ADVERTISEMENT

ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಯೇ ವಿಭಿನ್ನ

ಡಾ.ರವಿ ಎಸ್.ಆರ್.
Published 17 ಮಾರ್ಚ್ 2021, 19:30 IST
Last Updated 17 ಮಾರ್ಚ್ 2021, 19:30 IST
   

ಕೇಂದ್ರ ಸರ್ಕಾರದ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳ ರೀತಿಯೇ ಬೇರೆ. ಹೀಗಾಗಿ ವಿಭಿನ್ನ ರೀತಿಯಲ್ಲಿ ಅಧ್ಯಯನ ನಡೆಸಬೇಕಾಗುತ್ತದೆ.

ರಾಜ್ಯ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಲಿಸಿದಾಗ ಕೇಂದ್ರ ಸರ್ಕಾರದ ಪರೀಕ್ಷೆ ವಿಧಾನ, ಪಠ್ಯಕ್ರಮ, ಕಾಂಪಿಟೀಟಿವ್‌ ರೇಟ್‌ ವಿಭಿನ್ನವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯನ್ನು ವಿದ್ಯಾರ್ಥಿಗಳು ವಿಭಿನ್ನ ಶೈಲಿಯಲ್ಲಿ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರಿ ಪರೀಕ್ಷೆಗಳಲ್ಲಿ ಬ್ಯಾಂಕಿಂಗ್, ಎಸ್.ಎಸ್.ಸಿ., ರೈಲ್ವೆ, ಡಿ.ಆರ್.ಡಿ.ಒ, ಪೋಸ್ಟಲ್ ಮುಂತಾದ ಪರೀಕ್ಷೆಗಳಲ್ಲಿ ತಾರ್ಕಿಕ ಗಣಿತ ಮತ್ತು ಮಾನಸಿಕ ಸಾಮರ್ಥ್ಯ ಬಹಳ ಪ್ರಮುಖ ಪಾತ್ರ ವಹಿಸುತ್ತವೆ.

ಈ ಎಲ್ಲಾ ಪರೀಕ್ಷೆಗಳಲ್ಲಿ ಪಠ್ಯಕ್ರಮ ಒಂದೇ ರೀತಿಯಂತೆ ಗೋಚರಿಸಿದರೂ, ಪ್ರಶ್ನೆಗಳ ಗುಣಮಟ್ಟ ಬೇರೆ ಬೇರೆ ರೀತಿಯಾಗಿರುತ್ತದೆ. ಉದಾ: ಬ್ಯಾಂಕಿಂಗ್ ಪರೀಕ್ಷೆಯಲ್ಲಿ ತಾರ್ಕಿಕ ಗಣಿತ, ಮಾನಸಿಕ ಸಾಮರ್ಥ್ಯಕ್ಕೆ ಹೆಚ್ಚು ಒತ್ತು ಕೊಟ್ಟಿರುತ್ತಾರೆ. ಈ ಕಾರಣಕ್ಕಾಗಿ ಈ ಪರೀಕ್ಷೆಗಳಲ್ಲಿ ಹೆಚ್ಚಿನ ಅಭ್ಯಾಸ ಅವಶ್ಯಕವಾಗಿರುತ್ತದೆ. ರೀಸನಿಂಗ್ ಪ್ರಶ್ನೆಗಳನ್ನು ಎದುರಿಸಬೇಕಾದಾಗ ಹೆಚ್ಚಿನ ಕಾಲಾವಕಾಶವನ್ನು ತೆಗೆದುಕೊಳ್ಳುವುದರಿಂದ ಅದೇ ಪ್ರಶ್ನೆ ಪತ್ರಿಕೆಯಲ್ಲಿರುವ ಇಂಗ್ಲಿಷ್, ಸಾಮಾನ್ಯ ಜ್ಞಾನ, ಆಪ್ಟಿಟ್ಯೂಡ್ ಭಾಗಗಳನ್ನು ವಿದ್ಯಾರ್ಥಿಗಳು ಕೈ ಬಿಡುತ್ತಾರೆ. ಈ ಕಾರಣಕ್ಕಾಗಿ ಇಂತಹ ಪರೀಕ್ಷೆಗಳಲ್ಲಿ ಯಶಸ್ಸಿನ ಪ್ರಮಾಣ ತುಂಬಾ ಕಡಿಮೆಯಾಗಿರುತ್ತದೆ. ಇಂತಹ ಸಮಸ್ಯೆಯಿಂದ ಹೊರಬರಲು ಯಾವುದೇ ಸುಲಭ ಉಪಾಯವಿಲ್ಲ. ಯಾವ ಭಾಗದಲ್ಲಿ ನಿಮಗೆ ನ್ಯೂನ್ಯತೆ ಇದೆಯೋ ಅದನ್ನು ಸರಿಪಡಿಸಿಕೊಳ್ಳಲು ಆ ವಿಷಯಗಳ ಬಗ್ಗೆ ನಿರಂತರ ಅಭ್ಯಾಸದಿಂದ ಮಾತ್ರ ನೀವು ಪರೀಕ್ಷೆಯಲ್ಲಿ ಟೈಂ ಮ್ಯಾನೇಜ್‌ಮೆಂಟ್ ಮಾಡಲು ಸಾಧ್ಯ. ಇದಕ್ಕೆ ಇರುವ ಒಂದೇ ಮಾರ್ಗವಿದು.

ADVERTISEMENT

ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಪ್ರಶ್ನೆಗಳನ್ನು ಕೇಳುವಲ್ಲಿ ವೈವಿಧ್ಯತೆಯಿರುತ್ತದೆ. ಉದಾ: ರೈಲ್ವೆ ಮತ್ತು ಎಸ್.ಎಸ್.ಸಿ. ಈ ಪರೀಕ್ಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಇಲ್ಲದ ಬೇರೆ ಬೇರೆ ಕಡೆಯ ವಿಷಯಗಳಲ್ಲಿ ಗಮನ ಹರಿಸುತ್ತಾರೆ.

ಭಾಷಾ ಸಮಸ್ಯೆ ಎದುರಿಸುವುದು ಹೇಗೆ?
ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಎಲ್ಲಾ ವಿಷಯಗಳ ಕಡೆಗೆ ಗಮನ ಹರಿಸುವುದು ಬಹಳ ಮುಖ್ಯ. ಮೆಂಟಲ್ ಎಬಿಲಿಟಿ ಭಾಗದಲ್ಲಿ ಬಹಳ ಚೆನ್ನಾಗಿ ಅಭ್ಯಾಸ ಮಾಡಿ, ಇಂಗ್ಲಿಷ್ ಜ್ಞಾನವಿಲ್ಲದಿದ್ದರೆ ಆ ಪರೀಕ್ಷೆಗಳ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಎಲ್ಲಾ ಸ್ಪರ್ಧಾರ್ಥಿಗಳು 6ನೇ ತರಗತಿಯಿಂದ 12ನೇ ತರಗತಿಯವರೆಗೆ ಎನ್.ಸಿ.ಇ.ಆರ್.ಟಿ ಪುಸ್ತಕಗಳಾದ ಮಾನವಿಕ ವಿಷಯಗಳು ಮತ್ತು ವಿಜ್ಞಾನ ವಿಷಯದಲ್ಲಿ 11 ಮತ್ತು 12ನೇ ತರಗತಿಯ ಪುಸ್ತಕಗಳನ್ನು ಸಂಪಾದಿಸಿ ಓದುವುದರಿಂದ ಕೇಂದ್ರ ಸರ್ಕಾರ ಪರೀಕ್ಷೆಗಳಿಗೆ ವ್ಯವಸ್ಥಿತವಾದ ಸಿದ್ಧತೆಯಾಗುತ್ತದೆ. ಸಾಮಾನ್ಯವಾಗಿ ಪ್ರಾದೇಶಿಕ ಭಾಷೆಯ ವಿದ್ಯಾರ್ಥಿಗಳಿಗೆ ಇರುವ ಕೊರತೆಯೆಂದರೆ ಭಾಷಾ ಸಮಸ್ಯೆ. ಇದರಿಂದ ಪ್ರಶ್ನೆ ಪತ್ರಿಕೆಯನ್ನು ಅರ್ಥೈಸುವಲ್ಲಿ ವಿಫಲರಾಗಿರುತ್ತಾರೆ.

ಈ ಕಾರಣದಿಂದ 10ನೇ ತರಗತಿವರೆಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಅಭ್ಯಾಸ ಮಾಡುವುದರಿಂದ ಪ್ರಶ್ನೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಸಂವಿಧಾನದ 8ನೇ ಅನುಸೂಚಿಯಲ್ಲಿರುವ ಅಧಿಕೃತ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ನೀಡಿದರೆ ಅಭ್ಯರ್ಥಿಗಳಿಗೆ ಇದು ಬಹಳ ಉಪಯೋಗವಾಗುತ್ತಿತ್ತು. ಈಗಾಗಲೇ, ರೈಲ್ವೆ ಪರೀಕ್ಷೆಯ ಸಿ ಮತ್ತು ಡಿ ಗ್ರೂಪ್ ಪರೀಕ್ಷೆಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ನೀಡುತ್ತಿದ್ದರೂ ಬ್ಯಾಂಕಿಂಗ್, ಎಸ್.ಎಸ್.ಸಿ. ಮುಂತಾದ ಪರೀಕ್ಷೆಗಳಲ್ಲಿ ಈಗಲೂ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿಯೇ ಪ್ರಶ್ನೆ ಪತ್ರಿಕೆ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಎರಡೂ ಭಾಷೆಗಳತ್ತ ಗಮನ ಹರಿಸಿ ಪರೀಕ್ಷೆಗೆ ಸಿದ್ಧತೆ ನಡೆಸುವುದು ಉತ್ತಮ.

ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಸೇರಬೇಕು ಎಂದು ನಿರ್ಧಾರ ಮಾಡಿದ ಮೇಲೆ ನಮ್ಮ ಮಾತೃಭಾಷೆಯ ಜೊತೆ ಇಂಗ್ಲಿಷ್‌ ಭಾಷೆಗೂ ಒತ್ತುಕೊಟ್ಟು ಅಧ್ಯಯನ ನಡೆಸುವುದು ಸೂಕ್ತ. ಸಾಮಾನ್ಯವಾಗಿ ಶಾಲಾ ಹಂತದಲ್ಲೇ ಭಾಷಾಜ್ಞಾನವನ್ನು ಚೆನ್ನಾಗಿ ಬೆಳೆಸಿಕೊಂಡರೆ ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಸುಲಭ.

ದಿನಪತ್ರಿಕೆ, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಬರುವ ವಿಷಯಾಧಾರಿತ ಚರ್ಚೆಗಳು, ಅನುವಾದಗಳು, ಪರೀಕ್ಷಾ ದಿನಾಂಕದ ಒಂದು ವರ್ಷದ ಹಿಂದಿನಿಂದ ಪೂರ್ವಭಾವಿಯಾಗಿ ಸಿದ್ಧತೆ ನಡೆಸಿದರೆ, ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಕನ್ನಡಿಗರು ಬಹು ಸಂಖ್ಯೆಯಲ್ಲಿ ಆಯ್ಕೆಯಾಗಲು ಸಾಧ್ಯ. ಎಷ್ಟು ಜನರು ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆಂಬುದು ಮುಖ್ಯವಲ್ಲ. ‘ನಾನು ಆ ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಿದ್ದೇನೆ’ ಎಂಬುದು ಮುಖ್ಯವಾಗಿರುತ್ತದೆ.

(ಲೇಖಕ: ನಿರ್ದೇಶಕರು, ನವೋದಯ ಫೌಂಡೇಶನ್, ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ, ಮೈಸೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.