ಪ್ರಾತಿನಿಧಿಕ ಚಿತ್ರ
ನನಗೆ ಇಬ್ಬರು ಮಕ್ಕಳು. ಮಗ ಎಂಜಿನಿಯರಿಂಗ್ ಓದಿದ್ದಾನೆ. ಮಗಳು ಮೆಡಿಕಲ್ ಓದುತ್ತಿದ್ದಾಳೆ. ಇಬ್ಬರ ನಡುವೆ ಐದಾರು ವರ್ಷಗಳ ಅಂತರವಿದೆ. ಆದರೂ ಅಣ್ಣನಿಗೆ ತನ್ನ ತಂಗಿಯನ್ನು ಕಂಡರೆ ಆಗದಂತೆ ನಡೆದುಕೊಳ್ಳುತ್ತಾನೆ. ಇವರಿಬ್ಬರ ನಡುವೆ ಸೌಹಾರ್ದ ಮೂಡಿಸುವುದು ಹೇಗೆ?
ಇದೇನು ಅಂಥ ಗಂಭೀರವಾದ ಸಮಸ್ಯೆ ಅಲ್ಲ. ಬಹುತೇಕ ಮನೆಗಳಲ್ಲಿ ಇರುವ ಸಾಮಾನ್ಯ ಸಮಸ್ಯೆ. ನಾವಿಬ್ಬರು, ನಮಗಿಬ್ಬರು. ಕೀರುತಿಗೊಬ್ಬ ಮಗ. ಆರತಿಗೊಬ್ಬಳು ಮಗಳು ಎನ್ನುವ ಸಂಸಾರದಲ್ಲಿ ಇರುವ ಸರ್ವೇ ಸಾಧಾರಣವಾದ ಸಮಸ್ಯೆ. ಬಹಳಷ್ಟು ಸಂದರ್ಭಗಳಲ್ಲಿ ಇದಕ್ಕೆ ಪಾಲಕರೇ ಕಾರಣರಾಗಿರುತ್ತಾರೆ. ಆದರೆ ಅವರಿಗೆ ಇದು ಗೊತ್ತಿರುವುದಿಲ್ಲ.
ಮೊದಲು ಈ ಸಮಸ್ಯೆಯ ಮೂಲವನ್ನು ಅರ್ಥಮಾಡಿಕೊಳ್ಳುವುದಕ್ಕೆ ಪ್ರಯತ್ನಿಸೋಣ. ಪಾಲಕರ ಗಮನವನ್ನು ಹೆಚ್ಚಾಗಿ ತನ್ನೆಡೆಗೆ ಸೆಳೆದುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಇಬ್ಬರು ಮಕ್ಕಳ ನಡುವೆ ಎಲ್ಲಾ ವಿಷಯಗಳಲ್ಲಿಯೂ ಸ್ಪರ್ಧೆ ಇರುತ್ತದೆ. ಪಾಲಕರ ಪ್ರತಿಕ್ರಿಯೆಗಳನ್ನು ಗಮನಿಸುತ್ತಾ, ಕಾಲಾಂತರದಲ್ಲಿ ಅವರು ತಮಗೆ ಬೇಕಾದಂತೆ ತಮ್ಮನ್ನು ರೂಪಿಸಿಕೊಳ್ಳುತ್ತಾರೆ. ತಂದೆಗೆ ಮಗಳು ಪ್ರಿಯವಾದರೆ, ತಾಯಿಗೆ ಮಗ ಅಚ್ಚುಮೆಚ್ಚು. ಇದು ಸರ್ವೇ ಸಾಮಾನ್ಯ. ಮುದ್ದು ಹೆಚ್ಚಾಗಿ ಬೆಳೆದ ಮಗ, ತಂಗಿಯನ್ನು ಕೀಳಾಗಿ ಕಾಣುವುದಿದೆ. ಅವನಿಗೆ ತಾನು ಶ್ರೇಷ್ಠ ಎನ್ನುವ ಭಾವನೆ ಇರುತ್ತದೆ.
ನಿಮ್ಮ ಮಕ್ಕಳ ವಿಷಯದಲ್ಲಿ, ಅಣ್ಣನಿಗೆ ತಂಗಿಯನ್ನು ಕಂಡರೆ ಅಸೂಯೆ ಇರಬಹುದು. ಆಕೆ ಮೆಡಿಕಲ್ ಓದುವಷ್ಟು ಜಾಣೆ ಎಂತಲೂ ಅಥವಾ ಅವಳಿಗೆ ಡೊನೇಷನ್ ಕೊಟ್ಟು ನೀವು ಮೆಡಿಕಲ್ ಓದಿಸುತ್ತಿದ್ದೀರಿ ಎಂತಲೋ ಅವನಿಗೆ ಅಸಮಾಧಾನ ಇರಬಹುದು. ತಾನೂ ಮೆಡಿಕಲ್ ಓದುತ್ತಿದ್ದೆ ಎಂದು ಅವನಿಗೆ ಅನ್ನಿಸಿರಬಹುದು. ಯಾರಾದರೂ ತಂಗಿಯನ್ನು ಹೊಗಳುವಾಗ, ಅವನಿಗೆ ಕೀಳರಿಮೆಯಾಗಿರಬಹುದು. ಎಳವೆಯಿಂದಲೂ ನೀವು ಮಗಳನ್ನು ಹೆಚ್ಚು ಮುದ್ದಿನಿಂದ ಬೆಳೆಸಿರಬಹುದು. ಆವಾಗಿನಿಂದಲೇ ಅವನಿಗೆ ಅವಳ ಮೇಲೆ ಮತ್ಸರ ಇರಬಹುದು. ಅವರಿಬ್ಬರಲ್ಲಿ ಮೊದಲಿನಿಂದಲೂ ಹೊಂದಾಣಿಕೆ ಕಡಿಮೆ ಇದ್ದಿರಬಹುದು. ತಂಗಿ ರೂಪಸಿಯಾಗಿದ್ದಿರಬಹುದು. ಅವನು ಸಾಧಾರಣ ಮೈಕಟ್ಟಿನವನಾಗಿರಬಹುದು. ಅವಳ ಉತ್ಸಾಹಪೂರ್ಣ ವ್ಯಕ್ತಿತ್ವದಿಂದ ಅವನಿಗೆ ಕಿರಿಕಿರಿಯಾಗಬಹುದು. ಅವರಿಬ್ಬರ ಬೇಕು-ಬೇಡಗಳ ಬಗ್ಗೆ ಇಬ್ಬರಿಗೂ ಅಸಮಾಧಾನ ಇರಬಹುದು. ಮೊದಲಿನಿಂದಲೂ ಪರಸ್ಪರ ಇಬ್ಬರೂ ಜಗಳವಾಡುತ್ತಿರಬಹುದು. ಇಬ್ಬರೂ ಭಿನ್ನ ವ್ಯಕ್ತಿತ್ವದವರಾಗಿರಬಹುದು. ಅವನೂ ಕೂಡ ಅವನ ಜೀವನದಲ್ಲಿ, ಸೋಲು, ತಿರಸ್ಕಾರ, ಅವಮಾನ, ಮೋಸ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಅವಳ ವೈಯಕ್ತಿಕ ವಿಚಾರಗಳು, ಬದುಕಿನ ರೀತಿ ಅವನಿಗೆ ಇಷ್ಟ ಇಲ್ಲದಿರಬಹುದು. ತಮ್ಮ ಕೊನೆಗಾಲದಲ್ಲಿ ಮಗನೇ ತಾನೆ, ತಮ್ಮನ್ನು ನೋಡಿಕೊಳ್ಳುವುದು ಎನ್ನುವ ಪಾಲಕರ ಸುಪ್ತ ಆಲೋಚನೆಯೂ ಇಲ್ಲಿ ಪ್ರಭಾವವನ್ನು ಬೀರಿರುತ್ತದೆ. ತಂಗಿ ಹೇಗಿದ್ದರೂ ಬೇರೆ ಹೋಗುತ್ತಾಳೆ ಎನ್ನುವ ಅಂತರಂಗದೊಳಗಿನ ವಿಷಯವೂ ಅವನು ಅವಳನ್ನು ಕೆಟ್ಟದ್ದಾಗಿ ನಡೆಸಿಕೊಳ್ಳುವುದಕ್ಕೆ ಒಂದು ಕಾರಣವಿರಲೂಬಹುದು. ಇನ್ನು, ಪಾಲಕರಲ್ಲಿ ಪರಸ್ಪರ ಹೊಂದಾಣಿಕೆ ಕಡಿಮೆ ಇದ್ದೂ, ಅದನ್ನು ಗಮನಿಸಿದ ಮಕ್ಕಳೂ ಹಾಗೆಯೇ ಆಗಿರಬಹುದು.
ನಿಮ್ಮಿಬ್ಬರಲ್ಲಿ ಮಗನು ಯಾರ ಮಾತನ್ನು ಕೇಳುತ್ತಾನೋ ಅವರು ಅವನಿಗೆ ಸಂಸಾರದಲ್ಲಿ ಎಲ್ಲರ ಮಹತ್ವದ ಬಗ್ಗೆ, ತಂಗಿಯನ್ನು ನಡೆಸಿಕೊಳ್ಳಬೇಕಾದ ಸರಿಯಾದ ರೀತಿಯ ಬಗ್ಗೆ ಹೇಳಿ. ಅವನ ಮನಸ್ಸಿನೊಳಗಿನ ಸಮಸ್ಯೆಗಳನ್ನು ಕೇಳಿ ತಿಳಿದುಕೊಳ್ಳಿ. ಅವನು ನಿಮ್ಮ ಬಗ್ಗೆ ಅಸಹನೆಯಿಂದ ಮಾತನಾಡಿದರೆ ಅವನ ದೂರುಗಳನ್ನು ಸಮಾಧಾನದಿಂದ ಕೇಳಿಸಿಕೊಳ್ಳಿರಿ. ನಿಮ್ಮಿಂದ ತಪ್ಪಾಗಿದ್ದರೆ ಅದನ್ನು ಒಪ್ಪಿಕೊಳ್ಳಿರಿ. ಇಬ್ಬರೂ ಮಕ್ಕಳನ್ನು ಒಟ್ಟಿಗೆ ಕೂರಿಸಿ ಮಾತನಾಡಿರಿ. ಎಲ್ಲರೂ ಒಂದು ವಾರದ ಮಟ್ಟಿಗೆ ಬೇರೆ ಊರಿಗೆ ಹೋಗಿ ಬನ್ನಿರಿ.
ಸಂಸಾರದಲ್ಲಿ ಬಗೆಹರಿಯಲಾರದ ಸಮಸ್ಯೆಗಳು ಇಲ್ಲ! ಜೀವನದಲ್ಲಿ ನಮ್ಮ ಮಾತು ಮತ್ತು ವರ್ತನೆಗಳಿಂದ ಸಮಸ್ಯೆಗಳು ಹುಟ್ಟುತ್ತವೆ. ಹಾಗೆಯೇ ಅವುಗಳಿಗೂ ಪರಿಹಾರವೂ ಇದ್ದೇ ಇರುತ್ತದೆ.
ಡಾ.ಡಿ.ಎಂ.ಹೆಗಡೆ, ಸಮಾಲೋಚಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.