ADVERTISEMENT

SSLC ಪೂರಕ ಪರೀಕ್ಷೆ-ಶುಲ್ಕ ಕಟ್ಟಲಾಗದೇ ಪರಿತಪಿಸಿದ್ದ ಗ್ರೀಷ್ಮಾ ರಾಜ್ಯಕ್ಕೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 11:31 IST
Last Updated 11 ಅಕ್ಟೋಬರ್ 2021, 11:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮೂಡಬಿದಿರೆಯ ಆಳ್ವಾಸ್‌ ಶಾಲೆಯ ವಿದ್ಯಾರ್ಥಿನಿ ಗ್ರೀಷ್ಮಾ ನಾಯ್ಕ್ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಗ್ರೀಷ್ಮಾ 625 ಕ್ಕೆ 599 ಅಂಕ ಗಳಿಸಿ ಈ ಸಾಧನೆ ಮಾಡಿದ್ದಾರೆ.

‘ಶುಲ್ಕ ಕಟ್ಟದ ಕಾರಣ ಗ್ರೀಷ್ಮಾಗೆ ಜುಲೈ 19 ಹಾಗೂ 22ರಂದು ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನಿರಾಕರಿಸಲಾಗಿತ್ತು. ಈ ವಿಷಯ ತಿಳಿದ ಕೂಡಲೇ ಅಂದಿನ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರುಗ್ರೀಷ್ಮಾ ಮನೆಗೆ ಭೇಟಿ ನೀಡಿ ಧೈರ್ಯ ಹೇಳಿದ್ದರು. ಪೂರಕ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದರು’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ADVERTISEMENT

‘ಸೆಪ್ಟೆಂಬರ್ 27 ಹಾಗೂ 29 ರಂದು ನಡೆದಿದ್ದ ಪೂರಕ ಪರೀಕ್ಷೆಗೆ ಒಟ್ಟು 59,155 ಮಂದಿ ಹಾಜರಾಗಿದ್ದರು. ಈ ಪೈಕಿ 29,522 ವಿದ್ಯಾರ್ಥಿಗಳು (ಶೇ 55.54) ಉತ್ತೀರ್ಣರಾಗಿದ್ದಾರೆ. ಈ ಬಾರಿ 17,973 ಬಾಲಕಿಯರು ಪರೀಕ್ಷೆ ಬರೆದಿದ್ದರು. ಇದರಲ್ಲಿ 10,290 ಜನ (ಶೇ 57.25) ತೇರ್ಗಡೆಯಾಗಿದ್ದಾರೆ. 35,182 ಬಾಲಕರಲ್ಲಿ 19,232 ಜನ (ಶೇ 54.66) ಉತ್ತೀರ್ಣರಾಗಿದ್ದಾರೆ’ ಎಂದರು.

‘3,232 ಸರ್ಕಾರಿ ಶಾಲೆಗಳ 27,313 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ 15,855 ಮಂದಿ ತೇರ್ಗಡೆ ಹೊಂದಿದ್ದಾರೆ. ನಗರಕ್ಕಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಉತ್ತಮ ಸಾಧನೆ ಮಾಡಿದ್ದಾರೆ’ ಎಂದು ಹೇಳಿದರು.

'ಪರೀಕ್ಷಾ ಫಲಿತಾಂಶವನ್ನು ಮಧ್ಯಾಹ್ನ 3 ಗಂಟೆಯ ನಂತರ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್.ಮೂಲಕ‌ ರವಾನಿಸಲಾಗುತ್ತದೆ‌. 3 ಗಂಟೆಯ ನಂತರ ವಿದ್ಯಾರ್ಥಿಗಳು https://sslc.Karnataka.gov.in/ ವೆಬ್‌ಸೈಟ್‌ನಲ್ಲಿ ತಾತ್ಕಾಲಿಕ ಅಂಕಪಟ್ಟಿಗಳನ್ನು ವೀಕ್ಷಿಸಬಹುದು. https:// karresults.nic.in ತಾಣದಲ್ಲಿ ಫಲಿತಾಂಶ ನೋಡಬಹುದು' ಎಂದರು.

ಅನುಮತಿ ಸಿಕ್ಕರೆ 1 ರಿಂದ 5ನೇ ತರಗತಿ ಆರಂಭ: ‘ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿದರೆ ದಸರಾ ರಜೆಯ ಬಳಿಕ 1 ರಿಂದ 5ನೇ ತರಗತಿ ಆರಂಭಿಸಲಾಗುತ್ತದೆ. ಅನುಮತಿ ನಿರಾಕರಿಸಿದರೆ 3 ರಿಂದ 5ನೇ ತರಗತಿ ಆರಂಭಕ್ಕೆ ಮನವಿ ಮಾಡುತ್ತೇವೆ. ಶಾಲಾ ಆರಂಭಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದೇ 21ರಿಂದ ಮಧ್ಯಾಹ್ನದ ಬಿಸಿಯೂಟವನ್ನೂ ಪ್ರಾರಂಭಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘6 ರಿಂದ 10ನೇ ತರಗತಿಯ ಶಾಲೆಗಳು ಸುಸೂತ್ರವಾಗಿ ನಡೆಯುತ್ತಿವೆ. ಕೆಲ ಶಾಲೆಗಳಲ್ಲಿ ಶೇ 90ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. 1 ರಿಂದ 5ನೇ ತರಗತಿಗಳನ್ನೂ ಆರಂಭಿಸುವಂತೆ ಮಕ್ಕಳೇ ಮನವಿ ಮಾಡುತ್ತಿದ್ದಾರೆ. ಶಾಲಾ ಶುಲ್ಕದ ವಿಚಾರವಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ಉದ್ಭವಿಸಿರುವ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ನಿರ್ಧಾರ ಪ್ರಕಟಿಸುತ್ತೇವೆ’ ಎಂದು ಹೇಳಿದರು.

‘ಪಿಯುಸಿ ಪೂರಕ ಪರೀಕ್ಷೆ ನಡೆಸುವ ಆಲೋಚನೆ ಇಲ್ಲ’
‘ಪಿಯುಸಿ ಪೂರಕ ಪರೀಕ್ಷೆಗಳನ್ನು ನಡೆಸುವ ಆಲೋಚನೆ ಸದ್ಯಕ್ಕಂತೂ ಇಲ್ಲ. ಕೇವಲ 12 ಸಾವಿರ ಮಂದಿಗಾಗಿ ಅಗತ್ಯ ಮೂಲ ಸೌಕರ್ಯ ಸೃಜಿಸಿ ಪರೀಕ್ಷೆ ಆಯೋಜಿಸುವುದು ತುಂಬಾ ಕಷ್ಟ’ ಎಂದು ನಾಗೇಶ್‌ ತಿಳಿಸಿದರು.

‘ಇಷ್ಟೆಲ್ಲಾ ಖರ್ಚು ಮಾಡಿ ಪರೀಕ್ಷೆ ನಡೆಸಿದರೂ ಕೂಡ ಅದರಲ್ಲಿ ಉತ್ತೀರ್ಣರಾದವರಿಗೆ ಕಾಲೇಜುಗಳಲ್ಲಿ ದಾಖಲಾತಿ ಪಡೆಯುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಪರೀಕ್ಷೆ ನಡೆಸದಿರಲು ತೀರ್ಮಾನಿಸಿದ್ದೇವೆ. ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಪಠ್ಯಕ್ರಮ ಕಡಿತಗೊಳಿಸುವ ಆಲೋಚನೆ ಇಲ್ಲ. ಪಠ್ಯಕ್ರಮ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಹಾಗೂ ಭಾನುವಾರವೂ ತರಗತಿಗಳನ್ನು ನಡೆಸಲು ಶಿಕ್ಷಕರೇ ಉತ್ಸುಕರಾಗಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.