ADVERTISEMENT

ಕ್ರ್ಯಾಪ್‌ ಪರೀಕ್ಷೆ: ನಿಮಗಿದು ತಿಳಿದಿರಲಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 19:30 IST
Last Updated 27 ಜೂನ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಆನ್‌ಲೈನ್‌ ಮೂಲಕ ಹತ್ತು ಹಲವು ಸಂಗತಿಗಳನ್ನು ಕಲಿತುಕೊಳ್ಳುವ ಕಾಲ ಇದು. ವಿದ್ಯಾರ್ಥಿಗಳಿಗೆ ಅಥವಾ ಅವರ ಪಾಲಕರಿಗೆ ಗೊತ್ತಿರುವ ವ್ಯಕ್ತಿ ಆನ್‌ಲೈನ್‌ ಮೂಲಕ ಪಾಠ ಮಾಡುತ್ತಿದ್ದರೆ, ಅದೊಂದು ಬಗೆ. ಆದರೆ, ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಓದಿಕೊಳ್ಳುವ ವಿಷಯಗಳೆಲ್ಲ ಸತ್ಯವೇ ಎಂಬುದನ್ನು ಪರಿಶೀಲಿಸುವುದು ಹೇಗೆ? ಕಲಿಕೆಯ ಹಂತದಲ್ಲಿ ವಿದ್ಯಾರ್ಥಿಗಳು, ಮಕ್ಕಳು ಸುಳ್ಳನ್ನು ಕಲಿಯಬಾರದಲ್ಲ?!

ಇದಕ್ಕೆ ತಜ್ಞರು ಕ್ರ್ಯಾಪ್‌ (CRAAP) ಟೆಸ್ಟ್‌ ಎಂಬ ಸೂತ್ರವೊಂದನ್ನು ಸಿದ್ಧಪಡಿಸಿದ್ದಾರೆ. ಇದರ ವಿಸ್ತೃತ ರೂಪ ‘ಕರೆನ್ಸಿ, ರಿಲವೆನ್ಸ್, ಅಥಾರಿಟಿ, ಆ್ಯಕ್ಯುರೆಸಿ, ಪರ್ಪಸ್‌’. ಇವನ್ನು ವಿವರವಾಗಿ ನೋಡೋಣ.

ಕರೆನ್ಸಿ: ವಿದ್ಯಾರ್ಥಿ ಬಯಸುತ್ತಿರುವ ಮಾಹಿತಿಯೊಂದು ಅಂತರ್ಜಾಲದಲ್ಲಿ ದೊರೆತಾಗ ಅದು ಎಷ್ಟು ಬಾರಿ ಅಪ್ಡೇಟ್‌ ಆಗಿದೆ ಎಂಬುದನ್ನು ಪರೀಕ್ಷಿಸಬೇಕು. ಹೊಸ ಹೊಸ ವಿಷಯಗಳೊಂದಿಗೆ ಅಪ್ಡೇಟ್‌ ಆದ ಮಾಹಿತಿ ಹೆಚ್ಚು ನಿಖರ ಎಂಬುದು ತಜ್ಞರ ನಿಲುವು.

ADVERTISEMENT

ರಿಲವೆನ್ಸ್: ತಾನು ಹುಡುಕುತ್ತಿರುವ ವಿಷಯಕ್ಕೆ ತನಗೆ ಸಿಕ್ಕಿರುವ ಮಾಹಿತಿ ಎಷ್ಟರಮಟ್ಟಿಗೆ ನೇರವಾಗಿ ಸಂಬಂಧಿಸಿದ್ದು ಎಂಬುದನ್ನು ವಿದ್ಯಾರ್ಥಿ ಪರಿಶೀಲಿಸಿಕೊಳ್ಳಬೇಕು. ಇದು ಎರಡನೆಯ ಹಂತ.

ಅಥಾರಿಟಿ: ಮಾಹಿತಿಯನ್ನು ಆನ್‌ಲೈನ್‌ ಮೂಲಕ ನೀಡುತ್ತಿರುವ ವ್ಯಕ್ತಿ ಯಾರು ಅಥವಾ ಸಂಸ್ಥೆ ಯಾವುದು? ಇದನ್ನು ಕೂಡ ವಿದ್ಯಾರ್ಥಿ ಪರಿಶೀಲಿಸಿಕೊಳ್ಳಬೇಕು. ಅಂತರ್ಜಾಲದಲ್ಲಿ ಲೇಖನ ಬರೆದ ವ್ಯಕ್ತಿ ಅಥವಾ ಸಂಸ್ಥೆ ಹೆಚ್ಚು ವಿಶ್ವಾಸಾರ್ಹ ಆಗಿರಬೇಕು. ಆಗ ಮಾತ್ರ ವಿದ್ಯಾರ್ಥಿಗೆ ಹೆಚ್ಚು ನಿಖರ ಮಾಹಿತಿ ಸಿಗುತ್ತದೆ.

ಆ್ಯಕ್ಯುರೆಸಿ: ಈ ಹಂತದಲ್ಲಿ ವಿದ್ಯಾರ್ಥಿಯು ತನಗೆ ಸಿಕ್ಕಿರುವ ಮಾಹಿತಿಯನ್ನು ಒಂಚೂರು ಒರೆಗಲ್ಲಿಗೆ ಹಚ್ಚಿ ನೋಡಬೇಕು. ಮಾಹಿತಿಗೆ ಪೂರಕವಾಗಿ ಆಧಾರಗಳನ್ನು ನೀಡಲಾಗಿದೆಯೇ ಅಥವಾ ಆಧಾರ ಇಲ್ಲದೆಯೇ ಮಾಹಿತಿ ನೀಡಲಾಗಿದೆಯೇ ಎಂಬುದನ್ನು ಗಮನಿಸಬೇಕು. ಹೆಚ್ಚು ಆಧಾರಗಳನ್ನು ನೀಡಿರುವ ಮಾಹಿತಿ ಹೆಚ್ಚು ನಿಖರ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಪರ್ಪಸ್: ಆನ್‌ಲೈನ್‌ ಮೂಲಕ ಮಾಹಿತಿ ನೀಡುತ್ತಿರುವ ವ್ಯಕ್ತಿ ಯಾವ ಉದ್ದೇಶಕ್ಕೆ ಆ ಮಾಹಿತಿ ನೀಡುತ್ತಿದ್ದಾನೆ ಎಂಬುದನ್ನು ಗಮನಿಸಬೇಕಿರುವುದು ಕೂಡ ಮಹತ್ವದ್ದು. ವ್ಯಕ್ತಿ ಶುದ್ಧ ಮಾಹಿತಿಯನ್ನು ಮಾತ್ರ ನೀಡುತ್ತಿದ್ದಾನೆಯೋ ಅಥವಾ ಮಾಹಿತಿಯ ಜೊತೆಯಲ್ಲೇ ತನ್ನ ಅಭಿಪ್ರಾಯವನ್ನು ಹೇರುವ ಕೆಲಸ ಮಾಡುತ್ತಿದ್ದಾನೆಯೋ ಎಂಬುದನ್ನು ಗಮನಿಸಿ, ಮಾಹಿತಿಯನ್ನು ಮಾತ್ರ ಸ್ವೀಕರಿಸುವುದು ಸೂಕ್ತ.

ಕ್ರ್ಯಾಪ್‌ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದ್ದು ಕ್ಯಾಲಿಫೋರ್ನಿಯಾ ಸ್ಟೇಟ್‌ ವಿಶ್ವವಿದ್ಯಾಲಯದ ತಂಡ. ವಿಶ್ವವಿದ್ಯಾಲಯಗಳಲ್ಲಿ ಗ್ರಂಥಪಾಲಕರು ಇದನ್ನು ವ್ಯಾಪಕವಾಗಿ ಬಳಸುತ್ತಿದ್ದಾರಂತೆ. ಅವರಿಗೆ ಇದು ಪ್ರಯೋಜನಕ್ಕೆ ಬರುವಂತೆಯೇ, ಸತ್ಯವನ್ನು ಕಂಡುಕೊಳ್ಳಲು ಬಯಸುವ ವಿದ್ಯಾರ್ಥಿಗೂ ಬಳಕೆಗೆ ಬರುತ್ತದೆ, ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.