ADVERTISEMENT

ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ: ಪರ, ವಿರೋಧದ ಸುತ್ತಾ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2026, 11:21 IST
Last Updated 24 ಫೆಬ್ರುವರಿ 2026, 11:21 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ರಾಜ್ಯದ ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವ ವಿಚಾರ ಚರ್ಚೆಯಲ್ಲಿದೆ. ಈ ಬಗ್ಗೆ ಪೋಷಕರಿಂದಲೂ ಒತ್ತಡವಿದೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಹೇಳಿಕೆ ನೀಡಿರುವುದು ಭಾರಿ ಚರ್ಚೆಗೆ ಕಾರಣವಾಗುತ್ತಿದೆ.

ಮೊದಲಿನಿಂದಲೂ ಶಾಲೆ ಮತ್ತು ಕಾಲೇಜು ಆವರಣದಲ್ಲಿ ಮೊಬೈಲ್ ಬಳಕೆ ನಿಷೇಧದ ಕುರಿತು ನಿರಂತರ ಚರ್ಚೆಗಳು ಆಗುತ್ತಿದ್ದವು. ಇದೀಗ ಶಾಲಾ ಆವರಣದಲ್ಲಿ ಸಂಪೂರ್ಣ ಮೊಬೈಲ್ ನಿಷೇಧಕ್ಕೆ ಒತ್ತಡ ಕೇಳಿಬರುತ್ತಿದೆ.

ADVERTISEMENT

ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧವೇಕೆ ?

ಶಾಲೆಯಲ್ಲಿ ಮೊಬೈಲ್ ಬಳಕೆಗೆ ಅನುಮತಿ ನೀಡಿದರೆ, ವಿದ್ಯಾರ್ಥಿಗಳು ಪಾಠದ ಸಮಯದಲ್ಲೂ ಮೊಬೈಲ್‌ನಲ್ಲಿ ತಲ್ಲೀನರಾಗಿರುತ್ತಾರೆ. ಪಾಠದ ಕಡೆಗೆ ಸರಿಯಾಗಿ ಗಮನ ನೀಡುವುದಿಲ್ಲ ಎನ್ನುವುದು ಶಿಕ್ಷಕರ ಆರೋಪ.

ಮೊಬೈಲ್ ಬಳಕೆಗೆ ಅನುಮತಿ ನೀಡಿದರೆ, ವಿದ್ಯಾರ್ಥಿಗಳಲ್ಲಿ ಅಶಿಸ್ತಿನ ವರ್ತನೆ ಜಾಸ್ತಿಯಾಗುತ್ತದೆ. ಶಾಲಾ ವಾತಾವರಣ ಹಾಳಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಅವರ ಶೈಕ್ಷಣಿಕ ಪ್ರಗತಿಗೆ ಅದು ಹಿನ್ನೆಡೆ ಉಂಟು ಮಾಡುತ್ತದೆ. ಮಕ್ಕಳು ಕ್ರೀಡೆಯ ಕಡೆಗೂ ಗಮನ ನೀಡುತ್ತಿಲ್ಲ ಎನ್ನುತ್ತಾರೆ ಕೆಲವು ಶಿಕ್ಷಕರು.

ಮಕ್ಕಳು ಮನೆಯಲ್ಲಿ ಕೂಡ ಮೊಬೈಲ್ ಬಳಸುತ್ತಾರೆ. ಶಾಲೆಯಲ್ಲೂ ಮೊಬೈಲ್ ಬಳಕೆಗೆ ಅನುಮತಿ ನೀಡಿದರೆ, ಅವರು ಮೊಬೈಲ್‌ಗೆ ದಾಸರಾಗುತ್ತಾರೆ. ಬೇರೆಯ ವಿಷಯಗಳಲ್ಲಿ ಕ್ರಮೇಣ ಆಸಕ್ತಿ ಕಳೆದುಕೊಳ್ಳುತ್ತಾರೆ ಎನ್ನುತ್ತಾರೆ ಪೋಷಕರು.

ಕೆಲವೊಮ್ಮೆ ಸೈಬರ್ ಅಪರಾಧ, ಆನ್‌ಲೈನ್ ವಂಚನೆ, ಡಿಜಿಟಲ್ ಅರೆಸ್ಟ್ ಹಾಗೂ ಆನ್‌ಲೈನ್ ಗೇಮ್‌ಗಳಿಗೆ ದಾಸರಾಗುವ ಸಾಧ್ಯತೆ ಕೂಡ ಇದೆ. ಅತಿಯಾದ ಮೊಬೈಲ್ ಬಳಕೆಯಿಂದ ಆತಂಕ, ಖಿನ್ನತೆ, ಕೀಳರಿಮೆ, ನಿದ್ರಾಹೀನತೆಯಂತಹ ಸಮಸ್ಯೆಗಳಿಗೆ ಕೂಡ ಕಾರಣವಾಗುತ್ತದೆ. ಇದರಿಂದ ಶಾಲೆಗಳ ಒಳಗೆ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಬೇಕು ಎನ್ನುವ ವಾದ ಕೇಳಿಬರುತ್ತಿದೆ.

ಶಾಲೆಗಳಲ್ಲಿ ಮೊಬೈಲ್ ಬಳಕೆ ಏಕೆ ಬೇಕು..

ಕೆಲವು ಶಿಕ್ಷಕರು ಮಾತ್ರ, ಶಾಲೆಗಳಲ್ಲಿ ಮೊಬೈಲ್ ಬಳಕೆಯ ಪರವಾಗಿ ಮಾತನಾಡುತ್ತಾರೆ. ಜಗತ್ತು ಆಧುನಿಕತೆಯೆಡೆಗೆ ತೆರೆದುಕೊಳ್ಳುತ್ತಿರುವಾಗ, ನಾವು ಶಿಕ್ಷಣ ವ್ಯವಸ್ಥೆಯಲ್ಲೂ ಕೂಡ ಹೊಸತನಕ್ಕೆ ತೆರೆದುಕೊಳ್ಳಬೇಕು. ಶಾಲೆಗಳಲ್ಲಿ ಮೊಬೈಲ್‌ಗೆ ಅನುಮತಿ ನೀಡುವುದು ತಪ್ಪಲ್ಲ. ಆದರೆ, ಕೆಲವು ನಿರ್ಬಂಧಗಳನ್ನು ವಿಧಿಸುವ ಮೂಲಕ ದುರ್ಬಳಕೆಯನ್ನು ತಡೆಯಬಹುದು ಎಂದು ಹೇಳುತ್ತಾರೆ.

ದೂರದ ಊರಿನ ಪ್ರಯಾಣ, ಹೊಸ ಶಿಕ್ಷಣ ವ್ಯವಸ್ಥೆ ಸೇರಿದಂತೆ ಹಲವು ಕಾರಣಕ್ಕಾಗಿ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ಬಳಕೆಯ ಕಡೆ ಒಲವು ತೋರಿಸುತ್ತಾರೆ.

ಮೊಬೈಲ್ ಬಳಕೆಗೆ ಎಲ್ಲಿ ನಿಷೇಧವಿದೆ

ಕೋವಿಡ್‌ಗೂ ಮುನ್ನ ರಾಜ್ಯದ ಬಹುತೇಕ ಶಾಲಾ – ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧವಿತ್ತು. ಆದರೆ, ಕೋವಿಡ್ ನಂತರ ಆನ್‌ಲೈನ್ ಕ್ಲಾಸ್‌ ನೆಪದಲ್ಲಿ ಹಾಗೂ ಕೆಲವು ಇತರೆ ಕಾರಣಗಳಿಂದ ಮೊಬೈಲ್ ಬಳಕೆ ಸಾಮಾನ್ಯವಾಗಿದೆ.

ಹಾಗಿದ್ದರೂ ಕೆಲವು ಶಾಲಾ – ಕಾಲೇಜುಗಳು ಮೊಬೈಲ್ ಬಳಕೆ ನಿರ್ಬಂಧಿಸಿ, ಸ್ವಯಂ ಪ್ರೇರಿತ ನಿರ್ಧಾರ ತೆಗೆದುಕೊಂಡಿವೆ. ಕೆಲವು ಹಾಸ್ಟೆಲ್‌ಗಳಲ್ಲಿ ಇಂತಿಷ್ಟು ಸಮಯ ಮಾತ್ರ ಮೊಬೈಲ್ ಬಳಕೆ ಮಾಡಬೇಕು ಎನ್ನುವ ನಿಯಮವಿದೆ.

ಇತ್ತೀಚೆಗೆ 10ನೇ ತರಗತಿ ಪರೀಕ್ಷೆಯ ಹಿನ್ನಲೆಯಲ್ಲಿ ಕೆಲವು ಗ್ರಾಮಗಳಲ್ಲಿ ಸ್ವಯಂ ಪ್ರೇರಿತವಾಗಿ ಗ್ರಾಮಸ್ಥರೇ ಟಿವಿ – ಮೊಬೈಲ್ ನಿಷೇಧಿಸಿದ ಸುದ್ದಿಗಳು ಕೂಡ ಹರಿದಾಡಿದ್ದವು.

ಇತ್ತೀಚೆಗೆ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣವನ್ನು ನಿಷೇಧಿಸುವ ಕುರಿತು ನೆರೆಯ ರಾಜ್ಯವಾದ ಆಂಧ್ರಪ್ರದೇಶ ಚಿಂತನೆ ನಡೆಸಿತ್ತು. ಆಸ್ಟ್ರೇಲಿಯಾ, ಮಲೇಷ್ಯಾ, ನ್ಯೂಜಿಲೆಂಡ್ ಹಾಗೂ ನೆದರ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ಮಕ್ಕಳಿಗೆ ಮೊಬೈಲ್ ಬಳಕೆಗೆ ನಿಷೇಧವಿದೆ.

ನೇಪಾಳದಲ್ಲಿ ಯುವಜನರಿಗೆ ಸಾಮಾಜಿಕ ಜಾಲತಾಣ ನಿಷೇಧ ಮಾಡಿದ್ದು, ದಂಗೆಗೆ ಕಾರಣವಾಗಿತ್ತು.

ಮೊಬೈಲ್ ಗೀಳು ಬಿಡಿಸಲು ಏನು ಮಾಡಬಹುದು..

ಶಾಲಾ ಶಿಕ್ಷಣ ಇಲಾಖೆಯು ಮಕ್ಕಳಲ್ಲಿ ಮೊಬೈಲ್ ಗೀಳು ಬಿಡಿಸಲು ‘ಮೊಬೈಲ್ ಬಿಡಿ –ಪುಸ್ತಕ ಹಿಡಿ’ ಎನ್ನುವ ಅಭಿಯಾನವನ್ನು ಆರಂಭಿಸಿತ್ತು.

ಇದರ ಜತೆ ಯೋಗಾಭ್ಯಾಸ, ಮಾನಸಿಕ ಒತ್ತಡ ನಿವಾರಿಸುವ ಚಟುವಟಿಕೆಗಳು, ಪಠ್ಯೇತರ ಚಟುವಟಿಕೆ, ಕ್ರೀಡೆ ಹಾಗೂ ಗ್ರಂಥಾಲಯ ಬಳಕೆಯನ್ನು ಉತ್ತೇಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಬಹುದು.

ಶಾಲಾ – ಕಾಲೇಜುಗಳಲ್ಲಿ ಮೊಬೈಲ್‌ ಬಳಕೆ ಅಸಾಧ್ಯವೇನೂ ಅಲ್ಲದಿದ್ದರೂ, ಕಠಿಣ ಕಾನೂನಿನ ಜತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಕೂಡ ಆಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.