ADVERTISEMENT

ಸಮಾಧಾನ ಅಂಕಣ | ಅತಿ ಕಾಳಜಿ ಬಿಡಿ: ಸ್ವಾತಂತ್ರ್ಯ ಕೊಡಿ

ಡಿ.ಎಂ.ಹೆಗಡೆ
Published 21 ಸೆಪ್ಟೆಂಬರ್ 2025, 23:30 IST
Last Updated 21 ಸೆಪ್ಟೆಂಬರ್ 2025, 23:30 IST
   

ನಮಗೆ ಒಬ್ಬನೇ ಮಗ. ಪದವಿ ಕೊನೆಯ ವರ್ಷದಲ್ಲಿದ್ದಾನೆ. ಓದಿನಲ್ಲಿ ಪರವಾಗಿಲ್ಲ. ಆದರೆ ವಯಸ್ಸಿಗೆ ಮೀರಿದ ನಾಚಿಕೆ ಹಾಗೂ ಹಿಂಜರಿಕೆ. ಗೆಳೆಯರು ಕಡಿಮೆ. ಮಾತಾಡುವಾಗ ಆಗಾಗ ಉಗ್ಗುತ್ತಾನೆ. ಬೈಕು ಕೊಡಿಸಿ ಎಂದು ಹಟ ಮಾಡುತ್ತಾನೆ. ಅವನಿಗೇನಾದರೂ ಅನಾಹುತವಾದರೆ ಎನ್ನುವ ಆತಂಕದಿಂದ ನಾವು ಕೊಡಿಸಿಲ್ಲ. ಯಾವಾಗಲೂ ಮೊಬೈಲ್‌ ಫೋನಿನಲ್ಲಿ ಮುಳುಗಿರುತ್ತಾನೆ. ಒಬ್ಬನೇ ಎಲ್ಲಿಗೂ ಹೋಗುವುದಿಲ್ಲ. ನನ್ನ ಮೇಲೆ ಸಿಡುಕುತ್ತಾನೆ. ತಂದೆಯ ಜೊತೆಗೆ ಓಡಾಡುತ್ತಾನೆ. ನೌಕರಿ ಮಾಡುವುದಿಲ್ಲ, ಹಾಗಾಗಿ ಮುಂದೆ ಓದುವುದಿಲ್ಲ ಎನ್ನುತ್ತಾನೆ. ಯಾಕೆ ಹೀಗೆ?

ಸುನೀತಾ ಕಡವಾಡಕರ್, ಬೆಳಗಾವಿ

ಉ: ನಿಜ, ಬೆಳೆಯುವ ಮಕ್ಕಳು ಅಸಹಜವಾಗಿ ವರ್ತಿಸಿದರೆ ಪಾಲಕರಿಗೆ ಆತಂಕವಾಗುತ್ತದೆ. ನಿಮ್ಮ ಮಗನಿಗೆ ಈಗ ಹದಿಹರೆಯ ಮುಗಿಯುತ್ತಿರುವ ಸಮಯ. ಪ್ರೌಢನಂತೆ ವರ್ತಿಸಬೇಕು. ಅಂದಹಾಗೆ, ಆತ ಮೊದಲಿನಿಂದಲೂ ಹೀಗೆಯೇ ಅಥವಾ ಈಗೀಗ ಹೀಗಾಗುತ್ತಿದ್ದಾನೆಯೇ? ಒಬ್ಬನೇ ಮಗ ಎಂದು ನೀವು ಮೊದಲಿನಿಂದಲೂ ಅವನನ್ನು ಅಗತ್ಯಕ್ಕಿಂತ ಹೆಚ್ಚು ಕಾಳಜಿಯಿಂದ, ಮುದ್ದಾಗಿ ಬೆಳೆಸಿದ್ದೀರಿ, ಹೌದು ತಾನೆ? ಎಷ್ಟೇ ಮಕ್ಕಳಿದ್ದರೂ ಅಥವಾ ಒಂದೇ ಮಗುವಿದ್ದರೂ ಪಾಲಕರು ಸಹಜವಾಗಿ ಬೆಳೆಸಬೇಕು. ಇಲ್ಲದಿದ್ದರೆ ಮಕ್ಕಳು ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲಾರರು. ಅವರಿಗೆ ವಯೋಸಹಜವಾದ ಅನುಭವಗಳು ಆಗಲು ಬಿಡಬೇಕು. ಕೋಣೆಯ ಮಗು ಕೊಳೆಯಿತು, ಬೀದಿಯ ಮಗು ಬೆಳೆಯಿತು ಎನ್ನುವ ಗಾದೆಯಂತೆ ಆಗಬಾರದು. ಹಾಗಾದಾಗ ಅವರು ಪರಾವಲಂಬಿಯಾಗಿಯೇ ಪಾಲಕರ ಅವಲಂಬಿಯಾಗಿಯೇ ಉಳಿದುಬಿಡುವ ಸಾಧ್ಯತೆ ಹೆಚ್ಚು. ನಿಮ್ಮ ಮಗನ ವಿಷಯದಲ್ಲಿ ಅಂಥ ಲಕ್ಷಣಗಳು ಕಾಣಿಸುತ್ತಿವೆ.

ADVERTISEMENT

ಮೂವತ್ತು ವರ್ಷವಾದರೂ ಅಪ್ಪ, ಅಮ್ಮನ ಆದೇಶದಂತೆಯೇ ಕೆಲಸ ಮಾಡುವ, ಪಾಲಕರು ಹಾಕಿದ ಗೆರೆಯನ್ನು ದಾಟದವರನ್ನು ಕಂಡಿದ್ದೇನೆ. ಅವರು ಅಸಹಜವಾಗಿ ಕಾಣುತ್ತಾರೆ. ಪ್ರಾಣಿಗಳು ನೈಸರ್ಗಿಕವಾಗಿ ಮಕ್ಕಳನ್ನು ಹೊತ್ತು, ಹೆತ್ತು, ಸಾಕುತ್ತವೆ. ತಮ್ಮ ಸಂತಾನದ ಬಗ್ಗೆ ಅನವಶ್ಯವಾಗಿ ತಲೆಕೆಡಿಸಿ
ಕೊಳ್ಳುವುದಿಲ್ಲ. ಮರಿಗಳನ್ನು ಒಂದಿಷ್ಟು ಸಮಯ ದವರೆಗೆ ಒಟ್ಟಿಗಿದ್ದು ರಕ್ಷಿಸಿ, ಸಾಕುತ್ತವೆ. ಬೇಟೆಯಾಡುವುದನ್ನು ಕಲಿಸುತ್ತವೆ. ಕೆಲ ತಿಂಗಳುಗಳ ನಂತರ ಬೇರೆ ಬೇರೆಯಾಗಿ, ಸ್ವತಂತ್ರವಾಗಿ ಬದುಕುತ್ತವೆ. ಇದು ನಮಗೆ ಪ್ರಕೃತಿ ಕಲಿಸುವ ಪಾಠ.

ಕೆಲವೊಮ್ಮೆ ವಿಮಾನದಲ್ಲಿ ಹೋಗುವವರಿಗೂ ಅಪಘಾತವಾಗುತ್ತದೆ. ಫುಟ್‌ಪಾತಿನಲ್ಲಿ ನಡೆಯುತ್ತಿರುವವರೂ ಅವಘಡಕ್ಕೆ ಈಡಾದ ಉದಾಹರಣೆಗಳಿವೆ. ಹಾಗೆಂದು, ಅದೇ ಭಯದಿಂದ ಯಾರೂ ಏನನ್ನೂ ಮಾಡದೆ, ಎಲ್ಲಿಗೂ ಪ್ರಯಾಣಿಸದೆ ಇರಲು ಸಾಧ್ಯವೇ? ಸ್ವಂತ ಬೈಕಿನಲ್ಲಿ ಓಡಾಡಬೇಕೆನ್ನುವ ನಿಮ್ಮ ಮಗನ ಆಸೆ ಅಸಹಜವಾದುದೇನಲ್ಲ. ಅವನಿಗೆ ಏನಾದರೂ ಅಪಾಯವಾಗುತ್ತದೆ ಎನ್ನುವ ನಿಮ್ಮೊಳಗಿನ ನಿತ್ಯ ಆತಂಕ ಅವನ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರಿದೆ. ಇಂತಹ ಸಂದರ್ಭದಲ್ಲಿ ತಪ್ಪು ಯಾರದು ಎಂದು ವಿಶ್ಲೇಷಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅವನ ಮನಸ್ಸಿನೊಳಗಿನ ಕೆಲವಾದರೂ ವಯೋಸಹಜವಾದ ಆಸೆ, ಬಯಕೆ ಈಡೇರದಿದ್ದರೆ ಹೇಗೆ? ಅವನೇ ಸ್ವತಂತ್ರವಾಗಿ ಕೆಲವನ್ನಾದರೂ ಈಡೇರಿಸಿಕೊಳ್ಳುವಷ್ಟು ಸಮರ್ಥನಿರದಿದ್ದರೆ ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.