ADVERTISEMENT

ಸಿಬಿಎಸ್‌ಇ ಪರೀಕ್ಷೆ: ಒಎಂಆರ್‌ ಹಾಳೆಯಲ್ಲಿ ಉತ್ತರಿಸುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 19:30 IST
Last Updated 21 ನವೆಂಬರ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭಾಗ– 5

ನಾವು ಈ ಸಂಚಿಕೆಯ ಭಾಗ-1 ರಲ್ಲಿ, ಈ ಬಾರಿಯ ಸಿ.ಬಿ.ಎಸ್.ಇ. ಪರೀಕ್ಷೆಗಳ ಬಗ್ಗೆ ಹಾಗೂ ಈ ಪರೀಕ್ಷೆಗಳ ರಚನೆಯ ಬಗ್ಗೆ ತಿಳಿದಿದ್ದೇವೆ. ಈ ಬಾರಿಯ ಮೊದಲನೆಯ ಅವಧಿಯ ಪರೀಕ್ಷೆ, ಅಂಕಗಳು ಹಾಗೂ ಇತರ ವಿವರಗಳ ಬಗ್ಗೆಯೂ ಭಾಗ-1 ರಲ್ಲಿ ವಿವರಣೆಯನ್ನು ಕೊಟ್ಟಿದೆ.

ನಿಮಗೆ ಈಗಾಗಲೇ ತಿಳಿದಿರುವಂತೆ ಈ ಬಾರಿಯ ಮೊದಲನೆಯ ಅವಧಿಯ ಸಿಬಿಎಸ್‌ಇ ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳೂ ಬಹು ಆಯ್ಕೆ ಉತ್ತರದ ಪ್ರಶ್ನೆಗಳಾಗಿರುತ್ತವೆ. ಹಾಗಾಗಿ, ಈ ಪ್ರಶ್ನೆಗಳಿಗೆ ಉತ್ತರಿಸಲು ಸಿ.ಬಿ.ಎಸ್. ಇ. ಯು ಇದೇ ಮೊದಲ ಬಾರಿಗೆ, ಈ ಮೊದಲನೆಯ ಅವಧಿಯ ಪರೀಕ್ಷೆಯಲ್ಲಿ ಒಎಮ್ಆರ್‌ ಹಾಳೆಗಳನ್ನು ಪರಿಚಯಿಸುತ್ತಿದೆ. ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ಈ ಪರೀಕ್ಷೆಯಲ್ಲಿ ಒಎಮ್ಆರ್‌ ಹಾಳೆಗಳನ್ನು ಉಪಯೋಗಿಸುತ್ತಿರುವುದರಿಂದ ಅದರ ಬಗ್ಗೆ ಸಂಪೂರ್ಣ ತಿಳುವಳಿಕೆ ನೀಡಲು ಸಿಬಿಎಸ್ಇ ಯು ತನ್ನ ಸುತ್ತೋಲೆಯಲ್ಲಿ ಈ ಕೆಳಕಂಡ ವಿವರಗಳನ್ನು ಒದಗಿಸಿದೆ.

ADVERTISEMENT

1. ವಿದ್ಯಾರ್ಥಿಗಳ ವಿವರಗಳನ್ನು ( ಹೆಸರು, ತಂದೆಯ ಹೆಸರು, ವಿಷಯ, ಕ್ರಮ ಸಂಖ್ಯೆ ಇತ್ಯಾದಿ) ಮೊದಲೇ ತುಂಬಲಾಗಿರುತ್ತದೆ.

2. ವಿದ್ಯಾರ್ಥಿಗಳು ಪ್ರಶ್ನ ಪತ್ರಿಕೆಯ ಸಂಖ್ಯೆಯನ್ನು ಒಎಮ್ಆರ್‌ ಹಾಳೆಯ ಮೇಲಿನ ಬಲ ತುದಿಯಲ್ಲಿ ಮೀಸಲಿಟ್ಟ ಸ್ಥಳದಲ್ಲಿ ಬರೆಯಬೇಕು.

3. ಒಎಮ್ಆರ್‌ ಹಾಳೆಯ ಕೆಳಭಾಗದಲ್ಲಿ ನಿಗಧಿಪಡಿಸಿರುವ ಸ್ಥಳದಲ್ಲಿ ವಿದ್ಯಾರ್ಥಿಯು ತನ್ನ ಸ್ವಹಸ್ತದ ಬರವಣಿಗೆಯಲ್ಲಿ ಈ ಕೆಳಗೆ ಕೊಟ್ಟಿರುವ ವಾಕ್ಯವನ್ನು ಬರೆಯಬೇಕು ಮತ್ತು ಸಹಿ ಮಾಡಬೇಕು.

“I Confirm that all particulars given above are correct”

4. ಒಎಮ್ಆರ್‌ ಹಾಳೆಯನ್ನು ತುಂಬಲು ನೀಲಿ ಅಥವಾ ಕಪ್ಪು ಬಣ್ಣದ ಬಾಲ್‌ ಪಾಯಿಂಟ್‌ ಪೆನ್ನನ್ನು ಮಾತ್ರಾ ಉಪಯೋಗಿಸಬೇಕು.

5. ಒಎಮ್ಆರ್‌ ಹಾಳೆಯಲ್ಲಿ ಯಾವುದೇ ಕಾರಣಕ್ಕೂ ಪೆನ್ಸಿಲ್‌ ಅನ್ನು ಉಪಯೋಗಿಸಿ ಬರೆಯುವಂತಿಲ್ಲ. ಹಾಗೇನಾದರೂ ಬರೆದರೆ, ಅದನ್ನು ಪರೀಕ್ಷಾನೀತಿಯ ಉಲ್ಲಂಘನೆ ಎಂದು ಪರಿಗಣಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸಿಬಿಎಸ್‌ಇ ಯು ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಒಎಮ್‌ಆರ್‌ ಹಾಳೆಯಲ್ಲಿ ಉತ್ತರಿಸುವಾಗ ಈ ಕೆಳಕಂಡ ಮುಖ್ಯ ಅಂಶಗಳನ್ನು ಗಮನಿಸಿ, ಅಳವಡಿಸಿಕೊಳ್ಳಿ.

1. ಯಾವುದೇ ವಿಷಯದ ಪರೀಕ್ಷೆಯಾದರೂ, ಓ.ಎಮ್.ಆರ್.‌ ಹಾಳೆಯಲ್ಲಿ 60 ಪ್ರಶ್ನೆಗಳಿಗೆ ಉತ್ತರಿಸಲು ಸ್ಥಳಾವಕಾಶವಿರುತ್ತದೆ. ವಿದ್ಯಾರ್ಥಿಗಳು ಆ ವಿಷಯಕ್ಕೆ ಅನ್ವಯವಾಗುವ ಗರಿಷ್ಠಪ್ರಶ್ನೆಗಳಿಗೆ ಇಲ್ಲಿ ಕ್ರಮವಾಗಿ ಉತ್ತರಿಸಬೇಕು.

2. ವಿದ್ಯಾರ್ಥಿಗಳು ಕ್ರಮ ಸಂಖ್ಯೆ ಹಾಗೂ ಗರಿಷ್ಠ ಉತ್ತರಗಳ ಬಗ್ಗೆ ಹೆಚ್ಚಿನ ಗಮನವನ್ನು ಕೊಟ್ಟು ಉತ್ತರಿಸಬೇಕು. ಏಕೆಂದರೆ, ಅಗತ್ಯಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದರೆ (ಸರಿಯಾದ ಉತ್ತರವಿದ್ದರೂ) ಅದನ್ನು ಮೌಲ್ಯಮಾಪನಕ್ಕಾಗಿ ಪರಿಗಣಿಸಲಾಗುವುದಿಲ್ಲ.

ಉದಾಹರಣೆ: ಒಂದು ವಿಷಯದ ಪರೀಕ್ಷೆಯಲ್ಲಿ ಗರಿಷ್ಠ 40 ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದಿಟ್ಟುಕೊಳ್ಳಿ, ಇಲ್ಲಿ ಒಬ್ಬ ವಿದ್ಯಾರ್ಥಿಯು 45 ಪ್ರಶ್ನೆಗಳಿಗೆ ಉತ್ತರಿಸಿದರೂ, ಮೊದಲ 40 ಪ್ರಶ್ನೆಗಳ ಉತ್ತರವನ್ನು ಮಾತ್ರ ಪರಿಗಣಿಸಲಾಗುತ್ತದೆ.

ಹೀಗೆ, ಉತ್ತರಿಸುವಾಗ, ಒಂದುವೇಳೆ, ವಿದ್ಯಾರ್ಥಿಯ ಮೊದಲ 3 ಉತ್ತರಗಳು ತಪ್ಪಾಗಿದ್ದು ( ಉದಾ: ಪ್ರಶ್ನೆ 1,3,7 ಎಂದುಕೊಳ್ಳೋಣ) 41,42,43 ಕ್ರಮ ಸಂಖ್ಯೆಯ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದರೂ ಈ ಉತ್ತರಗಳನ್ನು (ಅಂದರೆ 41,42,43 ಪ್ರಶ್ನೆಗಳ ಉತ್ತರಗಳನ್ನು) ಪರಿಗಣಿಸುವುದಿಲ್ಲ ( ಏಕೆಂದರೆ ಇಲ್ಲಿ, ಮೊದಲ 40 ಉತ್ತರಗಳನ್ನು ಮಾತ್ರ ಪರಿಗಣಿಸಲಾಗುತ್ತದೆ)

ಹಾಗಾಗಿ, ವಿದ್ಯಾರ್ಥಿಗಳು ಸರಿಯಾಗಿ ಯೋಚಿಸಿ, ಎಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕೋ ಅಷ್ಟಕ್ಕೆ ಮಾತ್ರಾ ಕ್ರಮಾನುಗತವಾಗಿ ಉತ್ತರಿಸಿ.

3. ಪ್ರತಿಯೊಂದು ಪ್ರಶ್ನೆಯ ಕ್ರಮ ಸಂಖ್ಯೆಯ ಮುಂದೆ, ಉತ್ತರಿಸಲು 4 ವೃತ್ತಗಳನ್ನು ಕೊಟ್ಟಿರುತ್ತದೆ. ವಿದ್ಯಾರ್ಥಿಯು ಸರಿಯಾದ ಆಯ್ಕೆಯ ವೃತ್ತವನ್ನು ನೀಲಿ ಅಥವಾ ಕಪ್ಪು ಬಾಲ್‌ ಪಾಯಿಂಟ್‌ ಪೆನ್ನಿನಿಂದ ಸರಿಯಾಗಿ ತುಂಬಬೇಕು.

4. ಈ ನಾಲ್ಕೂ ವೃತ್ತಗಳ ನಂತರ, ಒಂದು ಚೌಕಾಕೃತಿಯ (ಆಯತ) ಖಾಲೀ ಸ್ಥಳವನ್ನು ಕೊಟ್ಟಿರುತ್ತದೆ. ಇಲ್ಲಿ ಸರಿಯಾದ ಆಯ್ಕೆಯನ್ನು ಬರೆಯಬೇಕು.

ಯಾವುದೋ ಒಂದು ಪ್ರಶ್ನೆಗೆ ಸರಿ ಉತ್ತರ c ಎಂದುಕೊಳ್ಳೋಣ, ಆಗ c ಯ ವೃತ್ತವನ್ನು ಸರಿಯಾಗಿ ತುಂಬಬೇಕು ಹಾಗೂ ಈ ಚೌಕದಲ್ಲಿ c ಎಂದೂ ಬರೆಯಬೇಕು.

ಒಂದುವೇಳೆ, ಕೇವಲ ವೃತ್ತವನ್ನು ತುಂಬಿ ಈ ಚೌಕವನ್ನು ತುಂಬದಿದ್ದರೆ ಆ ಪ್ರಶ್ನೆ ಮತ್ತು ಉತ್ತರವನ್ನು ಪರಿಗಣಿಸಲಾಗುವುದಿಲ್ಲ ಮತ್ತು ವಿದ್ಯಾರ್ಥಿಯು ಈ ಪ್ರಶ್ನೆಗೆ ಉತ್ತರಿಸಿಲ್ಲ ಎಂದು ಪರಿಗಣಿಸಲಾಗುತ್ತದೆ.

ಒಂದುವೇಳೆ, ವೃತ್ತವನ್ನು ತುಂಬದೇ, ಚೌಕದಲ್ಲಿ ಮಾತ್ರಾ ಉತ್ತರಿಸಿದ್ದರೆ ಆ ಪ್ರಶ್ನೆಯನ್ನು ಪರಿಗಣಿಸಲಾಗುತ್ತದೆ.

ಹಾಗಾಗಿ, ವೃತ್ತವನ್ನು ತುಂಬುವುದು ಮತ್ತು ಚೌಕದಲ್ಲಿ ಸರಿ ಉತ್ತರವನ್ನು ಬರೆಯುವುದು ಎರಡೂ ಮುಖ್ಯ.

ಒಂದೊಮ್ಮೆ ವಿದ್ಯಾರ್ಥಿಯು ತಪ್ಪು ವೃತ್ತವನ್ನು ತುಂಬಿದ್ದರೆ ಸರಿ ಪಡಿಸಿಕೊಳ್ಳಲು ಸಹಾಯಕವಾಗಲು ಈ ಚೌಕವನ್ನು ಕೊಡಲಾಗಿದೆ.

ಚೌಕದಲ್ಲಿರುವ ಉತ್ತರವೇ ಅಂತಿಮ ಎಂದು ಪರಿಗಣಿಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ವೃತ್ತವನ್ನು ಮೊದಲು ತುಂಬಿ ನಂತರ ಆ ಉತ್ತರವು ಸರಿಯಾಗಿದೆ ಎಂದು ಮತ್ತೊಮ್ಮೆ ಖಚಿತಪಡಿಸಿಕೊಂಡ ಮೇಲೆ ಈ ಚೌಕವನ್ನು ತುಂಬಿ.

5. ಈ ನಾಲ್ಕೂ ವೃತ್ತಗಳು ಮತ್ತು ಚೌಕದ ನಂತರ ಮತ್ತೊಂದು ‍ವೃತ್ತವನ್ನು ಕೊಡಲಾಗಿದೆ. ಯಾವ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲವೋ ಆ ಪ್ರಶ್ನೆಗಳ ಕ್ರಮಾಂಕಗಳಿಗೆ ಈ ವೃತ್ತವನ್ನು ತುಂಬಬೇಕು.

ಉದಾಹರಣೆಗೆ: 4 ನೆಯ ಪ್ರಶ್ನೆಗೆ ಉತ್ತರಿಸದಿದ್ದರೆ ಆಗ 4ನೆಯ ಪ್ರಶ್ನೆಯ ಈ ವೃತ್ತವನ್ನು ತುಂಬಬೇಕು. ಅಂದರೆ, ವಿದ್ಯಾರ್ಥಿಯು ನಾಲ್ಕನೆಯ ಪ್ರಶ್ನೆಗೆ ಉತ್ತರಿಸಿಲ್ಲ ಎಂದು ಅರ್ಥ.

6. ಒಂದುವೇಳೆ, ಪ್ರಶ್ನೆಯ ನಾಲ್ಕೂ ವೃತ್ತಗಳು, ಚೌಕ ಮತ್ತು ಐದನೆಯ ವೃತ್ತ ಎಲ್ಲವನ್ನೂ ಖಾಲಿ ಬಿಟ್ಟಿದ್ದರೆ, ಆ ಪ್ರಶ್ನೆಗೆ ವಿದ್ಯಾರ್ಥಿಯು ಉತ್ತರಿಸಿಲ್ಲ ಎಂದು ಪರಿಗಣಿಸಲಾಗುತ್ತದೆ.

ಹೀಗೆ, ಈ ಮೇಲಿನ ಎಲ್ಲ ವಿಷಯಗಳನ್ನೂ ಸರಿಯಾಗಿ ತಿಳಿದುಕೊಂಡು ಇನ್ನೇನಾದರೂ ಸಂದೇಹಗಳಿದ್ದರೆ ನಿಮ್ಮ ಶಿಕ್ಷಕರಿಂದ ತಿಳಿದುಕೊಂಡು ಓ.ಎಮ್.ಆರ್.‌ ಹಾಳೆಗಳಲ್ಲಿ ಸರಿಯಾಗಿ ಆತ್ಮ ವಿಶ್ವಾಸದಿಂದ ಉತ್ತರಿಸಿ. ಶುಭವಾಗಲಿ.

(ಲೇಖಕರು: ನಿರ್ದೇಶಕರು, ಸ್ಮಾರ್ಟ್‌ ಸೆರೆಬ್ರಮ್‌ ಪ್ರೈವೇಟ್‌ ಲಿಮಿಟೆಡ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.