ನವದೆಹಲಿ: : ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ‘ಜೆಇಇ–ಮೇನ್–2025’ರ ಮೊದಲ ಆವೃತ್ತಿಯ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ ಒಬ್ಬರು ಸೇರಿ 14 ಪರೀಕ್ಷಾರ್ಥಿಗಳು ಶೇಕಡ ನೂರು ಅಂಕ ಗಳಿಸಿದ್ದಾರೆ.
ನೂರು ಅಂಕ ಪಡೆದವರಲ್ಲಿ ಐವರು ರಾಜಸ್ಥಾನದವರು, ಇಬ್ಬರು ದೆಹಲಿ ಮತ್ತು ಉತ್ತರ ಪ್ರದೇಶದವರು, ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ತೆಲಂಗಾಣ, ಮಹಾರಾಷ್ಟ್ರಗಳ ತಲಾ ಒಬ್ಬರು ಇದ್ದಾರೆ.
14 ಅಭ್ಯರ್ಥಿಗಳಲ್ಲಿ 12 ಮಂದಿ ಸಾಮಾನ್ಯ ವರ್ಗದವರಾಗಿದ್ದು, ಉಳಿದ ಇಬ್ಬರು ಒಬಿಸಿ ಮತ್ತು ಎಸ್‌ಸಿ ವರ್ಗದವರಾಗಿದ್ದಾರೆ. ಮೊದಲ ಆವೃತ್ತಿಯಲ್ಲಿ 12.58 ಲಕ್ಷ ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದರು.
ಪರೀಕ್ಷೆಯನ್ನು ಅಸ್ಸಾಮಿ, ಬೆಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ತೆಲುಗು, ತಮಿಳು, ಉರ್ದು ಸೇರಿ 13 ಭಾಷೆಗಳಲ್ಲಿ ನಡೆಸಲಾಗಿತ್ತು.
ಭಾರತ ಹೊರತುಪಡಿಸಿ ದೋಹಾ, ದುಬೈ, ಕಠ್ಮಂಡು, ರಿಯಾದ್, ಅಬುಧಾಬಿ, ವಾಷಿಂಗ್ಟನ್ ಸೇರಿ 15 ವಿದೇಶಿ ನಗರಗಳಲ್ಲಿ ನಡೆಸಲಾಗಿತ್ತು.
ಮೊದಲ ಆವೃತ್ತಿಯ ಪರೀಕ್ಷೆ ಜನವರಿ–ಫೆಬ್ರುವರಿಯಲ್ಲಿ ನಡೆದಿದೆ. ಎರಡನೇ ಆವೃತ್ತಿ ಏಪ್ರಿಲ್‌ನಲ್ಲಿ ನಿಗದಿಯಾಗಿದೆ. ಜೆಇಇ ಮೇನ್ಸ್‌ನ ಪ್ರಥಮ ಮತ್ತು ದ್ವಿತೀಯ ಪ್ರಶ್ನೆಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ಜೆಇಇ–ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುತ್ತದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ದೇಶದ ಪ್ರಮುಖ 23 ಐಐಟಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ.
ಜೆಇಇ ಮೇನ್ಸ್‌ನ ಎರಡೂ ಆವೃತ್ತಿಗಳ ಪರೀಕ್ಷೆ ಮುಗಿದ ಬಳಿಕ, ಎರಡೂ ಆವೃತ್ತಿಗಳಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಪೈಕಿ ಉತ್ತಮವಾದುದನ್ನು ಆಧರಿಸಿ ಅಭ್ಯರ್ಥಿಗಳ ರ‍್ಯಾಂಕ್ ಪಟ್ಟಿ ಪ್ರಕಟಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.