ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಜಿನಿಯರಿಂಗ್ ಸಿಗದಿದ್ದರೆ ಏನು ಓದಬಹುದು ?

ಪ್ರದೀಪ್ ಕುಮಾರ್ ವಿ.
Published 28 ಮೇ 2023, 23:33 IST
Last Updated 28 ಮೇ 2023, 23:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

1. ನಾನು ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯನ್ನು ಸರಿಯಾಗಿ ಬರೆಯಲಾಗಲಿಲ್ಲ. ಏನಾಗುತ್ತದೋ ಗೊತ್ತಿಲ್ಲ. ಎಂಜಿನಿಯರಿಂಗ್ ಸಿಗದಿದ್ದರೆ, ಏನು ಮಾಡಬಹುದು ?

ಹೆಸರು, ಊರು ತಿಳಿಸಿಲ್ಲ.

ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳು ಸಂಪೂರ್ಣವಾಗಿ ಭರ್ತಿಯಾಗುತ್ತಿಲ್ಲ. ಹಾಗಾಗಿ, ಎಂಜಿನಿಯರಿಂಗ್ ಮಾಡುವುದೇ ನಿಮ್ಮ ಅಪೇಕ್ಷೆಯಾಗಿದ್ದರೆ, ಚಿಂತಿಸುವುದು ಬೇಡ. ಇದಲ್ಲದೆ, ಎಂಜಿನಿಯರಿಂಗ್ ಕೋರ್ಸಿಗೆ ಪರ್ಯಾಯವೆನ್ನಬಹುದಾದ ಬಿ.ಎಸ್ಸಿ, ಬಿಸಿಎ ಮುಂತಾದ ಕೋರ್ಸ್‌ಗಳಿವೆ. ನಿಮಗಿಷ್ಟವಿರುವ ವಿಷಯದಲ್ಲಿ ಈ ಕೋರ್ಸ್‌ಗಳನ್ನು ಮಾಡಿ, ಅರೆಕಾಲಿಕ ಕೌಶಲಾಭಿವೃದ್ಧಿ ಕೋರ್ಸ್‌ಗಳನ್ನು ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=ABkhf_hiHfw 

ADVERTISEMENT

2. ನಾನು ಎಂಎ (ಪತ್ರಿಕೋದ್ಯಮ) ಮಾಡಿ, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಪಿಎಚ್.ಡಿ ಮಾಡುವ ಆಸೆಯಿದೆ. ಕೆಲಸದಲ್ಲಿದ್ದುಕೊಂಡು ಪಿಎಚ್.ಡಿ ಮಾಡಬಹುದೇ? ಪಿಎಚ್.ಡಿಗೆ ಬೇಕಾದ ಅರ್ಹತೆಗಳೇನು? ಇದನ್ನು ಬಿಟ್ಟು ಸ್ನಾತಕೋತ್ತರ ಪದವೀಧರರು ಬೇರೆ ಯಾವ ಉನ್ನತ ಶಿಕ್ಷಣ ಪಡೆಯಬಹುದು?

ಹೆಸರು, ಊರು ತಿಳಿಸಿಲ್ಲ.
ವಿಶ್ವವಿದ್ಯಾಲಯ ಅನುದಾನ ಆಯೋಗದ 2022ರ ಕರಡು ನಿಯಮಾವಳಿಗಳಂತೆ ಉದ್ಯೋಗದಲ್ಲಿರುವ ಅಭ್ಯರ್ಥಿಗಳು ಪಿಎಚ್.ಡಿ ಮಾಡಬಹುದು. ಆದರೆ, ಪೂರ್ಣಾವಧಿ ಪಿಎಚ್.ಡಿ ಮಾಡಲು ಅನ್ವಯವಾಗುವ ಎಲ್ಲಾ ನಿಯಮಾವಳಿಗಳು ಉದ್ಯೋಗದಲ್ಲಿರುವ ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ. ನೀವು ಕೆಲಸ ಮಾಡುತ್ತಿರುವ ಸಂಸ್ಥೆಯ ಅನುಮತಿಯ ಜೊತೆಗೆ, ಕನಿಷ್ಠ 6 ತಿಂಗಳು ಪಿಎಚ್.ಡಿ ಸಂಶೋಧನೆಯ ಪೂರ್ಣಾವಧಿ ಕೋರ್ಸ್ ಮಾಡಬೇಕಾಗುತ್ತದೆ. ಇನ್ನಿತರ ನಿಯಮಾವಳಿಗಳು ನೀವು ಸೇರಬಯಸುವ ವಿಶ್ವವಿದ್ಯಾಲಯವನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.ugc.gov.in/pdfnews/4405511_Draft-UGC-PhD-regulations-2022.pdf

ಪಿಎಚ್.ಡಿ ಮಾಡಲಾಗದಿದ್ದರೆ, ಸಂಬಂಧಪಟ್ಟ ಇನ್ನೊಂದು ವಿಷಯದಲ್ಲಿ ಸ್ನಾತಕೋತ್ತರ ಕೋರ್ಸ್ (ಉದಾಹರಣೆಗೆ ಭಾಷೆ, ಸಾಹಿತ್ಯ, ಮಾಧ್ಯಮ ಇತ್ಯಾದಿ) ಅಥವಾ ಅರೆಕಾಲಿಕ/ದೂರಶಿಕ್ಷಣದ ಮೂಲಕ ವೃತ್ತಿಪರ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ಗಳನ್ನು ಮಾಡಬಹುದು. ಪಿಎಚ್.ಡಿ ಮಾಡುವ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=Mb4PKUb35_Q

3. ನಾನು ಇನ್ನೆರಡು ತಿಂಗಳಲ್ಲಿ ಎಂ.ಎಸ್ಸಿ (ರಸಾಯನ ವಿಜ್ಞಾನ) ಮುಗಿಸುತ್ತಿದ್ದೇನೆ. ಸಂಸ್ಥೆಗಳಲ್ಲಿ ಕೆಲಸ ಮಾಡುವುದೇ, ಎನ್‌ಇಟಿ ಮಾಡಿ ಉಪನ್ಯಾಸಕರಾಗುವುದೇ ಅಥವಾ ಕೆಎಎಸ್ ಮಾಡುವುದೇ ಎಂಬ ಗೊಂದಲವಿದೆ. ಏನು ಮಾಡಿದರೆ ಮುಂದಿನ ಭವಿಷ್ಯ ಚೆನ್ನಾಗಿರಬಹುದು?

ಹೆಸರು, ಊರು ತಿಳಿಸಿಲ್ಲ.

ಖಚಿತವಾದ ವೃತ್ತಿಯೋಜನೆಯಿಲ್ಲದೆ ಕೋರ್ಸ್ಗಳನ್ನು ಮಾಡಿದರೆ ಇಂತಹ ಗೊಂದಲಗಳು ಸಾಮಾನ್ಯ. ಜೀವನದಲ್ಲಿ ನಿರ್ದಿಷ್ಟವಾದ, ಸ್ಪಷ್ಟವಾದ, ಸಾಧಿಸಬಹುದಾದ, ಮತ್ತು ಅಳೆಯಬಹುದಾದ ಗುರಿಯಿರಬೇಕು. ಬಾಳಿಗೊಂದು ಗುರಿ ಇದ್ದರೆ, ನಮ್ಮಲ್ಲಿರುವ ಸುಪ್ತ ಶಕ್ತಿಗಳನ್ನು ಆ ಗುರಿಯೆಡೆಗೆ ಕೇಂದ್ರೀಕರಿಸಿ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಂತೃಪ್ತಿಯನ್ನು ಪಡೆಯಬಹುದು.
ಈಗ ನೀವು ಪರಿಶೀಲಿಸುತ್ತಿರುವ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಜ್ಞಾನ, ಆಸಕ್ತಿ, ಅಭಿರುಚಿ, ಸಾಮರ್ಥ್ಯ ಮತ್ತು ಕೌಶಲಗಳು ವಿಭಿನ್ನ. ಹಾಗಾಗಿ, ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ನಿಮಗೊಪ್ಪುವ ಮತ್ತು ಆತ್ಮಸಂತೃಪ್ತಿಯನ್ನು ತಂದುಕೊಡುವ ವೃತ್ತಿಯನ್ನು ಆಯ್ಕೆ ಮಾಡಿ, ಅದರಂತೆ ಮುಂದಿನ ನಿರ್ಧಾರವನ್ನು ಮಾಡುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=MHnPg_sp6E0

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.