ADVERTISEMENT

SSLC Exams 2021| ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 14:27 IST
Last Updated 1 ಮಾರ್ಚ್ 2021, 14:27 IST
ಎಸ್‌ ಸುರೇಶ್‌ಕುಮಾರ್‌
ಎಸ್‌ ಸುರೇಶ್‌ಕುಮಾರ್‌   

ಧಾರವಾಡ: ‘ಪ್ರಸಕ್ತ ಸಾಲಿನ ಎಸ್‌ಎಸ್ಎಲ್‌ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದು, ಜೂನ್ 21ರಿಂದ ಜುಲೈ 5ರವರೆಗೆ ಪರೀಕ್ಷೆಗಳು ನಡೆಯಲಿವೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

‘ಈ ಮೊದಲು ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇದಕ್ಕೆ ಆಕ್ಷೇಪಣೆ ಹಾಗೂ ಸಲಹೆ ಸೂಚನೆಗಳನ್ನು ಸಲ್ಲಿಸಲು ಫೆ. 26ರವರೆಗೆ ಕಾಲಾವಕಾಶ ನೀಡಲಾಗಿತ್ತು. ಪ್ರಮುಖ ವಿಷಯಗಳ ಪರೀಕ್ಷೆಗೆ ಕನಿಷ್ಠ ಒಂದು ದಿನ ವಿರಾಮ ಸಿಗುವಂತೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೂನ್ 21ರಂದು ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ, ಜೂನ್ 24-ಗಣಿತ, ಜೂನ್ 28-ವಿಜ್ಞಾನ, ಜೂನ್ 30-ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಜುಲೈ2- ದ್ವಿತೀಯ ಭಾಷೆ ಇಂಗ್ಲಿಷ್/ ಕನ್ನಡ, ಜುಲೈ 5- ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ADVERTISEMENT

‘ಮುಂದಿನ ಶೈಕ್ಷಣಿಕ ವರ್ಷವನ್ನು ಜುಲೈ 15ರಿಂದ ಆರಂಭಿಸಲು ನಿರ್ಧರಿಸಲಾಗಿದೆ. ಅದರಂತೆಯೇ ಪ್ರಸಕ್ತ ಸಾಲಿನ ಒಂದನೇ ತರಗತಿಯಿಂದ ತರಗತಿಗಳನ್ನು ಆರಂಭಿಸಲು ಮುಂದಿನ ಒಂದು ವಾರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಜತೆಗೆ ಬಿಸಿಯೂಟ ಆರಂಭಿಸಲು ಕೇಂದ್ರ ಸರ್ಕಾರದ ಅನುಮತಿ ಕೋರಲಾಗಿದ್ದು, ನಂತರ ನಿರ್ಧಾರ ಪ್ರಕಟಿಸಲಾಗುವುದು. ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳವಾಗಿರುವುದರಿಂದ ಕಾದುನೋಡಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಸುರೇಶ್ ಕುಮಾರ್ ಹೇಳಿದರು.

‘ಏಪ್ರಿಲ್ 2ರಿಂದ ರಾಜ್ಯದಾದ್ಯಂತ ಪ್ರವಾಸ ನಡೆಸಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ಸಿದ್ಧತೆ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆ ಹೊರೆಯಾಗದಂತೆ ಹಾಗೂ ಮುಂದಿನ ತರಗತಿಯ ಕಲಿಕೆಗೆ ಕೊರತೆಯಾಗದಂತೆ ನಡೆಸಲು ಅವರು ಕೈಗೊಂಡ ಅತ್ಯುತ್ತಮ ತಂತ್ರಗಳ ಕುರಿತು ಚರ್ಚಿಸಿ ಅವುಗಳನ್ನು ರಾಜ್ಯದ ಇತರ ಭಾಗಗಳಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗುವುದು’ ಎಂದರು.

‘ಜತೆಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಚಿತ‌ಪಡಿಸಿಕೊಳ್ಳಲು ಇಲಾಖೆಯ ನಿರ್ದೇಶಕ ವೃಂದದ ಅಧಿಕಾರಿಗಳೂ ಸೇರಿದಂತೆ ಪ್ರತಿಯೊಬ್ಬರೂ ಶಾಲಾ ದತ್ತು ತೆಗೆದುಕೊಳ್ಳಲು ಮುಂದಾಗುವಂತೆ ಸೂಚಿಸಲಾಗಿದೆ. ಅವಶ್ಯಕತೆ ಬಿದ್ದರೆ ದತ್ತು‌ ಪಡೆದ ಶಾಲೆಗಳಲ್ಲಿ ಅಧಿಕಾರಿಗಳು ಮಕ್ಕಳಿಗೆ ಬೋಧಿಸುವ ಕೆಲಸದಲ್ಲಿಯೂ ತೊಡಗಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗುವುದು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ, ಎಸ್.ವಿ. ಸಂಕನೂರು ಹಾಗೂ ಹನುಮಂತ ನಿರಾರಣಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ‌ ಸಿದ್ಧಲಿಂಗಯ್ಯ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.