ADVERTISEMENT

ಸ್ಪರ್ಧಾವಾಣಿ: ರಾಷ್ಟ್ರೀಯ ವಿದ್ಯಮಾನ

​ಪ್ರಜಾವಾಣಿ ವಾರ್ತೆ
Published 22 ಮೇ 2025, 0:22 IST
Last Updated 22 ಮೇ 2025, 0:22 IST
   
ಶಾಸಕಾಂಗ ಪ್ರಕ್ರಿಯೆಯಲ್ಲಿ ರಾಜ್ಯಪಾಲರ ಅಧಿಕಾರಗಳು
  • ಭಾರತದ ಸುಪ್ರೀಂ ಕೋರ್ಟ್ ಪ್ರಸ್ತುತ ಶಾಸಕಾಂಗ ಪ್ರಕ್ರಿಯೆಯಲ್ಲಿ ರಾಜ್ಯಪಾಲರ ಅಧಿಕಾರಗಳನ್ನು ಪರಿಶೀಲಿಸುತ್ತಿದೆ.

  • ರಾಜ್ಯ ಮಸೂದೆಗಳಿಗೆ ರಾಜ್ಯಪಾಲರ ಒಪ್ಪಿಗೆ ವಿಳಂಬದ ಬಗ್ಗೆ ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಈ ಪರಿಶೀಲನೆ ನಡೆಯುತ್ತಿದೆ.

  • ರಾಜ್ಯಪಾಲರ ಅನುಮೋದನೆಯಲ್ಲಿನ ವಿಳಂಬ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಎಂಬುದು ತಮಿಳುನಾಡಿನ ವಾದವಾಗಿದೆ.

    ADVERTISEMENT
  • ಈ ನಿಟ್ಟಿನಲ್ಲಿ ಭಾರತದ ಸಂವಿಧಾನದ 200ನೇ ವಿಧಿಯ ಉಲ್ಲೇಖಗಳನ್ನು ಸುಪ್ರೀಂಕೋರ್ಟ್ ಪರಿಗಣಿಸಲಿದೆ. ಈ ವಿಧಿಯು ರಾಜ್ಯ ಶಾಸಕಾಂಗ ಮಂಡಿಸಿದ ಮಸೂದೆಗಳ ಮೇಲೆ ರಾಜ್ಯಪಾಲರು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆದೇಶಿಸುತ್ತದೆ.

  • ರಾಜ್ಯಪಾಲರು ರಾಜಕೀಯೇತರ ವ್ಯಕ್ತಿಯಾಗಿರಬೇಕು ಎಂದು ಸಂವಿಧಾನದಲ್ಲಿ ಅರ್ಥೈಸಲಾಗಿದೆ. ಸಾಮಾನ್ಯವಾಗಿ, ರಾಜ್ಯಪಾಲರು ಮಂತ್ರಿ ಮಂಡಳಿಯ ಸಲಹೆಯ ಪ್ರಕಾರ ಕಾರ್ಯನಿರ್ವಹಿಸಬೇಕು. ರಾಷ್ಟ್ರಪತಿ ಆಳ್ವಿಕೆಯನ್ನು ಶಿಫಾರಸು ಮಾಡುವಾಗ ಅಥವಾ ಮಸೂದೆಗಳಿಗೆ ಒಪ್ಪಿಗೆ ನೀಡುವಾಗ ಅವರಿಗೆ ಕೆಲ ವಿನಾಯಿತಿಗಳಿವೆ.

  • ಸಂವಿಧಾನದ 200ನೇ ವಿಧಿ ರಾಜ್ಯಪಾಲರಿಗೆ ಮೂರು ಆಯ್ಕೆಗಳನ್ನು ನೀಡುತ್ತದೆ ಅವುಗಳೆಂದರೆ; ಮಸೂದೆಗಳಿಗೆ ಒಪ್ಪಿಗೆ ನೀಡಿ ಅದನ್ನು ಕಾನೂನನ್ನಾಗಿ ಮಾಡಿ, ಮಸೂದೆಗೆ ಒಪ್ಪಿಗೆಯನ್ನು ತಡೆಹಿಡಿದು ಮಸೂದೆಯನ್ನು ಪುನರ್‌ ವಿಮರ್ಶೆಗಾಗಿ ಹಿಂತಿರುಗಿಸಿ ಅಥವಾ ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಿ.

  • ರಾಜ್ಯಪಾಲರು ಒಂದು ಮಸೂದೆಯನ್ನು ಹಿಂತಿರುಗಿಸಿದ ನಂತರವೂ ವಿಧಾನಸಭೆಯು ಅದನ್ನು ತಿದ್ದುಪಡಿ ಇಲ್ಲದೇ ಅಥವಾ ತಿದ್ದುಪಡಿಗಳೊಂದಿಗೆ ಮರು–ಅಂಗೀಕಾರ ಮಾಡಿದಾಗ ಆ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಬೇಕು.

  • ತಮಿಳುನಾಡಿನಲ್ಲಿ ಸೆಪ್ಟೆಂಬರ್ 2021ರಲ್ಲಿ ರಾಜ್ಯಪಾಲ ಆರ್.ಎನ್.ರವಿ ಅವರನ್ನು ನೇಮಕ ಮಾಡಿದ ನಂತರ, ಅನುಮೋದನೆ ವಿಳಂಬವಾಗಿವೆ. ಜನವರಿ 2023ರಿಂದ ಬಾಕಿ ಇರುವ ಮಸೂದೆಗಳನ್ನು ಉಲ್ಲೇಖಿಸಿ ರಾಜ್ಯವು ಸೆಪ್ಟೆಂಬರ್ 2023ರಲ್ಲಿ ಸುಪ್ರೀಂಕೋರ್ಟ್‌ಗೆ ಮೊರೆಹೋಗಿದೆ. ಸುಪ್ರೀಂಕೋರ್ಟ್ ರಾಜ್ಯಪಾಲರನ್ನು ವಿಳಂಬವಿಲ್ಲದೇ ಕಾರ್ಯನಿರ್ವಹಿಸುವಂತೆ ಒತ್ತಾಯಿಸಿದೆ.

  • ಸುಪ್ರೀಂಕೋರ್ಟ್ ಮಸೂದೆಗಳನ್ನು ರಾಷ್ಟ್ರಪತಿಗೆ ಉಲ್ಲೇಖಿಸುವ ರಾಜ್ಯಪಾಲರ ಅಧಿಕಾರ ಅಪರಿಮಿತವೇ ಅಥವಾ ನಿರ್ಬಂಧಿತವೇ? ಎಂಬುದನ್ನು, ಮಸೂದೆಗೆ ಸಮ್ಮತಿ ಸೂಚಿಸಲು ರಾಜ್ಯಪಾಲರು ತೆಗೆದುಕೊಳ್ಳಬಹುದಾದ ಸಮಯಾವಕಾಶ ಕುರಿತು ಪರಿಶೀಲಿಸುತ್ತಿದೆ.

  • ರಾಜ್ಯಪಾಲರು ಒಂದು ರಾಜ್ಯದಲ್ಲಿ ಅತ್ಯುನ್ನತ ಸಾಂವಿಧಾನಿಕ ಅಧಿಕಾರ ಹೊಂದಿರುವ ವ್ಯಕ್ತಿಯಾಗಿದ್ದು, ಅವರು ರಾಜ್ಯ ಸರ್ಕಾರದ ನಾಮಮಾತ್ರ ಮುಖ್ಯಸ್ಥರಾಗಿ ಹಾಗೂ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಾರೆ.

  • ರಾಜ್ಯಪಾಲರು ರಾಜತಾಂತ್ರಿಕ, ಮಿಲಿಟರಿ, ತುರ್ತು ಪರಿಸ್ಥಿತಿಯ ಅಧಿಕಾರಗಳನ್ನು ಹೊರತುಪಡಿಸಿ ರಾಷ್ಟ್ರಪತಿಗಳಂತೆ ಕಾರ್ಯಾಂಗ, ಶಾಸಕಾಂಗ, ಹಣಕಾಸು, ನ್ಯಾಯಾಂಗ ಅಧಿಕಾರ ಹೊಂದಿದ್ದಾರೆ.

  • ರಾಜ್ಯ ಸರ್ಕಾರದ ಎಲ್ಲಾ ಕ್ರಮಗಳು ರಾಜ್ಯಪಾಲರ ಹೆಸರಿನಲ್ಲಿ ನಡೆಯುತ್ತವೆ. ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಮಂತ್ರಿಗಳ ನೇಮಕ ಮಾತ್ರವಲ್ಲದೇ, ರಾಜ್ಯದ ಅಡ್ವೊಕೇಟ್ ಜನರಲ್, ರಾಜ್ಯ ಚುನಾವಣಾ ಆಯುಕ್ತರು, ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ನೇಮಿಸುವ ಅಧಿಕಾರವನ್ನು ಹೊಂದಿದ್ದಾರೆ.

  • ರಾಜ್ಯಪಾಲರು ಆಯಾ ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ.

  • ಅವರು ಮಂತ್ರಿಮಂಡಲದಲ್ಲಿ ಚರ್ಚೆಗಾಗಿ ಮಾಹಿತಿಯನ್ನು ಕೋರಬಹುದು ಮತ್ತು ವಿಷಯಗಳನ್ನು ಸೂಚಿಸಬಹುದು.

  • ರಾಜ್ಯದಲ್ಲಿ ಸಾಂವಿಧಾನಿಕ ಕುಸಿತ ಉಂಟಾದರೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವ ವಿಶೇಷ ಅಧಿಕಾರ ರಾಜ್ಯಪಾಲರಿಗಿದೆ.

  • ರಾಜ್ಯಪಾಲರು ಹೊಸ ಅಧಿವೇಶನದ ಆರಂಭದಲ್ಲಿ ಶಾಸಕಾಂಗವನ್ನು ಉದ್ದೇಶಿಸಿ ಮಾತನಾಡುತ್ತಾರೆ.

  • 2020ರ ಮೊದಲು, ರಾಜ್ಯಪಾಲರು ಒಬ್ಬ ಆಂಗ್ಲೋ–ಇಂಡಿಯನ್ ಸದಸ್ಯರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಬಹುದಿತ್ತು. ಸಂವಿಧಾನದ 104ನೇ ತಿದ್ದುಪಡಿಯಿಂದ ಅದು ಕೊನೆಗೊಂಡಿದೆ.

  • ರಾಜ್ಯಪಾಲರು ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ ಶಾಸಕರ ಅನರ್ಹತೆ ನಿರ್ಧರಿಸುವ ಅಧಿಕಾರ ಹೊಂದಿದ್ದಾರೆ.

  • ಶಾಸಕಾಂಗ ಅಧಿವೇಶನದಲ್ಲಿ ಇಲ್ಲದಿರುವಾಗ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ ಅವರಿಗಿದೆ.

  • ಸರ್ಕಾರದ ಅವಧಿ ಮುಗಿದ ನಂತರ, ಸಚಿವ ಸಂಪುಟ ವಿಶ್ವಾಸಮತ ಕಳೆದುಕೊಂಡಾಗ ಅಥವಾ ಬಹುಮತವಿಲ್ಲದೇ ಸರ್ಕಾರ ಅತಂತ್ರ ಸ್ಥಿತಿಯಲ್ಲಿದ್ದಾಗ ಶಾಸಕಾಂಗವನ್ನು ವಿಸರ್ಜಿಸುವ ಅಧಿಕಾರ ಕೂಡ ಅವರಿಗಿದೆ.

  • ಹಣಕಾಸು ಮಸೂದೆಗಳನ್ನು ಮಂಡಿಸುವ ಮೊದಲು ರಾಜ್ಯಪಾಲರ ಪೂರ್ವಾನುಮತಿ ಪಡೆಯಬೇಕಾಗುತ್ತದೆ ಹಾಗೂ ರಾಜ್ಯಪಾಲರ ಶಿಫಾರಸು ಇಲ್ಲದೆ ಯಾವುದೇ ಅನುದಾನವನ್ನು ಕೋರುವಂತಿಲ್ಲ.

  • ರಾಜ್ಯಪಾಲರು ಆಕಸ್ಮಿಕ ನಿಧಿಯಿಂದ ತುರ್ತು ನಿಧಿಗಳನ್ನು ಅಧಿಕೃತಗೊಳಿಸಬಹುದು. ಸ್ಥಳೀಯ ಸಂಸ್ಥೆಗಳ ಹಣಕಾಸು ಪರಿಶೀಲಿಸಲು ಪ್ರತಿ ಐದು ವರ್ಷಗಳಿಗೊಮ್ಮೆ ರಾಜ್ಯ ಹಣಕಾಸು ಆಯೋಗ ರಚಿಸುತ್ತಾರೆ.

  • ರಾಜ್ಯ ಕಾನೂನುಗಳ ಅಡಿಯಲ್ಲಿ ಅಪರಾಧಗಳಿಗೆ ವಿಧಿಸಿದ ಶಿಕ್ಷೆಯನ್ನು ರದ್ದುಪಡಿಸಬಹುದು ಅಥವಾ ಕಡಿಮೆ ಮಾಡಬಹುದು.

  • ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗಾಗಿ ರಾಷ್ಟ್ರಪತಿಗಳಿಂದ ಸಮಾಲೋಚಿಸುವ ಅಧಿಕಾರವನ್ನು ಹಾಗೂ ಹೈಕೋರ್ಟ್‌ನೊಂದಿಗೆ ಸಮಾಲೋಚಿಸಿ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸುವ, ಬಡ್ತಿ ನೀಡುವ ಮತ್ತು ವರ್ಗಾವಣೆ ಮಾಡುವ ಅಧಿಕಾರವನ್ನು ರಾಜ್ಯಪಾಲರು ಹೊಂದಿದ್ದಾರೆ.

  • ಹೈಕೋರ್ಟ್ ಮತ್ತು ಸಾರ್ವಜನಿಕ ಸೇವಾ ಆಯೋಗದೊಂದಿಗೆ ಸಮಾಲೋಚಿಸಿ ಇತರ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸುವ ಅಧಿಕಾರವೂ ರಾಜ್ಯಪಾಲರಿಗಿದೆ.‌

ಭಾರತದಲ್ಲಿ ರಾಷ್ಟ್ರಪತಿ ಆಳ್ವಿಕೆ
  • ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ರಾಜೀನಾಮೆ ಭಾರತದಲ್ಲಿ ರಾಷ್ಟ್ರಪತಿ ಆಳ್ವಿಕೆ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ. ರಾಷ್ಟ್ರಪತಿ ಆಡಳಿತವನ್ನು ತಪ್ಪಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಪರ್ಯಾಯಗಳನ್ನು ಅನ್ವೇಷಿಸುತ್ತಿದೆ.

  • ಭಾರತದ ಸಂವಿಧಾನದ 356ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಲಾಗುತ್ತದೆ.

  • ರಾಜ್ಯ ಸರ್ಕಾರವು ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಇದ್ದಾಗ ವಿಧಿಸುವ ರಾಷ್ಟ್ರಪತಿ ಆಳ್ವಿಕೆ ಕೇಂದ್ರ ಸರ್ಕಾರ ರಾಜ್ಯದ ನಿಯಂತ್ರಣ ವಹಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

  • ರಾಷ್ಟ್ರಪತಿ ಆಳ್ವಿಕೆ ಹೇರುವ ಪ್ರಕ್ರಿಯೆ: ರಾಷ್ಟ್ರಪತಿಗಳು ರಾಜ್ಯಪಾಲರಿಂದ ವರದಿಯನ್ನು ಸ್ವೀಕರಿಸಿದ ಮೇಲೆ ರಾಜ್ಯ ಸರ್ಕಾರವು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರಪತಿಗಳಿಗೆ ಮನದಟ್ಟಾದ ನಂತರ ರಾಷ್ಟ್ರಪತಿ ಆಳ್ವಿಕೆ ಪ್ರಾರಂಭವಾಗುತ್ತದೆ.

  • ಆರಂಭಿಕವಾಗಿ ಒಂದು ಘೋಷಣೆಯ ಮೂಲಕ ಆರಂಭವಾಗುವ  ರಾಷ್ಟ್ರಪತಿ ಆಳ್ವಿಕೆ ಎರಡು ತಿಂಗಳವರೆಗೆ ಇರುತ್ತದೆ. ಈ ಅವಧಿಯನ್ನು ಮುಂದುವರಿಸಲು ಲೋಕಸಭೆ ಮತ್ತು ರಾಜ್ಯಸಭೆ ಎರಡರಿಂದಲೂ ಅನುಮೋದನೆ ಪಡೆಯಬೇಕಾಗುತ್ತದೆ.

  • ಅನುಮೋದನೆ ದೊರೆತರೆ, ರಾಷ್ಟ್ರಪತಿ ಆಳ್ವಿಕೆಯನ್ನು ಆರು ತಿಂಗಳವರೆಗೆ ವಿಸ್ತರಿಸಬಹುದು, ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಮತ್ತಷ್ಟು ವಿಸ್ತರಣೆ ಮಾಡಲು ಸಾಧ್ಯ.

  • 1950ರಲ್ಲಿ ಸಂವಿಧಾನವನ್ನು ಅಂಗೀಕರಿಸಿದಾಗಿನಿಂದ ಇಲ್ಲಿಯವರೆಗೆ, 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (UTs) 134 ಬಾರಿ ರಾಷ್ಟ್ರಪತಿ ಆಳ್ವಿಕೆಯನ್ನು ವಿಧಿಸಲಾಗಿದೆ.

  • ಮಣಿಪುರ ಮತ್ತು ಉತ್ತರ ಪ್ರದೇಶಗಳು ಈ ಪ್ರಮಾಣವನ್ನು ಹೆಚ್ಚಾಗಿ ಅನುಭವಿಸಿವೆ (ತಲಾ ಹತ್ತು ಬಾರಿ!). ಜಮ್ಮು ಮತ್ತು ಕಾಶ್ಮೀರ 12 ವರ್ಷಗಳಿಗೂ ಹೆಚ್ಚು ಕಾಲ ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದ ದಾಖಲೆಯನ್ನು ಹೊಂದಿದೆ.

  • ರಾಷ್ಟ್ರಪತಿ ಆಳ್ವಿಕೆಯನ್ನು ಉಗ್ರಗಾಮಿ ಚಟುವಟಿಕೆಗಳು ಮತ್ತು ಅಸ್ಥಿರ ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ಹೆಚ್ಚಾಗಿ ಹೇರಲಾಗುತ್ತದೆ.

  • 2021ರಲ್ಲಿ ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ವಿಶ್ವಾಸ ಮತ ಕಳೆದುಕೊಂಡಾಗ ರಾಷ್ಟ್ರಪತಿ ಆಳ್ವಿಕೆಯ ಇತ್ತೀಚಿನ ಉದಾಹರಣೆ.

  • ಸುಪ್ರೀಂ ಕೋರ್ಟ್‌ನ  ಮಾರ್ಗಸೂಚಿಗಳು: ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಎಸ್.ಆರ್.ಬೊಮ್ಮಾಯಿ v/s ಭಾರತ ಒಕ್ಕೂಟ (1994) ಪ್ರಕರಣದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಅಧಿಕಾರದ ಬಗ್ಗೆ ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

  • ರಾಷ್ಟ್ರಪತಿಗಳ ನಿರ್ಧಾರ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ತೀರ್ಪು ಹೇಳಿದೆ. ರಾಷ್ಟ್ರಪತಿ ಆಳ್ವಿಕೆ ಕಾನೂನುಬಾಹಿರ ಆಗಿದೆಯೇ ಅಥವಾ ಅಧಿಕಾರದ ದುರುಪಯೋಗ ಒಳಗೊಂಡಿದೆಯೇ ಎಂಬುದನ್ನು ಪರಿಶೀಲಿಸಲು ಅವಕಾಶವಿದೆ.

  • ಸುಪ್ರೀಂಕೋರ್ಟ್‌ನ ತೀರ್ಪಿನಿಂದ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಪ್ರಮಾಣ ಕಡಿಮೆ ಆಗಿದೆ. ರಾಜ್ಯಗಳು ಕೇಂದ್ರ ಸರ್ಕಾರದ ವಿಸ್ತರಣೆಗಳಲ್ಲ ಎಂಬ ಕಲ್ಪನೆಯನ್ನು ಈ ತೀರ್ಪು ಬಲಪಡಿಸಿದೆ.

  • ರಾಜ್ಯಗಳಿಗೆ ಮೀಸಲಾಗಿರುವ ಅಧಿಕಾರಗಳನ್ನು ಕೇಂದ್ರ ಸರ್ಕಾರ ಗೌರವಿಸಬೇಕಾದ ಅಗತ್ಯವನ್ನು ಇದು ಒತ್ತಿಹೇಳಿದೆ.

ಜ.25ರಂದು ಮತದಾರರ ದಿನ
  • ಭಾರತದಲ್ಲಿ ಪ್ರತಿ ವರ್ಷ ಜ.25ರಂದು ರಾಷ್ಟ್ರೀಯ ಮತದಾರರ ದಿನವನ್ನು (NVD: National Voters Day) ಆಚರಿಸಲಾಗುತ್ತದೆ.

  • ಒಟ್ಟು ಮತದಾರರು 100 ಕೋಟಿ ಮೀರಿರುವುದು ಹಾಗೂ ಭಾರತದ ಚುನಾವಣಾ ಆಯೋಗ 75 ವರ್ಷಾಚರಣೆಯ ಸಂಭ್ರಮದಲ್ಲಿ ಇರುವುದರಿಂದ ಈ ವರ್ಷದ NVD ಒಂದು ಹೊಸ ಮೈಲಿಗಲ್ಲನ್ನು ಗುರುತಿಸಿದೆ.

  • NVD ಪ್ರಜಾಪ್ರಭುತ್ವ ಚಟುವಟಿಕೆಗಳಲ್ಲಿ ಮತದಾರರ ಭಾಗವಹಿಸುವಿಕೆಯ ನಿಟ್ಟಿನಲ್ಲಿ ಮತದಾನದ ಮಹತ್ವವನ್ನು ಗುರುತಿಸುತ್ತದೆ.

  • 1950ರ ಜನವರಿ 25ರಂದು ಭಾರತ ಚುನಾವಣಾ ಆಯೋಗವನ್ನು ಸ್ಥಾಪಿಸಿದ ಸ್ಮರಣಾರ್ಥ 2011ರಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.

  • ಈ ದಿನವು ಹೊಸ ಮತದಾರರನ್ನು ಗೌರವಿಸಲು ಮತ್ತು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

  • ಈ ಕಾರ್ಯಕ್ರಮವು ಜಾಗತಿಕ ಚುನಾವಣಾ ನಿರ್ವಹಣಾ ಸವಾಲುಗಳ ಕುರಿತು ಚುನಾವಣಾ ನಿರ್ವಹಣಾ ಸಂಸ್ಥೆಗಳ ಮುಖ್ಯಸ್ಥರ ನಡುವೆ ಚರ್ಚೆಗಳನ್ನು ಒಳಗೊಂಡಿರುತ್ತದೆ.

  • 2025ರ ರಾಷ್ಟ್ರೀಯ ಮತದಾರರ ದಿನದ ಧ್ಯೇಯೋಕ್ತಿ ‘ನಾನು ಖಚಿತವಾಗಿ ಮತ ಚಲಾಯಿಸುತ್ತೇನೆ’ ಎಂಬುದಾಗಿತ್ತು.

  • ಭಾರತದ ಚುನಾವಣಾ ಆಯೋಗದ ದತ್ತಾಂಶವು ಪ್ರಸ್ತುತ 99.1 ಕೋಟಿ ನೋಂದಾಯಿತ ಮತದಾರರನ್ನು ಹೊಂದಿದೆ.

  • ಈ ಮತದಾರರ ಪೈಕಿ 21.7 ಕೋಟಿ ಜನರು 18ರಿಂದ 29 ವರ್ಷ ವಯಸ್ಸಿನ ಯುವ ಮತದಾರರಾಗಿದ್ದಾರೆ.

  • ಈ ವರ್ಷ ಮತದಾರರ ಲಿಂಗಾನುಪಾತ ಪ್ರಮಾಣ ಕೂಡ ಹೆಚ್ಚಾಗಿದೆ. 2024ರಲ್ಲಿ 1000:948 ಇದ್ದ ಮತದಾರರ ಲಿಂಗಾನುಪಾತ 2025ರಲ್ಲಿ 1000:954 ಕ್ಕೆ ಏರಿದೆ.

  • ‘ಇಂಡಿಯಾ ವೋಟ್ಸ್ – ಎ ಸಾಗಾ ಆಫ್ ಡೆಮಾಕ್ರಸಿ’ ಎಂಬ ಶೀರ್ಷಿಕೆಯ ಕೈಪಿಡಿಯನ್ನು 2025ರ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಬಿಡುಗಡೆ ಮಾಡಲಾಗಿದೆ.

  • ವಾರ್ನರ್ ಬ್ರದರ್ಸ್ ಡಿಸ್ಕವರಿ ನಿರ್ಮಿಸಿದ ‘ಇಂಡಿಯಾ ಡಿಸೈಡ್ಸ್’ ಎಂಬ ಮೂರು ಭಾಗದ ಸಾಕ್ಷ್ಯಚಿತ್ರ ಸರಣಿಯನ್ನು ಕೂಡ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಬಿಡುಗಡೆ ಮಾಡಲಾಗಿದೆ.

  • ಯುವ ಮತದಾರರ ನೋಂದಣಿಯನ್ನು ಉತ್ತೇಜಿಸುವಲ್ಲಿ NVD ಪ್ರಮುಖ ಪಾತ್ರ ವಹಿಸುತ್ತದೆ. ದೇಶದಾದ್ಯಂತ ನಡೆಯುವ ಸಮಾರಂಭಗಳಲ್ಲಿ ಹೊಸ ಮತದಾರರನ್ನು ಸನ್ಮಾನಿಸಲಾಗುತ್ತದೆ ಮತ್ತು ಅವರಿಗೆ ಅವರ ಮತದಾರರ ಫೋಟೋ ಗುರುತಿನ ಚೀಟಿಗಳನ್ನು (EPIC: Election Photo Identity Card) ವಿತರಿಸಲಾಗುತ್ತದೆ. ಈ ಉಪಕ್ರಮವು ಚುನಾವಣಾ ಪ್ರಕ್ರಿಯೆಯಲ್ಲಿ ಯುವಕರು ಭಾಗವಹಿಸುವುದನ್ನು ಪ್ರೋತ್ಸಾಹಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.