ADVERTISEMENT

ಸಮಾಧಾನ ಅಂಕಣ | ಕನಸಿನಲ್ಲಿ ಬೆಚ್ಚಿ ಬೀಳುವ ಮಗ: ಪರಿಹಾರವೇನು?

ಡಿ.ಎಂ.ಹೆಗಡೆ
Published 16 ನವೆಂಬರ್ 2025, 23:30 IST
Last Updated 16 ನವೆಂಬರ್ 2025, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

(ಎ.ಐ ಚಿತ್ರ)

ನನ್ನ ಒಬ್ಬನೇ ಮಗ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ಒಂದು ತಿಂಗಳಿಂದ, ನಿದ್ರೆಯಲ್ಲಿ ಇದ್ದಾಗ ಬೆಚ್ಚಿಬೀಳುತ್ತಾನೆ.‌ ತೀರಾ ಅನ್ಯಮನಸ್ಕನಾಗಿರುತ್ತಾನೆ. ಏನಾಯಿತು ಎಂದು ಕೇಳಿದರೆ ಹೇಳುತ್ತಿಲ್ಲ. ಏನು ಮಾಡಬೇಕೋ‌ ತೋಚುತ್ತಿಲ್ಲ. ‌ಸಿಂಗಲ್ ಮದರ್ ಆಗಿರುವ ಕಾರಣದಿಂದ ಕುಟುಂಬದಿಂದಲೂ ಸಹಕಾರ ಅಷ್ಟಕ್ಕಷ್ಟೆ. ಪರಿಹಾರ ತಿಳಿಸುವಿರಾ?

ADVERTISEMENT

ಶೋಭಾ ಡಿ., ಉಡುಪಿ

ಉ: ಕಕನಸಿನಲ್ಲಿ ಬೆಚ್ಚಿಬೀಳುವುದು, ಕೆಲವೊಮ್ಮೆ ಕೂಗುವುದು, ಅರ್ಥವಾಗದಂತೆ ಮಾತನಾಡುವುದು ಇವೆಲ್ಲ ಸಾಮಾನ್ಯ ಸಂಗತಿಗಳು. ಇವು ಯಾವ ವಯಸ್ಸಿನವರಿಗಾದರೂ ಆಗಬಹುದು. ಕೆಲವು ಸಲ ಹೀಗಾಗಿ, ನಂತರ ತನ್ನಿಂತಾನೇ ಕಡಿಮೆಯಾಗಲೂಬಹುದು. ಇಂಥದ್ದಕ್ಕೆಲ್ಲ ಇಂಥದ್ದೇ ಕಾರಣ ಎಂದು ಇರುವುದಿಲ್ಲ.

ಇನ್ನು, ನಿಮ್ಮ ಮಗನಿಗೆ ಹದಿಹರೆಯ. ಸಹಜವಾದ ಮನೋದೈಹಿಕ ಬದಲಾವಣೆಯಾಗುತ್ತಿರುವ ವಯಸ್ಸು. ಕೆಲವನ್ನು ಹೇಳಿಕೊಳ್ಳಲಿಕ್ಕೆ ಯಾರೂ ಇಲ್ಲದಿರುವಾಗ ಆತಂಕವಾಗುತ್ತದೆ. ಕೆಲವು ಹುಡುಗರಿಗೆ ಸ್ವಪ್ನಸ್ಖಲನ ಶುರುವಾದಾಗ ಹೀಗಾಗುವುದುಂಟು. ಕನಸಿನಲ್ಲಿ ತಪ್ಪು ಮಾಡಿಬಿಟ್ಟೆ ಎನ್ನುವ ಪಾಪಪ್ರಜ್ಞೆಯಿಂದಲೂ, ಇದರಿಂದ ತನಗೇನೋ ಕೆಟ್ಟದ್ದಾಗುತ್ತಿದೆ ಎನ್ನುವ ಭಯದಿಂದಲೂ ಹೀಗಾಗುತ್ತದೆ.

ಭಯ, ಕೀಳರಿಮೆ, ಖಿನ್ನತೆ, ನಿದ್ರೆ ಕಡಿಮೆಯಾದಾಗ, ಮಲಗುವ ಸಮಯವಾಗಲೀ ಜಾಗವಾಗಲೀ ಬದಲಾದಾಗ, ಒಂಟಿತನ ಕಾಡುವಾಗ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಅಶಕ್ತರಾದಾಗಲೂ ಹೀಗಾಗುವುದುಂಟು. ಕೆಲವು ಔಷಧ ಸೇವನೆಯಿಂದ, ಆಹಾರದಲ್ಲಿ ವ್ಯತ್ಯಯವಾದಾಗ, ವಿಟಮಿನ್‌ಗಳ ವೈಪರೀತ್ಯದಿಂದಲೂ ಹೀಗಾಗಬಹುದು. ಇನ್ನು ಕೆಲವು ಜನರಿಗೆ ವಂಶವಾಹಿಯ ಕಾರಣದಿಂದಲೂ ಹೀಗಾಗುತ್ತದೆ.

ನೀವು ಸಿಂಗಲ್‌ ಪೇರೆಂಟ್‌ ಅಗಿರುವುದರಿಂದಲೂ ಅವನಿಗೆ ಅವ್ಯಕ್ತವಾದ ಆತಂಕವಾಗಿರಬಹುದು. ತಂದೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿರುವ ಆತ ಅದನ್ನೆಲ್ಲ ನಿಮ್ಮ ಬಳಿ ಹೇಳಿಕೊಳ್ಳಲು ಸಾಧ್ಯವಾಗದೆ ಚಡಪಡಿಸುತ್ತಿರಬಹುದು. ಇದರಿಂದ ಮಾಡಬೇಕಾದ ಕೆಲಸದಲ್ಲಿ ಅವನಿಗೆ ಏಕಾಗ್ರತೆ ಕ್ಷೀಣಿಸುತ್ತಿರಬಹುದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತಂದೆ ಹಾಗೂ ತಾಯಿ ಇಬ್ಬರ ಸಾಮೀಪ್ಯ ಮತ್ತು ಸಾಂಗತ್ಯದ ಅವಶ್ಯಕತೆ ಇರುತ್ತದೆ.

ಮಗನನ್ನು ಸಮಾಧಾನದಿಂದ ಮಾತನಾಡಿಸಿ. ಅವನ ಬೇಕು ಬೇಡಗಳ ಬಗ್ಗೆ ವಿಚಾರಿಸಿ. ಒಬ್ಬರಿಗೊಬ್ಬರು ಆಸರೆಯಾಗಿ ಇರಬೇಕಾದ ಅಗತ್ಯದ ಬಗ್ಗೆ ಅವನೊಂದಿಗೆ ಮನಸ್ಸು ಬಿಚ್ಚಿ ಚರ್ಚಿಸಿ. ಯಾವುದೇ ಕಾರಣಕ್ಕೂ ಕೋಪತಾಪ, ಅಸಹಾಯಕತೆ, ಗೊಂದಲ ಅವನ ಮೇಲೆ ವ್ಯಕ್ತವಾಗದಿರಲಿ. ಪ್ರತಿದಿನ ಸಾಯಂಕಾಲ ಒಂದರ್ಧ ಗಂಟೆ ಸಮುದ್ರ ತೀರಕ್ಕೆ ಹೋಗಿ ನೀರಾಟವಾಡಿಕೊಂಡು, ಉಸುಕಿನಲ್ಲಿ ಓಡಾಡಿಕೊಂಡು ಬರಲಿ. ನಿತ್ಯ ರಾತ್ರಿ ನಿಗದಿತ ಸಮಯಕ್ಕೆ ಮಲಗಲಿ. ಏಳರಿಂದ ಎಂಟು ತಾಸು ನಿದ್ರಿಸಲಿ. ಸಂಪೂರ್ಣ ನಿದ್ರೆ ಮಾಡಿ ಮುಗಿಸಿದ ಮೇಲೆ ಓದುವುದು/ ಅಧ್ಯಯನ ಮಾಡುವುದು ಹಿತವಾಗಿರುತ್ತದೆ. ಮಲಗುವುದಕ್ಕೆ ಕನಿಷ್ಠ ಅರ್ಧಗಂಟೆ ಮೊದಲು ಟಿ.ವಿ, ಮೊಬೈಲ್ ಸ್ಕ್ರೀನ್‌ ನೋಡದಿದ್ದರೆ ಒಳ್ಳೆಯದು. ಊಟ ಮುಗಿಸಿದ ನಂತರ ಕನಿಷ್ಠ ಒಂದೂವರೆಯಿಂದ ಎರಡು ತಾಸುಗಳಾದ ಮೇಲೆ ಮಲಗುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಮಲಗುವ ಮೊದಲು ಸ್ವಲ್ಪ ಬಿಸಿನೀರು ಕುಡಿಯುವುದು ಒಳ್ಳೆಯದು. ಮಲಗುವ ಮೊದಲು, ಹಾಸಿಗೆಯಲ್ಲಿ ಕುಳಿತುಕೊಂಡು, ಒಂದೈದು ನಿಮಿಷವಾದರೂ ಕಣ್ಮುಚ್ಚಿಕೊಂಡು ಉಸಿರಾಟವನ್ನು ಗಮನಿಸುವುದು, ದೀರ್ಘವಾಗಿ ಉಸಿರಾಡುವುದು ಒಳ್ಳೆಯ ನಿದ್ರೆ ಬರುವುದಕ್ಕೆ ಉಪಯೋಗವಾಗುತ್ತದೆ.

ಹೀಗಿದ್ದೂ ನಿರೀಕ್ಷಿಸಿದಷ್ಟು ಸಕಾರಾತ್ಮಕವಾದ ಬದಲಾವಣೆ ಕಾಣದಿದ್ದರೆ, ತಜ್ಞವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.