ಳುತ್ತಾರೆ. ಮಕ್ಕಳಿಗೆ ಕಿರುತೆರೆಯ ದರ್ಶನ ಮಾಡಿಸಬೇಕೇ, ಟಿ.ವಿ. ವೀಕ್ಷಣೆ ಸಮಯವನ್ನು ಹೇಗೆ ನಿಗದಿಪಡಿಸಬೇಕು, ಯಾವ ರೀತಿಯ ಕಾರ್ಯಕ್ರಮಗಳನ್ನು ಅವರಿಗೆ ನೋಡಲು ಬಿಡಬೇಕು ಎಂಬ ಪೋಷಕರ ಗೊಂದಲಗಳಿಗೆ ಇಲ್ಲಿದೆ ಉತ್ತರ.

‘ಊಟ ಮಾಡಿಸಬೇಕು ಅಂದ್ರೆ ಫೋನ್‌ ಕೈಗೆ ಕೊಡಲೇಬೇಕು. ಕಾರ್ಟೂನ್‌ ನೋಡುತ್ತಿದ್ದರೆ ಮಾತ್ರ ಹೊಟ್ಟೆ ತುಂಬುವಷ್ಟು ಉಣ್ತಾರೆ; ಮಲಗ ಬೇಕಾದರೂ ಕತೆಗಳನ್ನು ತೋರಿಸಬೇಕು. ಇನ್ನೂ ಶಾಲೆಗೆ ಹಾಕಿಲ್ಲ, ಆದರೂ ಎಬಿಸಿಡಿ ಬರುತ್ತೆ, ಎಲ್ಲ ರೈಮ್ಸ್‌ ಹೇಳ್ತಾಳೆ, ಒನ್‌ ಟು ಟೆನ್‌ ಸಹ ಹೇಳ್ತಾಳೆ’ ಹೆಮ್ಮೆಯಿಂದಲೋ, ಅಳುಕಿನಿಂದಲೋ, ಆತಂಕದಿಂದಲೋ ಹೇಳುವುದೀಗ ಸಾಮಾನ್ಯವಾಗಿದೆ.

ಸ್ಕ್ರೀನ್‌ ಸಮಯ ಒಳಿತೇ..? ಕೆಡುಕೇ..? ಈ ಬಗ್ಗೆ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳು ಬಂದಾಗಿನಿಂದಲೂ ಚರ್ಚೆ ನಡೆಯುತ್ತಿದೆ. ಯಾರು ಎಷ್ಟು ಹೊತ್ತು ನೋಡಬೇಕು ಎನ್ನುವ ಬಗ್ಗೆ ಶಿಕ್ಷಣ ತಜ್ಞೆ ಡಾ. ಸ್ವಾತಿ ಪೋಪಟ್‌ ವತ್ಸ್‌ ‘ಪ್ರಜಾವಾಣಿ’ಯೊಂದಿಗೆ ಚರ್ಚಿಸಿದ್ದಾರೆ.

ADVERTISEMENT

ಎರಡು ವರ್ಷದೊಳಗಿನ ಮಗುವಿಗೆ ಡಿಜಿಟಲ್‌ ಉಪಕರಣ ಪರಿಚಯಿಸುವ ಅಗತ್ಯವಿಲ್ಲ. ಅದು ಮೆದುಳು ಮತ್ತು ಮನಸ್ಸು ಬೆಳೆಯುವ ಸಮಯ. ಮೂರು ವರ್ಷದ ಮಗುವಿಗೆ ಒಂದು ಗಂಟೆಯವರೆಗೆ ಡಿವೈಸ್‌ ನೋಡಲು ಬಿಡಬಹುದು. ಆದರೆ ಅದು ಕಾಲುಗಂಟೆಯ ನಾಲ್ಕು ಅವಧಿಯಾಗಿ ವಿಂಗಡಿಸಬೇಕು. ನಾಲ್ಕು ವರ್ಷಗಳ ನಂತರ 90 ನಿಮಿಷಕ್ಕೆ ಹೆಚ್ಚಿಸಬೇಕು. ಇದೂ ಸಹ ಒಟ್ಟೊಟ್ಟಿಗೆ ನೋಡುವಂಥದ್ದಲ್ಲ. ಒಂದು ಸಮಯ ನಿಗದಿಗೊಳಿಸಬೇಕು. ಆಗಷ್ಟೇ ನೋಡಬೇಕು. 7 ವರ್ಷಗಳ ನಂತರ ಕನಿಷ್ಠ ಎರಡು ಗಂಟೆ, ಗರಿಷ್ಠ 3 ಗಂಟೆಯಷ್ಟು ಸ್ಕ್ರೀನ್‌ ಅವಧಿ ಹೆಚ್ಚಿಸಬಹುದಾಗಿದೆ. ಆದರೆ...

ಮಕ್ಕಳು ಏನು ನೋಡುತ್ತಿದ್ದಾರೆ? ಎಂಥದ್ದು ನೋಡುತ್ತಿದ್ದಾರೆ? ತಮ್ಮ ಅವಧಿ ಮುಗಿದ ತಕ್ಷಣ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ? ನಂತರ ಏನು ಮಾಡುತ್ತಾರೆ ಇವನ್ನೆಲ್ಲ ಪಾಲಕರು ಗಮನಿಸಬೇಕು. ಸ್ಕ್ರೀನ್‌ ಅವಧಿ ಕೇವಲ ಡಿಜಿಟಲ್‌ ಡಿವೈಸ್‌ಗೆಂದು ಭಾವಿಸದೆ, ಟಿ.ವಿಯನ್ನೂ ಪರಿಗಣಿಸ
ಬೇಕಾಗುತ್ತದೆ. ಒಮ್ಮೆ ಉಪಕರಣ ನೋಡುವುದನ್ನು ಬಿಡಿಸಿದಾಗ ಅವರು ಕಿರಿಕಿರಿ ಮಾಡದಿದ್ದಲ್ಲಿ, ಅವರ ಮನಸನ್ನು ತರಬೇತುಗೊಳಿಸಿದ್ದೀರಿ ಎಂದರ್ಥ. ಈ ಮಕ್ಕಳು ಉಪಕರಣಗಳಿಗೆ ಅಂಟಿಕೊಂಡಿರುತ್ತವೆ ಎಂದು ಹೇಳಲಾಗದು. ಇದು ಚಟವಾಗಿಯೂ ಪರಿಣಮಿಸುವುದಿಲ್ಲ. ನೋಡುವ ಮೊದಲೇ ಮುಂದಿನ ಟಾಸ್ಕ್‌ ಹೇಳಿರಬೇಕು. ಇದಾದ ತಕ್ಷಣ ಓದೋಣ, ಬರೆಯೋಣ, ಆಟವಾಡಲು ಹೋಗೋಣ.. ಹೀಗೆ. ಮಕ್ಕಳ ಮನಸನ್ನು ಮೊದಲೇ ಸಿದ್ಧಮಾಡಿರಬೇಕು. ಅವರು ಒಪ್ಪಿಕೊಳ್ಳುತ್ತಾರೆ. ಗಡುವು ನೀಡದೇ ನೋಡಲು ಬಿಟ್ಟರೆ, ಬಿಡಿಸುವುದು ಕಷ್ಟ.

ಯಾಕೆ ನೋಡಲೇಬೇಕು?

ಇದು ಡಿಜಿಟಲ್‌ ಯುಗ. ಮೊದಲಿನಷ್ಟು ಮಕ್ಕಳು ಬಾಂಧವ್ಯಗಳಿಗೆ, ಸ್ನೇಹಿತರಿಗೆ ತೆರೆದುಕೊಳ್ಳುವುದಿಲ್ಲ. ಅವರಿಗೆ ಅಂಥ ಅವಕಾಶಗಳೇ ಕಡಿಮೆ. ಹಾಗಿದ್ದಾಗ ಅವರ ವರ್ತನೆ, ಭಾಷೆ, ಭಾವಾಭಿವ್ಯಕ್ತಿ ಇವೆಲ್ಲವೂ ಮನೆಯಲ್ಲಿರುವ ನಾಲ್ವರನ್ನೇ ಅವಲಂಬಿಸುವುದು ಎಷ್ಟು ಸರಿ? ಇಂದಿನ ಕಾರ್ಟೂನ್‌ಗಳು ಕೇವಲ ಮನರಂಜನೆಗೆ ಉಳಿದಿಲ್ಲ. ಬಾಲ್ಯಾವಸ್ಥೆಯಲ್ಲಿ ಅಂಗನವಾಡಿಯ ಕೆಲಸವನ್ನೇ ಅವು ಮಾಡುತ್ತಿವೆ. ಅವರ ಯೋಚನಾಸರಣಿ, ಮಾತಿನ ಧಾಟಿ ಇವೆಲ್ಲವೂ ಒಂದಿಲ್ಲ ಒಂದು ರೀತಿಯಿಂದ ಅವರು ನೋಡುವ ಕಾರ್ಯಕ್ರಮಗಳಿಂದಲೇ ಪ್ರಭಾವಿತವಾಗಿರುತ್ತವೆ. ಹೀಗಾಗಿಯೇ ‘ಮಸ್ತಿ ಮೆ ಅಚ್ಛಾಯಿ’ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ.

ಹೇಗೆ ನೋಡಬೇಕು?

ಸಾಮಾನ್ಯವಾಗಿ ಮಕ್ಕಳು ನೋಡಿದ್ದನ್ನು, ಮನಸ್ಸಿನೊಳಗೆ ಮಥಿಸುತ್ತಲೇ ಇರುತ್ತಾರೆ. ಒಂದೆರಡು ಕಾರ್ಯಕ್ರಮಗಳನ್ನಾದರೂ ಅವರೊಟ್ಟಿಗೆ ನೋಡಬೇಕು. ಕೆಲವೊಮ್ಮೆ ಭಾವುಕರಾಗುತ್ತಾರೆ. ಕಣ್ಣೀರ್ಗರೆಯುತ್ತಾರೆ.ಮುಷ್ಟಿ ಕಟ್ಟುತ್ತಾರೆ. ಹಲ್ಲು ಕಚ್ಚುತ್ತಾರೆ.. ಇಂಥ ಸಂದರ್ಭದಲ್ಲಿ ಆತ್ಮೀಯ ಸ್ಪರ್ಶದ ಅಗತ್ಯ ಅವರಿಗಿರುತ್ತದೆ. ಜೊತೆಯಾಗಿ ನೋಡಲಾಗದಿದ್ದಲ್ಲಿ ಸಮಯ ಸಿಕ್ಕಾಗಲೆಲ್ಲ, ಅಂದು ನೋಡಿರುವ ಕಾರ್ಯಕ್ರಮಗಳಲ್ಲಿ ಅವರಿಗೆ ಯಾವುದು ಇಷ್ಟವಾಯಿತು? ಯಾಕೆ? ಯಾವುದು ಇಷ್ಟವಾಗಲಿಲ್ಲ, ಯಾಕೆ? ಅದನ್ನು ಇನ್ನಷ್ಟು ಭಿನ್ನವಾಗಿಸಬಹುದಿತ್ತೆ? ಇಂಥ ಪ್ರಶ್ನೆಗಳೊಂದಿಗೆ ಸಂವಾದಿಯಾಗಬೇಕು. ಇದು ಸಹ ಒಡಗೂಡಿ ನೋಡುವ ಚಟುವಟಿಕೆಯೇ ಆಗಿದೆ.

ಏನು ನೋಡಬೇಕು?

ಪ್ರತಿಯೊಂದರಲ್ಲೂ ಒಂದು ಕಲಿಕೆ ಇದ್ದೇ ಇರುತ್ತದೆ. ಮೌಲ್ಯವೂ. ಅದನ್ನು ಮಕ್ಕಳು ಸರಿಯಾಗಿ ಗ್ರಹಿಸಿದ್ದಾರೆಯೇ ಎಂಬುದನ್ನು ಗಮನಿಸಬೇಕು. ಇಂದು ‘ಶಿವಾ’, ‘ರುದ್ರಾ’, ‘ಮೋಟು ಔರ್ ಪತಲು’, ‘ಪೆಪ್ಪಾ ಪೆಗ್‌’ ಮುಂತಾದ ಕಾರ್ಯಕ್ರಮಗಳೆಲ್ಲವೂ ಮಕ್ಕಳ ಇಷ್ಟದ ಕಾರ್ಯಕ್ರಮಗಳಾಗಿವೆ. ಇವನ್ನು ನೋಡಿದಾಗಲೆಲ್ಲ ಅವರು ತಮ್ಮನ್ನೂ, ಸ್ನೇಹಿತರನ್ನೂ, ಕುಟುಂಬದವರನ್ನೂ ಕನೆಕ್ಟ್‌ ಮಾಡುತ್ತಿರುತ್ತಾರೆ. ಆಗಾಗ ಈ ನಡಾವಳಿಗೆ ‘ಕರೆಕ್ಷನ್‌’ ಹಾಕುವ ಅಗತ್ಯವೂ ಇದೆ.

ಡಿಜಿಟಲ್‌ ವೈರಾಗ್ಯ ಬೇಡ

ಈ ನಡುವೆ ನಮ್ಮ ಮಕ್ಕಳನ್ನು ನಾವು ಡಿಜಿಟಲ್‌ ಡಿವೈಸ್‌ಗಳಿಂದ ದೂರವಿಟ್ಟಿದ್ದೇವೆ ಎನ್ನುವ ಪಾಲಕರು ಹೆಚ್ಚುತ್ತಿದ್ದಾರೆ. ಇದು ಡಿಜಿಟಲ್‌ ಯುಗ. ನಿಮ್ಮ ಮಕ್ಕಳನ್ನು ಅದೆಷ್ಟು ದಿನಗಳವರೆಗೆ ಅಜ್ಞಾನದಲ್ಲಿಡುವಿರಿ? ಅವರಿಗೆ ಅರಿವಿದ್ದಷ್ಟೂ ಅನುಕೂಲ. ಆತ್ಮವಿಶ್ವಾಸ ಹೆಚ್ಚುತ್ತದೆ ಎನ್ನುವುದು ಗೊತ್ತಿರಲಿ. ಮಕ್ಕಳು ಅದನ್ನೇ ಚಟವಾಗಿಸಿಕೊಂಡಿದ್ದಾರೆ, ಅಂಟಿಕೊಂಡಿದ್ದಾರೆ ಎಂಬ ನೆವಗಳು, ಆರೋಪಗಳು, ನೀವದನ್ನು ಸರಿಯಾಗಿ ನಿಭಾಯಿಸಲ್ಲ ಎಂದೇ ಹೇಳುತ್ತವೆ. ಮಕ್ಕಳನ್ನು ತರಬೇತುಗೊಳಿಸುವ ಅವಧಿ ಇದು. ಒಳಿತು ಕೆಡುಕು, ಸಮಯ ಪರಿಪಾಲನೆ, ಶಿಸ್ತು.. ಹೀಗೆ ಸಮಗ್ರವಾಗಿ, ಒಂದು ಪ್ರಕ್ರಿಯೆಯಂತೆ ಸಾಗುತ್ತದೆ ಇದು. ಮಕ್ಕಳು ನೋಡಬೇಕೆನ್ನುತ್ತಾರೆ.. ನೋಡಲಿ ಬಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.