ADVERTISEMENT

ವರ್ಚುವಲ್ ಇಂಟರ್ನ್‌ಶಿಪ್‌: ವೃತ್ತಿಕೌಶಲ ಕಲಿಕೆಯ ಹೊಸ ಮಾರ್ಗ

ವೃತ್ತಿಕೌಶಲ ಕಲಿಕೆಯ ಹೊಸ ಮಾರ್ಗ

ಪ್ರೊ.ಎಸ್‌.ಕೆ.ಜಾರ್ಜ್‌
Published 6 ಜೂನ್ 2021, 19:30 IST
Last Updated 6 ಜೂನ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡುವ ಮೂಲಕ ಉದ್ಯೋಗಕ್ಕೆ ಸಜ್ಜುಗೊಳಿಸುವ ಇಂಟರ್ನ್‌ಶಿಪ್‌ ಈಗ ವರ್ಚುವಲ್‌ ಸ್ವರೂಪ ಪಡೆದಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚು ಜನಪ್ರಿಯವಾಗುವ ಸಾಧ್ಯತೆಯಿದ್ದು, ಭವಿಷ್ಯದ ದೃಷ್ಟಿಯಿಂದ ಕೂಡ ಅನುಕೂಲ ಎಂದೇ ವಿಶ್ಲೇಷಿಸಲಾಗುತ್ತಿದೆ.

ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ತಾವು ಓದಿದ ವಿಷಯಕ್ಕೆ ಸಂಬಂಧಿಸಿ ಯಾವುದಾದರೂ ಸಂಸ್ಥೆಯಲ್ಲಿ ಇಂಟರ್ನ್‌ಶಿಪ್‌ ಮಾಡುವುದನ್ನು ವಿಶ್ವವಿದ್ಯಾಲಯಗಳು ಕಡ್ಡಾಯ ಮಾಡಿವೆ. ಒಂದು ತಿಂಗಳು, ಎರಡು ತಿಂಗಳು, ಒಂದು ವರ್ಷ.. ಹೀಗೆ ವಿದ್ಯಾಸಂಸ್ಥೆಗಳ ನಿಯಮಕ್ಕನುಗುಣವಾಗಿ ಇಂಟರ್ನ್‌ಶಿಪ್‌ ಮಾಡುವುದು ಕಡ್ಡಾಯ. ಇಂಟರ್ನ್‌ಶಿಪ್ ಎನ್ನುವುದು ವಿದ್ಯಾರ್ಥಿಗಳ ವೃತ್ತಿ ಭವಿಷ್ಯದ ಹಾದಿಯಲ್ಲಿ ಇಡುವ ಮೊದಲ ಹೆಜ್ಜೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಕನಸಿನ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಳ್ಳಬಹುದು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತೋರಿದ ಕಾರ್ಯಕ್ಷಮತೆಯ ಆಧಾರದ ಮೇಲೆ ಅದೇ ಕಂಪನಿಯಲ್ಲಿ ಕಾಯಂ ಉದ್ಯೋಗವನ್ನು ಪಡೆಯಬಹುದು. ಆದರೆ ಕೋವಿಡ್‌ ಬಂದಾಗಿನಿಂದ ಇಂಟರ್ನ್‌ಶಿಪ್ ಸ್ವರೂಪವೂ ಬದಲಾಗಿದೆ. ಅಂದರೆ ಕಂಪನಿಗಳು ವರ್ಚುವಲ್‌ ಇಂಟರ್ನ್‌ಶಿಪ್ ವಿಧಾನವನ್ನು ಅನುಸರಿಸುತ್ತಿದ್ದು, ಆ ಮೂಲಕ ಇಂಟರ್ನ್‌ಗಳಿಗೆ ತರಬೇತಿ ನೀಡಲಾಗುತ್ತಿದೆ.

ಈ ವಿಧಾನದಿಂದ ವಿದ್ಯಾರ್ಥಿ ಹಾಗೂ ಕಂಪನಿ ಇಬ್ಬರಿಗೂ ಹಲವು ರೀತಿಯಲ್ಲಿ ಉಪಯೋಗವಾಗುತ್ತದೆ. ಶಾಲಾ–ಕಾಲೇಜು, ಹಲವು ಸಂಸ್ಥೆಗಳು ವರ್ಚುವಲ್ ವಿಧಾನವನ್ನೇ ಅನುಸರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ವರ್ಚುವಲ್ ವಿಧಾನವೇ ಬಹುತೇಕ ಕ್ಷೇತ್ರಗಳಲ್ಲಿ ಪ್ರವೇಶ ಪಡೆಯುವ ಸಾಧ್ಯತೆಯೂ ಇದೆ. ಇದು ಮನೆಯಲ್ಲೇ ಇರುವ ಇಂಟರ್ನ್‌ಗಳಿಗೆ ಉತ್ತಮ ಕೆಲಸದ ತರಬೇತಿ ಹಾಗೂ ಅನುಭವ ಸಿಗುವಂತೆ ಮಾಡಲು ಸಹಕಾರಿಯಾಗಿದೆ. ಪ್ರಾಜೆಕ್ಟ್‌ಗಳ ನಿರ್ವಹಣೆಗೂ ಈಗ ವರ್ಚುವಲ್ ವಿಧಾನವನ್ನೇ ಅನುಸರಿಸಲಾಗುತ್ತಿದೆ. ಆನ್‌ಲೈನ್ ಸಹಯೋಗ, ವರ್ಚುವಲ್ ವಿಧಾನದಿಂದ ಸ್ಪಷ್ಟ ಸಂವಹನದ ಮೂಲಕ ತಂಡಗಳಿಗೆ ಮಾರ್ಗದರ್ಶನ ನೀಡುವುದು, ಮೌಲ್ಯಮಾಪನ ಹಾಗೂ ಇಂಟರ್ನ್‌ಶಿಪ್‌ನ ಸಮಯಾವಧಿ ಎಲ್ಲವೂ ಇದರ ಮೂಲಕವೇ ನಡೆಯುತ್ತಿವೆ.

ADVERTISEMENT

ಉಪಯೋಗಗಳು

* ಕಂಪನಿಯ ಅಗತ್ಯಕ್ಕೆ ತಕ್ಕಂತಹ ಕೌಶಲಗಳನ್ನು ಕಲಿಯಲು ನೆರವಾಗುತ್ತದೆ.

* ಸಂಸ್ಥೆಗಳ ಹೊಸ ಶೈಲಿಯ ಕಾರ್ಯವೈಖರಿಯನ್ನು ತಿಳಿಯಲು ಸಹಾಯ ಮಾಡುತ್ತದೆ.

* ತೀರಾ ಹಳ್ಳಿಯ ವಿದ್ಯಾರ್ಥಿಗಳು ಕೂಡ ಆನ್‌ಲೈನ್ ಸಹಾಯದಿಂದ ತಾವಿರುವ ಕಡೆಯಿಂದಲೇ ಇಂಟರ್ನ್‌ಶಿಪ್ ಮುಗಿಸಬಹುದು.

* ವೈಯಕ್ತಿಕ ಜೀವನ ಹಾಗೂ ಕಚೇರಿ ಜೀವನ ಎರಡನ್ನೂ ಸಮನಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

* ಕಚೇರಿಗೆ ಪ್ರಯಾಣಿಸುವ ಅವಧಿ ಹಾಗೂ ಇಂಧನ ಉಳಿತಾಯ.

* ಗೂಗಲ್ ಮೀಟ್‌, ಝೂಮ್‌ ಕರೆಗಳ ಮೂಲಕ ತಜ್ಞರಿಂದ ಸೂಕ್ತ ತರಬೇತಿ.

* ಯಾವುದೇ ಅಡೆತಡೆಗಳಿಲ್ಲದೇ ಉತ್ತಮ ಕಲಿಕೆಗೆ ಸಹಕಾರಿ.

* ಸಮಯ ನಿರ್ವಹಣೆಗೆ ನೆರವಾಗುತ್ತದೆ.

* ಕೋರ್ಸ್‌ವರ್ಕ್‌ಗಳನ್ನು ಯಾವುದೇ ಸಮಯದಲ್ಲಿ, ಯಾವುದೇ ಕಡೆಯಿಂದಾದರೂ ಮಾಡುವ ಅವಕಾಶವಿದೆ.

* ರಚನಾತ್ಮಕ ವಿಧಾನದಲ್ಲಿ ಕಲಿಕೆಗೆ ನೆರವಾಗುತ್ತದೆ.

* ಡಿಜಿಟಲ್‌ ಹಾಗೂ ತಂತ್ರಜ್ಞಾನ ಕೌಶಲವೂ ವೃದ್ಧಿಯಾಗುತ್ತದೆ.

* ವರ್ಚುವಲ್ ವಿಧಾನದಲ್ಲಿ ಕಾರ್ಯವೈಖರಿಗಳನ್ನು ಸಮಗ್ರವಾಗಿ ಕಲಿಯುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ.

* ಹಣಕಾಸು ಹಾಗೂ ಸಮಯ ನಿರ್ವಹಣೆಗೂ ಸಹಾಯ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.