
ಪ್ರಾತಿನಿಧಿಕ ಚಿತ್ರ
ನಮ್ಮ ಒಬ್ಬನೇ ಮಗ ಎಂಜಿನಿಯರಿಂಗ್ ಆರನೇ ಸೆಮಿಸ್ಟರ್ ಓದುತ್ತಿದ್ದಾನೆ. ಇತ್ತೀಚೆಗೆ ತುಂಬಾ ಡಲ್ ಆಗಿ ಇರುತ್ತಾನೆ. ಪ್ರೀತಿಸಿದ ಹುಡುಗಿ ಕೈಕೊಟ್ಟಳು ಅಂತಾನೆ. ಕಾಲೇಜಿಗೆ ಹೋಗುತ್ತಿಲ್ಲ. ಸಾಯಬೇಕು ಅಂತಿರ್ತಾನೆ. ಎಷ್ಟು ಹೊತ್ತಿಗೋ ತಿನ್ನುತ್ತಾನೆ, ಅದೆಷ್ಟು ಹೊತ್ತಿಗೋ ಮಲಗುತ್ತಾನೆ. ಮೊಬೈಲ್ ನೋಡುತ್ತಿರುತ್ತಾನೆ. ಮೂರು ದಿನವಾದರೂ ಸ್ನಾನ ಮಾಡುವುದಿಲ್ಲ. ಸಮಾಧಾನದಿಂದ ಮಾತನಾಡಿಸಲು ಪ್ರಯತ್ನಿಸಿದರೆ ರೇಗುತ್ತಾನೆ ಅಥವಾ ಅಳುತ್ತಾನೆ. ಏನು ಮಾಡಬೇಕೋ ತೋಚುತ್ತಿಲ್ಲ. ಪರಿಹಾರ ತಿಳಿಸಬಹುದೇ?–ಶೈಲಾ ರಾಮಚಂದ್ರ, ಸಾಗರ
ಹದಿಹರೆಯದ ಮಗ ಹೀಗೆ ಮಾಡುತ್ತಿದ್ದರೆ ಎಂಥವರಿಗಾದರೂ ಚಿಂತೆಯಾಗುತ್ತದೆ. ಇತ್ತೀಚೆಗೆ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಸಣ್ಣಪುಟ್ಟ ಕೊರತೆಯನ್ನು ಸಹ ಎದುರಿಸಲಾಗದೆ ಯುವಕರು ಕಂಗಾಲಾಗುತ್ತಾರೆ, ಕುಗ್ಗುತ್ತಾರೆ, ಅಭಾವ ವೈರಾಗ್ಯದಿಂದ ಮಾತನಾಡುತ್ತಾರೆ. ಜೀವನ ಮುಗಿದೇಹೋಯಿತು ಎನ್ನುವ ಹಾಗೆ ಕುಸಿಯುತ್ತಾರೆ. ಬೇಡ, ಇಲ್ಲ, ಆಗೋದಿಲ್ಲ, ಸಿಗೋದಿಲ್ಲ ಅನ್ನುವಂತಹ ಸ್ಥಿತಿಯನ್ನು ಸ್ವೀಕರಿಸಲಾಗದ ಮನಃಸ್ಥಿತಿಯಲ್ಲಿ ಇರುತ್ತಾರೆ. ಜೀವನದಲ್ಲಿ ನಮಗೆ ಬೇಕು ಬೇಕಾದ್ದೆಲ್ಲವೂ ಬೇಕು ಬೇಕಾದಾಗ ಸಿಗುವುದಿಲ್ಲ. ನಮಗೆ ಸಿಕ್ಕಿರುವುದನ್ನು ಸಿಕ್ಕಷ್ಟು ಸ್ವೀಕರಿಸಬೇಕು. ಅಷ್ಟರಲ್ಲಿ ಖುಷಿ ಪಡಬೇಕು. ಜೀವನ ಎಂದರೆ ಹೀಗೆಯೇ. ಇಷ್ಟನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನ ಅವರಿಗೆ ಇರುವುದಿಲ್ಲ.
ಆಕೆ ಇವನನ್ನು ಮೆಚ್ಚುವುದಕ್ಕೆ, ಜೊತೆಗೆ ಇರುವುದಕ್ಕೆ ಹಾಗೂ ಈಗ ದೂರ ಹೋಗುವುದಕ್ಕೆ ಎಲ್ಲಕ್ಕೂ ಅವಳದೇ ಆದ ಒಂದಿಷ್ಟು ಕಾರಣಗಳು ಇರಬಹುದು. ಹದಿಹರೆಯದ ಯುವಕರಲ್ಲಿ ಇಂಥ ಆಕರ್ಷಣೆ, ವಿಕರ್ಷಣೆಗಳು ನಡೆಯುತ್ತಾ ಇರುತ್ತವೆ. ಅವನು ಸೂಕ್ಷ್ಮ ಸ್ವಭಾವದ ಹುಡುಗ. ಹಾಗಾಗಿ, ಅವನ ಮನಸ್ಸಿನಲ್ಲಿ ಪ್ರೀತಿಯ ಭಾವನೆ ಆಳವಾಗಿ ಬೇರೂರಿದೆ. ಇಂಥ ವಿಷಯದಲ್ಲಿ ಹುಡುಗಿಯರಿಗಿಂತ ಹುಡುಗರು ಹೆಚ್ಚು ಮೃದುಸ್ವಭಾವದವರಾಗಿರುತ್ತಾರೆ. ಇಂಥ ಹಸಿಬಿಸಿ ಸಂಬಂಧದಲ್ಲಿ ವ್ಯತ್ಯಾಸವಾದಾಗ ಆಘಾತಕ್ಕೊಳಗಾಗುತ್ತಾರೆ.
ಇಂಥ ವಿಷಯದಲ್ಲಿ ನಿಮ್ಮ ಮಗನ ಗೆಳೆಯರು ಉಪಯೋಗಕ್ಕೆ ಬರುತ್ತಾರೆ. ಅವರನ್ನು ಕರೆದು ಮಾತನಾಡಿಸಿ. ನಿಮ್ಮ ಮಗನ ಜೊತೆಗೆ ಅವನ ಆತ್ಮೀಯರು ಇರುವಂತೆ, ಮಾತನಾಡುವಂತೆ, ಜೊತೆಗೆ ಹೊರಗೆ ಕರೆದುಕೊಂಡು ಹೋಗುವಂತೆ ಕೇಳಿಕೊಳ್ಳಿ. ಅವನು ಇಡೀ ದಿನ ಮನೆಯಲ್ಲಿ ಇರುವುದು, ತನ್ನ ರೂಮನ್ನೇ ಪ್ರಪಂಚವನ್ನಾಗಿ ಮಾಡಿಕೊಂಡಿರುವುದು ಸರಿಯಲ್ಲ.
ನೀವೂ ಅವನ ಜೊತೆಗೆ ವಿಶ್ವಾಸದಿಂದ ಮಾತನಾಡಿ. ನಿಮ್ಮ ಜೀವನದ ಸೋಲುಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿ. ತಿರಸ್ಕಾರವನ್ನು ಎದುರಿಸಿ ಮುನ್ನುಗ್ಗಿದರೆ ಮಾತ್ರ ಮುಂದೊಂದು ದಿನ ಪುರಸ್ಕಾರವನ್ನು ಗಳಿಸಿಕೊಳ್ಳಲಿಕ್ಕೆ ಸಾಧ್ಯ. ನಿಮ್ಮ ಬದುಕಿನ ಹೋರಾಟ, ಮಾನ, ಅವಮಾನಗಳನ್ನು ಹೇಳಿಕೊಳ್ಳುವುದರಿಂದ ಅವನಿಗೆ ಒಂದಿಷ್ಟು ಬೆಳಕು ಸಿಗಬಹುದು. ಅವನ ದಿನಚರಿ ಸರಿಯಾಗುವಂತೆ ಮನವೊಲಿಸಿ. ಬೆಳಿಗ್ಗೆ ಬೇಗ ಎಬ್ಬಿಸಿ, ವಾಕಿಂಗ್‌ಗೆ ಕರೆದುಕೊಂಡು ಹೋಗಿ. ಜಿಮ್ ಅಥವಾ ಯೋಗಾಸನದ ತರಗತಿಗೆ ಸೇರುವಂತೆ ಪ್ರೋತ್ಸಾಹಿಸಿ. ಒತ್ತಾಯ ಮಾಡಿಯಾದರೂ ಸ್ನಾನ ಮಾಡಿಸಿ. ನಿನ್ನ ಬದುಕನ್ನು ನೀನು ಸರಿಯಾಗಿ ಇಟ್ಟುಕೊಂಡರೆ, ಇನ್ನೂ ಒಳ್ಳೆಯ, ಚಂದನೆಯ ಹುಡುಗಿ ಸಿಗುತ್ತಾಳೆ ಎಂದು ವಿವರಿಸಿ. ಅವನಿಗೆ ಯಾವಾಗಲೂ ಪಾಲಕರ ಆಸರೆ ಇದ್ದೇ ಇರುತ್ತದೆ ಎನ್ನುವುದನ್ನು ಬಾಯಿಬಿಟ್ಟು ಹೇಳಿ. ಅವನೆದುರಿಗೆ ನೀವು ಸೋತವರಂತೆ, ಹತಾಶರಾದವರಂತೆ ಇರಬೇಡಿ.
ಒಂದು ವಾರದಮಟ್ಟಿಗಾದರೂ ಬೇರೆ ಊರಿಗೆ, ಅವನಿಷ್ಟದ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದು ಬನ್ನಿ. ಅವನ ಜೊತೆಗೆ ಹಳೆಯ ಫೋಟೊ ಆಲ್ಬಮ್‌ಗಳನ್ನು ನೋಡಿ. ಅವನ ಬೆಳವಣಿಗೆಯ ದಿನಗಳಲ್ಲಿ ನಿಮ್ಮೆಲ್ಲರ ಸಂತೋಷದ ಕ್ಷಣಗಳನ್ನು ನೆನಪಿಸಿಕೊಂಡು ಮಾತನಾಡಿ.
ಇಷ್ಟಾಗಿಯೂ ಅವನಲ್ಲಿ ನಿರೀಕ್ಷಿಸಿದಷ್ಟು ಸಕಾರಾತ್ಮಕವಾದ ಬದಲಾವಣೆ ಕಾಣದಿದ್ದರೆ, ತಜ್ಞವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.