ADVERTISEMENT

ಮಕ್ಕಳನ್ನು ಅವರ ಪಾಡಿಗೆ ಇರಲು ಬಿಡಿ!

ರಮ್ಯಾ ಶ್ರೀಹರಿ
Published 20 ನವೆಂಬರ್ 2018, 20:00 IST
Last Updated 20 ನವೆಂಬರ್ 2018, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಮಯದ ಸದುಪಯೋಗ ಹೇಗೆ? ಸಮಯ ಪರಿಪಾಲನೆಯ ಮಹತ್ವ, ವೇಳಾಪಟ್ಟಿಯಂತೆ ದಿನಚರಿ, ಯಾವ ಚಟುವಟಿಕೆ ಮುಖ್ಯ, ಯಾವುದು ಮುಖ್ಯವಲ್ಲ - ಎಂಬುದರ ಬಗ್ಗೆ ನಾವೆಲ್ಲ ಮಕ್ಕಳಿಗೆ ವಾರಕ್ಕೆರಡು ಬಾರಿ ತಪ್ಪದೆ ಪ್ರವಚನ ಕೊಡುತ್ತೇವೆ ಅಲ್ವೇ? ಶಾಲೆಯ ಹೋಮ್‌ವರ್ಕ್‌, ಎಕ್ಸಾಮ್, ಪ್ರೊಜೆಕ್ಟ್ ವರ್ಕ್ ಜೊತೆ ಜೊತೆಗೆ ಆ ಕ್ಲಾಸು, ಈ ಕ್ಲಾಸು, ಆ ಒಲಿಂಪಿಯಾಡ್, ಈ ಪರೀಕ್ಷೆ ಎಲ್ಲದಕ್ಕೂ ತಯಾರಿ ಮಾಡುತ್ತೇವೆ.

ಮಾಡಿದ ಪ್ರತಿಯೊಂದು ಕೆಲಸದ ಪರಿಣಾಮದ ಕುರಿತು ದೀರ್ಘವಾಗಿ ಚರ್ಚಿಸುತ್ತೇವೆ. ಯಾವಾಗ ಏನು, ಹೇಗೆ ಮಾಡಬೇಕು ಎಂಬುದನ್ನು ಸದಾ ಪ್ಲಾನ್ ಮಾಡುವುದನ್ನು ಹೇಳಿಕೊಡುತ್ತೇವೆ. ಇನ್ನು ಕೆಲವರಂತೂ ಮಕ್ಕಳಿಗೆ bore ಆಗಲು ಬಿಡುವುದಿಲ್ಲ, ಅಷ್ಟು ಚಟುವಟಿಕೆಗಳಲ್ಲಿ ತೊಡಗಿಸಿರುತ್ತಾರೆ.

Boredom ಕೂಡ ಮಕ್ಕಳ ಮನೋಲೋಕವನ್ನು ರೂಪಿಸುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರಿಗೆ ಯಾಕೆ ಅನಿಸುವುದಿಲ್ಲವೋ ಗೊತ್ತಿಲ್ಲ. ಆದರೆ ಒಂದು ವಿಷಯ ಗಮನಿಸಿದ್ದೀರಾ? ಈ ಪ್ರಣಾಳಿಕೆಯಲ್ಲಿ ಎಲ್ಲದಕ್ಕೂ ಒಂದೊಂದು ಸಮಯ ಎಂದು ನಿಗದಿಪಡಿಸಲಾಗಿದೆ.

ADVERTISEMENT

ಆದರೆ ಮಗು ತನ್ನೊಂದಿಗೆ ತಾನಿರಲು, ತನ್ನಿಷ್ಟ ಬಂದಂತೆ (ತನಗೂ ಇತರರಿಗೂ ತೊಂದರೆಯಾಗದಂತೆ) ಸಮಯ ಕಳೆಯಲು, ತನ್ನಿಷ್ಟದ ಚಟುವಟಿಕೆಯಲ್ಲಿ ತೊಡಗಲು, ಒಟ್ಟಿನಲ್ಲಿ ಯಾವುದೇ goal oriented task ಮಾಡದೆ, ಸುಮ್ಮನೆ ಖುಷಿಯಾಗಿರುವುದಕ್ಕೆ ಅಂತ ಪ್ರತಿದಿನ ಇಂತಿಷ್ಟು ಸಮಯ ಮೀಸಲಾಗಿದೆಯೇ?

ಮಕ್ಕಳಲ್ಲಿ ಆತ್ಮಾವಲೋಕನದ ಸ್ವಭಾವ

ಮಕ್ಕಳು ಸುಮ್ಮನೆ ಗಿಡ, ಮರ, ಆಕಾಶ, ರಸ್ತೆ, ನಾಯಿ, ಬೆಕ್ಕು, ಪಕ್ಷಿ, ವಾಹನಗಳು ಇವುಗಳನ್ನು ನೋಡ್ತಾ ಕೂತಿದ್ರೆ ಅಥವಾ ಇತರ ಮಕ್ಕಳೊಂದಿಗೆ ಕಾಡುಹರಟೆ ಹೊಡೀತಾ ಕೂತಿದ್ರೆ, ಒಬ್ಬನೇ ಟೆರೇಸ್‌ನಲ್ಲೋ ಬಾಲ್ಕನಿಯಲ್ಲೋ ಕೂತು ಸುತ್ತಮುತ್ತಲಿನ ಮನೆ, ಗೋಡೆ, ಕಿಟಕಿ ದಿಟ್ಟಿಸ್ತಾ ಇದ್ರೆ, ಅದನ್ನು ಸಮಯ ಹಾಳು ಅಂತೀರಾ? ಅಥವಾ ಹಾಗನ್ನದಿದ್ರೂ ಆ ಸಮಯದಲ್ಲಿ ಮಕ್ಕಳನ್ನು ಹೇಗೆ ಟ್ರೀಟ್ ಮಾಡ್ತೀರಿ? ಪದೇ ಪದೇ ಮಕ್ಕಳನ್ನು ‘ಏನು ಮಾಡ್ತಾ ಇದ್ದೀಯ’ ಅಂತ ಪ್ರಶ್ನೆ ಮಾಡೋದು, ಅವರ ರೂಮಿನಲ್ಲಿ ಇಣುಕು ಹಾಕೋದು ಮಾಡ್ತೀರಾ?

ಮಗುವಿನ ಜೊತೆ ಮಾತನಾಡುವಾಗ ನಿಮ್ಮ ಭಾಷೆ ಯಾವ ರೀತಿಯದ್ದು? ನೀವೇನಾದ್ರು ಮಕ್ಕಳಿಗೆ lecture ಕೊಡುವುದು ಪೋಷಕರ ಕರ್ತವ್ಯ ಮತ್ತು ಹಕ್ಕು ಅದಕ್ಕೆ ಬೇಕಾದ ಬುದ್ಧಿವಂತಿಕೆ ನಿಮ್ಮ ಬಳಿ ಇದೆ ಎಂದು ನಂಬಿರುವ ವ್ಯಕ್ತಿಗಳಾ? ಒಟ್ಟಿನಲ್ಲಿ ಮಗು ತನ್ನ ಪಾಡಿಗೆ ತಾನಿದ್ದಾಗ, ತನ್ನಿಷ್ಟದ ಕೆಲಸ ಮಾಡುತ್ತಿರುವಾಗ ಆ ಕೆಲಸ ನಿಮಗೆ ಇಷ್ಟವಿರಲಿ ಬಿಡಲಿ ನೀವು ಮಗುವನ್ನು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದು ಮುಂದೆ ಮಗುವಿಗೆ ತನ್ನನ್ನು ತಾನು ಹೇಗೆ ನೋಡಿಕೊಳ್ಳಬೇಕು ಎಂಬುದಕ್ಕೆ ಮಾದರಿಯಾಗುತ್ತದೆ ಎಂಬ ಆಲೋಚನೆ ಸುಳಿದಿದೆಯೇ? ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳ ‘ಏನೂ ಮಾಡದ ಸಮಯ’ದ ಬಗ್ಗೆ ನಿಮಗೆ ತಕರಾರೇನು ಇಲ್ಲ ಅಲ್ವೇ? ಏಕೆಂದರೆ ‘ಮಕ್ಕಳ ಏನೂ ಮಾಡದ ಸಮಯ’ (ಸುಮ್ಮನೆ ಅಲ್ಲಿ ಇಲ್ಲಿ ನೋಡ್ತಾ ಕಾಲ ಕಳೆಯುವ ಸಮಯ) ಅವರ ಮಾನಸಿಕ ಬೆಳವಣಿಗೆಗೆ ತುಂಬಾ ಅವಶ್ಯಕವಾದದ್ದು. ಇಡೀ ದಿನ ಸುಮ್ಮನೆ ಕುಳಿತಿರುವುದು ಆರೋಗ್ಯವಾದ ಮಗುವಿನ ಲಕ್ಷಣವಲ್ಲ. ಹಾಗೆಯೇ ಸದಾ ಅತಿಯಾದ ಚಟುವಟಿಕೆಗಳಲ್ಲಿ ತೊಡಗಿರುವುದೂ ಮಗುವಿನ ಮಾನಸಿಕ ಆರೋಗ್ಯದ ಲಕ್ಷಣವಲ್ಲ.

ಮಗು ಈ ಸುಮ್ಮನೆ ಕುಳಿತು ನೋಡುವ, ತನ್ನ ಪಾಡಿಗೆ ತಾನಿರುವ ಸಮಯದಲ್ಲಿ ತನ್ನೊಂದಿಗೆ ಒಂದು ಮಾತುಕತೆಯಲ್ಲಿ, ತನ್ನೊಟ್ಟಿಗಿನ ಸಖ್ಯದಲ್ಲಿ ಆನಂದವಾಗಿರುತ್ತದೆ. ಈ ರೀತಿಯ ಒಂದು ‘ಅಂತರ್ಮುಖಿ’ ಸಮಯ ಮಗುವಿನ ಭಾವಕೋಶದಲ್ಲಿ ನೆಲೆಯಾಗಿ ಮಗು ತನ್ನೊಟ್ಟಿಗೆ ತಾನು ಸದಾ ಇರುವ ಒಂದು ಆಂತರಿಕ ವ್ಯವಸ್ಥೆಯಾಗಿರುತ್ತದೆ.

ಕಥೆಗಳನ್ನು ಓದುವುದು, ಕೇಳುವುದು, ನಡಿಗೆ, ಶಾಲೆಯಲ್ಲಿ, ಆಟದಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕುವುದು, ತಾನು ಚಿಕ್ಕವಳಿದ್ದಾಗಿನ ಆಟ, ಪಾಠಗಳನ್ನು ಪೋಷಕರು ನೆನಪಿಸಿಕೊಡುವುದು, ರಾತ್ರಿ ಬಿದ್ದ ಕನಸಿನ ಬಗ್ಗೆ ಮಾತನಾಡುವುದು, ಫ್ಯಾಂಟಸಿಗಳನ್ನು ಹಂಚಿಕೊಳ್ಳುವುದು, ತನ್ನ ಬಗ್ಗೆ ಇತರರು ಹೇಗೆ ಯೋಚಿಸಬಹುದು, ತನ್ನ ಬಗ್ಗೆ ಇತರರ ನಡವಳಿಕೆ ಯಾವ ರೀತಿಯದ್ದು ಎಂಬುದರ ಬಗ್ಗೆ ಮಗುವಿನ ಆಲೋಚನೆಗಳೇನು ಎಂಬುದನ್ನು ಕೇಳುವುದು ಎಲ್ಲವೂ ಮಗುವಿಗೆ ಅವಶ್ಯವಾಗಿ ಬೇಕಾದ ಅಂತರ್ಮುಖಿತ್ವವನ್ನು ಮೈಗೂಡಿಸುವ ಉಪಾಯಗಳು.

ಮಕ್ಕಳು ಮಾಡುವ ಪ್ರತಿ ಕೆಲಸಕ್ಕೂ, ಆಟಕ್ಕೂ, ಸಮಯ ಕಳೆಯುವುದಕ್ಕೂ ಸಮಜಾಯಿಷಿ ಕೇಳಿದರೆ ಅಥವಾ ಇಂತಿಂಥ ಕೆಲಸ ಮಾಡಿದರೆ ಏನು ಪ್ರಯೋಜನ ಅಂತ ಟೀಕೆ ಮಾಡುತ್ತಿದ್ದರೆ ಆ ಟೀಕಾತ್ಮಕ ಧ್ವನಿಯೇ ಅವರ ಒಳದನಿಯಾಗಿ ಮುಂದೆ ಅವರು ‘ಉಪಯೋಗಕ್ಕೆ ಬಾರದ’ ಆದರೆ ಅಪಾರ ಮಾನಸಿಕ ಶಾಂತಿ, ಆನಂದ ನೀಡುವ ಕೆಲಸಗಳಲ್ಲಿ ತೊಡಗಿದಾಗ, ವಿಶ್ರಾಂತಿ ತೆಗೆದುಕೊಳ್ಳುವಾಗ ತಪ್ಪಿತಸ್ಥ ಮನೋಭಾವ, ಆತಂಕ ಅನುಭವಿಸುವಂತಾಗುತ್ತದೆ.

ಗೊತ್ತಿರುವುದರ ಆಚೆಗಿನ ಬದುಕು

ಪೋಷಕರ ಮತ್ತು ಮಕ್ಕಳ ನಡುವೆ ಆತ್ಮೀಯತೆಯ ಬಾಂಧವ್ಯ ಸೃಷ್ಟಿಸುವಲ್ಲಿ ಆಟದ ಪಾತ್ರ ದೊಡ್ಡದು. ಆಟ ಎಂದರೆ ಕ್ರಿಕೆಟ್, ಚೆಸ್, ಫುಟ್ಬಾಲ್ ಮಾತ್ರ ಅಲ್ಲ. ತುಂಬಾ ಚಿಕ್ಕ ಮಕ್ಕಳನ್ನು ಗಮನಿಸಿ, ಕೈಗೆ ಸಿಕ್ಕ ಎಲ್ಲ ವಸ್ತುಗಳಿಗೂ ತಮ್ಮ ಆಟದಲ್ಲಿ ಒಂದು ಪಾತ್ರ ನೀಡುತ್ತವೆ. ಆಟ ಎಂದರೆ ಅಂತಹ ಕಲ್ಪನಾಮಯವಾದ, ತನ್ನ ದೇಶಕಾಲ ಪರಿಮಿತಿಗಳನ್ನು ಮೀರಿ ಹೋಗುವ ಕ್ರಿಯೆ. ತನ್ನ ಐಡೆಂಟಿಟಿಯನ್ನು ಕ್ಷಣಕಾಲ ಮರೆತು ಬೇರೇನೋ ಆಗುವ ಪರಕಾಯ ಪ್ರವೇಶ, ಮಾಂತ್ರಿಕತೆ.

ಆಟ ಎಂದರೆ ನೃತ್ಯ, ಸಂಗೀತ, ನಾಟಕ, ಕ್ರೀಡೆ, ಕಲೆ ಯಾವುದೂ ಆಗಿರಬಹುದು ಒಟ್ಟಿನಲ್ಲಿ ನಮ್ಮ ಸದ್ಯದ ಬದುಕಿನಿಂದ ತಾತ್ಕಾಲಿಕ ಬಿಡುಗಡೆ ನೀಡುವ ಕ್ರಿಯೆ. ಅಂತಹ ಆಟದಲ್ಲಿ ಮಕ್ಕಳು ಪೋಷಕರು ಒಟ್ಟಾಗಿ ಭಾಗವಹಿಸಬೇಕು. ಆದರೆ ನಾವೀಗ ಮಾಡುತ್ತಿರುವುದೇನು? ಮಗು ಒಂದೆರಡು ಚಿತ್ರ ಬರೆದದ್ದೇ ಅದನ್ನು ಆರ್ಟ್ ಕ್ಲಾಸಿಗೆ ಸೇರಿಸುವುದು, ಎರಡು ಹೆಜ್ಜೆ ಕುಣಿದದ್ದೇ ರಿಯಾಲಿಟಿ ಶೋಗೆ ಕಳಿಸೋದು, ಆಟದಲ್ಲಿ ಆಸಕ್ತಿ ಅಂದರೆ ಸ್ಪೋರ್ಟ್ಸ್‌ಗೆ ಪ್ರೋತ್ಸಾಹ ಅನ್ನೋ ನೆಪದಲ್ಲಿ ಹಗಲು ರಾತ್ರಿ ಕೋಚಿಂಗ್‌ಗೆ ಕಳಿಸೋದು.

ಪ್ರತಿಕ್ಷಣವೂ ಮಕ್ಕಳನ್ನು surveillance ಗೆ ಒಳಪಡಿಸದೆ, ಮಾಡಿದ ಕೆಲಸಕ್ಕೆಲ್ಲ ಸಮರ್ಥನೆಗಳನ್ನು ಕೇಳಬಯಸದೆ, ಸ್ವಲ್ಪ ಹೊತ್ತಾದರೂ ಮಕ್ಕಳನ್ನು ಅವರ ಪಾಡಿಗೆ ಇರಲು ಅವರನ್ನು ಬಿಟ್ಟು ಬಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.