ಇತ್ತೀಚೆಗೆ ತಮಿಳುನಾಡಿನ ಆದಿಚನಲ್ಲೂರ್, ಶಿವಗಲೈ ಮೈಲಾಡುಂಪರೈ, ಮತ್ತು ಕಿಲ್ನಮಂಡಿಯಲ್ಲಿ ನಡೆದ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಲ್ಲಿ ಕ್ರಿ.ಪೂ. 4ನೇ ಶತಮಾನಕ್ಕೆ ಸೇರಿದ ಕಬ್ಬಿಣದ ಪರಿಕರಗಳನ್ನು ಪತ್ತೆ ಮಾಡಲಾಗಿದೆ. ಈ ಅನ್ವೇಷಣೆಯಿಂದ ಭಾರತದಲ್ಲಿ ‘ಕಬ್ಬಿಣ ಯುಗ’ ಕ್ರಿ.ಪೂ. 1500 ಕ್ಕಿಂತ ಬಹು ಮುಂಚೆಯೇ (ಸರಿಸುಮಾರು 5,300 ವರ್ಷಗಳ ಹಿಂದೆ) ಅಸ್ತಿತ್ವದಲ್ಲಿತ್ತು ಎಂಬುದು ದೃಢಪಟ್ಟಿದೆ. ಇದರಿಂದ ಕಬ್ಬಿಣ ಯುಗದ ಕಾಲಮಾನವನ್ನು ಸುಮಾರು ಮೂರು ಸಹಸ್ರಮಾನಗಳ ಕಾಲ ಹಿಂದಕ್ಕೆ ತಳ್ಳಿದಂತಾಗಿದೆ. ಈ ಸಂಶೋಧನೆಯಡಿ ನಡೆದ ಉತ್ಖನನದಲ್ಲಿ 85ಕ್ಕೂ ಹೆಚ್ಚು ಕಬ್ಬಿಣದ ವಸ್ತುಗಳು (ಚಾಕುಗಳು, ಬಾಣದ ತುದಿಗಳು, ಕೊಡಲಿಗಳು, ಈಟಿಗಳು, ಕತ್ತಿಗಳು, ಇತ್ಯಾದಿ) ಪತ್ತೆಯಾಗಿವೆ.
ಅಮೆರಿಕದ ಬೀಟಾ ಅನಾಲಿಟಿಕ್ಸ್, ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯ ಮತ್ತು ಲಖನೌನ ಬೀರ್‌ಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್ ಸಂಸ್ಥೆಗಳು ‘AMS14C’ ಹಾಗೂ ‘OLS’ ರೇಡಿಯೋಮೆಟ್ರಿಕ್ ಡೇಟಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಪರಿಕರಗಳ ಕಾಲಮಾನವನ್ನು ದೃಢಪಡಿಸಿವೆ. ‘ಆಕ್ಸಿಲರೇಟರ್ ಮಾಸ್ ಸ್ಪೆಕ್ಟ್ರೋಮೆಟ್ರಿ’ ಮತ್ತು ‘ಆಪ್ಟಿಕಲಿ ಸ್ಟಿಮ್ಯುಲೇಟೆಡ್ ಲ್ಯುಮಿನೆಸೆನ್ಸ್’ನಂಥ ಮುಂದುವರಿದ ತಂತ್ರಗಳ ಮೂಲಕ ಈ ಪರಿಕರಗಳ ಕಾಲಮಾನವನ್ನು ಅಲ್ಲಿನ ತಜ್ಞರು ಪ್ರಮಾಣೀಕರಿಸಿದ್ದಾರೆ.
ಪ್ರಮುಖ ಪ್ರಾಚೀನ ವ್ಯಾಪಾರ ಬಂದರು ಮತ್ತು ಸಂಗಮ್ ಯುಗದ ಪಾಂಡ್ಯರ ರಾಜಧಾನಿ ಎಂದು ಗುರುತಿಸಲ್ಪಟ್ಟಿರುವ ಆದಿಚನಲ್ಲೂರ್ ಅತ್ಯಂತ ಹಳೆಯ ಉತ್ಖನನ ತಾಣವಾಗಿದ್ದು, ಇಲ್ಲಿ 1876ರಲ್ಲಿ ಜರ್ಮನಿಯ ಜನಾಂಗಶಾಸ್ತ್ರಜ್ಞ ಎಫ್.ಜಾಗೋರ್ ನಂತರ 1902–04ರಲ್ಲಿ ಅಲೆಕ್ಸಾಂಡರ್ ರಿಯಾ, 2004–05ರಲ್ಲಿ ASI ಮತ್ತು 2021–23ರಲ್ಲಿ ರಾಜ್ಯ ಪುರಾತತ್ವ ಇಲಾಖೆಗಳ ನೇತೃತ್ವದಲ್ಲಿ ಉತ್ಖನನಗಳನ್ನು ನಡೆಸಲಾಗಿದೆ. ಸುಮಾರು 50 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಸ್ಥಳದಲ್ಲಿ ಕಬ್ಬಿಣದ ಯುಗದ ಜನವಸತಿ ದಿಬ್ಬವನ್ನು ಎರಡು ಪ್ರದೇಶಗಳಲ್ಲಿ ಗುರುತಿಸಲಾಗಿದೆ. ಒಂದು ವೆಲ್ಲೂರು- ಆದಿಚನಲ್ಲೂರ್ ಕೆರೆ ಆವರಣ ಮತ್ತು ಇನ್ನೊಂದು ಇಂದಿನ ಆದಿಚನಲ್ಲೂರ್ ಗ್ರಾಮ. ಈ ಜನವಸತಿ ದಿಬ್ಬದ ಉತ್ಖನನದಲ್ಲಿ ಕಪ್ಪು ಮತ್ತು ಕೆಂಪು ಮಣ್ಣಿನ ಪಾತ್ರೆಗಳು, ಕಪ್ಪು ಮತ್ತು ಬಿಳಿ ಮಣ್ಣಿನ ಪಾಲಿಶ್ಡ್ ಪಾತ್ರೆಗಳು, ಕಬ್ಬಿಣದ ಉಪಕರಣಗಳು ಮತ್ತು 933 ಗೀಚುಬರಹವನ್ನು ಹೊಂದಿರುವ ಮಡಕೆಗಳು ಪತ್ತೆಯಾಗಿವೆ. ಇಲ್ಲಿ ಪತ್ತೆಯಾಗಿರುವ ಕಬ್ಬಿಣದ ಸಹಯೋಗದೊಂದಿಗೆ ಸಂಗ್ರಹಿಸಿದ ಇದ್ದಿಲಿನ ಮಾದರಿಯನ್ನು ಕ್ರಿ.ಪೂ. 2060ಕ್ಕೆ ಸೇರಿದ್ದು ಎಂದು ಗುರುತಿಸಲಾಗಿದೆ.
ಆದಿಚನಲ್ಲೂರ್‌ನಿಂದ ಪಶ್ಚಿಮಕ್ಕೆ ಸುಮಾರು 15 ಕಿ.ಮೀ. ದೂರದಲ್ಲಿ ತೂತುಕುಡಿ (ಟುಟಿಕೋರಿನ್) ಜಿಲ್ಲೆಯಲ್ಲಿರುವ ಮತ್ತೊಂದು ಪ್ರಮುಖ ಪುರಾತತ್ವ ತಾಣ ಶಿವಗಲೈ. ಇಲ್ಲಿ 2019ರಿಂದ 2022ರವರೆಗೆ ಉತ್ಖನನ ನಡೆಸಲಾಗಿದೆ. ಈ ಸ್ಥಳವು ಎಂಟು ಪ್ರದೇಶಗಳು, ಮೂರು ಸಮಾಧಿ ದಿಬ್ಬಗಳು ಮತ್ತು ಐದು ಜನವಸತಿ ದಿಬ್ಬಗಳನ್ನು ಹೊಂದಿದೆ. ‘ವಳಪ್ಪಲನ್ ಪಿಳ್ಳೈ–ತಿರಡು’ ಎಂದು ಕರೆಯಲ್ಪಡುವ ಇಲ್ಲಿನ ಜನವಸತಿ ದಿಬ್ಬದಲ್ಲಿ, ಕ್ರಿ.ಪೂ. 685ಕ್ಕೆ ಸೇರಿದ ಕಂದಕವನ್ನು ಗುರುತಿಸಲಾಗಿದೆ. ಈ ದಿಬ್ಬಗಳಲ್ಲಿ ಒಟ್ಟು 24 ಕಂದಕಗಳ ಉತ್ಖನನ ಮಾಡಲಾಗಿದ್ದು, ಇವುಗಳಲ್ಲಿ 160 ಪಾತ್ರೆಗಳು, 151 ಸಮಾಧಿಗಳು ಹಾಗೂ 85 ಕಬ್ಬಿಣದ ವಸ್ತುಗಳನ್ನು ಪತ್ತೆ ಮಾಡಲಾಗಿದೆ. ಶಿವಗಲೈನಲ್ಲಿ ಕಲ್ಲಿದ್ದಿಲಿನ ಜೊತೆ ದೊರೆತ ಕಬ್ಬಿಣದ ವಸ್ತುಗಳು ಕ್ರಿ.ಪೂ. 3,345ರ ಕಾಲಮಾನಕ್ಕೆ ಸೇರಿದ್ದಾಗಿವೆ. ಇದು ಇಲ್ಲಿನ ಕಬ್ಬಿಣ ಯುಗ ವಿಶ್ವದಲ್ಲೇ ಅತ್ಯಂತ ಹಳೆಯದಾಗಿದೆ ಎಂಬುದಕ್ಕೆ ಬಲವಾದ ಸಾಕ್ಷಿಯಾಗಿದೆ.
ತಮಿಳುನಾಡಿನಲ್ಲಿ ಕಬ್ಬಿಣ ಕರಗಿಸುವಿಕೆ ಪ್ರಕ್ರಿಯೆ ಕ್ರಿ.ಪೂ. 3345ರ ಸುಮಾರಿಗೆ ಪ್ರಾರಂಭವಾಯಿತು ಎಂಬುದಕ್ಕೆ ಶಿವಗಲೈನಲ್ಲಿ ನಡೆದ ಸಂಶೋಧನೆಯು ಬಲವಾದ ಪುರಾವೆಗಳನ್ನು ಒದಗಿಸಿದೆ. ಈ ಸಂಶೋಧನೆಯಲ್ಲಿ ಮೂರು ವಿಭಿನ್ನ ರೀತಿಯ ಕಬ್ಬಿಣ ಕರಗಿಸುವ ಕುಲುಮೆಗಳನ್ನು ಕೂಡ ಪತ್ತೆಮಾಡಲಾಗಿದೆ. ಕೊಡುಮನಾಲ್, ಚೆಟ್ಟಿಪಾಳಯಂ ಮತ್ತು ಪೆರುಂಗಲೂರಿನಲ್ಲಿ, ಕಬ್ಬಿಣದ ಉತ್ಪಾದನೆಗೆ ಅಗತ್ಯವಾದ ಹೆಚ್ಚಿನ ತಾಪಮಾನ ಬಳಕೆಯ ಸುಧಾರಿತ ತಂತ್ರವನ್ನು ಒಳಗೊಂಡಿರುವ ಕುಲುಮೆಯನ್ನು ಸಂಶೋಧಕರು ಗುರುತಿಸಿದ್ದಾರೆ. ಕೊಡುವಾನಾಳದಲ್ಲಿ ಪತ್ತೆಯಾಗಿರುವ ವೃತ್ತಾಕಾರದ ಕುಲುಮೆ 1,300 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು ಎಂಬುದು ದೃಢಪಟ್ಟಿದೆ. ಈ ಕುಲಮೆಗಳ ಮೂಲಕ ಸ್ಪಾಂಜ್ ಕಬ್ಬಿಣವನ್ನು ಉತ್ಪಾದಿಸಲಾಗುತ್ತಿತ್ತು.
ಈ ಸಂಶೋಧನೆಗಳು ತಮಿಳುನಾಡಿನ ಕಬ್ಬಿಣಯುಗದ ನಾಗರಿಕತೆಯು ಸಿಂಧೂ ಕಣಿವೆ ನಾಗರಿಕತೆಯೊಂದಿಗೆ (ಕ್ರಿ.ಪೂ. 3300–1300) ಸಹಬಾಳ್ವೆ ನಡೆಸಿತ್ತು ಎಂಬುದನ್ನು ಸೂಚಿಸಿವೆ. ಈ ಸಂದರ್ಭದಲ್ಲಿ ಸಿಂಧು ಕಣಿವೆಯಲ್ಲಿ ಕಂಚಿನ ಯುಗ ಇತ್ತು. ಉತ್ತರ ಭಾರತದ ತಾಮ್ರಯುಗ ಮತ್ತು ದಕ್ಷಿಣ ಭಾರತದ ಕಬ್ಬಿಣಯುಗದ ನಡುವಿನ ಸಂಭವನೀಯ ಸಮಕಾಲೀನತೆಯನ್ನು ಕೂಡ ಈ ಸಂಶೋಧನೆ ಸೂಚಿಸಿದೆ.
ಇಲ್ಲಿಯವರೆಗೆ ಜಾಗತಿಕ ಇತಿಹಾಸದಲ್ಲಿ ಕಬ್ಬಿಣ ತಯಾರಿಕೆಯ ತಂತ್ರಜ್ಞಾನದ ಮೂಲವನ್ನು ‘ಹಿಟೈಟ್ ಸಾಮ್ರಾಜ್ಯ’ (ಇಂದಿನ ಟರ್ಕಿ) ಎಂದು ನಂಬಲಾಗಿತ್ತು. ಹಿಟ್ಟೈಟ್ ಸಾಮ್ರಾಜ್ಯದ ಜನರು
ಕ್ರಿ.ಪೂ. 1,380ರಲ್ಲಿ ಕಬ್ಬಿಣವನ್ನು ಮೊದಲು ಬಳಸಿದರು
ಎಂದು ಉಲ್ಲೇಖಿಸಲಾಗಿತ್ತು. ಆದರೆ, ತಮಿಳುನಾಡಿನಲ್ಲಿ ಈಗ ನಡೆದಿರುವ ಸಂಶೋಧನೆಗಳು ಈ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿವೆ. ಈ ಸಂಶೋಧನೆಗಳು ಸಿಂಧು ನದಿ ನಾಗರಿಕತೆಯ ಸ್ಥಳಗಳು ಸೇರಿದಂತೆ ಇತರ ಪುರಾತತ್ತ್ವ ಶಾಸ್ತ್ರದ ಸ್ಥಳಗಳ ಮರುಮೌಲ್ಯಮಾಪನಕ್ಕೂ ಕಾರಣವಾಗಬಹುದು ಎಂದು ತಜ್ಞರು ಅಭಿಮತ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಅಧ್ಯಯನಗಳು ಪ್ರಾರಂಭವಾಗಲು ಸ್ಫೂರ್ತಿಯಾಗಿದ್ದು, ತಮಿಳುನಾಡಿನ ಸೇಲಂ ಬಳಿಯ ಮೆಟ್ಟೂರಿನಲ್ಲಿರುವ ಮಾಂಗಡು ಎಂಬಲ್ಲಿ ಪ್ರಾಚೀನ ಸಮಾಧಿ ಸ್ಥಳದ ಬಳಿ ಪತ್ತೆಯಾದ ಕಬ್ಬಿಣದ ಕತ್ತಿ. ಇದು ಕ್ರಿ.ಪೂ. 1604 ರಿಂದ 1416 ರ ನಡುವಿನ ಕಾಲಮಾನಕ್ಕೆ ಸೇರಿದ್ದು ಎಂಬುದು ದೃಢಪಟ್ಟಾಗ ಇನ್ನಷ್ಟು ಸಂಶೋಧನೆಗಳನ್ನು ನಡೆಸಲು ತಮಿಳುನಾಡಿನ ಪುರಾತತ್ವ ಇಲಾಖೆ ನಿರ್ಧರಿಸಿತು. ಇದಕ್ಕಿಂತ ಮುಂಚೆ ಕರ್ನಾಟಕದ ಬ್ರಹ್ಮಗಿರಿಯಲ್ಲಿ ಕ್ರಿ.ಪೂ. 2140ಕ್ಕೆ ಸೇರಿದ ಮತ್ತು ಹೈದರಾಬಾದ್ ಬಳಿಯ ಗಚಿಬೌಲಿಯ ಪುರಾತತ್ವ ತಾಣಗಳಲ್ಲಿ ಕ್ರಿ.ಪೂ. 2140ಕ್ಕೆ ಸೇರಿದ ಕಬ್ಬಿಣ ಯುಗದ ವಸ್ತುಗಳು ಪತ್ತೆ ಆಗಿದ್ದವು. ಇಲ್ಲಿಯವರೆಗೆ ಇವುಗಳನ್ನೇ ಭಾರತದಲ್ಲಿ ಲಭಿಸಿದ ಅತ್ಯಂತ ಹಳೆಯ ಕಬ್ಬಿಣಯುಗದ ವಸ್ತುಗಳು ಎಂದು ಗುರುತಿಸಲಾಗಿತ್ತು.
ಈ ಸಂಶೋಧನೆಯ ಸಮಗ್ರ ವಿವರಗಳನ್ನು ತಮಿಳುನಾಡಿನ ಆರ್ಕಿಯಲಾಜಿ ಇಲಾಖೆ ಪ್ರಕಟಿಸಿರುವ ‘ಆಂಟಿಕ್ಷಿಟಿ ಆಫ್ ಐರನ್’ ಎಂಬ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಈ ಗ್ರಂಥವನ್ನು ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ಶೈಕ್ಷಣಿಕ ಮತ್ತು ಸಂಶೋಧನಾ ಸಲಹೆಗಾರ ಹಾಗೂ ಪಾಂಡಿಚೇರಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ರಾಜನ್ ಮತ್ತು ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ಜಂಟಿ ನಿರ್ದೇಶಕ ಆರ್.ಶಿವಾನಂದನ್ ಜಂಟಿಯಾಗಿ ರಚಿಸಿದ್ದಾರೆ.
ಪ್ರಪಂಚದ ಪ್ರಮುಖ ಕಬ್ಬಿಣ ಯುಗಗಳು
1) ಅನಾಟೋಲಿಯಾ ಮತ್ತು ಕಾಕಸಸ್ (ಹಿಟ್ಟೈಟ್)
ಕಬ್ಬಿಣ ಯುಗ: ಕ್ರಿ.ಪೂ. 1300
2) ಪ್ರಾಚೀನ ನಿಯರ್ ಈಸ್ಟ್
ಕಬ್ಬಿಣ ಯುಗ: ಕ್ರಿ.ಪೂ 1200
3) ಚೀನಾ ನಾಗರಿಕತೆಯ
ಕಬ್ಬಿಣ ಯುಗ: ಕ್ರಿ.ಪೂ. 900
4) ಮಧ್ಯ ಮತ್ತು ಪಶ್ಚಿಮ ಯುರೋಪ್
ಕಬ್ಬಿಣ ಯುಗ: ಕ್ರಿ.ಪೂ. 800
5) ಉತ್ತರ ಯುರೋಪ್
ಕಬ್ಬಿಣ ಯುಗ: ಕ್ರಿ.ಪೂ. 600
6) ಉತ್ತರ ಸ್ಕ್ಯಾಂಡಿನೇವಿಯನ್
ಕಬ್ಬಿಣ ಯುಗ: ಕ್ರಿ.ಪೂ. 500
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.