ADVERTISEMENT

ವಿದ್ಯಾರ್ಥಿಗಳಿಗಾಗಿ ‘ಶಾಲಾ ರಕ್ಷಣಾ ಪಡೆ’

ವಿಜಯಪುರ ಜಿಲ್ಲೆಯ ಬಳೂತಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿನೂತನ ಪ್ರಯೋಗ

ಬಸವರಾಜ ಎಸ್.ಉಳ್ಳಾಗಡ್ಡಿ
Published 2 ಡಿಸೆಂಬರ್ 2019, 19:30 IST
Last Updated 2 ಡಿಸೆಂಬರ್ 2019, 19:30 IST
ಬಳೂತಿ ಸರ್ಕಾರಿ ಪ್ರೌಢಶಾಲೆಯ ‘ಶಾಲಾ ರಕ್ಷಣಾ ಪಡೆ’ಯೊಂದಿಗೆ ಶಿಕ್ಷಕರು
ಬಳೂತಿ ಸರ್ಕಾರಿ ಪ್ರೌಢಶಾಲೆಯ ‘ಶಾಲಾ ರಕ್ಷಣಾ ಪಡೆ’ಯೊಂದಿಗೆ ಶಿಕ್ಷಕರು   

ಕೊಲ್ಹಾರ: ಶಾಲೆಯಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ರಕ್ಷಣೆ ಹಾಗೂ ತುರ್ತು ಸಂದರ್ಭಗಳಲ್ಲಿ ನೆರವು ನೀಡಲು ಸರ್ಕಾರಿ ಶಾಲೆಯಲ್ಲೊಂದು ರಕ್ಷಣಾ ಪಡೆ ಸಜ್ಜಾಗಿದೆ.

ಇಂತಹದೊಂದು ವಿನೂತನ ಕಲ್ಪನೆಯನ್ನು ಸರ್ಕಾರಿ ಶಾಲೆಯಲ್ಲಿ ಅನುಷ್ಠಾನಕ್ಕೆ ತಂದು ಗಮನ ಸೆಳೆದಿದ್ದಾರೆ ಶಿಕ್ಷಕ ಸಂಗಮೇಶ ಕಮತಗಿ.

ಸಂಗಮೇಶ ಅವರು ತಾಲ್ಲೂಕಿನ ಬಳೂತಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಇಂಗ್ಲಿಷ್ ಶಿಕ್ಷಕ. ಪ್ರೌಢಶಾಲಾ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಸುರಕ್ಷಾ ಕಾನೂನುಗಳ ಕುರಿತು ನಡೆದ ಉಪನ್ಯಾಸದಲ್ಲಿ ‘ಶಾಲಾ ರಕ್ಷಣಾ ಪಡೆ’ ಪರಿಕಲ್ಪನೆ ಅವರಿಗೆ ಮೂಡಿತು. ಎರಡು ವರ್ಷಗಳ ಹಿಂದೆ ಪ್ರಾಯೋಗಿಕವಾಗಿ ಈ ಪಡೆ ರಚಿಸಿ ಅವರು ಯಶಸ್ವಿಯಾಗಿದ್ದಾರೆ.

ADVERTISEMENT

ಈ ಪಡೆಯು ತನ್ನ ಕಾರ್ಯ ಚಟುವಟಿಕೆಗಳು ಹಾಗೂ ತುರ್ತು ಸಂದರ್ಭಗಳಲ್ಲಿ ನೆರವಿಗೆ ಧಾವಿಸಿ ಕೈಗೊಳ್ಳುವ ರಕ್ಷಣಾ ಕ್ರಮಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿ ಪೋಷಕರು ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಪಡೆಗೆ ಪ್ರಥಮ ಚಿಕಿತ್ಸಾ ತರಬೇತಿ, ವೈದ್ಯಕೀಯ ಮಾಹಿತಿ, ಪೋಕ್ಸೊಕಾಯ್ದೆ, ಮಕ್ಕಳ ಸಹಾಯವಾಣಿ, ಅಗ್ನಿ ನಿರೋಧಕಗಳನ್ನು ಬಳಸಿ ಬೆಂಕಿ ನಂದಿಸುವ ತರಬೇತಿ, ಪರಿಸರ ರಕ್ಷಣಾ ತರಬೇತಿ, ಮೂರ್ಚೆರೋಗದಂತಹ ಅನಾರೋಗ್ಯ ಪೀಡಿತ ಮಕ್ಕಳ ಬಗ್ಗೆ ಕಾಳಜಿ ಹಾಗೂ ರಕ್ಷಣೆ, ಶಾಲೆಯಲ್ಲಿ ಹಾಗೂ ಸುತ್ತಮುತ್ತಲಿರುವ ತೆರೆದ ಕೊಳವೆ ಬಾವಿಗಳು, ನೀರಿನ ಟ್ಯಾಂಕ್‌ಗಳು, ಮುರಿದು ಬಿದ್ದ ವಿದ್ಯುತ್ ತಂತಿ ಮುಂತಾದ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ತರಬೇತಿ... ಹೀಗೆ ತುರ್ತು ಸಂದರ್ಭಗಳಲ್ಲಿ ಶಾಲೆಯ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಸಹಾಯ ಮಾಡುವ ಕುರಿತು ತಿಳಿಸಿಕೊಡಲಾಗುತ್ತದೆ.

‘ಶಾಲಾ ರಕ್ಷಣಾ ಪಡೆಯಲ್ಲಿ ಕಾರ್ಯ ನಿರ್ವಹಿಸುವ ಬಾಲಕ, ಬಾಲಕಿಯರ ಬಗ್ಗೆ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಮಕ್ಕಳಿಗೆ ತಿಳಿಸಬೇಕು. ಇದರಿಂದ ಯಾವುದೇ ಮಗುವಿಗೆ ಅಥವಾ ಶಿಕ್ಷಕರಿಗೆ ತೊಂದರೆ ಉಂಟಾದಾಗ ಈ ತಂಡ ತಕ್ಷಣ ಸ್ಪಂದಿಸಿ, ಅವರಿಗೆ ನೆರವಾಗುತ್ತಾರೆ’ ಎಂದು ಹೇಳುತ್ತಾರೆ ಶಿಕ್ಷಕ ಸಂಗಮೇಶ ಕಮತಗಿ.

ಮಕ್ಕಳಿಗೆ ತರಬೇತಿ ನೀಡುವುದರಿಂದ ಅವರಲ್ಲಿ ಅರಿವು ಮೂಡುತ್ತದೆ. ಶಾಲಾ ರಕ್ಷಣಾ ಪಡೆ ರಚನೆ ಬಳಿಕ ಬಹಳಷ್ಟು ಅರಿವು ಹಾಗೂ ಜಾಗೃತಿ ಉಂಟಾಗಿದೆ ಎನ್ನುತ್ತಾರೆಬಳೂತಿಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕಿಮೀನಾಕ್ಷಿ ಹುಡೇದ.

ರಚನೆ ಹೇಗೆ?: ಶಾಲೆಯ 8, 9 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ದೈಹಿಕ ಹಾಗೂ ಮಾನಸಿಕವಾಗಿ ಸದೃಢ, ಕ್ರಿಯಾಶೀಲರಾಗಿರುವ 20 ಬಾಲಕರು ಮತ್ತು 20 ಬಾಲಕಿಯರನ್ನು ರಕ್ಷಣಾ ಪಡೆಗೆ ಆಯ್ಕೆ ಮಾಡಿಕೊಳ್ಳಬೇಕು. ಶಾಲೆಯ ಆಸಕ್ತ ಒಬ್ಬ ಶಿಕ್ಷಕರಿಗೆ ಈ ಮಕ್ಕಳ ರಕ್ಷಣಾ ಪಡೆಯ ನೇತೃತ್ವ ನೀಡಿ, ಈ ತಂಡಕ್ಕೆ ವೈದ್ಯರಿಂದ, ಅಗ್ನಿಶಾಮಕ ದಳದಿಂದ ತರಬೇತಿ ಕೊಡಿಸಬೇಕು. ಶಾಲೆಯ ಎಲ್ಲ ಶಿಕ್ಷಕರು ಈ ತರಬೇತಿ ಪಡೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.