ADVERTISEMENT

ಪಿಯು ಫಲಿತಾಂಶ: ಮೈಸೂರಿಗೆ 17ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2024, 8:19 IST
Last Updated 10 ಏಪ್ರಿಲ್ 2024, 8:19 IST
   

ಮೈಸೂರು: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಕಳೆದ ಬಾರಿ 13ನೇ ಸ್ಥಾನದಲ್ಲಿದ್ದ ಮೈಸೂರು ಜಿಲ್ಲೆಯು 17ನೇ ಸ್ಥಾನಕ್ಕೆ ಕುಸಿದಿದೆ.

ಕಾಲೇಜು ಶಿಕ್ಷಣ ಇಲಾಖೆಯು ಬುಧವಾರ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ಜಿಲ್ಲೆಯ ಫಲಿತಾಂಶವು ಶೇ 79.89ರಿಂದ ಶೇ 83.13ಕ್ಕೆ ಏರಿಕೆಯಾಗಿದೆ. ‌ರಾಜ್ಯದಲ್ಲಿ ಟಾಪ್‌ 10ರಲ್ಲಿ ಕಾಣಿಸಿಕೊಳ್ಳಬೇಕೆಂಬ ಮೈಸೂರು ಜಿಲ್ಲೆಯ ಕನಸು ಈ ಬಾರಿಯೂ ಈಡೇರಲಿಲ್ಲ.

ವಿಜ್ಞಾನ ವಿಭಾಗದಲ್ಲಿ ಕುವೆಂಪುನಗರದ ಆದಿಚುಂಚನಗಿರಿ ಪಿಯು ಕಾಲೇಜಿನ ಕೆ.ಎಚ್.ಉರ್ವಿಶ್‌ ಪ್ರಶಾಂತ್‌ ಹಾಗೂ ಮೇಟಗಳ್ಳಿಯ ಆರ್ ವಿಪಿಬಿ ಕಾಲೇಜಿನ ಜಾಹ್ನವಿ ತುಮಕೂರು ಗುರುರಾಜ್‌ ತಲಾ 597 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ADVERTISEMENT

ಉರ್ವಿಶ್ ಪ್ರಶಾಂತ್ ಅವರು ಕನ್ನಡ, ಇಂಗ್ಲಿಷ್, ಭೌತವಿಜ್ಞಾನದಲ್ಲಿ ತಲಾ 99, ರಸಾಯನ ವಿಜ್ಞಾನ, ಗಣಿತ ಹಾಗೂ ಜೀವವಿಜ್ಞಾನದಲ್ಲಿ 100 ಅಂಕ ಪಡೆದಿದ್ದಾರೆ. ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ (ಐಐಟಿ) ಎಂಜಿನಿಯರಿಂಗ್ ಮಾಡಿ, ಇಸ್ರೊ ಸೇರುವ ಕನಸು‌ ಅವರದು.

ಜಾಹ್ನವಿ ಅವರು ಸಂಸ್ಕೃತ, ಗಣಿತ, ಜೀವವಿಜ್ಞಾನ ಹಾಗೂ ರಸಾಯನ ವಿಜ್ಞಾನದಲ್ಲಿ ತಲಾ 100 ಅಂಕ, ಇಂಗ್ಲಿಷ್ ನಲ್ಲಿ 99 ಮತ್ತು ಭೌತವಿಜ್ಞಾನದಲ್ಲಿ 98 ಅಂಕ ಗಳಿಸಿದ್ದಾರೆ. ಮಹಾರಾಣಿ ಪಿಯು ಕಾಲೇಜಿನ ಶ್ರೇಯಾ ಗಣೇಶ್ ಅಯ್ಯರ್ 5ನೇ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ನಗರದ ಸದ್ವಿದ್ಯಾ ಪಿಯು ಕಾಲೇಜಿನ ಸ್ವಾತಿ ಎಸ್. ಭಟ್ 594 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದು, ವ್ಯವಹಾರಿಕ ಅಧ್ಯಯನ, ಅಕೌಂಟೆನ್ಸಿ, ಗಣಿತ ಹಾಗೂ‌ ಸಂಸ್ಕೃತದಲ್ಲಿ ತಲಾ 100, ಇಂಗ್ಲಿಷ್ ನಲ್ಲಿ 96, ಸಂಖ್ಯಾಶಾಸ್ತ್ರದಲ್ಲಿ 98 ಅಂಕ ಪಡೆದಿದ್ದಾರೆ.

ಫಲಿತಾಂಶ ಹೆಚ್ಚಳ:

'ಜಿಲ್ಲೆಯು ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿದೆ. ಶೇ 79.89ರಿಂದ ಶೇ 83.13ಕ್ಕೆ ಏರಿಕೆಯಾಗಿದೆ. ರ‍್ಯಾಂಕಿಂಗ್‌ನಲ್ಲಿ ಮಾತ್ರ 17ನೇ ಸ್ಥಾನ ಸಿಕ್ಕಿದೆ' ಎಂದು ಡಿಡಿಪಿಯು ಮರಿಸ್ವಾಮಿ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.