ನಾನು ಪಿಯುಸಿ ಮಾಡುತ್ತಿದ್ದು ಡಿಜಿಟಲ್ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ತಿಳಿಸಿ.
-ಹೆಸರು, ಊರು ತಿಳಿಸಿಲ್ಲ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಉದ್ಯಮವನ್ನು ಅಭಿವೃದ್ಧಿಪಡಿಸಲು ಡಿಜಿಟಲ್ ಮಾರ್ಕೆಟಿಂಗ್, ಪ್ರಮುಖವಾದ ಮತ್ತು ಪರಿಣಾಮಕಾರಿಯಾದ ಸಾಧನವಾಗಿದೆ. ಗ್ರಾಹಕರ ಗಮನವನ್ನು ಸೆಳೆಯುವುದು, ವಸ್ತು ಮತ್ತು ಸೇವೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಒದಗಿಸುವುದು, ಗ್ರಾಹಕರ ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆ, ವಿಶ್ವಾಸಾರ್ಹ ಬ್ರ್ಯಾಂಡ್ ನಿರ್ಮಾಣ ಮುಂತಾದ ಉದ್ಯಮ ಕ್ಷೇತ್ರದ ಬಹುತೇಕ ಕಾರ್ಯಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸಿದ್ದಾಂತಗಳ ಬಳಕೆಯಾಗುತ್ತದೆ. ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ಬಿಕಾಂ/ಬಿಬಿಎ/ಎಂಬಿಎ (ಡಿಜಿಟಲ್ ಮಾರ್ಕೆಟಿಂಗ್) ಪದವಿಗಳ ನಂತರ, ಬೇಡಿಕೆಯಲ್ಲಿರುವ ಈ ಕ್ಷೇತ್ರದಲ್ಲಿ ಮಾರ್ಕೆಟಿಂಗ್ ಅಸಿಸ್ಟೆಂಟ್, ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್, ಸೋಷಿಯಲ್ ಮೀಡಿಯ ಮ್ಯಾನೇಜರ್, ಎಸ್‍ಇಒ ಸ್ಪೆಷಲಿಸ್ಟ್, ಬ್ರ್ಯಾಂಡ್ ಮ್ಯಾನೇಜರ್, ಕಂಟೆಂಟ್ ಕ್ರಿಯೇಟರ್ ಮುಂತಾದ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಇನ್ನಿತರ ಪದವಿಗಳ ನಂತರವೂ, ಅರೆಕಾಲಿಕ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್‍ಗಳನ್ನು (ಡಿಜಿಟಲ್ ಮಾರ್ಕೆಟಿಂಗ್) ಮಾಡಿ, ಡಿಜಿಟಲ್ ಕ್ಷೇತ್ರದಲ್ಲಿ ವೃತ್ತಿಯನ್ನು ಅರೆಸಬಹುದು
ಎಂಬಿಎ ಕೋರ್ಸ್, ಮಾಡುವ ಪ್ರಕ್ರಿಯೆ ಮತ್ತು ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡಿ.
ಹೆಸರು, ಊರು ತಿಳಿಸಿಲ್ಲ.
ಬಿ.ಎಸ್ಸಿ ನಂತರ ಎಂಬಿಎ ಕೋರ್ಸ್ ಮಾಡಲು ಸಾಮಾನ್ಯವಾಗಿ ಈ ಪ್ರಕ್ರಿಯೆಗಳಿರುತ್ತದೆ.
ಪ್ರವೇಶ ಪರೀಕ್ಷೆ., ಸಮೂಹ ಚರ್ಚೆ., ವೈಯಕ್ತಿಕ ಸಂದರ್ಶನ.
ಇಂಡಿಯನ್ ಇನ್ಸ್‍ಟಿಟ್ಯೂಟ್ ಅಫ್ ಮ್ಯಾನೇಜ್‍ಮೆಂಟ್ (ಐಐಎಂ) ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಎಂಬಿಎ ಮಾಡಲು ಕ್ಯಾಟ್ ಪರೀಕ್ಷೆಯನ್ನು ಬರೆಯಬೇಕು. ಇನ್ನಿತರ ವಿಶ್ವವಿದ್ಯಾಲಯ/ಕಾಲೇಜುಗಳಿಗೆ ಜಿಮ್ಯಾಟ್, ಪಿಜಿ-ಸಿಇಟಿ, ಮ್ಯಾಟ್ ಇತ್ಯಾದಿ ಪ್ರವೇಶ ಪರೀಕ್ಷೆಗಳಲ್ಲಿ ಭಾಗವಹಿಸಬೇಕು. ನೀವು ಯಾವ ವಿಶ್ವವಿದ್ಯಾಲಯ/ಕಾಲೇಜಿನಲ್ಲಿ ಎಂಬಿಎ ಮಾಡಲು ಬಯಸುತ್ತೀರೋ, ಅದಕ್ಕೆ ಅನ್ವಯವಾಗುವ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಬೇಕು.
ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್‍ಮೆಂಟ್ ಸಿದ್ದಾಂತದ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಹಾಗಾಗಿ, ಈ ಕೋರ್ಸಿನಲ್ಲಿ ಮಾರ್ಕೆಟಿಂಗ್, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು, ಲಾಜಿಸ್ಟಿಕ್ಸ್, ಬಿಸಿನೆಸ್ ಅನಲಿಟಿಕ್ಸ್, ಉತ್ಪಾದನೆ, ಇಂಟರ್‍ನ್ಯಾಷನಲ್ ಬಿಸಿನೆಸ್ ಮುಂತಾದ ಸ್ಪೆಷಲೈಜೇಷನ್ಸ್‍ಗಳಿದ್ದು ನಿಮ್ಮ ವೃತ್ತಿಯೋಜನೆಯಂತೆ ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=1TcHjPKJ1gw
ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.